ಮಾರ್ಚ್ 31, 2020 ಮಂಗಳವಾರ [ನೇರಳೆ]
ಮೊದಲ
ವಾಚನ: ಸಂಖ್ಯಾ 21:4-9
ಕೀರ್ತನೆ
102:1-2, 15-20 ಶ್ಲೋಕ.1
ಕಿವಿಗೊಡು
ಪ್ರಭೂ, ನನ್ನ ಪ್ರಾರ್ಥನೆಗೆ,
ನನ್ನ
ಕೂಗು ಸೇರಲಿ ನಿನ್ನ ಬಳಿಗೆ
ಶುಭಸಂದೇಶ:
ಯೊವಾನ್ನ 8.21-30
---------------------------------------------------------------------------------------
ಮೊದಲ ವಾಚನ: ಸಂಖ್ಯಾ
21:4-9
4
: ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ
ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸ ದಿಂದ ಅವರಿಗೆ ಬೇಸರವಾಯಿತು.
5
: ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡ ತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ
ಕೊಲ್ಲಬೇಕೆಂದು ಈಜಿಪ್ಟ್‍ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ
ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು.
6
: ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ
ಸತ್ತುಹೋದರು.
7
: ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು.
ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು.
8
: ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು
ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ
ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು.
9
: ಅಂತೆಯೆ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ
ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
ಕೀರ್ತನೆ 102:2-3,
16-18, 19-21 ಶ್ಲೋಕ.1
ಕಿವಿಗೊಡು ಪ್ರಭೂ, ನನ್ನ
ಪ್ರಾರ್ಥನೆಗೆ, ನನ್ನ ಕೂಗು ಸೇರಲಿ ನಿನ್ನ ಬಳಿಗೆ
2
: ಕಷ್ಟಕಾಲದೊಳು ವಿಮುಖನಾಗಬೇಡ ನೀನೆನಗೆ / ಕಿವಿಗೊಡು, ಮೊರೆಯಿಡುವಾಗಲೆ, ಸದುತ್ತರಿಸು ಬೇಗನೆ
//
3
: ಮಾಯವಾಗುತ್ತಿದೆ ನನ್ನೀ ಜೀವಮಾನ ಹೊಗೆಯಂತೆ / ಉರಿಯುತ್ತಿವೆ ಎನ್ನೆಲುಬುಗಳು ಒಲೆಯಲ್ಲಿಟ್ಟ ಕೊರಡಿನಂತೆ
//
16
: ಏಕೆನೆ ಪುನರುದ್ಧರಿಸುವನು ಸಿಯೋನನು / ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು //
17
: ತಿರಸ್ಕರಿಸನಾತ ನಿರ್ಗತಿಕರ ಮೊರೆಯನು / ನೆರವೇರಿಸದೆ ಬಿಡನು ಅವರ ಕೋರಿಕೆಯನು //
18
: ಮುಂದಣ ಸಂತತಿಗಿದು ಶಾಸನವಾಗಿರಲಿ / ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ //
19
: ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ / ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ
//
20
: ಆಲಿಸಿದಾತನು ಬಂಧಿತರ ಗೋಳಾಟವನು / ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು //
21
: ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು / ಜನಾಂಗಗಳೂ ರಾಜ್ಯಗಳೂ ಕೂಡಿರಲು /
ಶುಭಸಂದೇಶ: ಯೊವಾನ್ನ
8:21-30
21
: ಯೇಸುಸ್ವಾಮಿ ಪುನಃ ಅವರಿಗೆ, “ನಾನು ಹೊರಟುಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ. ಆದರೆ
ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ,” ಎಂದರು.
22
: ಅದಕ್ಕೆ ಯೆಹೂದ್ಯರು, ‘ತಾನು ಹೋಗುವಲ್ಲಿಗೆ ನಮ್ಮಿಂದ ಬರಲಾಗದಂತೆ! ಹಾಗೆಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುದು
ಇವನ ಇಂಗಿತವೆ?’ ಎಂದು ಮಾತನಾಡಿಕೊಂಡರು.
