Saturday, 28 March 2020

ಪಾಸ್ಕಕಾಲದ ಎರಡನೆಯ ವಾರ - ಮಂಗಳವಾರ

ಏಪ್ರಿಲ್ 21, 2020 ಮಂಗಳವಾರ                                       [ಬಿಳಿ]
ಸಂತ ಆನ್ಸೆಲ್ಮ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4: 32-37
ಕೀರ್ತನೆ 93: 1-2, 5 ಶ್ಲೋಕ.1
ವಹಿಸಿಹನು ಪ್ರಭು ರಾಜ್ಯಾಧಿಕಾರವನು,
ಧರಿಸಿಹನು ಘನತೆಯ ವಸ್ತ್ರಲಾಂಛನವನು,
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 3:7-15

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4: 32-37
32 : ಭಕ್ತರ ಅನ್ಯೋನ್ಯ ಜೀವನ ಭಕ್ತವಿಶ್ವಾಸಿಗಳು ಒಗ್ಗಟ್ಟಿನಿಂದಲೂ ಒಮ್ಮನಸ್ಸಿನಿಂದಲೂ ಬಾಳುತ್ತಿದ್ದರು. ಯಾರೂ ತಮ್ಮ ಸೊತ್ತನ್ನು ತನ್ನದೇ ಎಂದು ಭಾವಿಸದೆ ಹುದುವಾಗಿ ಹಂಚಿಕೊಳ್ಳುತ್ತಿದ್ದರು.
33 : ಪ್ರೇಷಿತರು ಪ್ರಭು ಯೇಸುವಿನ ಪುನರುತ್ಥಾನಕ್ಕೆ ಬಹು ಸಾಮಥ್ರ್ಯದಿಂದ ಸಾಕ್ಷಿಕೊಡುತ್ತಿದ್ದರು. ಜನರು ಅವರೆಲ್ಲರನ್ನು ಗೌರವದಿಂದ ಕಾಣುತ್ತಿದ್ದರು.
34 : ಅವರಲ್ಲಿ ಕೊರೆತೆಯಿದ್ದವರು ಒಬ್ಬರೂ ಇರಲಿಲ್ಲ.
35 : ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ, ಬಂದ ಹಣವನ್ನು ತಂದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿ ಒಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕಂತೆ ಹಂಚುತ್ತಿದ್ದರು.
36 : ಜೋಸೆಫ್ ಎಂಬ ಲೇವಿಯನು ಅವರ ಸಂಗಡ ಇದ್ದನು. ಇವನ ಹುಟ್ಟೂರು ಸೈಪ್ರಸ್. ಇವನಿಗೆಬಾರ್ನಬ’ (ಎಂದರೆ ಪ್ರೋತ್ಸಾಹಪುತ್ರ) ಎಂದು ಪ್ರೇಷಿತರು ಹೆಸರಿಟ್ಟಿದ್ದರು.
37 : ಇವನು ತನ್ನ ಜಮೀನನ್ನು ಮಾರಿ ಬಂದ ಹಣವನ್ನು ಪ್ರೇಷಿತರಿಗೆ ಪಾದ ಕಾಣಿಕೆಯಾಗಿ ಒಪ್ಪಿಸಿದನು.

ಕೀರ್ತನೆ 93: 1-2, 5 ಶ್ಲೋಕ.1
ವಹಿಸಿಹನು ಪ್ರಭು ರಾಜ್ಯಾಧಿಕಾರವನು,
ಧರಿಸಿಹನು ಘನತೆಯ ವಸ್ತ್ರಲಾಂಛನವನು,
1 : ವಹಿಸಿಹನು ಪ್ರಭು, ರಾಜ್ಯಾಧಿಕಾರವನು / ಧರಿಸಿಹನು ಘನತೆಯ ವಸ್ತ್ರ ಲಾಂಛನವನು / ತೊಟ್ಟಿಹನು ಶೌರ್ಯವೆಂಬ ನಡುಕಟ್ಟನು / ಸ್ಥಿರಪಡಿಸಿಹನು ಕದಲದಂತೆ ಜಗವನು //
2 : ನಿನ್ನ ಸಿಂಹಾಸನ ಸ್ಥಿರ ಆದಿಯಿಂದ / ನೀನಿರುವೆ ಪ್ರಭು ಅನಾದಿಯಿಂದ //
5 : ನಿನ್ನ ಆಜ್ಞೆಗಳು ಪ್ರಭು, ಸುಸ್ಥಿರ / ನಿನ್ನ ಆಲಯಕೆ ಪವಿತ್ರತೆ ಅರ್ಹ / ಯುಗಯುಗಾಂತರಕೂ ಅದು ಅರ್ಹ //

ಶುಭಸಂದೇಶ: ಯೊವಾನ್ನ 3:7-15
7 : ನೀವು ಹೊಸ ಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ.
8 : ಗಾಳಿ ತನಗೆ ತೋಚಿದ ಕಡೆ ಬಿಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ,” ಎಂದು ಹೇಳಿದರು.
9 : ಅದಕ್ಕೆ ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.
10 : ಆಗ ಯೇಸು, “ಇಸ್ರಯೇಲಿನ ಹೆಸರಾಂತ ಬೋಧಕನಾದ ನಿನಗೇ ಇದು ಅರ್ಥವಾಗಲಿಲ್ಲವೆ?
11 : ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ ಕೇಳು: ನಮಗೆ ತಿಳಿದುದನ್ನೇ ಕುರಿತು ನಾವು ಮಾತನಾಡುತ್ತೇವೆ; ನಾವು ಕಂಡದ್ದನ್ನು ಕುರಿತು ಸಾಕ್ಷಿ ನೀಡುತ್ತೇವೆ. ಆದರೂ ನಮ್ಮ ಸಾಕ್ಷ್ಯವನ್ನು ನೀವು ಒಪ್ಪಿಕೊಳ್ಳಲು ಸಿದ್ಧರಿಲ್ಲ.
12 : ಭೂಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಾಗಲೇ ನಿಮಗೆ ವಿಶ್ವಾಸವಿಲ್ಲವೆಂದ ಮೇಲೆ, ಸ್ವರ್ಗಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಲ್ಲಿ ನೀವು ವಿಸ್ವಾಸಿಸುವುದು ಉಂಟೆ?
13 : ಸ್ವರ್ಗಲೋಕದಿಂದಲೇ ಇಳಿದು ಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ.
14 : “ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು.
15 : ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು.
-------------
ನಿಕೋದೆಮನೊಂದಿಗೆ ಮಾತು ಮುಂದುವರಿಸಿದ ಯೇಸು ``ನರಪುತ್ರನನ್ನು ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವ ಹೊಂದುವರು’’ ಎಂದು ತಿಳಿಸುತ್ತಾರೆ.
ಮರುಳುಗಾಡಿನಲ್ಲಿ ದೇವರು ಇಸ್ರಾಯೇಲರನ್ನು ವಿಷಸರ್ಪದಿಮದ ರಕ್ಷಿಸಿದ (ಸಂಖ್ಯಾಕಾಂಡ 21:49) ಹಾಗೆ ನರಪುತ್ರನು ಶಿಲುಬೆಯ ಮೇಲೆ ಮಡಿಯುವುದರ ಮೂಲಕ ಮನುಕುಲವನ್ನು ರಕ್ಷಿಸುವರು ಎಂದು ಮುಂತಿಳಿಸುತ್ತಿದ್ದಾರೆ.
ದೇವರ ಪ್ರೀತಿಯನ್ನು ಮರೆತ ಇಸ್ರಾಯೇಲರು ಮೋಶೆಯ ವಿರುದ್ಧ ಗೊಣಗುಟ್ಟುತ್ತಾರೆ ಹಾಗೂ ಶಿಕ್ಷೆಗೆ ಗುರಿಯಾಗುತ್ತಾರೆ. ತಮ್ಮ ಅರಿವಿನ ನಂತರ ಕ್ಷಮೆ ಯಾಚಿಸುತ್ತಾರೆ. ದೇವರ ಆಜ್ಞೆಯ ಮೇರೆಗೆ ಮೋಶೆಯು ಕಂಚಿನ ಸರ್ಪವನ್ನು ಸ್ಥಾಪಿಸಿ ಇಸ್ರೆಯೇಲರ ಪ್ರಾಣ ರಕ್ಷಿಸುತ್ತಾನೆ. ಅದೇ ರೀತಿ ಪಾಪ ತೊರೆದ ಯೇಸುವಿನಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನು ನಿತ್ಯಜೀವ ಪಡೆಯುವನೆಂದು ಇಂದಿನ ಶುಭಸಂದೇಶ ತಿಳಿಸುತ್ತದೆ.
---------------
ಪ್ರತಿಯೊಬ್ಬ ಕ್ರೈಸ್ತಭಕ್ತನು ನಿಸ್ವಾರ್ಥ ಬದುಕನ್ನು ರೂಪಿಸಿಕೊಳ್ಳುವುದು ಉತ್ಕೃಷ್ಟ ಕ್ರೈಸ್ತ ಬದುಕಿನ ಒಂದು ಅವಿಭಾಜ್ಯ ಅಂಗ. ಪ್ರಥಮ ಕ್ರೈಸ್ತಭಕ್ತರು ಅದನ್ನು ರೂಡಿಸಿಕೊಂಡಿದ್ದರು. ಅದನ್ನು ಇಂದಿನ ಪ್ರಥಮ ವಾಚನದಲ್ಲಿ ಹೀಗೆ ಓದುತ್ತೇವೆ "ಭಕ್ತವಿಶ್ವಾಸಿಗಳು ಒಗ್ಗಟ್ಟಿನಿಂದಲೂ ಒಮ್ಮನಸ್ಸಿನಿಂದಲೂ ಬಾಳುತ್ತಿದ್ದರು. ಯಾರೂ ತಮ್ಮ ಸೊತ್ತನ್ನು ತನ್ನದೇ ಎಂದು ಭಾವಿಸದೆ ಹುದುವಾಗಿ ಹಂಚಿಕೊಳ್ಳುತ್ತಿದ್ದರು" (೪:೩೨). ಮಾತ್ರವಲ್ಲದೆ ಅವರೆಲ್ಲರೂ ಸಾಮರಸ್ಯದಿಂದ ಜೀವಿಸುತ್ತಿದ್ದರು. ಇದು ಆಧ್ಯಾತ್ಮಿಕ ಪ್ರಗತಿಯ ಸಂಕೇತ. ಇದಕ್ಕೆ ನಿಸ್ವಾರ್ಥ ಬದುಕು ಪೂರಕವಾಗುತ್ತದೆ. ಇದನ್ನೇ ಶುಭಸಂದೇಶ "ಶರೀರದಿಂದ ಹುಟ್ಟಿದ್ದು ಶರೀರಮಯ, ದೇವರಿಂದ ಹುಟ್ಟಿದ್ದು ದೈವಮಯ" (೩:೬) ಎನ್ನುತ್ತದೆ. ಸ್ವಾರ್ಥ ಬದುಕು ಶರೀರಮಯ: ನಿಸ್ವಾರ್ಥ ಬದುಕು ದೈವಮಯ. ಅದ್ದರಿಂದ ಶರೀರಮಯವಾಗಿ ಜನಿಸಿರುವ ನಾವು ಆಧ್ಯಾತ್ಮಿಕವಾಗಿ ಪವಿತ್ರಾತ್ಮರಿಂದ ಜನಿಸದಿದ್ದರೆ ದೈವಮಯವಾಗಲು ಸಾಧ್ಯವಿಲ್ಲ. ದೈವಮಯವಾಗಲು ದೈವಕೇಂದ್ರಿತ ಬದುಕು ನಮ್ಮದಾಗಬೇಕು.
-------------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment