ಮಾರ್ಚ್ 22, 2020 ಭಾನುವಾರ [ನೇರಳೆ]
ತಪಸ್ಸು ಕಾಲದ 4ನೇ ಭಾನುವಾರ
ಮೊದಲ ವಾಚನ: 1 ಸಮು 16.1, 6-7, 10-13
ಕೀರ್ತನೆ 23:1-6. ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ,
ಕುಂದುಕೊರತೆಗಳೆಲ್ಲಿಯವು ಎನಗೆ
ಎರಡನೇ ವಾಚನ: ಎಫೆಸದವರಿಗೆದವರಿಗೆ 5.8-14
ಶುಭಸಂದೇಶ: ಯೊವಾನ್ನ 9.1-41 [ಅಥವಾ]
(ಸಂಕ್ಷಿಪ್ತ) ಯೊವಾನ್ನ 9.1, 6-9, 13-17,
34-38
---------------------ಮೊದಲನೆಯ ವಾಚನ: 1 ಸಮು 16.1, 6-7, 10-13
1 : ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನಾನು ಸೌಲನನ್ನು ಇಸ್ರಯೇಲರ ಅರಸನಾಗಿರುವುದಕ್ಕೆ ಅಯೋಗ್ಯನೆಂದು ತಳ್ಳಿಬಿಟ್ಟೆನಲ್ಲವೆ? ನೀನು ಅವನಿಗಾಗಿ ಎಷ್ಟರವರೆಗೆ ದುಃಖಿಸುತ್ತಿರುವೆ? ಕೊಂಬನ್ನು ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೆತ್ಲೆಹೇಮಿನವನಾದ ಜೆಸ್ಸೆಯನ ಬಳಿಗೆ ಕಳುಹಿಸುತ್ತೇನೆ. ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ,” ಎಂದು ಹೇಳಿದರು.
6 : ಸಮುವೇಲನು ಎಲೀಯಾಬನನ್ನು ನೋಡಿ ತನ್ನಷ್ಟಕ್ಕೆ, “ನಿಶ್ಚಯವಾಗಿ ಸರ್ವೇಶ್ವರ ಅಭಿಷೇಕಕ್ಕೆ ಆರಿಸಿಕೊಂಡವನು ನನ್ನ ಮುಂದೆಯೇ ಇದ್ದಾನೆ,” ಎಂದುಕೊಂಡನು.
7 : ಆದರೆ ಸರ್ವೇಶ್ವರಸ್ವಾಮಿ ಸಮುವೇಲನಿಗೆ, “ನೀನು ಅವನ ಚೆಲುವಿಕೆಯನ್ನಾಗಲಿ ಎತ್ತರವನ್ನಾಗಲಿ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಸರ್ವೇಶ್ವರ ಮನುಷ್ಯರಂತೆ ಬಹಿರಂಗದ ತೋರಿಕೆಯನ್ನು ನೋಡುವುದಿಲ್ಲ; ಅಂತರಂಗವನ್ನೇ ವೀಕ್ಷಿಸುತ್ತಾನೆ,” ಎಂದರು.
10 : ಹೀಗೆ ಜೆಸ್ಸೆಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನೂ ಅವನ ಬಳಿಗೆ ಬರಮಾಡಿದರೂ ಅವನು, “ಸರ್ವೇಶ್ವರ ಇವರನ್ನು ಆರಿಸಿಕೊಳ್ಳಲಿಲ್ಲ,” ಎಂದು ನುಡಿದನು.
11 : ಅನಂತರ ಸಮುವೇಲನು ಜೆಸ್ಸೆಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ?” ಎಂದು ಕೇಳಿದನು. ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿದ್ದಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ,” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಇಲ್ಲಿಗೆ ಬರಮಾಡು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು,” ಎಂದು ಹೇಳಿದನು. ಜೆಸ್ಸೆಯನು ಅವನನ್ನು ಕರೆದುತರಿಸಿದನು.
12 : ಅವನು ಕೆಂಬಣ್ಣದವನು, ಸುಂದರನೇತ್ರನು, ಹಾಗು ನೋಟಕ್ಕೆ ರಮಣೀಯನು. ಸರ್ವೇಶ್ವರ ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ,” ಎಂದು ಆಜ್ಞಾಪಿಸಿದರು.
13 : ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕಿಸಿದನು. ಕೂಡಲೆ ಸರ್ವೇಶ್ವರನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಾಕ್ಕೆ ಹೊರಟು ಹೋದನು.
