Saturday, 28 March 2020

ಪಾಸ್ಕ ಕಾಲದ ಮೂರನೇ ಭಾನುವಾರ

ಏಪ್ರಿಲ್ 26, 2020 ಭಾನುವಾರ                                          [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2: 14, 22-33.
ಕೀರ್ತನೆ 16: 1-2, 5, 7-11. ಶ್ಲೋಕ.11
ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಎರಡನೇ ವಾಚನ: 1 ಪೇತ್ರ 1.17-21
ಶುಭಸಂದೇಶ: ಲೂಕ 24.13-35

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2: 14, 22-33.
14 : ಪೇತ್ರನ ಪ್ರಬೋಧನೆ ಆಗ ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನ ಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ.
22 : “ಇಸ್ರಯೇಲ್ ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಭುತ ಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ.
23 : ದೇವರು ತಮ್ಮ ಸ್ಥಿರಸಂಕಲ್ಪದಲ್ಲಿ ಹಾಗೂ ಭವಿಷ್ಯತ್ ಜ್ಞಾನದಲ್ಲಿ ಯೇಸು ನಿಮ್ಮ ವಶವಾಗಬೇಕೆಂದು ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ, ಕೊಲ್ಲಿಸಿದಿರಿ.

ಕೀರ್ತನೆ 16: 1-2, 5, 7-11. ಶ್ಲೋಕ.11
ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು
1 : ನೀಡು ದೇವಾ ರಕ್ಷಣೆಯನು / ನಾ ನಿನಗೆ ಶರಣಾಗತನು //
2 : “ನೀನೇ ನನ್ನೊಡೆಯನೆಂದು ನಾ ನುಡಿದೆ / ನಿನ್ನ ಹೊರತು ನನಗಿಲ್ಲ ಒಳಿತುಎಂದೆ /
3 : ಸಂತರು ನಾಡಿಗೆ ತಿಲಕವು / ಅವರಲ್ಲಿದೆ ಎನಗೆ ಒಲವು //
4 : ಅನ್ಯದೇವರನ್ನು ಬಯಸುವವರನ್ನು ಕಾದಿದೆ ಕಠಿಣ ಕಷ್ಟ / ಅವರಂತೆ ರಕ್ತಪಾನತರ್ಪಣೆ ಮಾಡಲೆನಗಿಲ್ಲ ಇಷ್ಟ / ದೇವರುಗಳ ನಾಮೋಚ್ಚಾರಣೆ ನನ್ನ ತುಟಿಗೆ ಅನಿಷ್ಟ //
5 : ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ / ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ //
7 : ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ / ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ //
8 : ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ / ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ? //
9 : ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ / ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ //
10 : ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ / ಬಿಟ್ಟುಕೊಡುವುದಿಲ್ಲ ನಿನ್ನ ಭಕ್ತನನು ಪಾತಾಳಕೆ //
11 : ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು / ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು / ನಿನ್ನ ಬಲಗೈ ನೀಡುವುದು ನಿತ್ಯ ಭಾಗ್ಯವನು //

ಎರಡನೇ ವಾಚನ: 1 ಪೇತ್ರ 1.17-21
17 : ನೀವು ದೇವರಿಗೆ ಪ್ರಾರ್ಥನೆಮಾಡುವಾಗ, ಅವರನ್ನುತಂದೆಯೇಎಂದು ಸಂಬೋಧಿಸುತ್ತೀರಿ. ಅವರು ಪಕ್ಷಪಾತಿ ಅಲ್ಲ. ಎಲ್ಲರಿಗೂ ಅವರವರ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ನೀಡುವವರು. ಆದ್ದರಿಂದ ನಿಮ್ಮ ಇಹಲೋಕದ ಯಾತ್ರೆಯನ್ನು ಭಯಭಕ್ತಿಯಿಂದ ಸಾಗಿಸಿರಿ.
18 : ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿ ಹೋಗುವ ಬೆಳ್ಳಿಬಂಗಾರವಲ್ಲ.
19 : ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತಯೇಸುವಿನ ಅಮೂಲ್ಯ ರಕ್ತವೇ ಬೆಲೆ.
20 : ವಿಶ್ವಸೃಷ್ಟಿಗೆ ಮೊದಲೇ ಯೇಸುಕ್ರಿಸ್ತರನ್ನು ದೇವರು ಇದಕ್ಕೆಂದು ಗೊತ್ತುಮಾಡಿದ್ದರು. ಅಂತಿಮ ದಿನಗಳಲ್ಲಿ ನಿಮಗೋಸ್ಕರ ಯೇಸು ಪ್ರತ್ಯಕ್ಷರಾದರು.
21 : ಮರಣದಿಂದ ಪುನರುತ್ಥಾನಗೊಳಿಸಿ ಮಹಿಮೆಪಡಿಸಿದ ದೇವರಲ್ಲಿ ನೀವು ವಿಶ್ವಾಸವಿಟ್ಟದ್ದು ಇವರ ಮುಖಾಂತರವೇ. ಹೀಗೆ ನಿಮ್ಮ ವಿಶ್ವಾಸವೂ ನಿರೀಕ್ಷೆಯೂ ದೇವರಲ್ಲೇ ನೆಲೆಗೊಂಡಿವೆ.

