ಏಪ್ರಿಲ್ 1,
2020 [ನೇರಳೆ]
ಮೊದಲ ವಾಚನ: ದಾನಿ 3:14-20, 24-25, 28
ಕೀರ್ತನೆ ಅಜರ್ಯ 1:29-34 ಶ್ಲೋಕ.34
ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿತರು
ಶುಭಸಂದೇಶ: ಯೊವಾನ್ನ 8:31-42
ಮೊದಲ ವಾಚನ: ದಾನಿ 3:14-20, 24-25, 28
14 : ಅದರಂತೆಯೇ ಅವರನ್ನು ಹಿಡಿದು ತರಲಾಯಿತು. ನೆಬೂಕದ್ನಚ್ಚರನು ಅವರಿಗೆ, “ಶದ್ರಕ್, ಮೇಶಕ್, ಹಾಗು ಅಬೇದ್ನೆಗೋ ಎಂಬವರೇ,ನೀವು ಬೇಕುಬೇಕೆಂದು, ನನ್ನ ದೇವರಿಗೆ ಸೇವೆಮಾಡದೆ, ನಾನು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೋ?
15 : ಈಗಲಾದರು ನೀವು ಸಿದ್ಧರಾಗಿದ್ದು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಕೂಡಲೆ ಅಡ್ಡಬಿದ್ದು ನಾನು ಸ್ಥಾಪಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಇಲ್ಲವಾದರೆ ಈ ಗಳಿಗೆಯಲ್ಲೆ ನಿಮ್ಮನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು. ನಿಮ್ಮನ್ನು ನನ್ನ ಕೈಯಿಂದ ಬಿಡಿಸಬಲ್ಲ ದೇವರು ಯಾರಿದ್ದಾನೆ?” ಎಂದು ಹೇಳಿದನು.
16 : ಇದನ್ನು ಕೇಳಿದ ಶದ್ರಕ್, ಮೇಶಕ್ ಮತ್ತು ಆಬೇದ್ನೆಗೋ ಎಂಬುವರು ರಾಜನಿಗೆ: “ನೆಬೂಕದ್ನೆಚ್ಚರ ಅರಸರೇ, ಈ ವಿಷಯದಲ್ಲಿ ನಾವು ನಿಮಗೆ ಏನನ್ನೂ ಹೇಳಬೇಕಾಗಿಲ್ಲ.
17 : ನಾವು ಸೇವೆ ಮಾಡುವ ದೇವರಿಗೆ ಚಿತ್ತವಿದ್ದರೆ ಅವರೇ ಧಗಧಗನೆ ಉರಿಯುವ ಆವಿಗೆಯೊಳಗಿಂದಲೂ ನಮ್ಮನ್ನು ಕಾಪಾಡಬಲ್ಲರು. ಅವರೇ ನಮ್ಮನ್ನು ನಿಮ್ಮ ಕೈಯಿಂದಲೂ ಬಿಡಿಸಬಲ್ಲರು.
18 : ಒಂದು ವೇಳೆ ಬಿಡಿಸದಿದ್ದರೂ ರಾಜರೇ, ಇದು ನಿಮಗೆ ತಿಳಿದಿರಲಿ: ನಾವು ನಿಮ್ಮ ದೇವರುಗಳಿಗೆ ಸೇವೆಮಾಡುವುದಿಲ್ಲ. ನೀವು ಸ್ಥಾಪಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ,” ಎಂದು ಉತ್ತರಕೊಟ್ಟರು.
19 : ಆಗ ನೆಬೂಕದ್ನೆಚ್ಚರನು ಕೋಪೋದ್ರೇಕಗೊಂಡನು. ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಅವರ ಬಗ್ಗೆ ಅವನ ಮುಖಚರ್ಯೆ ಬದಲಾಯಿತು. ಆವಿಗೆಯನ್ನು ವಾಡಿಕೆಗಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು.
20 : ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್ನೆಗೋ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಗೆಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು
24 : ಇತ್ತ ರಾಜ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳನ್ನು ಕರೆಸಿ, “ನಾವು ಮೂವರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿಸಿದೆವಲ್ಲವೆ?” ಎಂದು ಕೇಳಿದನು. ಅವರು ರಾಜನಿಗೆ, “ಹೌದು ಪ್ರಭೂ, ಅದು ಸತ್ಯ,” ಎಂದು ಉತ್ತರ ಕೊಟ್ಟರು.