------------------------
ಕೀರ್ತನೆ 23:1-6. ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ,
ಕುಂದುಕೊರತೆಗಳೆಲ್ಲಿಯವು ಎನಗೆ
ಎರಡನೇ ವಾಚನ: ಎಫೆಸದವರಿಗೆದವರಿಗೆ 5.8-14
1 : ಪ್ರಭು ಕುರಿಗಾಹಿಯಾಗಿರಲು ನನಗೆ / ಕುಂದುಕೊರತೆಗಳೆಲ್ಲಿಯವು ಎನಗೆ? //2 : ಹಸಿರುಗಾವಲುಗಳಲೆನ್ನ ತಂಗಿಸುವನು / ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ | ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ ||
4 : ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ | ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ | ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ ||
5 : ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು | ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು ||
6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ / ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //
------------------------------
ಎರಡನೇ ವಾಚನ: ಎಫೆಸದವರಿಗೆದವರಿಗೆ 5.8-14
8 : ನೀವು ಹಿಂದೊಮ್ಮೆ ಕತ್ತಲುಮಯವಾಗಿದ್ದಿರಿ; ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ.
9 : ಕಾರಣ - ಸಚ್ಚರಿತೆ, ಸದಾಚಾರ ಮತ್ತು ಸತ್ಯಸಂಧತೆ ಇವೆಲ್ಲವೂ ಬೆಳಕಿನ ಕುಡಿಗಳು.
10 : ಪ್ರಭುವಿಗೆ ಮೆಚ್ಚಿಕೆಯಾದುದು ಯಾವುದೆಂಬುದನ್ನು ಕಲಿತುಕೊಳ್ಳಿರಿ.
11 : ನಿಷ್ಪ್ರಯೋಜಕವಾದ ಕತ್ತಲುಮಯ ಕಾರ್ಯಗಳಿಗೆ ಕೈಹಾಕದಿರಿ. ಅಂಥವುಗಳನ್ನು ಬಯಲಿಗೆಳೆದು ಖಂಡಿಸಿರಿ.
12 : ಆ ಜನರು ಗುಟ್ಟಾಗಿ ಮಾಡುವ ಕೃತ್ಯಗಳು ಹೇಳುವುದಕ್ಕೂ ಅವಮಾನಕರವಾದುವು.
13 : ಬೆಳಕು ಬೆಳಗಿಸುವ ವಸ್ತುಗಳೆಲ್ಲವೂ ಕಂಗೊಳಿಸುವುವು. ಹೀಗೆ ಕಂಗೊಳಿಸುವುದೆಲ್ಲವೂ ಬೆಳಕಾಗುವುದು.
14 : ಆದ್ದರಿಂದ: “ನಿದ್ರೆಮಾಡುವವನೇ ಎದ್ದೇಳು ಸತ್ತವರನ್ನು ಬಿಟ್ಟು ಬಾ ಎಚ್ಚೆತ್ತು ನಿನಗೀವನು ಬೆಳಕನು ಕ್ರಿಸ್ತನು.” ಎಂದು ಬರೆಯಲಾಗಿದೆ.
------------------------
ಶುಭಸಂದೇಶ: ಯೊವಾನ್ನ 9.1-41
1 : ಯೇಸುಸ್ವಾಮಿ ನಡೆದು ಹೋಗುತ್ತಿದ್ದಾಗ, ಒಬ್ಬ ಹುಟ್ಟು ಕುರುಡನನ್ನು ಕಂಡರು.
2 : ಶಿಷ್ಯರು, “ಗುರುದೇವಾ, ಇವನು ಕುರುಡನಾಗಿ ಹುಟ್ಟಬೇಕಾದರೆ ಅದಕ್ಕೆ ಯಾರ ಪಾಪ ಕಾರಣ? ಇವನದೋ ಅಥವಾ ಇವನನ್ನು ಹೆತ್ತವರದೋ?” ಎಂದು ಕೇಳಿದರು.
3 : ಅದಕ್ಕೆ ಉತ್ತರವಾಗಿ ಯೇಸು, ಇವನ ಪಾಪವಾಗಲಿ, ಇವನನ್ನು ಹೆತ್ತವರ ಪಾಪವಾಗಲಿ ಇದಕ್ಕೆ ಕಾರಣವಲ್ಲ, ದೇವರ ಕಾರ್ಯ ಇವನಲ್ಲಿ ವ್ಯಕ್ತವಾಗುವಂತೆ ಹೀಗಾಗಿದೆ.
4 : ಹಗಲಿರುವಾಗಲೇ ನನ್ನನ್ನು ಕಳುಹಿಸಿರುವಾತನ ಕೆಲಸವನ್ನು ನಾನು ಮಾಡುತ್ತಿರಬೇಕು. ರಾತ್ರಿ ಆದಮೇಲೆ ಯಾರೂ ಕೆಲಸಮಾಡಲಾಗದು.
5 : ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ,” ಎಂದು ನುಡಿದರು.
6 : ತರುವಾಯ ನೆಲದಲ್ಲಿ ಉಗುಳಿ, ಮಣ್ಣಿನ ಲೇಪಮಾಡಿ, ಅದನ್ನು ಕುರುಡನ ಕಣ್ಣಿಗೆ ಲೇಪಿಸಿ, “ನೀನು ಶಿಲೋವಾಮಿನ ಕೊಳಕ್ಕೆ ಹೋಗಿ ತೊಳೆದುಕೋ,” ಎಂದು ಹೇಳಿದರು.
7 : (‘ಶಿಲೋವಾಮ್’ ಎಂದರೆ ಕಳುಹಿಸಲಾದವನು ಎಂದರ್ಥ). ಅದರಂತೆಯೇ ಆ ಕುರುಡನು ಹೋಗಿ ಕಣ್ಣುಗಳನ್ನು ತೊಳೆದುಕೊಂಡನು; ಹಿಂದಿರುಗಿದಾಗ ಅವನಿಗೆ ಕಣ್ಣು ಬಂದಿತ್ತು.
8 : ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು.
9 : “ಹೌದು ಅವನೇ,” ಎಂದರು ಕೆಲವರು. “ಇಲ್ಲ, ಇವನು ಅವನಂತೆ ಕಾಣುತ್ತಾನೆ, ಅಷ್ಟೆ,” ಎಂದರು ಇತರರು. ಆ ಕುರುಡನು “ನಾನೇ ಅವನು” ಎಂದು ತಿಳಿಸಿದನು.
10 : ಆಗ ಅವರು, “ಹಾಗಾದರೆ ನಿನಗೆ ಕಣ್ಣು ಹೇಗೆ ಬಂತು?” ಎಂದು ಕೇಳಿದರು.
11 : ಅದಕ್ಕೆ ಅವನು, “ಯೇಸು ಎಂಬುವರು ಮಣ್ಣಿನ ಲೇಪಮಾಡಿ ನನ್ನ ಕಣ್ಣಿಗೆ ಹಚ್ಚಿದರು, ‘ಶಿಲೋವಾಮಿಗೆ ಹೋಗಿ ತೊಳೆದುಕೊ,’ ಎಂದು ಹೇಳಿದರು; ನಾನು ಹೋಗಿ ತೊಳೆದುಕೊಂಡೆ; ನನಗೆ ಕಣ್ಣು ಬಂತು,” ಎಂದು ಹೇಳಿದನು.
12 : ಅದಕ್ಕೆ ಅವರು, “ಆತ ಎಲ್ಲಿದ್ದಾನೆ?” ಎಂದು ವಿಚಾರಿಸಿದರು. ಅವನು ಉತ್ತರವಾಗಿ “ನಾನರಿಯೆ,” ಎಂದನು.
13 : ಆಗ ಆ ಜನರು ಅವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಹೋದರು.
14 : ಏಕೆಂದರೆ, ಯೇಸುಸ್ವಾಮಿ ಮಣ್ಣಿನ ಲೇಪವನ್ನು ಮಾಡಿ ಅವನಿಗೆ ಕಣ್ಣುಕೊಟ್ಟ ದಿನ ಸಬ್ಬತ್ ದಿನವಾಗಿತ್ತು.
15 : ಕಣ್ಣು ಬಂದುದು ಹೇಗೆಂದು ಫರಿಸಾಯರು ಅವನನ್ನು ಮತ್ತೆ ಕೇಳಿದರು. “ಯೇಸು ನನ್ನ ಕಣ್ಣುಗಳಿಗೆ ಮಣ್ಣಿನ ಲೇಪವನ್ನು ಹಚ್ಚಿದರು; ನಾನು ಹೋಗಿ ಕಣ್ಣುಗಳನ್ನು ತೊಳೆದುಕೊಳ್ಳುತ್ತಲೇ ನನಗೆ ದೃಷ್ಟಿ ಬಂತು,” ಎಂದನು ಅವನು.
16 : ಫರಿಸಾಯರಲ್ಲಿ ಕೆಲವರು, “ಹೀಗೆ ಮಾಡಿದವನು ದೇವರಿಂದ ಬಂದವನಲ್ಲ, ಅವನು ಸಬ್ಬತ್ ನಿಯಮವನ್ನು ಪಾಲಿಸುವುದಿಲ್ಲ,” ಎಂದರು. ಇತರರು, “ಪಾಪಿಯಾದವನು ಇಂಥ ಸೂಚಕಕಾರ್ಯಗಳನ್ನು ಮಾಡಲು ಸಾಧ್ಯವೇ?” ಎಂದರು. ಹೀಗೆ ಅವರಲ್ಲೇ ಭಿನ್ನಬೇಧವುಂಟಾಯಿತು.
17 : ಆದ್ದರಿಂದ ಫರಿಸಾಯರು ಆ ಕುರುಡನನ್ನು ಕುರಿತು, “ಅವನೇ ನಿನಗೆ ಕಣ್ಣು ಕೊಟ್ಟನೆಂದು ಹೇಳುತ್ತೀಯಲ್ಲಾ, ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?” ಎಂದು ವಿಚಾರಿಸಿದರು. ಅದಕ್ಕೆ ಅವನು, “ಅವರೊಬ್ಬ ಪ್ರವಾದಿಯೇ ಸರಿ,” ಎಂದನು.
18 : ಆ ಕುರುಡನು ಹಿಂದೆ ನಿಜವಾಗಿಯೂ ಕುರುಡನಾಗಿದ್ದು ಈಗ ದೃಷ್ಟಿ ಪಡೆದಿದ್ದಾನೆ ಎಂದು ಯೆಹೂದ್ಯ ಅಧಿಕಾರಿಗಳು ನಂಬಲು ಒಪ್ಪಲಿಲ್ಲ.
19 : ಈ ಕಾರಣ ಅವನ ಹೆತ್ತವರನ್ನು ಕರೆಯಿಸಿ, “ಇವನು ನಿಮ್ಮ ಮಗನೋ? ಇವನು ಹುಟ್ಟು ಕುರುಡನೋ? ಹಾಗಾದರೆ ಇವನಿಗೆ ಈಗ ಕಣ್ಣು ಬಂದದ್ದು ಹೇಗೆ?” ಎಂದು ಕೇಳಿದರು.
20 : ಅದಕ್ಕೆ ಅವನ ತಂದೆ ತಾಯಿಗಳು, “ಇವನಿಗೆ ದೃಷ್ಟಿ ಬಂದದ್ದು ಹೇಗೆ ಎಂದು ನಮಗೆ ಗೊತ್ತಿಲ್ಲ; ಇವನಿಗೆ ಕಣ್ಣುಕೊಟ್ಟವರು ಯಾರೆಂದೂ ನಮಗೆ ತಿಳಿಯದು.
21 : ಇವನನ್ನೇ ಕೇಳಿ, ಹೇಗೂ ಪ್ರಾಯದವನಾಗಿದ್ದಾನಲ್ಲವೆ? ತನ್ನ ವಿಷಯವಾಗಿ ತಾನೇ ಮಾತನಾಡಬಲ್ಲ,” ಎಂದು ಉತ್ತರಿಸಿದರು.
22 : ಅವರು ಹೀಗೆ ಹೇಳಿದ್ದು ಯೆಹೂದ್ಯ ಅಧಿಕಾರಿಗಳ ಅಂಜಿಕೆಯಿಂದ. ಏಕೆಂದರೆ, ಯಾರಾದರೂ ಯೇಸುವನ್ನು ಲೋಕೋದ್ಧಾರಕ ಎಂದು ಒಪ್ಪಿಕೊಂಡರೆ ಅಂಥವರಿಗೆ ಪ್ರಾರ್ಥನಾ ಮಂದಿರದಿಂದ ಬಹಿಷ್ಕಾರ ಹಾಕಬೇಕೆಂದು ಅಧಿಕಾರಿಗಳು ಈ ಮೊದಲೇ ಗೊತ್ತುಮಾಡಿದ್ದರು.
23 : ಆದುದರಿಂದಲೇ, “ಅವನು ಪ್ರಾಯದವನು, ಅವನನ್ನೇ ಕೇಳಿ” ಎಂದು ಅವನ ತಂದೆತಾಯಿಗಳು ಹೇಳಿದ್ದು.
24 : ಅಧಿಕಾರಿಗಳು ಆ ಹುಟ್ಟು ಕುರುಡನನ್ನು ಮತ್ತೆ ಕರೆಯಿಸಿ, “ನೀನು ದೇವರ ಮುಂದೆ ಪ್ರಮಾಣ ಮಾಡಿ ಹೇಳು. ಆ ಮನುಷ್ಯ ಪಾಪಿಯೆಂದು ನಮಗೆ ಗೊತ್ತು,” ಎಂದು ಕೇಳಿದರು.
25 : ಉತ್ತರವಾಗಿ ಅವನು, “ಅವರು ಪಾಪಿಯೋ, ಅಲ್ಲವೋ ನಾನರಿಯೆ; ಆದರೆ ನಾನೊಮ್ಮೆ ಕುರುಡನಾಗಿದ್ದೆ; ಈಗಲಾದರೋ ಕಣ್ಣುಕಾಣಿಸುತ್ತದೆ ಇಷ್ಟು ಮಾತ್ರ ಬಲ್ಲೆ,” ಎಂದು ಹೇಳಿದನು.
26 : “ಅವನು ನಿನಗೇನು ಮಾಡಿದ? ನಿನಗೆ ಹೇಗೆ ಕಣ್ಣು ಬರಿಸಿದ?” ಎಂದು ಅವರು ಮತ್ತೆ ಪ್ರಶ್ನಿಸಿದರು.