23
: “ನೀವು ನರಲೋಕದವರು, ನಾನು ಪರಲೋಕದವನು. ನಿಮ್ಮಂತೆ ನಾನು ಇಹಲೋಕದವನಲ್ಲ,
24
: ಮ್ಮ ಪಾಪಗಳಲ್ಲೇ ನೀವು ಸಾಯುವಿರೆಂದು ನಾನು ಹೇಳಿದುದು ಇದಕ್ಕಾಗಿಯೇ. ‘ಇರುವಾತನೇ ನಾನು’ ಎಂಬುದನ್ನು
ನೀವು ವಿಶ್ವಾಸಿಸದೆ ಹೋದರೆ ನಿಮ್ಮ ಪಾಪಗಳಲ್ಲೇ ಸಾಯುವಿರಿ,” ಎಂದು ಯೇಸು ಅವರಿಗೆ ಹೇಳಿದರು.
25
: ಅವರು, “ನೀನು ಯಾರು?” ಎಂದು ಪ್ರಶ್ನಿಸಿದರು.
26
: ಯೇಸು, “ನಾನು ಯಾರೆಂದು ನಿಮಗೆ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇನೆ. ನಿಮ್ಮನ್ನು ಕುರಿತು
ನಾನು ಎಷ್ಟೋ ಹೇಳಿಯೇನು; ಎಷ್ಟೋ ಖಂಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದ್ದನ್ನೇ ಲೋಕಕ್ಕೆ
ಸಾರುತ್ತೇನೆ. ಆತನು ಸತ್ಯಸ್ವರೂಪಿ,” ಎಂದು ಹೇಳಿದರು.
27
: ಯೇಸುಸ್ವಾಮಿ ತಮ್ಮ ಪಿತನನ್ನು ಕುರಿತು ಹೀಗೆನ್ನುತ್ತಿದ್ದಾರೆಂದು ಅವರು ಅರಿತುಕೊಳ್ಳಲಿಲ್ಲ.
28
: ಎಂದೇ ಯೇಸು ಮತ್ತೆ ಇಂತೆಂದರು: “ನರಪುತ್ರನನ್ನು ನೀವು ಮೇಲಕ್ಕೇರಿಸಿದಾಗ, ‘ಇರುವಾತನೇ ನಾನು’ ಎಂದು
ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನೂ ಮಾಡುವುದಿಲ್ಲವೆಂದೂ ಪಿತನು ನನಗೆ ಬೋಧಿಸಿದಂತೆ ನಾನು ಮಾತನಾಡುತ್ತೇನೆಂದೂ
ನಿಮಗೆ ಆಗ ಅರಿವಾಗುವುದು.
29
: ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ ಮಾಡುವುದರಿಂದ
ಆತನು ನನ್ನನ್ನು ಏಕಾಕಿಯಾಗಿ ಬಿಟ್ಟಿಲ್ಲ.”
30
: ಯೇಸುಸ್ವಾಮಿ ಹೀಗೆ ಹೇಳಿದ್ದನ್ನು ಕೇಳಿ ಹಲವರಿಗೆ ಅವರಲ್ಲಿ ನಂಬಿಕೆ ಹುಟ್ಟಿತು.