25 : ಅದಕ್ಕೆ ಅವನು, “ಆದರೆ, ಇಗೋ ಕಟ್ಟಿಲ್ಲದ ನಾಲ್ವರನ್ನು ನಾನು ನೋಡುತ್ತಿದ್ದೇನೆ. ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ; ಅವರಿಗೆ ಯಾವ ಹಾನಿಯೂ ಆಗುತ್ತಿಲ್ಲ.
28 : ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್ ಹಾಗು ಅಬೇದ್ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ! ಆತ ತನ್ನ ದೂತರನ್ನು ಕಳಿಸಿ ತನ್ನಲ್ಲಿ ವಿಶ್ವಾಸವಿಟ್ಟ ಇವರನ್ನು ರಕ್ಷಿಸಿದ್ದಾನೆ. ಇವರೋ ರಾಜಾಜ್ಞೆಯನ್ನೂ ಮೀರಿ ತಮ್ಮ ದೇವರನ್ನೇ ಹೊರತು ಇನ್ನಾವ ದೇವರನ್ನೂ ಪೂಜಿಸಿ ಆರಾಧಿಸಬಾರದೆಂದು ಸ್ವಂತ ದೇಹಗಳನ್ನೇ ಸಾವಿಗೊಪ್ಪಿಸಿದಂಥ ಭಕ್ತರು!
ಕೀರ್ತನೆ ಅಜರ್ಯ 1:29-34 ಶ್ಲೋಕ.34
ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿತರು
29: ನಮ್ಮ ಪೂರ್ವಜರ ದೇವರಾದ ಸರ್ವೇಶ್ವರಾ, ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.
30: ಮಹಿಮಾಯುತವಾದ ನಿಮ್ಮ ನಾಮ ಸ್ತುತ್ಯಾರ್ಹವಾದುದು, ಪರಮಪೂಜ್ಯವಾದುದು, ಎಂದೆಂದಿಗೂ ಮಹಾ ಘನತರವಾದುದು.
31: ಪರಮ ವೈಭವದಿಂದ ಕೂಡಿದ ಮಂದಿರದಲ್ಲಿ ನೀವು ಸ್ತುತಿಸ್ತೋತ್ರಕ್ಕೆ ಪಾತ್ರರು:
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.
32: ಸಾಗರಾಧಿಗಳನ್ನು ಸಮೀಕ್ಷಿಸುವ ನಿಮಗೆ ಸ್ತೋತ್ರ! ಕೆರೂಬಿಗಳ ಮೇಲೆ ಅಸೀನರಾಗಿರುವ ನಿಮಗೆ ಸ್ತೋತ್ರ.
ನೀವು ಪರಮ ಪೂಜ್ಯರು ಎಂದೆಂದಿಗೂ ಮಹೋನ್ನತರು.
33: ನಿಮ್ಮ ಸಾಮ್ರಾಜ್ಯದ ಸಿಂಹಾಸನದ ಮೇಲೆ ಮಂಡಿಸಿರುವ ನಿಮಗೆ ಸ್ತೋತ್ರ
ನೀವು ಪರಮ ಪೂಜ್ಯರು ಎಂದೆಂದಿಗೂ ಮಹೋನ್ನತರು.
34: ಗಗನ ಮಂಡಲದಲ್ಲಿ ಸ್ತೋತ್ರಪಾತ್ರರು: ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿರರು.
29: ನಮ್ಮ ಪೂರ್ವಜರ ದೇವರಾದ ಸರ್ವೇಶ್ವರಾ, ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.
30: ಮಹಿಮಾಯುತವಾದ ನಿಮ್ಮ ನಾಮ ಸ್ತುತ್ಯಾರ್ಹವಾದುದು, ಪರಮಪೂಜ್ಯವಾದುದು, ಎಂದೆಂದಿಗೂ ಮಹಾ ಘನತರವಾದುದು.
