ಏಪ್ರಿಲ್ 8,
2020 ಬುಧವಾರ [ನೇರಳೆ]
ಮೊದಲ ವಾಚನ: ಯೆಶಾಯ 50:4-9
ಕೀರ್ತನೆ 69:8-10, 21-22, 31, 33-34 ಶ್ಲೋಕ.13
ಪ್ರಸನ್ನ ಕಾಲದಲ್ಲಿ ಪ್ರಭೂ, ನಾ ಮೊರೆಯಿಡುತ್ತಿರುವೆ ನಿನಗೆ,
ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ
ಶುಭಸಂದೇಶ: ಮತ್ತಾಯ 26.14-25
ಮೊದಲ ವಾಚನ: ಯೆಶಾಯ 50:4-9
4 : ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು.
5 : ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು.
6 : ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ.
7 : ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ.
8 : ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ ನನಗೆ ಪ್ರತಿಕಕ್ಷಿ ಯಾರೆ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ.
9 : ಇಗೋ, ಸ್ವಾಮಿ ಸರ್ವೇಶ್ವರ ನಿಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ
ಕೀರ್ತನೆ 69:8-10,
21-22, 31, 33-34 ಶ್ಲೋಕ.13
ಪ್ರಸನ್ನ ಕಾಲದಲ್ಲಿ ಪ್ರಭೂ, ನಾ ಮೊರೆಯಿಡುತ್ತಿರುವೆ ನಿನಗೆ,
ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ
8 : ನನ್ನವರಿಗೇ ನಾನನ್ಯನಾದೆನಯ್ಯಾ / ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ //
9 : ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ / ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ //
10 : ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ / ಚುಚ್ಚುಮಾತಿಗೆ ಕಾರಣವಾಯಿತಲ್ಲಾ //
21 : ಹಸಿದ ನನಗೆ ವಿಷಬೆರೆತ ಆಹಾರವಿತ್ತ ರಯ್ಯಾ / ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ //
22 : ಅವರಿಗೆ ಬಡಿಸಿದ ಊಟವೇ ಅವರಿಗೆ ಉರುಲಾಗಲಿ / ಅವರ ಹಬ್ಬದೌತಣವೇ ಅವರಿಗೆ ಬೋನಾಗಲಿ //
31 : ಸ್ವಾಮಿ ದೇವನಿಗಿದುವೇ ಸುಪ್ರೀತ / ಕೊಂಬುಗೊರಸುಳ್ಳ ಗೂಳಿಬಲಿಗಿಂತ //
33 : ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು / ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು //
34 : ಭೂಮ್ಯಾಕಾಶಗಳು ಆತನನು ಕೊಂಡಾಡಲಿ / ಸಾಗರಗಳು, ಜಲಚರಗಳು ಆತನನು ಭಜಿಸಲಿ //
ಶುಭಸಂದೇಶ: ಮತ್ತಾಯ 26:14-25
14 : ಇದಾದ ಮೇಲೆ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು.
15 : “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿಮಾಡಿ ಕೊಟ್ಟರು.
16 : ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು.
17 : ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು.
18 : ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು.
19 : ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು.
20 : ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು.
21 : ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು.
22 : ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು.
23 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ.
24 : ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು.
25 : ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.
----------------
----------------
ಚಿಂತನೆ
ಯೂದನು ಜಟೀಲರ ಪಂಗಡಕ್ಕೆ ಸೇರಿದವನಾಗಿದ್ದ. ಜಟೀಲರು ರೋಮನ್ನರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಉಗ್ರ ಹೋರಾಟ ಮಾಡುತ್ತಿದ್ದರು. ಯೂದನಿಗೆ ಇಸ್ರಯೇಲರನ್ನು ಬಿಡುಗಡೆಮಾಡುವ ಮೆಸ್ಸಾಯ ಒಬ್ಬ ಹೋರಾಟಗಾರ, ಕ್ರಾಂತಿಕಾರಿಯಾಗಿದ್ದ; ಯೇಸುವಿನ ಪ್ರಖ್ಯಾತಿಯನ್ನು ಗಮನಿಸಿದ್ದ ಯೂದನು ಪಾಸ್ಬಹಬ್ಬದ ಸಂದರ್ಭದಲ್ಲಿ ಯೇಸುವನ್ನು ಹಿಡಿದುಕೊಟ್ಟರೆ ಆತನ ಹಿಂಬಾಲಕರೆಲ್ಲ ರೋಮನ್ನರ ವಿರುದ್ಧ ದಂಗೆ ಏಳಬಹುದೆಂದು ಊಹಿಸಿದ್ದ. ಹಾಗಾಗಿ ತನ್ನ ಗುರುವನ್ನು ೩೦ ಬೆಳ್ಳಿ ನಾಣ್ಯಗಳಿಗೆ ಹಿಡಿದುಕೊಡುತ್ತಾನೆ ಎಂಬುದು ಕೆಲವು ಬೈಬಲ್ವಿದ್ವಾಂಸರ ಅಭಿಪ್ರಾಯ; ಕ್ಷಮೆಯ ಬದುಕು ಆತನಲ್ಲಿ ನಿರಾಶೆ ಮೂಡಿಸಿತ್ತು ಎಂಬುದು ಕೆಲವರ ವಾದ. ಒಂದು ಪಕ್ಷ ಯೂದ ಹಣಕ್ಕಾಗಿ ಕ್ರಿಸ್ತನನ್ನು ಹಿಡಿದುಕೊಟ್ಟಿದ್ದರೆ ಆತ್ಮಹತ್ಯೆಯ ಅವಶ್ಯಕತೆಯಿತ್ತೇ? ಬಹುಶಃ ಯೂದ ಕ್ರಿಸ್ತನ ಬದುಕು, ಬೋಧನೆ ಮತ್ತು ಸಾವಿನ ಉದ್ದೇಶವನ್ನು ಅರಿಯದೆ ಹೋದ.
------------------

No comments:
Post a Comment