-----------------
ದೇವರ ಪ್ರೀತಿಯನ್ನು ಮರೆತ ಇಸ್ರಾಯೇಲರು ಮೋಶೆಯ ವಿರುದ್ದ ಗೊಣಗುಟ್ಟುತ್ತಾರೆ ಹಾಗು ವಿಷಸರ್ಪಗಳ ಹಾವಳಿಗೆ ತುತ್ತಾಗುತ್ತಾರೆ. ಅನಂತರ ತಮ್ಮ ತಪ್ಪಿಗೆ ಕ್ಷಮೆಯಾಚಿಸುತ್ತಾರೆ. ಇವರ ಪ್ರಾಣ ರಕ್ಷಣೆಯ ಸಲುವಾಗಿ ಮೋಶೆ ದೇವರ ಆದೇಶದಂತೆ ಕಂಚಿನ ಸರ್ಪವನ್ನು ಮಾಡಿ ದ್ವಜಸ್ತಂಭದ ಮೇಲೆ ನಿಲ್ಲಿಸುತ್ತಾನೆ. ವಿಷಸರ್ಪದ ಕಡಿತಕ್ಕೆ ಒಳಗಾದವರ ಪ್ರಾಣ ರಕ್ಷಿಸುತ್ತಾನೆ. ಹಾಗೆಯೇ ನರಪುತ್ರನನ್ನು ಮೇಲಕ್ಕೆರಿಸಲಾಗುವುದು ಎಂದು ನುಡಿಯುವುದರ ಮೂಲಕ ಕ್ರಿಸ್ತ ತಮ್ಮ ಶಿಲುಬೆಯಾತನೆ ಮತ್ತು ಮರಣವನ್ನು ಮುಂತಿಳಿಸುತ್ತಾರೆ. ಯೇಸು ನಮಗಾಗಿ ಘೋರ ಯಾತನೆಯನ್ನು ಅನುಭವಿಸಿ ತಮ್ಮ ಅಪರಿಮಿತ ಪ್ರೀತಿಯನ್ನ ಲೋಕಕ್ಕೆ ತೋರ್ಪಡಿಸಿದ್ದಾರೆ. ಅವರಲ್ಲಿ ವಿಶ್ವಾಸವಿಡುವ ಎಲ್ಲರೂ ನಿತ್ಯಜೀವ ಹೊಂದುತ್ತಾರೆ ಎನ್ನುವುದರ ಮೂಲಕ ಅವರನ್ನು ವಿಶ್ವಾಸಿಸಿ ನಿತ್ಯಜೀವ ಪಡೆಯಲು ಕರೆ ನೀಡುತ್ತಾರೆ.
-------------------
“ಒಂಟಿಯಾಗಲ್ಲ, ನಾನೂ ಆತನ ಜೊತೆಗಿದ್ದರೆ ಮಾತ್ರ, ಆತನ ಹೆಜ್ಜೆಗಳು ನನಗೆ ಕಾಣಬಹುದು”
ಚಿಂತನೆ
ಚಿಂತನೆ
ಎರಡು ಭಿನ್ನ ಲೋಕಗಳ ದೃಷ್ಟಿಯನ್ನು ಸಾಕ್ಷೀಕರಿಸುವಂತಿವೆ ಇಂದಿನ ವಾಚನಗಳು. ಇಲ್ಲಿ ಕಂಡುಬರುವ ಲೋಕಗಳೆರಡು ಒಂದು ಇಹಲೋಕ ಇನ್ನೊಂದು ಮೇಲಣ ಲೋಕ. ದೇವರನ್ನು ಕಂಡವ ಅಥವಾ ದೈವತ್ವದ ಅನುಭವವುಳ್ಳವ ಅನುಭವಿಸಿದ್ದನ್ನೆಲ್ಲವನ್ನೂ ವಿಶ್ವಾಸದ ಕಣ್ಣುಗಳಿಂದ ಕಂಡು ಇಹದಲ್ಲಿದ್ದರೂ ಮೇಲಣ ಲೋಕವನ್ನು ಪರಿಚಯಿಸುತ್ತಾನೆ – ಆತ ಕ್ರಿಸ್ತ. ದೇವರ ಸಾನ್ನಿಧ್ಯ್ಯವಿದ್ದರೂ, ಆತನ ಆಶೀರ್ವಾದಗಳನ್ನು ಬದುಕಿನ ಮರುಭೂಮಿಯಲ್ಲಿ ಕಂಡಿದ್ದರೂ ತಾನೇ ದೇವರೆಂಬಂತೆ ಬೀಗುತ್ತಾನೆ, ಇನ್ನೂ ಇಹದಲ್ಲೇ ಇರುತ್ತಾನೆ – ಅವರೇ ಇಂದಿನ ಶುಭಸಂದೇಶದಲ್ಲಿ ಸಿಗುವ ಯೆಹೂದ್ಯರು, ಉಣ್ಣುವ, ಕುಡಿಯುವ, ತೊಡುವ, ಕ್ಷುಲ್ಲಕ ಅಭಾವಗಳಿಗೂ ಗೊಣಗುಟ್ಟುವ, ಬೇಸರಗೊಳ್ಳುವ ಇಸ್ರಾಯೇಲರು. ಈ ಎರಡೂ ಲೋಕಗಳ ಭಿನ್ನಾಭಿನ್ನತೆಯನ್ನು ತೋರಿಸಲೆಂದೇ ಈ ಭೂಮಿಗೆ ಅವತರಿಸಿದವ ಕ್ರಿಸ್ತ. ಇಹದಲ್ಲಿದ್ದರೂ ಬೆಳಕಲ್ಲಿರುವುದೆಂತು ಎಂದು ತೋರಿಸಿದ; ಮನುಷ್ಯತ್ವದಿಂದ ಮಾನವತೆಗೆ, ಮಾನವತೆಯಿಂದ ದೈವತ್ವದ ಕಡೆಗೆ ನಡೆಯುವುದು ಹೇಗೆÉ ಎಂಬುದನ್ನು ಕಲಿಸಿದ. ದೃಷ್ಟಾಂತಗಳಿಂದ, ಕಥೆ/ಸಾಮತಿಗಳ ಮೂಲಕ ತಿಳಿ ಹೇಳಿದ. ಇದನ್ನರಿಯದಿದ್ದರೆ, ಕ್ರಿಸ್ತನ “ನಾನು ಹೋಗುವಲ್ಲಿಗೆ ನೀವು ಬರಲಾರಿರಿ” ಎಂಬ ಇಂದಿನ ಶುಭಸಂದೇಶದ ಮಾತು ದಿಟವಾದೀತು. ಬೇಡವಾದರೆ ನಾವೂ ಕ್ರಿಸ್ತನ ನಡೆನುಡಿಯಂತೆ ಬಾಳಬೇಕು, ಭಗವಂತ ಮೆಚ್ಚುವುದನ್ನೇ ಮಾಡಬೇಕು. ಎಲ್ಲೋ ಒಮ್ಮೆ ಅಲ್ಲ, ಇಸ್ರಾಯೇಲರಂತೆ ‘... ಸಂಕಟಬಂದಾಗ ವೆಂಕಟರಮಣ’ ಎನ್ನುವ ಸ್ಥಿತಿಯಲ್ಲಲ್ಲ, ಏನೇ ಬರಲಿ, ಸತತವೂ ಮೇಲಿನವನದೇ ಚಿತ್ತ ಎನ್ನುವ ಕ್ರಿಸ್ತನ ಮನೋಭಾವನೆಯಲ್ಲಿ. ಹಾಗಿದ್ದಾಗ ಮಾತ್ರ ಇಂದಿನ ಶುಭಸಂದೇಶದ ಕ್ರಿಸ್ತನ ಕೊನೆಯ ದನಿ ನಮ್ಮದಾಗಲೂಬಹುದು “... ಆತನು ನನ್ನನ್ನು ಏಕಾಂಗಿಯಾಗಿ ಬಿಟ್ಟಿಲ್ಲ” –ಇದುವೇ ಮೇಲಣ ಲೋಕದಂತೆ ಬದುಕುವುದು. ಸಂಕಟದಲ್ಲಿ ಕಣ್ಣೆತ್ತಿ ನೋಡಿ ದೇವರಿದ್ದಾನೆ ಜೊತೆಗೆ ಎಂದು ಸಂಯಮದಿಂದ ದೈವದ ಹೆಜ್ಜೆಗಳನ್ನು ಹುಡುಕಲು ಯತ್ನಿಸಿದರೆ, ಧ್ವಜಸ್ತಂಭದ ಮೇಲೆ ಕಂಚಿನ ಸರ್ಪವನ್ನು ಕಂಡು ಬದುಕಿದ ಇಸ್ರಾಯೇಲರಂತೆ ನಾವೂ ಬದುಕಲು ಶ್ವಾಸ ಪಡೆಯಬಹುದು. ಆದರೆ ಮುಂದಿರುವ ಪ್ರಶ್ನೆ ‘ನಾನು ಆತನ ಜೊತೆಗಿದ್ದೇನೆಯೇ?’ ಎಂಬುದು – ಕಾರಣ ಒಂಟಿಯಾಗಲ್ಲ, ನಾನೂ ಆತನ ಜೊತೆಗಿದ್ದರೆ ಮಾತ್ರ ಆತನ ಹೆಜ್ಜೆಗಳು ನನಗೆ ಕಾಣಬಲ್ಲವು.
----------------------
© 'ದನಿ' ಮಾಧ್ಯಮ ಮನೆ

No comments:
Post a Comment