27 : ಅವನು, “ನಿಮಗೆ ಆಗಲೇ ಹೇಳಿದ್ದೇನೆ. ಆದರೆ ನೀವು ನಂಬುವುದಿಲ್ಲ. ಅದನ್ನೇ ಏಕೆ ಮತ್ತೆ ಮತ್ತೆ ಕೇಳುತ್ತೀರಿ? ಅವನ ಶಿಷ್ಯರಾಗಲು ನಿಮಗೂ ಮನಸ್ಸಿದೆಯೇ?” ಎಂದನು.
28 : ಆಗ ಅಧಿಕಾರಿಗಳು ಅವನನ್ನು ಶಪಿಸಿದರು. “ನೀನೇ ಅವನ ಶಿಷ್ಯ, ನಾವು ಮೋಶೆಯ ಶಿಷ್ಯರು.
29 : ಮೋಶೆಯೊಡನೆ ದೇವರು ಮಾತನಾಡಿದರು ಎಂಬುದನ್ನು ನಾವು ಬಲ್ಲೆವು. ಆದರೆ ಇವನು ಎಲ್ಲಿಯವನೋ ನಾವು ಅರಿಯೆವು,” ಎಂದರು.
30 : ಅದಕ್ಕೆ ಆ ಕುರುಡ, “ಏನಾಶ್ಚರ್ಯ! ನನಗೆ ಕಣ್ಣು ಬರಿಸಿದ್ದಾರೆ. ಆದರೂ ‘ಅವನು ಎಲ್ಲಿಯವನೋ ನಾವರಿಯೆವು’ ಎನ್ನುತ್ತೀರಿ.
31 : ದೇವರು ಪಾಪಿಗಳಿಗೆ ಓಗೊಡುವುದಿಲ್ಲ. ಯಾರು ಭಕ್ತಿಯಿಂದ ಅವರ ಚಿತ್ತದಂತೆ ನಡೆಯುತ್ತಾರೋ ಅವರಿಗೆ ಓಗೊಡುತ್ತಾರೆಂದು ನಮಗೆಲ್ಲಾ ಚೆನ್ನಾಗಿ ತಿಳಿದಿದೆ.
32 : ಹುಟ್ಟುಕುರುಡನಿಗೆ ಯಾರಾದರೂ ಕಣ್ಣುಕೊಟ್ಟ ಸುದ್ದಿಯನ್ನು ಲೋಕ ಸೃಷ್ಟಿಯಾದಾಗಿನಿಂದ ಒಬ್ಬರೂ ಕೇಳಿಲ್ಲ.
33 : ಇವರು ದೇವರಿಂದ ಬಂದವರು ಅಲ್ಲದಿದ್ದರೆ ಇಂಥದ್ದೇನನ್ನೂ ಮಾಡಲಾಗುತ್ತಿರಲಿಲ್ಲ,” ಎಂದನು.
34 : ಆಗ ಫರಿಸಾಯರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು. ನಮಗೇ ಬುದ್ಧಿ ಹೇಳ ಹೊರಟೆಯಾ?” ಎಂದು ಹೇಳಿ ಅವನನ್ನು ತಳ್ಳಿಬಿಟ್ಟರು.
35 : ಹುಟ್ಟು ಕುರುಡನನ್ನು ಹೊರಗೆ ತಳ್ಳಿದ ವಾರ್ತೆ ಯೇಸುಸ್ವಾಮಿಯ ಕಿವಿಗೆ ಮುಟ್ಟಿತು. ಯೇಸು ಅವನನ್ನು ಕಂಡು, “ನರಪುತ್ರನಲ್ಲಿ ನಿನಗೆ ವಿಶ್ವಾಸವಿದೆಯೇ?” ಎಂದು ಕೇಳಿದರು.
36 : ಅವನು, “ಅವರು ಯಾರೆಂದು ತಿಳಿಸಿ ಸ್ವಾವಿೂ, ನಾನು ವಿಶ್ವಾಸಿಸುತ್ತೇನೆ,” ಎಂದನು.
37 : ಯೇಸು, “ನೀನು ಆತನನ್ನು ಕಂಡಿದ್ದೀಯೆ, ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದರು.
38 : “ಸ್ವಾವಿೂ, ನಾನು ವಿಶ್ವಾಸಿಸುತ್ತೇನೆ,” ಎಂದು ಹೇಳುತ್ತಾ ಅವನು ಯೇಸುವಿಗೆ ಅಡ್ಡಬಿದ್ದನು.
39 : ಆಗ ಯೇಸು, “ಕುರುಡರು ಕಾಣುವಂತೆಯೂ ಕಾಣುವವರು ಕುರುಡರಾಗುವಂತೆಯೂ ತೀರ್ಪುಕೊಡಲೆಂದೇ ನಾನು ಈ ಲೋಕಕ್ಕೆ ಬಂದುದು,” ಎಂದು ನುಡಿದರು.
40 : ಅಲ್ಲಿ ನಿಂತಿದ್ದ ಫರಿಸಾಯರು ಈ ಮಾತನ್ನು ಕೇಳಿ, “ಹಾಗಾದರೆ ನಾವು ಕೂಡ ಕುರುಡರೋ?” ಎಂದು ಪ್ರಶ್ನಿಸಿದರು.
41 : ಯೇಸು, “ನೀವು ಕುರುಡರೇ ಆಗಿದ್ದರೆ ಪಾಪಿಗಳಾಗುತ್ತಿರಲಿಲ್ಲ, ಆದರೆ, ‘ನಮಗೆ ಕಣ್ಣು ಕಾಣುತ್ತದೆ,’ ಎಂದು ಹೇಳಿಕೊಳ್ಳುತ್ತೀರಿ; ಆದ್ದರಿಂದ ನೀವು ಪಾಪಿಗಳಾಗಿದ್ದೀರಿ,” ಎಂದರು.
-------------------------
ತಪಸ್ಸುಕಾಲದ ನಾಲ್ಕನೇ ಭಾನುವಾರವನ್ನು ಉಲ್ಲಾಸದ ಅಥವಾ ಹರ್ಷೋದ್ಗಾರದ ದಿನವನ್ನಾಗಿ ತಾಯಿ ಧರ್ಮಸಭೆ ಆಚರಿಸುತ್ತದೆ. ಈ ತಪಸ್ಸಿನ ಕಾಲದಲ್ಲಿ ನಾವು ಉಲ್ಲಾಸಿಸಲು ಕಾರಣ ಬರಲಿರುವ ಪುನರುತ್ಥಾನದ ಹಬ್ಬವೇ ಆಗಿದೆ. ನಮ್ಮ ಪ್ರಭು ಯೇಸುಕ್ರಿಸ್ತರು ಇನ್ನೂ ಯಾತನೆಯನ್ನು ಅನುಭವಿಸುವ ಮುನ್ನವೇ ಪುನರುತ್ಥಾನದ ಬಗ್ಗೆ ಧ್ಯಾನಿಸುವುದು ಹೇಗೆ ಎಂಬ ಗೊಂದಲ ಮೂಡುವುದು ಸಹಜ. ಆದರೂ ಪ್ರಭುವೇ ನಮಗೆ ತಿಳಿಸುವಂತೆ ಅವರು ಪಡುವ ಯಾತನೆ ಮರಣವು, ಪುನರುತ್ಥಾನದೊಂದಿಗೆ ಕೊನೆಗೊಳ್ಳುತ್ತದೆ.
ಹೀಗಿರುವಾಗ ಈ ದಿನದ ಎಲ್ಲಾ ವಾಚನಗಳು ನಮ್ಮನ್ನು ಈ ಅರ್ಥದ ಕಡೆಗೆ ದೃಷ್ಟಿಯನ್ನು ಹಾಯಿಸಲು ಪ್ರೇರೇಪಿಸುತ್ತದೆ. ಇಂದಿನ ಶುಭಸಂದೇಶದಲ್ಲಿ ಪ್ರಭುಕ್ರಿಸ್ತರ ಶಿಷ್ಯರು ಹುಟ್ಟು ಕುರುಡನನ್ನು ನೋಡಿ ಕೇಳಿದ ಪ್ರಶ್ನೆ ಮತ್ತು ಪ್ರಭು ನೀಡುವ ಉತ್ತರ ನಮ್ಮ ದೈನಂದಿನ ಜೀವನದಲ್ಲಿ ನಡೆಯುವ ಘಟನೆಗಳಿಗೆ ಕನ್ನಡಿ ಹಿಡಿದಂತೆ. ಅನೇಕ ಭಾರಿ ದೇವರ ವರದಾನಗಳನ್ನು ನೆನೆದು ಸನ್ಮಾರ್ಗದಲ್ಲಿ ನಡೆಯುವ ಬದಲಾಗಿ ನಮ್ಮ ಪಾಪವೆಂಬ ಅಂಧಕಾರದಲ್ಲಿ ಸಿಲುಕಿ ನಮ್ಮ ಇಡೀ ಜಗತ್ತನ್ನೇ ಕತ್ತಲಾಗಿಸಿಬಿಡುತ್ತೇವೆ.
ಇಂದಿನ ಮೊದಲನೆಯ ವಾಚನದಲ್ಲಿ ದಾವಿದ ಅರಸನನ್ನು ಅಭಿಷೇಕಿಸುವುದರ ಮೂಲಕ ದೇವರು ನಮ್ಮ ದೃಷ್ಟಿಯನ್ನು ಬದಲಾಯಿಸಲು ಕರೆನೀಡುತ್ತಾರೆ. ವಾಸ್ತವವಾಗಿ ದಾವಿದನು ಒಬ್ಬ ಸಾಮಾನ್ಯ ಕುರಿಗಾಹಿಯಗಿದ್ದವನು. ಅವನ ಸ್ವಂತ ಕುಟುಂಬವೇ ಅವನನ್ನು ನಂಬಲಿಲ್ಲ. ಆದರೆ ಇಂತಹ ತಿರಸೃತ ವ್ಯಕ್ತಿಯನ್ನು ಆರಿಸಿಕೊಳ್ಳುವುದರ ಮೂಲಕ ದೇವರ ರೀತಿನೀತಿಯು ಮಾನವರಿಗಿಂತ ಬಹಳ ಭಿನ್ನವಾದುದು ಎಂಬ ಅಂಶವನ್ನು ಎತ್ತಿತೋರಿಸುತ್ತದೆ. ತಂದೆ ದೇವರು ತಮ್ಮ ಜನರ ಕುರುಡುತನವನ್ನು ನೀಗಿಸಿ, ದಾವಿದನಲ್ಲಿ ಅಡಗಿದ್ದ ಶಕ್ತಿ ಮತ್ತು ಯುಕ್ತಿಯ ಬೆಳಕನ್ನು ಹೊರಸೂಸಲು ಅನುವು ಮಾಡಿಕೊಡುತ್ತಾರೆ .
ಪಾಪದ ಅಂಧಕಾರದಲ್ಲಿ ತೊಳಲುತ್ತಿರುವ ಮಾನವನಿಗೆ ದೇವರು ತಮ್ಮ ಪುತ್ರನ ಮೂಲಕ ಬೆಳಕನ್ನು ನೀಡಿ ನಮ್ಮ ಜೀವನವನ್ನು ಪರಿಶುದ್ಧಗೊಳಿಸಿದ್ದಾರೆ. ಆ ಬೆಳಕನ್ನು ನಮ್ಮ ಸೇವಾ ಜೀವನದ ಮೂಲಕ ಇತರರಿಗೆ ಹಂಚಬೇಕೆಂದು ಸಂತ ಪೌಲರು ಇಂದಿನ ಎರಡನೇ ವಾಚನದಲ್ಲಿ ಕರೆ ನೀಡುತ್ತಾರೆ.
ಮಾನವನು ಕುರುಡನಾದರೆ ಆತನ ಜೀವನದಲ್ಲಿ ಕೊರತೆ ಇದೆ ಎಂದು ಅರಿಯಬಹುದು ಆದರೆ ಮಾನವನು ಕಣ್ಣಿದ್ದೂ ಕುರುಡನಾದರೆ ಆತನ ಇಡೀ ಜೀವನವೇ ಕತ್ತಲುಮಯವಾಗುತ್ತದೆ. ಇಂತಹ ಒಂದು ಸನ್ನಿವೇಶವನ್ನು ಇಂದಿನ ಶುಭಸಂದೇಶದಲ್ಲಿ ನಾವು ನೋಡುತ್ತೇವೆ. ಒಬ್ಬ ಕುರುಡನಿಗೆ ನಿಜವಾದ ಬೆಳಕನ್ನು ನೋಡುವ ವರವನ್ನು ಪ್ರಭುಕ್ರಿಸ್ತರು ಕರುಣಿಸುತ್ತಾರೆ. ಆದರೆ ಕಣ್ಣಿದ್ದೂ ಕುರುಡರಾಗಿ ಜೀವಿಸುತ್ತಿದ್ದ ಫರಿಸಾಯರು ಇದನ್ನು ಸಹಿಸದೆ ಪ್ರಭುಕ್ರಿಸ್ತರು ಮಾಡಿದ ಒಳ್ಳೆಯ ಕಾರ್ಯದಲ್ಲಿ ದೋಷವನ್ನು ತೋರಿಸಲು ಇಲ್ಲೊಂದು ಅವಕಾಶವನ್ನು ಕಾಣುತ್ತಾರೆ. ಕತ್ತಲೆಯಲ್ಲೇ ಜೀವಿಸುತ್ತಿರುವ ಇವರು ಬೇರೆಯವರು ಸಹ ಇವರಂತೆ ಅಂಧಕಾರದ ಬದುಕನ್ನೇ ಜೀವಿಸಬೇಂದು ಬಯಸುತ್ತಿದ್ದರು. ಆದರೆ ಜಗಜ್ಯೋತಿ ಪ್ರಭುಕ್ರಿಸ್ತರು ಇರುವಾಗ ಕತ್ತಲೆಯ ಸಾಮ್ರಾಜ್ಯವಾಗಲೀ ಅದರ ಪರಿಣಾಮವಾಗಲೀ ಎಂದಿಗೂ ನಮ್ಮನ್ನು ಆವರಿಸಲು ಸಾದ್ಯವಿಲ್ಲ ಎಂಬ ಸತ್ಯಾಂಶವನ್ನು ಈ ಘಟನೆಯಲ್ಲಿ ನಾವು ಬಹಳ ಸ್ಪಷ್ಟವಾಗಿ ಕಾಣುತ್ತೇವೆ.
ಆಧ್ಯಾತ್ಮಿಕ ಅಂಧಕಾರದಲ್ಲಿ ನಡೆಯುತ್ತಿದ್ದ ಫರಿಸಾಯರಿಗೆ ದೈವೀ ಬೆಳಕನ್ನು ಕಾಣಲು ಸಾದ್ಯವಾಗಲೇ ಇಲ್ಲ ಹಾಗಾಗಿ ಮನುಷ್ಯತ್ವವು ಸಹ ಕಳೆಗುಂದಿದ ಹಾಗೆ ಕಾಣುತ್ತಿತ್ತು. ಇದೇ ಕಾರಣದಿಂದ ಪ್ರಭುಕ್ರಿಸ್ತರು ಮಾನವರ ಉದ್ಧಾರಕ್ಕಾಗಿ ಮಾಡಿದ ಪ್ರತಿಯೊಂದು ಕಾರ್ಯದಲ್ಲಿ ಲೋಪವನ್ನು ಕಂಡುಹಿಡಿಯಲು ಹೆಜ್ಜೆ ಹೆಜ್ಜೆಗೂ ಪ್ರಯತ್ನಿಸುತ್ತಿದ್ದರು. ತಾವೇ ಅಂದಕಾರದಲ್ಲಿ ಜೀವಿಸುತ್ತಿದ್ದ ಈ ಫರಿಸಾಯರಿಗೆ ಯೇಸು ಮಾಡಿದ ಅದ್ಭುತಕಾರ್ಯ ಕೇವಲ ಒಂದು
ಬಾಹ್ಯಾಚರಣೆಯಾಗಿ ಕಂಡಿತೆ ವಿನಃ ಅದೊಂದು ದೈವೀ ಸಾಮ್ರಾಜ್ಯದ ಆಗಮನದ ಮುನ್ಸೂಚನೆ ಎಂದು ಅರ್ಥವಾಗಲೇ ಇಲ್ಲ.
ಅನೇಕ ಭಾರಿ ನಮ್ಮ ಜೀವನದಲ್ಲಿಯೂ ಫರಿಸಾಯರು ಜೀವಿಸುತ್ತಿರಬಹುದು. ದ್ವೇಷ, ಅಸೂಯೆ, ಮತ್ಸರಗಳಿಗೆ ಒಳಗಾಗಿ ಇತರರಲ್ಲಿ ದೈವೀಗುಣಗಳನ್ನು ಕಾಣುವ ಬದಲು, ಕೆಡುಕನ್ನೇ ಕಾಣುತ್ತ ಅವರ ಹಾಗೂ ನಮ್ಮ ಜೀವನವನ್ನು ಹಾಳು ಮಾಡುವ ಕಾರ್ಯಗಳಿಗೆ ನಾವೇ ಪ್ರೇರಕರಾಗಿಬಿಡುತ್ತೇವೆ.
ಆದುದರಿಂದ ದಿವ್ಯಜ್ಯೋತಿಯಾಗಿ ಧರೆಗಿಳಿದ ಪ್ರಭುಕ್ರಿಸ್ತರಲ್ಲಿ, ನಮ್ಮ ಅಂಧಕಾರವನ್ನು ನೀಗಿಸಿ ಬೆಳಕಿನ ಪಥದೆಡೆಗೆ ನಮ್ಮನ್ನು ಕೊಂಡೊಯ್ಯಲಿ ಎಂದು ದೈನ್ಯತೆಯಿಂದ ಪ್ರಾರ್ಥಿಸೋಣ.
ಉಲ್ಲಾಸದ/ ಸಂತಸದ ದಿನದಂದು ಬರಲಿರುವ ಬೆಳಕಿನ ಹಬ್ಬ ಪ್ರಭುವಿನ ಪುನರುತ್ಥಾನದ ದಿನವನ್ನು ಎದುರುಗೊಳ್ಳಲು ಬೇಕಾದ ವರದಾನಗಳಿಗೋಸ್ಕರ ದಿವ್ಯಜ್ಯೋತಿ ಪ್ರಭು ಯೇಸುಕ್ರಿಸ್ತರಲ್ಲಿ ಪ್ರಾರ್ಥಿಸೋಣ.
----------------------------------
© 'ದನಿ' ಮಾಧ್ಯಮ ಮನೆ

No comments:
Post a Comment