ಶುಭಸಂದೇಶ: ಲೂಕ 24:13-35
13 : ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು.
14 : ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು.
15 : ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು.
16 : ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು.
17 : “ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು.
18 : ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು.
19 : “ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು.
20 : ನಮ್ಮ ಮುಖ್ಯ ಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು.
21 : ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳು ಆಗಿವೆ.
22 : ಆದರೂ ನಮ್ಮಲ್ಲಿ ಕೆಲವು ಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು.
23 : ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು.
24 : ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು.
25 : ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು!
26 : ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?” ಎಂದರು.
27 : ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರ ಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು.
28 : ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು.
29 : ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು.
30 : ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು.
31 : ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತುಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು.
32 : ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರ ಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೇ?” ಎಂದುಕೊಂಡರು.
33 : ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು.
34 : “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು.
35 : ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು.
--------------------
 ಭಯದಿಂದ ಪ್ರಭು ಯೇಸುವನ್ನು ತಾನರಿಯೇ ಎಂದು ನಿರಾಕರಿಸಿದ ಪೇತ್ರ ಈಗ ವಿಶ್ವಾಸದಲ್ಲಿ ಶಸಕ್ತನಾಗಿದ್ದಾನೆ. "ನೀವು ಕೊಂದ ಪ್ರಭುಯೇಸು" ಪುನರುತ್ಥಾನರಾಗಿದ್ದಾರೆ ಅವರೇ ಬರಬೇಕಾಗಿದ್ದ ರಕ್ಷಕರು ಎಂದು ಧೈರ್ಯವಾಗಿ ಜೆರುಸಲೇಮಿನ ಸರ್ವ ನಿವಾಸಿಗಳಿಗೆ, ವಿಶೇಷವಾಗಿ ಯೆಹೂದ್ಯರಿಗೆ ನಿರ್ಭಯವಾಗಿ ಬೋಧಿಸುತ್ತಾನೆ ಹಾಗೂ ಅವರೇ ನೈಜ ಹಾಗೂ ಕಳಂಕರಹಿತ ಕುರಿಮರಿ. ಅವರು ತಮ್ಮ ಅಮೂಲ್ಯ ರಕ್ತದಿಂದ ನಮ್ಮನ್ನು ಶುದ್ಧಿಕರಿಸಿ ಸರ್ವ ಬಂಧನಗಳಿಂದ ಬಿಡಿಸಿದ್ದಾಡಿರೆ ಎಂದು ನಿಭರ್ಯವಾಗಿ ಘೋಷಿಸುತ್ತಾನೆ.                                                                 
ಇತ್ತ ಬೇಸರ ಹಾಗೂ ನಿರಾಸೆಯಿಂದ ತುಂಬಿದ್ದ ಶಿಷ್ಯರಿಬ್ಬರು ಜರುಸಲೇಮಿನಿಂದ ಎಮ್ಮಾವು ಎಂಬ ಗ್ರಾಮದೆಡೆಗೆ ಪಯಣಿಸುತ್ತಿದ್ದಾರೆ. ಅವರ ಅಂತರಂಗದಲ್ಲಿ ಕತ್ತಲೆ ಕವಿದಿದೆ ಮನಸ್ಸು ಮಂಕಾಗಿದೆ. ಹೃದಯ ತಳಮಳಗೊಂಡಿದೆ. ತಮ್ಮ ಜೀವನದ ಸರ್ವಸ್ವವೂ ಆಗಿದ್ದ ಪ್ರಭು ಯೇಸು ಎಲ್ಲರಂತೆ ಮರೆಯಾದರೆಂದು ನಿಸ್ತೇಜಗೊಂಡಿದ್ದರೆ. ಅವರ ಜೀವನ ಮಕ್ತಾಯವಾದಂತೆ ಎಂದು ಭಾವಿಸುತ್ತಿದ್ದಂತೆ ಪುನರುತ್ಥಾನಿ ಪ್ರಭು ಯೇಸು ಅವರ ಪಯಣದಲ್ಲಿ ಜೊತೆಗಾರರಾಗುತ್ತಾರೆ. ಅವರ ಮನದಾಳದ ಕತ್ತಲೇ ಸರಿಯುವಂತೆ ದೈವವಾಕ್ಯದಿಂದ ಅವರನ್ನು ತುಂಬುತ್ತಾರೆ. ಗ್ರಾಮವು ಸಮೀಪಿಸುತ್ತಿದ್ದಂತೆ ಮುಂದೆ ಹೋಗುವವರಂತೆ ಪ್ರಭು ಯೇಸು ಮುನ್ನೆಡೆದರೂ ಶಿಷ್ಯರು ಅವರನ್ನು ಬಿಡಲು ಇಚ್ಚಿಸಲಿಲ್ಲ; ಬದಲಾಗಿ 'ಬನ್ನಿ ನಮ್ಮೊಡನೆ ತಂಗಿರಿ' ಎಂದು ವಿನಂತಿಸುತ್ತಾರೆ. ಆಗಲೇ ಆ ಶಿಷ್ಯರ ಮನದಾಳದಲ್ಲಿದ್ದ ಕತ್ತಲೆ ಕರಗಲಾರಂಭಿಸುತ್ತದೆ. ರೊಟ್ಟಿ ಮುರಿದುಕೊಟ್ಟಾಗ ಅವರ ಅಂತರಂಗದ ಬೆಳಕು ಪ್ರಜ್ವಲಗೊಂಡು ಬುದ್ಧಿ ವಿಕಾಸಗೊಳ್ಳುತ್ತದೆ. ಅವರು ಪುನರುತ್ಥಾನಿ ಕ್ರಿಸ್ತನನ್ನು ಗುರಿತಿಸುತ್ತಾರೆ ಆ ಕ್ಷಣದಿಂದ ಅವರ ಮುದುಡಿದ ಬದುಕು ಅರಳಲಾಂಭಿಸುತ್ತದೆ.
 ಜೀವನವೇ ಹಾಗೆ ಅಲ್ಲವೇ! ಪುನರುತ್ಥಾನಿ ಕ್ರಿಸ್ತ ನಮ್ಮೊಡನಿರುವಾಗ ಕತ್ತಲೆ, ನಿರಾಸೆ ದೂರಸರಿದು ಪ್ರಭುವಿನ ಬೆಳಕು ನಮ್ಮನ್ನು ಆವರಿಸಿ, ಜ್ಞಾನ ವಿಕಾಸಗೊಳ್ಳುತ್ತದೆ. ಜೀವನದ ನಿರಾಸೆ ತೊಲಗಿ ಭರವಸೆಯ ಬೆಳಕು ನಮ್ಮ ಅಂತರಂಗವನ್ನು ಆವರಿಸಿ ಜೀವನದ ದಿಕ್ಕನ್ನು ಬದಲಿಸುತ್ತದೆ. ಪುನರುತ್ಥಾನಿ ಕ್ರಿಸ್ತನಿಂದ ಉಜ್ಜೀವನಗೊಂಡ ಬದುಕು ಪರರಿಗಾಗಿ ಬದುಕಲು ಬಯಸುತ್ತದೆ. ಈಗ ಮಾನವ ಕುಲವನ್ನು ಆವರಿಸಿರುವ ಕೊರೋನ ಕತ್ತಲೆ ಬೇಗ ಸರಿದು ಪುನರುತ್ಥಾನಿ ಕ್ರಿಸ್ತನ ಬೆಳಕು ಮಾನವ ಕುಲವನ್ನು ಬೆಳಗಲೆಂದು 'ಬನ್ನಿ ನಮ್ಮೊಡನೆ ತಂಗಿರಿ' ಎಂದು ವಿಶ್ವಾಸದಿಂದ ಪ್ರಭುವನ್ನು ಅಹ್ವಾನಿಸೋಣ.

No comments:

Post a Comment