Friday, 6 March 2020

ತಪಸ್ಸು ಕಾಲದ ಎರಡನೆಯ ಗುರುವಾರ

ಮಾರ್ಚ್ 12, 2020 ಗುರುವಾರ [ನೇರಳೆ]
ಮೊದಲ ವಾಚನ: ಯೆರೆಮೀಯ 17.5-10
ಕೀರ್ತನೆ 1:1-4, 6, ಶ್ಲೋಕ.40:4
ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು
ಶುಭಸಂದೇಶ: ಲೂಕ 16.19-31
----------------------
ಮೊದಲ ವಾಚನ: ಯೆರೆಮೀಯ 17.5-10
5 : ಇವು ಸರ್ವೇಶ್ವರನ ಮಾತುಗಳು: “ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರಜನ್ಮದವರನ್ನೇ ತನ್ನ ಭುಜಬಲ ವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು!
6 : ಇಂಥವನು ಅಡವಿಯಲ್ಲಿನ ಜಾಲಿಗಿಡಕ್ಕೆ ಸಮಾನನು. ಶುಭಸಂಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳು ಬೆಳೆಯಿಲ್ಲದ ಬೆಂಗಾಡಿನೊಳು ವಾಸಿಸುವವನ ಪರಿಸ್ಥಿತಿ ಅವನದು.
7 : ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ.
8 : ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆಬಿಡುವ, ಫಲನೀಡುವ ಮರಕ್ಕೆ ಸಮಾನನು ಆತ.
9 : ಮಾನವ ಹೃದಯ ಎಲ್ಲಕ್ಕಿಂತ ವಂಚಕ ಅದಕ್ಕೆ ಅಂಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ.

10 : ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ ಹೌದು, ಅಂತರಿಂದ್ರಿಯಗಳನ್ನು ಪರಿಶೋಧಿಸುವಾತ.
---------------------
ಕೀರ್ತನೆ 1:1-4, 6, ಶ್ಲೋಕ.40:4
ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು
1 : ದುರ್ಜನರ ಆಲೋಚನೆಯಂತೆ ನಡೆಯದೆ / ಪಾಪಾತ್ಮರ ಪಥದಲಿ ಕಾಲೂರದೆ / ಧರ್ಮನಿಂದಕರ ಕೂಟದಲಿ ಕೂರದೆ //
2 : ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು/ ಹಗಲಿರುಳೆನ್ನದೆ ಅದನೆ ಧ್ಯಾನಿಸು ತಿರುವವನಾರೋ - ಅವನೇ ಧನ್ಯನು //
3 : ನದಿಯ ಬದಿಯಲೇ ಬೆಳೆದಿಹ ಮರದಂತೆ / ಸಕಾಲಕೆ ಫಲವೀವ ವೃಕ್ಷದಂತೆ / ಎಲೆಬಾಡದೆ ಪಸಿರಿರುವ ತರುವಂತೆ / ಸಿಗುವುದು ಅವನ ಕಾರ್ಯಗಳಿಗೆ ಸಫಲತೆ //
4 : ದುರುಳರಾದರೊ ತೂರಿ ಹೋಗುವರು / ಬಿರುಗಾಳಿಗೆ ತರಗೆಲೆಯಾಗುವರು //
5 : ಎಂದೇ ನಿಲ್ಲಲಾರರು ದುರುಳರು ನ್ಯಾಯಸ್ಥಾನದಲಿ / ಸದಸ್ಯರಾಗರು ಪಾಪಿಗಳು ಸಜ್ಜನರ ಸಂಘದಲಿ //
6 : ಸಜ್ಜನರ ಮಾರ್ಗಕ್ಕಿದೆ ಪ್ರಭುವಿನ ಪಾಲನ / ದುರ್ಜನರ ಮಾರ್ಗಕ್ಕಿದೆ ಸಂಪೂರ್ಣ ವಿನಾಶನ //
-----------------
ಶುಭಸಂದೇಶ: ಲೂಕ 16.19-31
19 : “ಒಬ್ಬ ಧನಿಕನಿದ್ದ. ಬೆಲೆಬಾಳುವ ಉಡುಗೆ-ತೊಡುಗೆಗಳನ್ನೂ ನಯವಾದ ನಾರುಮಡಿಗಳನ್ನೂ ಧರಿಸಿಕೊಂಡು ದಿನನಿತ್ಯವೂ ಸುಖಭೋಗಗಳಲ್ಲಿ ಮೈಮರೆಯುತ್ತಿದ್ದ.
20 : ಅವನ ಮನೆಯ ಬಾಗಿಲಲ್ಲೇ ಲಾಜರನೆಂಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು.
21 : ಧನಿಕನು ತಿಂದು ಬಿಸಾಡಿದ ಎಂಜಲಿನಿಂದ ಹಸಿವು ನೀಗಿಸಿಕೊಳ್ಳಲು ಅವನು ಹಂಬಲಿಸುತ್ತಿದ್ದ. ಅಷ್ಟುಮಾತ್ರವಲ್ಲ, ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು.
22 : “ಒಂದು ದಿನ ಆ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ. ಅವನ ಶವಸಂಸ್ಕಾರವೂ ಮುಗಿಯಿತು.
23 : ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದ ಲಾಜರನನ್ನೂ ಕಂಡ.
24 : ‘ಓ ಪಿತಾಮಹ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆಪಡುತ್ತಿದ್ದೇನೆ; ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಗೆಗೆ ತಂಪನ್ನುಂಟುಮಾಡುವಂತೆ ಅವನನ್ನು ಇಲ್ಲಿಗೆ ಕಳುಹಿಸಿಕೊಡು’ ಎಂದು ದನಿಯೆತ್ತಿ ಮೊರೆಯಿಟ್ಟ.
25 : ಅದಕ್ಕೆ ಅಬ್ರಹಾಮನು, ‘ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖಸಂಪತ್ತನ್ನು ನೀನು ಅನುಭವಿಸಿದೆ; ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟಪಡುತ್ತಿರುವೆ.
26 : ಅಷ್ಟೇ ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದರೂ ಬರಲಾಗದು; ಆ ಕಡೆಯಿಂದ ನಮ್ಮ ಬಳಿಗೆ ದಾಟಿಬರಲೂ ಸಾಧ್ಯವಿಲ್ಲ,’ ಎಂದ.
27 : ಆಗ ಆ ಧನಿಕ, ‘ಪಿತಾಮಹ ಅಬ್ರಹಾಮ, ಲಾಜರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು.
28 : ನನಗೆ ಐವರು ಸೋದರರಿದ್ದಾರೆ; ಅವರೂ ಈ ಯಾತನಾಸ್ಥಳಕ್ಕೆ ಬಾರದಂತೆ ಇವನು ಹೋಗಿ ಎಚ್ಚರಿಕೆಕೊಡಲಿ,’ ಎಂದು ಬೇಡಿಕೊಂಡ.
