ಏಪ್ರಿಲ್ 25,
2020 ಶನಿವಾರ [ಬಿಳಿ]
ಸಂತ ಮಾರ್ಕ [ಶುಭಸಂದೇಶಕರ್ತ]
ಮೊದಲ ವಾಚನ: 1 ಪೇತ್ರ 5.5-14
ಕೀರ್ತನೆ 89:1-2, 5-6, 15-16 ಶ್ಲೋಕ.1
ಪ್ರಭೂ, ಕೀರ್ತಿಸುವೆನು ಸದಾ ನಿನ್ನ ಅಚಲ ಪ್ರೀತಿಯನು
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಮಾರ್ಕ 16.15-20
ಮೊದಲ ವಾಚನ: 1 ಪೇತ್ರ 5.5-14
5 : ಅಂತೆಯೇ ಯುವಜನರೇ, ನೀವು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಿ. ನೀವೆಲ್ಲರೂ ದೀನ ಮನೋಭಾವನೆಯನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿ. “ಗರ್ವಿಷ್ಠರನ್ನು ದೇವರು ವಿರೋಧಿಸುತ್ತಾರೆ. ನಮ್ರರಿಗಾದರೋ ಅವರು ದಯೆತೋರು ತ್ತಾರೆ,” ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.
6 : ದೇವರ ಪರಾಕ್ರಮಕ್ಕೆ ತಗ್ಗಿ ನಮ್ರರಾಗಿ ನಡೆದುಕೊಳ್ಳಿ. ಆಗ ಅವರು ನಿಮ್ಮನ್ನು ಸಕಾಲದಲ್ಲಿ ಮೇಲಕ್ಕೆತ್ತುವರು;
7 : ನಿಮ್ಮ ಚಿಂತೆಯನ್ನೆಲ್ಲಾ ಅವರಿಗೇ ಬಿಟ್ಟುಬಿಡಿ. ನಿಮ್ಮ ಮೇಲೆ ಅವರಿಗೆ ಲಕ್ಷ್ಯವಿದೆ.
8 : ಸ್ವಸ್ಥಚಿತ್ತರಾಗಿರಿ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಶತ್ರುವಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ, ಯಾರನ್ನು ಕಬಳಿಸುವುದೆಂದು ಅತ್ತಿತ್ತ ಹುಡುಕಾಡುತ್ತಿರುವನು.
9 : ವಿಶ್ವಾಸದಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ. ನಿಮ್ಮ ಸಹವಿಶ್ವಾಸಿಗಳು ಜಗತ್ತಿನಲ್ಲೆಲ್ಲಾ ಇಂಥ ಹಿಂಸೆಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದಿದೆ.
10 : ಯೇಸುಕ್ರಿಸ್ತರಲ್ಲಿ ನಿಮ್ಮನ್ನು ತಮ್ಮ ಶಾಶ್ವತ ಮಹಿಮೆಗೆ ಕರೆದ ಕೃಪಾನಿಧಿಯಾದ ದೇವರು ನೀವು ಸ್ವಲ್ಪಕಾಲ ಹಿಂಸೆಬಾಧೆಯನ್ನು ಅನುಭವಿಸಿದ ನಂತರ ನಿಮ್ಮನ್ನು ಪೂರ್ವಸ್ಥಿತಿಗೆ ತರುವರು; ನಿಮ್ಮನ್ನು ಸ್ಥಿರಗೊಳಿಸಿ ಬಲಪಡಿಸುವರು.
11 : ಅವರ ಆಳ್ವಿಕೆ ಯುಗಯುಗಾಂತರಕ್ಕೂ ಇರಲಿ. ಆಮೆನ್.
12 : ನನ್ನ ಈ ಪುಟ್ಟ ಪತ್ರವನ್ನು ನಂಬಿಕಸ್ಥ ಸಹೋದರನಾದ ಸಿಲ್ವಾನನ ಸಹಾಯದಿಂದ ನಿಮಗೆ ಬರೆದಿರುತ್ತೇನೆ. ನಿಮ್ಮನ್ನು ಪ್ರೋತ್ಸಾಹಿಸಲೆಂದು ಮತ್ತು ಇದುವೇ ದೇವರ ನಿಜವಾದ ಅನುಗ್ರಹವೆಂದು ಸೃಷ್ಟೀಕರಿಸಲು ಬರೆದಿದ್ದೇನೆ. ಈ ಅನುಗ್ರಹದಲ್ಲಿ ನೀವು ದೃಢವಾಗಿ ನಿಲ್ಲಿರಿ.
13 : ನಿಮ್ಮ ಹಾಗೆ ದೇವರಿಂದ ಆಯ್ಕೆಯಾದ ಬಾಬಿಲೋನಿನಲ್ಲಿರುವ ಸಭೆ ನಿಮಗೆ ವಂದನೆಗಳನ್ನು ತಿಳಿಸುತ್ತದೆ. ಅಂತೆಯೇ, ನನ್ನ ಮಗನಂತಿರುವ ಮಾರ್ಕನು ನಿಮ್ಮನ್ನು ವಂದಿಸಿದ್ದಾನೆ.
14 : ಪ್ರೀತಿಯ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಯೇಸುಕ್ರಿಸ್ತರಲ್ಲಿರುವ ನಿಮ್ಮೆಲ್ಲರಿಗೂ ಶಾಂತಿ ಸಮಾಧಾನ ಲಭಿಸಲಿ !
