Saturday, 28 March 2020

ತಪಸ್ಸು ಕಾಲದ ಐದನೆಯ ಶುಕ್ರವಾರ

ಏಪ್ರಿಲ್ 3, 2020 ಶುಕ್ರವಾರ                                                               [ನೇರಳೆ]
ಮೊದಲ ವಾಚನ: ಯೆರೇ 20: 10-13
ಕೀರ್ತನೆ 18:2-3, 4-5, 6, ಶ್ಲೋಕ.6
ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ,
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ
ಶುಭಸಂದೇಶ: ಯೊವಾನ್ನ 10:31-42

ಮೊದಲ ವಾಚನ: ಯೆರೇ 20: 10-13
10 : ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವರ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವುಎಂದು ಗುಸುಗುಟ್ಟುತ್ತಿರುವರು ಬಹು ಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿ ನೋಡುವೆವುಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ.
11 : ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯ ಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ.
12 : ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವರು ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ.
13 : ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ.

ಕೀರ್ತನೆ 18:2-3, 4-5, 6, ಶ್ಲೋಕ.6
ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ,
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ
2 : ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ / ಆತನೇ ನನ್ನ ದೇವ, ನನ್ನಾಶ್ರಯ ದುರ್ಗ / ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ //
3 : ಪ್ರಭು ಸ್ತುತ್ಯಾರ್ಹನು / ಶತ್ರುಗಳಿಂದ ಕಾಪಾಡುವನು, ನಾನವಗೆ ಮೊರೆಯಿಡಲು //
4 : ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು / ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು //
5 : ಆವರಿಸಿಕೊಂಡವು ಪಾತಾಳ ಪಾಶಗಳು | ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು ||
6 : ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ / ಪ್ರಾರ್ಥನೆ ಮಾಡಿದೆ ನನ್ನ ದೇವನಲಿ / ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ //
7 : ಆಗ ಕಂಪಿಸಿತು ಭೂಮಿ ಗಡಗಡನೆ / ಕದಲಿದವು ಬೆಟ್ಟದ ಬುಡಗಳು ಮಿಲಮಿಲನೆ / ಏಕೆನೆ, ಸಿಟ್ಟೇರಿತ್ತು ಆತನಿಗೆ //

ಶುಭಸಂದೇಶ: ಯೊವಾನ್ನ 10:31-42
31 : ಆಗ ಯೆಹೂದ್ಯರು, ಅವರತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು.
32 : ಅದಕ್ಕೆ ಯೇಸು, “ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮುಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದರು.
33 : ಅದಕ್ಕೆ ಯೆಹೂದ್ಯರು, “ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದೀಯೇ,” ಎಂದು ಉತ್ತರಕೊಟ್ಟರು.
34 : ಆಗ ಯೇಸು, “ ‘ನೀವು ದೇವರುಗಳುಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ?
35 : ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ.
36 : ಇಂತಿರುವಲ್ಲಿ, ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ‘ದೇವರ ಪುತ್ರನಾಗಿದ್ದೇನೆಎಂದು ಹೇಳಿಕೊಂಡದ್ದಕ್ಕೆ, ‘ಇವನು ದೇವದೂಷಣೆ ಮಾಡಿದ್ದಾನೆಎನ್ನುತ್ತೀರಲ್ಲಾ?
37 : ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ.
38 : ನಾನು ಹಾಗೆ ಮಾಡಿದ್ದೇ ಆದರೆ, ನನ್ನನ್ನು ನಂಬದೆ ಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನ್ನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು ಹಾಗೂ ಮನದಟ್ಟಾಗುವುದು,” ಎಂದರು.
39 : ಮತ್ತೊಮ್ಮೆ ಯೇಸುವನ್ನು ಬಂಧಿಸಲು ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು.
40 : ಬಳಿಕ ಯೇಸುಸ್ವಾಮಿ ಜೋರ್ಡನ್ ನದಿಯನ್ನು ದಾಟಿ ಯೊವಾನ್ನನು ಮೊತ್ತ ಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು.
41 : ಹಲವರು ಅವರ ಬಳಿಗೆ ಬರತೊಡಗಿದರು. ‘ಯೊವಾನ್ನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.
42 : ಅಲ್ಲಿ ಹಲವರಿಗೆ ಯೇಸುವಿನಲ್ಲಿ ವಿಶ್ವಾಸ ಹುಟ್ಟಿತು.
--------------
ಚಿಂತನೆ 
ಮಾನವೀಯತೆಯೇ ಶ್ರೇಷ್ಠ ಕಾನೂನು 
ಪ್ರವಾದಿ ಯೆರೆಮೀಯ ಮತ್ತು ಕ್ರಿಸ್ತ ತಮ್ಮ ಬದುಕಿನಲ್ಲಿ ಕಂಡ ಬವಣೆಗಳು ಇಂದಿನ ವಾಚನಗಳಲ್ಲಿ ಉಲ್ಲೇಖಿತವಾಗಿರುವಂತೆ ವಾಸ್ತವ ಸಮಾಜದಲ್ಲೂ ಪ್ರತಿಬಿಂಬಿತವಾಗುತ್ತಿವೆ. ಸತ್ಯಕ್ಕೆ ಸಾಕ್ಷಿ ನುಡಿದ ಯೇಸುವಿಗೆಯೆಹೂದ್ಯರು ಕಲ್ಲು ಬೀರಲು ಮುಂದಾಗುತ್ತಾರೆ. ಯೆಹೂದ್ಯ ನಿಯಮಗಳ ಪ್ರಕಾರ ದೇವದೂಷಣೆ ಮಾಡಿದ ವ್ಯಕ್ತಿಗಳಿಗೆ ಕಲ್ಲು ಬೀರಿ ಕೊಲ್ಲುವ ಶಿಕ್ಷೆ ಜಾರಿಯಲ್ಲಿತ್ತು. 
ಸತ್ಯ ಕಣ್ಣ ಮುಂದೆ ಇದ್ದರೂ ಸಣ್ಣ ಪುಟ್ಟ ವಿಷಯಗಳಿಗೂ ನಿಯಮ ನಿಬಂಧನೆಗಳಿಂದಲೇ ನ್ಯಾಯ ಬಯಸುವ ನಮ್ಮ ಒಣ ಆದರ್ಶಗಳು, ತಪ್ಪುಗಳಿಗೆ ಸಿಗಬೇಕಾದ್ದು ಕ್ಷಮೆಯೇ ವಿನಃ ಶಿಕ್ಷೆಯಲ್ಲ ಎಂಬುದನ್ನುಅರಿಯಬೇಕಾಗಿದೆ, ನಾವೂ ಬಾಳುವ ಮತ್ತು ಇತರರನ್ನು ಬಾಳಗೊಡುವ ಪಾಠವನ್ನು ರೂಢಿಸಿಕೊಳ್ಳಬೇಕಾಗಿದೆ. ನಿಯಮ ಕಾನೂನುಗಳು ಒಳ್ಳೆಯವು, ಅವು ಸಮಾಜವನ್ನು ವ್ಯವಸ್ಥಿತವಾಗಿಯೂ,ಸುಸ್ಥಿತಿಯಲ್ಲೂ ಇಡಬಲ್ಲವು; ಅವೆಲ್ಲವೂ ನಮ್ಮ ಒಳಿತಿಗೆಂದು ಮಾಡಿಕೊಂಡವು. ಆದರೆ ಮಾನವಿಕ ಕಾನೂನುಗಳ ಮುಂದೆ ಇವೆಲ್ಲ ತಲೆಬಾಗಲೇಬೇಕು. ನಮ್ಮ ಕಾನೂನುಗಳು ಮತ್ತೊಬ್ಬರ ಕನಿಷ್ಠಸಂತೋಷಕ್ಕೂ ಮುಳ್ಳಾದಾಗ, ಬದುಕಲಿಚ್ಛಿಸಿದರೂ ಮನೋವೇದನೆಯಿಂದ ಸಾವಿಗೆ ಶರಣಾಗಲೇಬೇಕಾದ ದುಃಸ್ಥಿತಿಗೆ ಒಳಗಾದಾಗ ಕಾನೂನುಗಳು ನಿರರ್ಥಕ ಮಾತ್ರವಲ್ಲ ಅವು ಅಪರಾಧಿ ಸ್ಥಾನದಲ್ಲಿನಿಲ್ಲುತ್ತವೆ. ಇನ್ನಾದರೂ ಮಾನವೀಯತೆ ಬೇಕೆನಿಸಿದಾಗ ನಮ್ಮ ನಿಯಮಗಳನ್ನು ಸಡಿಲಗೊಳಿಸೋಣ. ಆಗ ಮತ್ತೊಬ್ಬ ಕ್ರಿಸ್ತನಿಗೆ ಕಲ್ಲು ತೂರಿದ ಪಶ್ಚಾತ್ತಾಪ ನಮ್ಮನ್ನು ಕಾಡದು.
--------------

No comments:

Post a Comment