31: ಪರಮ ವೈಭವದಿಂದ ಕೂಡಿದ ಮಂದಿರದಲ್ಲಿ ನೀವು ಸ್ತುತಿಸ್ತೋತ್ರಕ್ಕೆ ಪಾತ್ರರು:
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.
32: ಸಾಗರಾಧಿಗಳನ್ನು ಸಮೀಕ್ಷಿಸುವ ನಿಮಗೆ ಸ್ತೋತ್ರ! ಕೆರೂಬಿಗಳ ಮೇಲೆ ಅಸೀನರಾಗಿರುವ ನಿಮಗೆ ಸ್ತೋತ್ರ.
ನೀವು ಪರಮ ಪೂಜ್ಯರು ಎಂದೆಂದಿಗೂ ಮಹೋನ್ನತರು.
33: ನಿಮ್ಮ ಸಾಮ್ರಾಜ್ಯದ ಸಿಂಹಾಸನದ ಮೇಲೆ ಮಂಡಿಸಿರುವ ನಿಮಗೆ ಸ್ತೋತ್ರ
ನೀವು ಪರಮ ಪೂಜ್ಯರು ಎಂದೆಂದಿಗೂ ಮಹೋನ್ನತರು.
34: ಗಗನ ಮಂಡಲದಲ್ಲಿ ಸ್ತೋತ್ರಪಾತ್ರರು: ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿರರು.
ಶುಭಸಂದೇಶ: ಯೊವಾನ್ನ 8:31-42
31 : ಯೇಸುಸ್ವಾಮಿ ತಮ್ಮಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ ಹೀಗೆಂದರು: “ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು.
32 : ನೀವು ಸತ್ಯವನ್ನು ಅರಿತುಕೊಳ್ಳುವಿರಿ. ಸತ್ಯವು ನಿಮಗೆ ಸ್ವಾತಂತ್ರ್ಯ ನೀಡುವುದು.”
33 : ಅದಕ್ಕೆ ಯೆಹೂದ್ಯರು, “ನಾವು ಅಬ್ರಹಾಮನ ವಂಶಜರು; ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು.
34 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ.
35 : ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವಂತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ.
36 : ಪುತ್ರನು ನಿಮಗೆ ಸ್ವಾತಂತ್ರ್ಯ ನೀಡಿದರೆ, ನೀವು ನಿಜವಾಗಿಯೂ ಸ್ವತಂತ್ರರು.
37 : ನೀವು ಅಬ್ರಹಾಮನ ವಂಶಜರೆಂದು ನಾನು ಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ.
38 : ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕಂಡದ್ದನ್ನೇ ನಿರೂಪಿಸುತ್ತವೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತಂದೆಯಿಂದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತವೆ,” ಎಂದರು.
39 : ಆಗ ಆ ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ,” ಎಂದು ಮರುನುಡಿದರು. ಯೇಸು, “ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದಂತೆ ನೀವು ಮಾಡುತ್ತಿದ್ದಿರಿ.
40 : ಅದಕ್ಕೆ ಬದಲಾಗಿ ದೇವರಿಂದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ ಮಾಡಲಿಲ್ಲ.
41 : ನೀವಾದರೋ ನಿಮಗೆ ತಂದೆಯಾದವನು ಮಾಡಿದಂತೆ ಮಾಡುತ್ತೀರಿ,” ಎಂದರು. ಅದಕ್ಕೆ ಅವರು, “ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೇ ನಮ್ಮ ತಂದೆ,” ಎಂದು ಪ್ರತಿಭಟಿಸಿದರು.
42 : ಯೇಸು, ಅವರಿಗೆ, “ದೇವರೇ ನಿಮ್ಮ ತಂದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ.
-------------
-------------
ಚಿಂತನೆ
ದೇವರನ್ನು ನಂಬುವ ಪ್ರತಿಯೊಬ್ಬನೂ ಇಂದಿನ ಮೊದಲನೆಯ ವಾಚನವನ್ನು ಓದಲೇಬೇಕು. ಕಾರಣ ವಿಶ್ವಾಸವೇನೆಂಬುದರ ನೈಜ ಪಾಠ ಅಲ್ಲಿದೆ. ರಾಜ ನೆಬುಕದ್ನೇಜ಼ರ ತಾನು ಮಾಡಿಸಿದ ಬಂಗಾರದಪ್ರತಿಮೆಯನ್ನು ಆರಾಧಿಸಲು ಆಕ್ಷೇಪಿಸಿದ ಶದ್ರಕ್, ಮೇಶಕ್, ಅಬೇದ್‌ನೆಗೋ ಎಂಬ ಯುವಕರನ್ನು ಧಗಧಗನೆ ಉರಿಯುವ ಬೆಂಕಿಯಲ್ಲಿ ಹಾಕಬೇಕೆಂದು ಆಜ್ಞಾಪಿಸುತ್ತಾನೆ. ಇದನ್ನು ಕೇಳಿದ ಆ ಮೂವರು ತರುಣರುಕಿಂಚಿತ್ತೂ ಭಯಭ್ರಾಂತರಾಗದೆ ಆತ್ಮವಿಶ್ವಾಸದಿಂದ ’ನಾವು ಸೇವೆ ಮಾಡುವ ದೇವರು ಚಿತ್ತವಿದ್ದರೆ ಕಾಪಾಡಬಲ್ಲರು’ ಎನ್ನುವುದು ಮನತಟ್ಟುತ್ತದೆ.
ಹಲವು ವೇಳೆ ನಮ್ಮ ವಿಶ್ವಾಸ ಮತ್ತು ಅದರ ವೃದ್ಧಿ ನಮ್ಮ ಹರಕೆ, ವ್ರತಗಳ ಮೇಲೆ ಅವಲಂಬಿಸಿರುತ್ತದೆ. ಕೆಲವೊಮ್ಮೆ ಅವು ನೆರವೇರದೇ ಇದ್ದಾಗ, ನಮ್ಮ ಇರುಸುಮುರುಸು, ಕೋಪಗಳು ನಮ್ಮನ್ನುಖಿನ್ನರನ್ನಾಗಿ ಮಾಡುತ್ತವೆ. ಬದಲಿಗೆ ನಾವು ಆ ಯುವಕರಂತೆ 'ಒಂದು ವೇಳೆ ನಾನೆಣಿಸಿದಂತೆ ನಡೆಯದಿದ್ದರೂ' ಎಂದು ನಂಬುಗೆಯ ಮಾತನ್ನಾಡಿದರೆ, ದೇವಪುತ್ರನನ್ನು ಆ ಯುವಕರು ಉರಿಯುವ ಬೆಂಕಿಯಲ್ಲಿಜೊತೆಗಾರನಾಗಿ ಕಂಡಂತೆ ನಾವೂ ನಮ್ಮ ಸಂಕಷ್ಟದಲ್ಲಿ ದೇವರನ್ನು ಜೊತೆಗಾರನಾಗಿ ಕಾಣಬಹುದು. ಗ್ರಹಾಂ ಸ್ಟೇನ್, ರಾಣಿ ಮರಿಯ ಇವರು ಯಾರೂ ಉರಿಯುವ ಬೆಂಕಿಯಲ್ಲಿದ್ದರೂ, ರಕ್ತದಮಡುವಿನಲ್ಲಿದ್ದರೂ ವಿಚಲಿತರಾಗಲಿಲ್ಲ, ಅಂದರೆ ಸಾವಿನಂಚಿನಲ್ಲೂ ಶ್ವಾಸ ಕಳೆದುಕೊಳ್ಳದ ವಿಶ್ವಾಸ ಅವರದ್ದಾಗಿದ್ದಿರಬಹುದು. ದೇವರ ಜೊತೆಗಿರುವುದೆಂದರೆ ಇದುವೇ. ನಾವು ಆತನ ಜೊತೆಗಿದ್ದರೆ ಮಾತ್ರಆತ ನಮ್ಮ ಜೊತೆಗಿರಬಲ್ಲನು.
ಹಾಲಲ್ಲಾದರೂ ಹಾಕು... ನೀರಲ್ಲಾದರೂ ಹಾಕು ಎಂಬ ದೃಢವಿಶ್ವಾಸವಿರದ ಹೊರತು ನಾವು ದೇವರ ಮಕ್ಕಳಾಗಲಾರೆವು, ಆತನ ಜೊತೆಗಿದ್ದರೆ ನಾ ಸ್ವತಂತ್ರ ಇಲ್ಲವಾದರೆ ದಾಸ.
--------------
``ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು ನಿದಾನಿಸಿ ಯೋಚಿಸಿದಾಗ ನಿಜವೂ ತಿಳಿವುದು’’. ಈ ಮಾತುಗಳನ್ನು ಇಂದಿನ ಮೊದಲನೆಯ ವಾಚನಕ್ಕೆ ಹೋಲಿಸಬಹುದು. ನಮ್ಮ ತೀರ್ಪುಗಳಿರಲಿ ಅಥವಾ ನ್ಯಾಯಾಲಯದ ತೀರ್ಪುಗಳೇ ಇರಲಿ ಎಷ್ಟೋ ಸಾರಿ ತಪ್ಪಾಗುತ್ತದೆ. ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಅಮಾಯಕರನ್ನು ಬಲಿಪಶುಗಳನ್ನಾಗಿ ಮಾಡಿವೆ. ತಮ್ಮ ಸ್ವಾರ್ಥ ಸಾಧನೆಗಾಗಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸತ್ಯದ ಸಮಾಧಿಮಾಡಿದ್ದಾರೆ. ಇಂತಹ ಸಮಾಜದಲ್ಲಿ ಜೀವಿಸುತ್ತಿರುವಾಗ ದಾನಿಯೇಲನ ಧೈರ್ಯ, ವಿವೇಚನೆ ನಮ್ಮದಾಗಬೇಕು. ಸತ್ಯ, ನ್ಯಾಯದ ಪರ ದ್ವನಿಯೆತ್ತಬೇಕು. ಸುಸಾನ್ನಳಂತ ನಿರ್ದೋಷಿಗಳು ಅನೇಕರಿದ್ದಾರೆ ಅವರ ರಕ್ಷಣೆಗೆ ಮುಂದಾಗಬೇಕು
--------------
ಕ್ರಿ..ಪೂ. 585ರಲ್ಲಿ ಬ್ಯಾಬಿಲೋನಿಯಾದ ಅರಸ ನೆಬೂಕದ್ನೆಚ್ಚರನು ಜೆರುಸಲೇಮಿನ ಮೇಲೆ ದಂಡೆತ್ತಿ ಬರುತ್ತಾನೆ. ಜೆರುಸಲೇಮನ್ನು ಸಂಪೂರ್ಣವಾಗಿ ನಾಶಗೊಳಿಸಿ ಯುದ್ಧದಲ್ಲಿ ಸೋತ ಇಸ್ರಾಯೇಲರನ್ನು ಬ್ಯಾಬಿಲೋನಿಯಾಗೆ ಸೆರೆಯಾಳುಗಳಾಗಿ ಹೊಯ್ಯುತ್ತಾನೆ. ಹೊರ ನಾಡಿನಲ್ಲಿ ಸೆರೆಯಾಳುಗಳಾಗಿದ್ದ ಇಸ್ರಾಯೇಲರನ್ನು ತಮ್ಮ ದೇವರಿಗೆ ಪೂಜೆ ಮಾಡಲು ಅಪ್ಪಣೆ ಮಾಡುತ್ತಾನೆ. ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಎಂಬುವವರು ರಾಜನ ಅಪ್ಪಣೆಯನ್ನು ನಿರಾಕರಿಸುತ್ತಾರೆ ಹಾಗೂ ಏಕ ದೇವರಾದ ಸರ್ವೇಶ್ವರನಿಗೆ ಮಾತ್ರ ಆರಾಧನೆ ಮೀಸಲೆಂದು ತಿಳಿಸುತ್ತಾರೆ. ಕುಪಿತಗೊಂಡ ಅರಸ ಅವರನ್ನು ಉರಿಯುವ ಬೆಂಕಿಗೆ ದೂಡುತ್ತಾನೆ. ಸರ್ವೇಶ್ವರ ಸ್ವಾಮಿಯ ಮೇಲಿದ್ದ ಅಚಲ ವಿಶ್ವಾಸ ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಅವರನ್ನು ಬೆಂಕಿಯ ಜ್ವಾಲೆಯಿಂದ ರಕ್ಷಿಸುತ್ತದೆ.
------------

No comments:
Post a Comment