ಕೀರ್ತನೆ 89: 2-3,
6-7, 16-17 ಶ್ಲೋಕ.1
ಪ್ರಭೂ, ಕೀರ್ತಿಸುವೆನು ಸದಾ ನಿನ್ನ ಅಚಲ ಪ್ರೀತಿಯನು
2 : ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ / ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ //
3 : ನೀನೆಂದೆ, “ನಾನರಿಸಿದವನೊಡನೆ ಮಾಡಿರುವೆ ಒಪ್ಪಂದ / ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ : //
6 : ಮೇಘಮಂಡಲದಲಿ ಸಮಾನನಾರು ಪ್ರಭುವಿಗೆ / ದೇವದೂತರೊಳು ಹೋಲಿಕೆ ಯಾವುದು ಆತನಿಗೆ //
7 : ಸ್ವರ್ಗೀಯ ಸಭೆಯಲಿ ಪ್ರತಿಭಾವಂತನು ದೇವನು / ಸುತ್ತಣದೆಲ್ಲ ಪರಿವಾರಕ್ಕಿಂತ ಬಹು ಭೀಕರನು //
16 : ಆನಂದಿಸುವರವರು ಸದಾ ನಿನ್ನ ನಾಮದಲಿ / ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ //
17 : ಅವರ ಶಕ್ತಿಸಾಮಥ್ರ್ಯದ ಪ್ರತಿಭೆ ನಿನ್ನದೆ / ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ //
ಶುಭಸಂದೇಶ: ಮಾರ್ಕ 16.15-20
15 : ಬಳಿಕ ಅವರಿಗೆ, ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.
16 : ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು. ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು.
17 : ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು;
18 : ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣಹೊಂದುವರು,” ಎಂದರು. ಸ್ವರ್ಗಾರೋಹಣ (ಲೂಕ 24.50-53; ಪ್ರೇ.ಕಾ. 1.9-11)
19 : ಯೇಸುಸ್ವಾಮಿ ಶಿಷ್ಯರೊಡನೆ ಮಾತನಾಡಿದ ಮೇಲೆ ಸ್ವರ್ಗಾರೋಹಣವಾಗಿ ದೇವರ ಬಲಪಾಶ್ರ್ವದಲ್ಲಿ ಆಸೀನರಾದರು.
20 : ಇತ್ತ ಶಿಷ್ಯರು ಹೊರಟುಹೋಗಿ, ಎಲ್ಲೆಡೆಗಳಲ್ಲಿಯೂ ಶುಭಸಂದೇಶವನ್ನು ಬೋಧಿಸತೊಡಗಿದರು. ಪ್ರಭು ಯೇಸು ಅವರೊಂದಿಗೆ ಕಾರ್ಯಸಾಧಿಸುತ್ತಾ, ಮಹತ್ಕಾರ್ಯಗಳಿಂದ ಶುಭಸಂದೇಶವನ್ನು ಸಮರ್ಥಿಸುತ್ತಾ ಇದ್ದರು.
---------
---------
ದೇವವಾಕ್ಯದ ಬೋಧನೆ ಪ್ರೇಷಿತರ ಪ್ರಮುಖ ಕರ್ತವ್ಯವಾಗಿತ್ತು. ಆ ಕಾರಣ ಅದನ್ನು ಪೂರೈಸಲು ಅವರು ತಮ್ಮ ಎಲ್ಲಾ ಲೌಕಿಕ ಕೆಲಸಕಾರ್ಯಗಳಿಂದ ದೂರವಿರಲು ಬಯಸುತ್ತಾರೆ. ಹಾಗೂ ಲೌಕಿಕ ಕೆಲಸಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೆ. ಯಾವುದನ್ನೂ ಅವರು ಕಡೆಗಣಿಸುವುದಿಲ್ಲ.
ಇಂದು ಎಲ್ಲಿ ನೋಡಿದರೂ ಗೊಂದಲದ ವಾತಾವರಣ ತಾಂಡವವಾಡುತ್ತಿದೆ. ಮಾನವಕುಲ ಪ್ರಶಾಂತತೆಯನ್ನು ಅರಸುತ್ತಿದೆ. ಆದರೆ ಬಹು ಮಂದಿ ಅದನ್ನು ಮಾದಕ ವಸ್ತುಗಳಿಂದ ಪಡೆಯಲು ಪ್ರಯತ್ನಿಸಿ ಅದರ ಗುಲಾಮರಾಗಿ ವೇದನೆಯ ಸುಳಿಯಲ್ಲಿ ಸಿಲುಕಿ ಅವರ ಜೀವನ ಅಲ್ಲೋಲಕಲ್ಲೋಲವಾಗಿದೆ. ಅಂತಹ ಭೀಕರ ಸುಳಿಗಳಿಂದ ಕ್ರಿಸ್ತ ನಮ್ಮನ್ನು ಬಿಡಿಸಲು ’ಅಂಜಬೇಡಿ ನಾನಿದ್ದೇನೆ’ ಎಂಬ ಭರವಸೆಯನ್ನು ನಿತ್ಯವೂ ನೀಡಿ ಆಶಾದಾಯಕ ಬದುಕಿಗೆ ಕರೆಯುತ್ತಾರೆ.
-------------
No comments:
Post a Comment