Saturday, 28 March 2020

ಪ್ರಭುವಿನ ಭೋಜನದ ಪೂಜೆ

ಏಪ್ರಿಲ್ 9, 2020 ಗುರುವಾರ                                               [ಬಿಳಿ]
ಪವಿತ್ರ ಗುರುವಾರ
ಪ್ರಭುವಿನ ಭೋಜನದ ಪೂಜೆ (ಸಾಯಂಕಾಲ)
ಮೊದಲ ವಾಚನ: ವಿಮೋಚನಾ 12:1-8, 11-14
ಕೀರ್ತನೆ 116:12-13, 15-16, 17, 18 1 ಶ್ಲೋಕ.ಕೊರಿಂಥಿಯರಿಗೆ 10:16
ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ
ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲ್ಗೊಳ್ಳುತ್ತೇವೆ
ಎರಡನೇ ವಾಚನ: 1 ಕೊರಿಂಥಿಯರಿಗೆ 11:23-26
ಶುಭಸಂದೇಶ: ಯೊವಾನ್ನ 13:1-15

ಮೊದಲ ವಾಚನ: ವಿಮೋಚನಾ 12:1-8, 11-14
1 : ಈಜಿಪ್ಟ್ ದೇಶದಲ್ಲಿ ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೀಗೆಂದರು:
2 : “ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು.
3 : ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು: ‘ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು
4 : ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ.
5 : ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು.
6 : ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು
7 : ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು.
8 : ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿ ಆದ ಪಲ್ಯಗಳ ಸಮೇತ ಊಟಮಾಡಬೇಕು.
11 : ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗಬೇಗನೆ ಊಟ ಮಾಡಬೇಕು. ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ.
12 : ‘ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು; ಮನುಷ್ಯರಾಗಿ ಇರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ!
13 : ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು.
14 : ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು’.


ಕೀರ್ತನೆ 116:12-13, 15-16, 17, 18 1 ಶ್ಲೋಕ.ಕೊರಿಂಥಿಯರಿಗೆ 10:16
ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ
ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲ್ಗೊಳ್ಳುತ್ತೇವೆ
12 : ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ / ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? //
13 : ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
15 : ಪ್ರಭು ಅಲ್ಪವೆಂದೆಣಿಸನು / ತನ್ನ ಭಕ್ತರ ಮರಣವನು //
16 : ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು / ನಿನ್ನ ದಾಸಿಯ ಮಗನು, ನಿನ್ನ ಸೇವಕನು / ಬಿಡಿಸಿರುವೆ ನೀನು ನನ್ನ ಬಂಧನಗಳನು //
17 : ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
18 : ಹೇ ಜೆರುಸಲೇಮೇ, ನಿನ್ನ ಮಧ್ಯದೊಳು / ಆತನಿರುವ ಮಂದಿರದ ಅಂಗಳದೊಳು /

ಎರಡನೇ ವಾಚನ: 1 ಕೊರಿಂಥಿಯರಿಗೆ 11:23-26
23 : ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು
24 : ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ,” ಎಂದರು.
25 : ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ,” ಎಂದರು.
26 : ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.

ಶುಭಸಂದೇಶ: ಯೊವಾನ್ನ 13:1-15
1 : ಅಂದು ಪಾಸ್ಕ ಹಬ್ಬದ ಹಿಂದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನ ಬಳಿಗೆ ಹೋಗಬೇಕಾದ ಗಳಿಗೆ ಬಂದಿರುವುದು ಎಂದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪರಮಾವಧಿಯನ್ನು ಈಗ ತೋರಿಸಲಿದ್ದರು.
2 : (ಯೇಸುವನ್ನು ಗುರುದ್ರೋಹದಿಂದ ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಸೈತಾನನು ಸಿಮೋನನ ಮಗ ಇಸ್ಕರಿಯೋತಿನ ಯೂದನಲ್ಲಿ ಈಗಾಗಲೇ ಹುಟ್ಟಿಸಿದ್ದನು).
3 : ಊಟಕ್ಕೆ ಎಲ್ಲರೂ ಕುಳಿತಿದ್ದರು. ಪಿತನು ಎಲ್ಲವನ್ನೂ ತಮ್ಮ ಕೈಗೆ ಒಪ್ಪಿಸಿರುವರೆಂದೂ ತಾವು ದೇವರ ಬಳಿಯಿಂದ ಬಂದಿದ್ದು, ಈಗ ದೇವರ ಬಳಿಗೇ ಮರಳುತ್ತಿದ್ದೇನೆಂದೂ ಯೇಸುವಿಗೆ ತಿಳಿದಿತ್ತು.
4 : ಅವರು ಊಟದಿಂದ ಎದ್ದು, ತಮ್ಮ ಮೇಲುಹೊದಿಕೆಯನ್ನು ತೆಗೆದಿಟ್ಟರು. ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡರು.
5 : ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಒರಸತೊಡಗಿದರು.
6 : ಹೀಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬಂದಾಗ ಆತ, “ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?” ಎಂದನು.
7 : ಯೇಸು, “ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮುಂದೆ ಅರ್ಥವಾಗುತ್ತದೆ,” ಎಂದು ಉತ್ತರಿಸಿದರು.
8 : “ನೀವು ನನ್ನ ಕಾಲುಗಳನ್ನು ತೊಳೆಯುವುದು ಎಂದಿಗೂ ಕೂಡದು,” ಎಂದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, “ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ,” ಎಂದು ನುಡಿದರು.
9 : ಆಗ ಪೇತ್ರನು, “ಹಾಗಾದರೆ ಪ್ರಭೂ, ನನ್ನ ಕಾಲುಗಳನ್ನು ಮಾತ್ರವಲ್ಲ, ನನ್ನ ಕೈಗಳನ್ನೂ ತಲೆಯನ್ನೂ ತೊಳೆಯಿರಿ,” ಎಂದನು.
10 : ಯೇಸು, “ಸ್ನಾನಮಾಡಿಕೊಂಡವನು ಕಾಲುಗಳನ್ನು ತೊಳೆದುಕೊಂಡರೆ ಸಾಕು, ಅವನ ಮೈಯೆಲ್ಲಾ ಶುದ್ಧವಾಗಿರುತ್ತದೆ. ನೀವೂ ಕೂಡ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು.
11 : ತಮ್ಮನ್ನು ಗುರುದ್ರೋಹದಿಂದ ಹಿಡಿದುಕೊಡುವವನು ಯಾರೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು, ‘ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,’ ಎಂದು ಹೇಳಿದರು.
12 : ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲುಹೊದಿಕೆಯನ್ನು ಹಾಕಿಕೊಂಡು ಕುಳಿತುಕೊಂಡರು. ತಮ್ಮ ಶಿಷ್ಯರಿಗೆ, “ನಿಮಗೆ, ನಾನು ಮಾಡಿರುವುದು ಏನೆಂದು ಅರ್ಥವಾಯಿತೇ?
13 : ‘ಬೋಧಕರೇ, ಪ್ರಭುವೇ’ ಎಂದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೆ. ನಾನು ಬೋಧಕನೂ ಹೌದು, ಪ್ರಭುವೂ ಹೌದು.
14 : ನಿಮಗೆ ಪ್ರಭುವೂ ಬೋಧಕನೂ ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನಿವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹಂಗಿನಲ್ಲಿದ್ದೀರಿ.
15 : ನಾನು ನಿಮಗೆ ಒಂದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದಂತೆಯೇ ನೀವೂ ಇತರರಿಗೆ ಮಾಡಿರಿ.
------------------
ಚಿಂತನೆ: 
ಕ್ರಿಸ್ತ ಸಾಯುವ ಮುನ್ನ ಮೇಲುಪ್ಪರಿಗೆಯ ಕೋಣೆಯಲ್ಲಿ ನಡೆಯುವ ಘಟನೆಗಳನ್ನು ನೆನಪಿಸುವುದೇ ಪವಿತ್ರ ಗುರುವಾರ. ಕ್ರೈಸ್ತರು ಎಂದೆಂದೂ ಮರೆಯಲಾಗದ ಅವಿಸ್ಮರಣೀಯ, ಸುಂದರ ಶುಭದಿನವಿದು. ಪವಿತ್ರ ಗುರುವಾರವನ್ನು ಇಂಗ್ಲೀಷ್ ಭಾಷೆಯಲ್ಲಿ ಮಾಂಡಿ ತರ್ಸ್ ಡೇ ಎಂದು ಕರೆಯಲಾಗುತ್ತದೆ. ಇದರ ಮೂಲ ಲತೀನ್ ಭಾಷೆಯ Mandatum Novum ಅಂದರೆ ಂA New Commandment ಹೊಸ ಆಜ್ಞೆ ಎಂದರ್ಥ. ಪವಿತ್ರ ಗುರುವಾರವು ಅನೇಕ ಆಚರಣೆಗಳ ಮತ್ತು ಘಟನೆಗಳ ಸಂಗಮ. ಯೇಸು ಅಂದು ಪರಮಪ್ರಸಾದ ಮತ್ತು ಗುರುದೀಕ್ಷಾ ಸಂಸ್ಕಾರಗಳನ್ನು ಸ್ಥಾಪಿಸಿ ಶಿಷ್ಯರ ಪಾದಗಳನ್ನು ತೊಳೆಯುತ್ತಾರೆ. ಸದಾ ನಮ್ಮೊಂದಿಗಿರಲು ಪರಮ ಪ್ರಸಾದ ಸಂಸ್ಕಾರವನ್ನು ಸ್ಥಾಪಿಸಿದರೆ, ತಾವು ಹಿಂದಿರುಗಿ ಬರುವವರೆಗೂ ರೊಟ್ಟಿಮುರಿಯುವ ಭೋಜನವನ್ನು ಅವರ ಸ್ಮರಣೆಗಾಗಿ ಮಾಡಲು ಯಾಜಕತ್ವ ಸ್ಥಾಪಿಸುತ್ತಾರೆ.
ನರಪುತ್ರನು ಬಂದದ್ದು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಬದಲಾಗಿ ಸೇವೆ ಮಾಡುವುದಕ್ಕೆ (ಮತ್ತಾಯ ೨೦:೨೮) ಎಂದು ಲೋಕಕ್ಕೆ ಸಾರುವ ಸಲುವಾಗಿ ಶಿಷ್ಯರ ಪಾದಗಳನ್ನು ತೊಳೆದ ಮೊದಲ ಗುರುವಾಗುತ್ತಾರೆ. ನಾನು ನಿಮಗೆ ಮಾಡಿದಂತೆ ನೀವು ಇನ್ನೊಬ್ಬರಿಗೆ ಮಾಡುವ ಹಂಗಿನಲ್ಲಿದ್ದೀರಿ ಎಂಬ ಕರೆಯನ್ನ ತಮ್ಮ ಹಿಂಬಾಲಕರಿಗೆ ನೀಡುವ ಮೂಲಕ, ಶ್ರೇಷ್ಠತೆ ಇರುವುದು ಸೇವೆಯಲ್ಲಿ ಎಂದು ಲೋಕಕ್ಕೆ ಸಾರಿದ ಪವಿತ್ರ ದಿನ ಇದು.
-------------------------
© 'ದನಿ' ಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment