ಏಪ್ರಿಲ್ 22,
2020 ಬುಧವಾರ [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು
5:17-26.
ಕೀರ್ತನೆ 34:1-8
ಶ್ಲೋಕ.6
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 3:16-21
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು
5:17-26.
17 : ಇಂತಿರಲು ಪ್ರಧಾನ ಯಾಜಕನೂ ಅವನ ಸಂಗಡವಿದ್ದ ಸ್ಥಳೀಯ ಸದ್ದುಕಾಯರೂ ಪ್ರೇಷಿತರ ಬಗ್ಗೆ ತೀವ್ರ ಅಸೂಯೆಪಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದರು.
18 : ಪ್ರೇಷಿತರನ್ನು ಬಂಧಿಸಿ ಊರ ಸೆರೆಯಲ್ಲಿಟ್ಟರು.
19 : ಆ ರಾತ್ರಿಯೇ ಪ್ರಭುವಿನ ದೂತನೊಬ್ಬನು ಸೆರೆಮನೆಯ ದ್ವಾರಗಳನ್ನು ತೆರೆದು ಪ್ರೇಷಿತರನ್ನು ಹೊರಕ್ಕೆ ತಂದನು.
20 : “ಹೋಗಿರಿ, ಮಹಾದೇವಾಲಯದಲ್ಲಿ ನಿಂತು ಈ ನವಜೀವದ ಬಗ್ಗೆ ಜನರಿಗೆ ಬೋಧಿಸಿರಿ,” ಎಂದನು.
21 : ಅದರಂತೆ ಪ್ರೇಷಿತರು ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಇತ್ತ ಪ್ರಧಾನ ಯಾಜಕನೂ ಅವನ ಸಂಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊಂಡ ಶ್ರೇಷ್ಠ ನ್ಯಾಯಸಭೆಯನ್ನು ಕರೆದರು. ಅನಂತರ ಪ್ರೇಷಿತರನ್ನು ಆ ಸಭೆಯ ಮುಂದೆ ಕರೆತರುವಂತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ಞೆಯಿತ್ತರು.
22 : ಈ ಅಧಿಕಾರಿಗಳು ಸೆರೆಮನೆಗೆ ಬಂದಾಗ ಅಲ್ಲಿ ಪ್ರೇಷಿತರನ್ನು ಕಾಣಲಿಲ್ಲ. ಹಿಂದಿರುಗಿ ಹೋಗಿ ನ್ಯಾಯಸಭೆಗೆ ಈ ವಿಷಯವನ್ನು ವರದಿಮಾಡಿದರು;
23 : “ನಾವು ಸೆರೆಮನೆಗೆ ಹೋದಾಗ ಅದಕ್ಕೆ ಹಾಕಿದ್ದ ಬೀಗಮುದ್ರೆಯೇನೋ ಭದ್ರವಾಗಿತ್ತು. ಪಹರೆಯವರು ದ್ವಾರದಲ್ಲಿ ಕಾವಲಿದ್ದರು. ಆದರೆ ದ್ವಾರವನ್ನು ತೆರೆದು ನೋಡಿದಾಗ ಒಳಗೆ ಯಾರನ್ನೂ ನಾವು ಕಾಣಲಿಲ್ಲ,” ಎಂದು ತಿಳಿಸಿದರು.
24 : ದೇವಾಲಯದ ದಳಪತಿ ಮತ್ತು ಮುಖ್ಯ ಯಾಜಕರು ಇದನ್ನು ಕೇಳಿ ಇದರಿಂದೇನಾಗುವುದೋ ಎಂದು ಕಳವಳಗೊಂಡರು.
25 : ಅಷ್ಟರಲ್ಲಿ ಒಬ್ಬನು ಅಲ್ಲಿಗೆ ಬಂದು, “ಇಗೋ, ನೀವು ಸೆರೆಮನೆಯಲ್ಲಿ ಇಟ್ಟವರು ದೇವಾಲಯದಲ್ಲಿ ನಿಂತು ಜನರಿಗೆ ಬೋಧಿಸುತ್ತಿದ್ದಾರೆ.” ಎಂದನು.
26 : ಆಗ ಆ ದಳಪತಿ ಅಧಿಕಾರಿಗಳೊಡನೆ ಹೋಗಿ ಪ್ರೇಷಿತರನ್ನು ಕರೆದುಕೊಂಡು ಬಂದನು. ಜನರು ತಮ್ಮ ಮೇಲೆ ಕಲ್ಲುತೂರಬಹುದೆಂಬ ಭಯದಿಂದ ಪ್ರೇಷಿತರ ಮೇಲೆ ಅವರು ಯಾವ ಬಲಪ್ರಯೋಗವನ್ನೂ ಮಾಡಲಿಲ್ಲ.
ಕೀರ್ತನೆ 34:1-8
ಶ್ಲೋಕ.6
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
1 : ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು / ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು //
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
3 : ಬನ್ನಿ, ಕೊಂಡಾಡುವ ಪ್ರಭು ದೇವನನು / ಘನಪಡಿಸೋಣ ಅವನ ಶ್ರೀನಾಮವನು //
4 : ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು / ಭಯಭೀತಿಯಿಂದೆನ್ನನು ಮುಕ್ತ ನಾಗಿಸಿಹನು //
5 : ಆತನತ್ತ ತಿರುಗಿದ ಮುಖ ಅರಳುವುದು / ಲಜ್ಜೆಯಿಂದೆಂದಿಗು ಕುಂದಿಹೋಗದು //
6 : ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು / ಸರ್ವಾಪತ್ತಿನಿಂದವನು ಮುಕ್ತಗೊಂಡನು //
7 : ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು / ಕಾಯುವನು ಪ್ರಭುವಿನ ದೂತನೆ ಬಂದಿಳಿದು //
8 : ಸವಿದು ನೋಡು ಪ್ರಭುವಿನ ಮಾಧುರ್ಯವನು / ಆತನನು ಆಶ್ರಯಿಸಿಕೊಂಡವನು ಧನ್ಯನು //
ಶುಭಸಂದೇಶ: ಯೊವಾನ್ನ 3:16-21
16 : ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ.
17 : ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು.
18 : ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ.
19 : ಈ ತೀರ್ಪು ಏನೆಂದರೆ: ಜ್ಯೋತಿ ಜಗತ್ತಿಗೆ ಬಂದಿತು; ಮಾನವರಾದರೋ ತಮ್ಮ ದುಷ್ಕøತ್ಯಗಳಿಂದಾಗಿ ಆ ಜ್ಯೋತಿಗೆ ಬದಲು ಅಂಧಕಾರವನ್ನೇ ಅವಲಂಬಿಸಿದರು.
20 : ಕೇಡನ್ನು ಮಾಡುವವನಿಗೆ ಬೆಳಕೆಂದರೆ ಆಗದು. ತನ್ನ ದುಷ್ಕøತ್ಯಗಳು ಬಯಲಾಗಬಾರದೆಂದು ಅವನು ಬೆಳಕಿನ ಬಳಿಗೆ ಸುಳಿಯುವುದೂ ಇಲ್ಲ,
21 : ಸತ್ಯಸಂಧನಾದರೋ ಬೆಳಕಿನ ಬಳಿಗೆ ಬರುತ್ತಾನೆ. ತಾನು ಮಾಡುವುದು ದೇವರು ಮೆಚ್ಚುವುದನ್ನೇ ಎಂಬುದನ್ನು ತೋರ್ಪಡಿಸುತ್ತಾನೆ.
--------------
--------------
ಪವಿತ್ರಾತ್ಮರ ಸ್ಪರ್ಶದಿಂದ ಪ್ರೇಷಿತರು ಭಯವನ್ನು ಜಯಿಸಿ ನಿರ್ಭೀತರಾಗಿದ್ದಾರೆ ಹಾಗೂ ಎಂತಹ ತ್ಯಾಗಕ್ಕೂ ಸಿದ್ಧರಿದ್ದಾರೆ. ಆ ಕಾರಣ ಅವರಿಗೆ ಜೈಲುವಾಸ ಯಾವ ಬೇಸರವನ್ನೂ ತರುವುದಿಲ್ಲ. ಬದಲಾಗಿ ಅವರು ಪುನರುತ್ಥಾನರಾಗಿರುವ ಪ್ರಭು ಯೇಸುವೇ ಅಭಿಷಿಕ್ತನಾದ ರಕ್ಷಕನೆಂದು ಸಾರಲು ತವಕಿಸುತ್ತಿದ್ದರು. ಅವರು ಪವಿತ್ರಾತ್ಮರಿಂದ ತುಂಬಿಹೋಗಿದ್ದ ಕಾರಣ ಅವರನ್ನು ಈಗ ಯಾವ ಶಕ್ತಿಯೂ ತಡೆಯಲಾಗದು. ಅವರು ನಿರ್ಭೀತರಾಗಿ ‘ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಯಾರು ಆ ರಕ್ಷಕನಲ್ಲಿ ವಿಶ್ವಾಸವಿಡುತ್ತಾರೋ ಅವರು ನಾಶವಾಗದೆ ನಿತ್ಯಜೀವವನ್ನು ಪಡೆಯುವರು: ಯಾರು ವಿಶ್ವಾಸಿಸುವುದಿಲ್ಲವೋ ಅವರು ನಿತ್ಯಜೀವವನ್ನು ಕಳೆದುಕೊಳ್ಳುವರು, ಏಕೆಂದರೆ ಅವರು "ಜ್ಯೋತಿ ಜಗತ್ತಿಗೆ ಬಂದಿತು: ಮಾನವರಾದರೋ ತಮ್ಮ ದುಷ್ಕೃತ್ಯಗಳಿಂದಾಗಿ ಆ ಜ್ಯೋತಿಗೆ ಬದಲು ಅಂಧಕಾರವನ್ನೇ ಅವಲಂಬಿಸಿದರು" ಎನ್ನುತ್ತದೆ ದೇವರ ನುಡಿ. ಇದು ಅಂದಿನ ಕಥೆಯಲ್ಲ ಇಂದಿನ ಕಥೆಯೂ ಹೌದು. ಇಂದೂ ಸಹ ಹಲವು ಭಕ್ತ ವಿಶ್ವಾಸಿಗಳು ಬೆಳಕಿಗೆ ಬದಲಾಗಿ ಕತ್ತಲೆಯನ್ನೇ ಬಯಸುವವರಾಗಿದ್ದಾರೆ "ಕೇಡನ್ನು ಮಾಡುವವನಿಗೆ ಬೆಳಕೆಂದರೆ ಆಗದು".
--------------

No comments:
Post a Comment