29 : ಅದಕ್ಕೆ ಅಬ್ರಹಾಮನು, ‘ಅವರಿಗೆ ಎಚ್ಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳ ಗ್ರಂಥಗಳಿವೆ. ಅವುಗಳಿಗೆ ಕಿವಿಗೊಡಲಿ,’ ಎಂದು ಉತ್ತರಕೊಟ್ಟ.
30 : ‘ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು,’ ಎಂದು ಧನಿಕನು ಮತ್ತೆ ಕೇಳಿಕೊಂಡ.
31 : ಅದಕ್ಕೆ ಅಬ್ರಹಾಮನು, ‘ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತನಾಗಿ ಎದ್ದುಬಂದರೂ ಅವರು ನಂಬುವುದಿಲ್ಲ,’ ಎಂದ.”
------------------------
ಚಿಂತನೆ
ಹಿಬ್ರೂ ಭಾಷೆಯಲ್ಲಿ `ಲಾಜರ’ ಎಂದರೆ ಸರ್ವೇಶ್ವರನೇ ನನ್ನ ಸಹಾಯ ಅಥವಾ ಸಹಾಯಕ ಎಂದರ್ಥ. ಲೂಕನು ತನ್ನ ಶುಭಸಂದೇಶದಲ್ಲಿ ಬಡವರಿಗೆ ಮತ್ತು ಮಹಿಳೆಯರಿಗೆ ತುಂಬಾ ಪ್ರಾಮುಖ್ಯತೆ ನೀಡಿದ್ದಾನೆ. ಬಡವರೇ ನೀವು ಭಾಗ್ಯವಂತರು (ಲೂಕ 6:20) ಎಂದು ನುಡಿಯುತ್ತಾ ಶ್ರೀಮಂತರನ್ನು ಖಂಡಿಸುತ್ತಾನೆ. `ಶ್ರೀಮಂತರೇ, ನಿಮಗೆ ಧಿಕ್ಕಾರವಿರಲಿ’ (6:24). ಇಂದಿನ ಸಾಮತಿಯಲ್ಲಿ ಶ್ರೀಮಂತನನ್ನು ಖಂಡಿಸಲಾಗಿದೆ ಕಾರಣ ಆತ ತನ್ನ ಕಾಲಿನ ಬಳಿ ಬಿದ್ದಿದ್ದ ಬಡವನನ್ನು ಗಮನಿಸದೆ ಹೋದ. ಆತನ ನೋವಿಗೆ, ಅವಶ್ಯಕತೆಗಳಿಗೆ ಕುರುಡನಾದ, ತನ್ನ ಸುಖ ಭೋಗದಲ್ಲಿಯೇ ಮೈಮರೆತ. ತಾನು ಉಂಡು ಕೈ ಶುಚಿಮಾಡಲು ಬಳಸಿದ ಬ್ರೆಡ್ (ರೊಟ್ಟಿ) ಅನ್ನು ಬಡ ಲಾಜರ ತಿನ್ನುತ್ತಿದ್ದ. ಸಾಮತಿಯು ಶ್ರೀಮಂತನ ಬಗ್ಗೆ ಯಾವುದೇ ಕೆಟ್ಟ ವರ್ಣನೆ ಇಲ್ಲ, ಆತನ ಪಾಪಗಳ ವಿವರವಿಲ್ಲ. ಆದರೂ ಶಿಕ್ಷೆಗೆ ಗುರಿಯಾದ ಕಾರಣ ಆತ ಒಳ್ಳೆಯದನ್ನು ಮಾಡಲು ವಿಫಲನಾದ. ನಾವು ಕೆಟ್ಟದ್ದನ್ನು ಮಾಡದೆ ಜೀವಿಸಬಹುದು ಆದರೆ ದೇವರು ಕೇಳುವುದು ಮಾಡಿದ ಒಳ್ಳೆಯ ಕಾರ್ಯಗಳ ಬಗ್ಗೆ.
-----------------------
ಒಬ್ಬ ಧನಿಕನಿದ್ದ...............
ಚಿಂತನೆ
ಇಂದಿನ ಶುಭಸಂದೇಶದಲ್ಲಿ ಬರುವ ಶ್ರೀಮಂತ ಮನುಷ್ಯನ ಪಾಪವಾದರೂ ಏನು? ಲಾಜರನನ್ನು ತನ್ನ ಗೇಟ್ ನಿಂದ ಹೊರದೂಡಲು ಪೊಲೀಸರಿಗೆ ಅವನು ಕರೆ ನೀಡಲಿಲ್ಲ. ಲಾಜರನಿಗೆ ತನ್ನ ಮೆಜೀನಿಂದ ಬಿದ್ದ ತುಂಡುಗಳನ್ನು ಆಯ್ದುಕೊಳ್ಳಲು ನಿರಾಕರಿಸಲಿಲ್ಲ, ಅವನು ಹಾದುಹೋಗುವ ಪ್ರತಿ ಬಾರಿ ಲಾಜರನನ್ನು ಒದೆಯುತ್ತಿರಲಿಲ್ಲ. ಹಾಗಾದರೆ ಶ್ರೀಮಂತ ವ್ಯಕ್ತಿಯ ಪಾಪವಾದರೂ ಏನು?
ಶ್ರೀಮಂತ ಮನುಷ್ಯನ ಪಾಪವೆಂದರೆ ಅವನು ಲಾಜರನನ್ನು ನಿರ್ಲಕ್ಷಿಸುತ್ತಾನೆ. ಅವನಿಗೆ ಸಹಾಯ ಮಾಡಲು ಬೆರಳನ್ನು ಸಹ ಎತ್ತದಿರುವುದೇ ಅವನ ಪಾಪ. ಲಾಜರನು ಜೀವಂತವಾಗಿದ್ದಾನೆ ಎಂದು ಮನಗಂಡು ಸಹ ತನ್ನ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾನೆ. ಅದೇ ಅವನ ಪಾಪ. ಅವನ ಪಾಪ ಲಾಜರನಿಗೆ ಏನು ಮಾಡುತ್ತಾನೆ ಎಂಬುವುದಲ್ಲ, ಬದಲಿಗೆ ಏನೂ ಮಾಡದಿರುವುದು.
ಮಂಥನ
ನಮ್ಮ ನಡುವೆ ಅಗತ್ಯವಿರುವವರಿಗೆ ಸಹಾಯ ಮಾಡಲು ನಾವು ಏನು ಮಾಡುತ್ತಿದ್ದೇವೆ?
ಪ್ರೀತಿಯ ವಿರುದ್ಧಪದ ದ್ವೇಷವಲ್ಲ, ಉದಾಸೀನತೆ - ಎಲೀ ವೈಸೆಲ್
-------------------------------

© 'ದನಿಮಾಧ್ಯಮ ಮನೆ




ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment