ಮಾರ್ಚ್ 23, 2020 ಸೋಮವಾರ [ನೇರಳೆ]
ನಿನಗೆನ್ನ
ವಂದನೆ ಪ್ರಭು, ನನ್ನನುದ್ಧರಿಸಿದೆ / ಶತ್ರುಗಳೆನ್ನ ಕುರಿತು ಹಿಗ್ಗದಂತೆ ಮಾಡಿದೆ //
ಮೊಗ್ರೊವೇಜೋದ ಸಂತ ತುರಿಬಿಯುಸ್
[ಧರ್ಮಾಧ್ಯಕ್ಷ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆಶಾಯ
65.17-21
ಕೀರ್ತನೆ 30:1,
3-5, 10-12. ಶ್ಲೋಕ.1
ನಿನಗೆನ್ನ ವಂದನೆ ಪ್ರಭೂ,
ನನ್ನನ್ನುದ್ಧರಿಸಿದೆ
ಶುಭಸಂದೇಶ: ಯೊವಾನ್ನ
4.43-54
-------------------------
ಮೊದಲ ವಾಚನ: ಯೆಶಾಯ
65.17-21
17
: ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ನಾನು ಹೊಸ ಆಕಾಶವನ್ನೂ ಹೊಸಭೂಮಿಯನ್ನೂ ಸೃಷ್ಟಿಸುವೆನು;
ಆಗ, ಮೊದಲಿದ್ದದ್ದು ಜ್ಞಾಪಕದಲ್ಲಿರದು; ಅದು ಯಾರ ನೆನಪಿಗೂ ಬಾರದು.
18
: ನಾನು ಮಾಡುವ ಸೃಷ್ಟಿಕಾರ್ಯದಲ್ಲೇ ಸಂತೋಷಿಸಿ, ಎಂದೆಂದಿಗೂ ಆನಂದಿಸಿರಿ: ಹೌದು, ನಾನು ಜೆರುಸಲೇಮನ್ನು
ಉಲ್ಲಾಸದ ನಿವಾಸವನ್ನಾಗಿಸುವೆನು; ಅದರ ಜನರನ್ನು ಹರ್ಷಭರಿತರನ್ನಾಗಿಸುವೆನು.
19
: ನಾನು ಕೂಡ ಜೆರುಸಲೇಮನ್ನು ನೋಡಿ ಆನಂದಿಸುವೆನು, ಅದರ ಜನರನ್ನು ದೃಷ್ಟಿಸಿ ಹರ್ಷಗೊಳ್ಳುವೆನು. ಇನ್ನು
ಅಲ್ಲಿ ಅಳುವಾಗಲಿ, ಆಕ್ರೋಶವಾಗಲಿ ಕೇಳಿ ಬರದು.
20
: ಕೆಲವೇ ದಿನ ಬದುಕುವ ಮಗುವಾಗಲಿ, ಆಯುಸ್ಸು ಮುಗಿಸದ ಮುದುಕನಾಗಲಿ ಇನ್ನು ಇಲ್ಲಿರನು. ನೂರು ವರ್ಷ
ಬಾಳುವವನು ‘ಯುವಕ’ ಎನಿಸಿಕೊಳ್ಳುವನು; ನೂರರೊಳಗೆ ಸಾಯುವ ಪಾಪಿಯು ‘ಶಾಪಗ್ರಸ್ತ’ ಎನಿಸಿಕೊಳ್ಳುವನು.
21
: ಜನರು ಅಲ್ಲೇ ಮನೆಮಾಡಿ ನಿವಾಸ ಮಾಡುವರು; ತೋಟ ನೆಟ್ಟು ಅದರ ಫಲವನ್ನು ಅನುಭವಿಸುವರು.
22
: ತಾವು ಕಟ್ಟಿದ ಮನೆಗಳಲ್ಲಿ ಬೇರೆಯವರು ವಾಸಮಾಡುವುದಾಗಲಿ, ತಾವು ನೆಟ್ಟ ತೋಟಗಳ ಫಲವನ್ನು ಬೇರೆಯವರು
ಅನುಭವಿಸುವುದಾಗಲಿ ಇನ್ನು ಸಂಭವಿಸದು. ಏಕೆಂದರೆ, ನನ್ನ ಜನರು ಮರಗಳಂತೆ ಬಹುಕಾಲ ಬಾಳುವರು. ನನ್ನಿಂದ
ಆಯ್ಕೆಯಾದವರು ತಮ್ಮ ದುಡಿಮೆಯ ಫಲವನ್ನು ದೀರ್ಘಕಾಲ ಅನುಭವಿಸುವರು.
-------------------------
ಕೀರ್ತನೆ 30:1,
3-5, 10-12. ಶ್ಲೋಕ.1
ನಿನಗೆನ್ನ ವಂದನೆ ಪ್ರಭೂ,
ನನ್ನನ್ನುದ್ಧರಿಸಿದೆ
2
: ‘ಹೇ ಪ್ರಭು, ಎನ್ನ ದೇವಾ’ ಎಂದೆ / ನಾ ಮೊರೆಯಿಡೆ, ನೀ ಗುಣಪಡಿಸಿದೆ //
4
: ಭಕ್ತರೇ, ಸಂಕೀರ್ತಿಸಿರಿ ಪ್ರಭುವನು / ಮಾಡಿರಿ ಆತನ ನಾಮಸ್ಮರಣೆಯನು //
5
: ಆತನ ಕೋಪ ಕ್ಷಣಮಾತ್ರ / ಆತನ ಕೃಪೆ ಜೀವನ ಪರಿಯಂತ // ಇರುಳು ಬರಲು ಇರಬಹುದು ಅಳಲು / ನಲಿವು ಉಲಿವುದು
ಹಗಲು ಹರಿಯಲು //
6
: ನಾನಾದರೋ ಉಲ್ಲಾಸದಿಂದಿರುವಾಗಲೂ / ನನ್ನನು ಅಲ್ಲಾಡಿಸಲಾಗದೆಂದೆ ಯಾರಿಂದಲೂ //
11
: ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ / ಎನ್ನ ಗೋಣಿತಟ್ಟನು ಹರ್ಷಾಭರಣವಾಗಿಸಿದೆ //
12
: ಎಂದೇ ಮೌನವಿರದೆ ಎನ್ನ ಮನವು ನಿನಗೆ ಹಾಡಲಿ ಕೀರ್ತನೆ / ಹೇ ಪ್ರಭು, ಎನ್ನ ದೇವ, ನಿನಗೆನ್ನ ಅನಂತ
ಧನ್ಯ ವಂದನೆ //
------------------
ಶುಭಸಂದೇಶ: ಯೊವಾನ್ನ
4.43-54
43
: ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಅಲ್ಲಿಂದ ಗಲಿಲೇಯಕ್ಕೆ ಹೊರಟರು.
44
: ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು.
45
: ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ
ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಯೇಸು ಮಾಡಿದ್ದನ್ನೆಲ್ಲಾ ನೋಡಿದ್ದರು.
46
: ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು
ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು.
47
: ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ
ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು.
48
: ಯೇಸು ಅವನಿಗೆ “ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ,” ಎಂದರು.
49
: ಆದರೂ ಆ ಅಧಿಕಾರಿ, “ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾವಿೂ,” ಎಂದು ಅಂಗಲಾಚಿದನು.
50
: ಆಗ ಯೇಸು, “ಹೋಗು, ನಿನ್ನ ಮಗನು ಬದುಕುತ್ತಾನೆ,” ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು
ನಂಬಿ ಹೊರಟನು.
51
: ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, “ನಿಮ್ಮ ಮಗ ಬದುಕಿಕೊಂಡ,”
ಎಂದು ತಿಳಿಸಿದರು.
52
: ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, “ನಿನ್ನೆ ಮಧ್ಯಾಹ್ನ:
ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು,” ಎಂದು ಆಳುಗಳು ಉತ್ತರಕೊಟ್ಟರು.
53
: ನಿನ್ನ ಮಗ ಬದುಕುತ್ತಾನೆ’ ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ
ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು.
54
: ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕಕಾರ್ಯ ಇದು.
----------------------
ಚಿಂತನೆ
ನಮ್ಮ ಜೀವನ ನಿಂತಿರುವುದೇ ದೇವರ ಕೃಪಾವರಗಳೆಂಬ ಭದ್ರ ಬುನಾದಿಯ ಮೇಲೆ. ನಮ್ಮ ವಿನಯ, ದೀನತೆ, ವಿಧೇಯತೆ, ಪ್ರಾಮಾಣಿಕತೆ ನಮಗೆ ದೇವರ ಕೃಪೆಯನ್ನು ಯಥೇಚ್ಛವಾಗಿ ಪಡೆದುಕೊಡುತ್ತದೆ. ಮಗುವಿನಂತಹ ಮನಸ್ಸು, ದೃಢವಿಶ್ವಾಸ ನಮ್ಮಲ್ಲಿದ್ದರೆ ನಾವು ದೇವರಿಂದ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ಇದಕ್ಕೆ ತಕ್ಕ ನಿದರ್ಶನ ಇಂದಿನ ಶುಭಸಂದೇಶದಲ್ಲಿ ಯೇಸುವಿನ ಮರೆಹೊಕ್ಕ ರಾಜಾಧಿಕಾರಿ. ಪ್ರಭುವಿನಲ್ಲಿ ಅಗಾಧ ವಿಶ್ವಾಸವನ್ನು ತೋರಿಸಿದ ಆ ಅಧಿಕಾರಿಗೆ ಹೋಗು ನಿನ್ನ ಮಗನು ಬದುಕುತ್ತಾನೆ ಎಂದು ಹೇಳಿ ಅವನ ವಿಶ್ವಾಸವನ್ನು ಮಾತ್ರವಲ್ಲ ಆತನ ಇಡೀ ಪರಿವಾರದವರ ವಿಶ್ವಾಸವನ್ನು ಪ್ರಭು ಗಳಿಸಿಕೊಳ್ಳುತ್ತಾರೆ.
ನಾವೂ ಸಹ ನಾನಾ ರೀತಿಯ ಬಲಹೀನತೆಗಳಿಂದ ಬಳಲುತ್ತಿರಬಹುದು. ಹಲವು ರೀತಿಯ ರೋಗ-ರುಜಿನಗಳು ನಮ್ಮನ್ನು ಹಾಗೂ ನಮ್ಮ ಮನೆಯವರನ್ನು ಕಾಡುತ್ತಿರಬಹುದು.ಆದರೆ ಯಾರು ಪ್ರಭುವಿನಲ್ಲಿ ಆಳವಾದ ವಿಶ್ವಾಸವನ್ನಿಟ್ಟು ಅವರ ಮರೆಹೊಗುತ್ತಾರೋ ಅವರು ಎಂದಿಗೂ ಹೆದರಬೇಕಾಗಿಲ್ಲ, ಅಂಜಬೇಕಾಗಿಲ್ಲ. ಏಕೆಂದರೆ ರೋಗಸೌಖ್ಯ ನೀಡುವ ಯೇಸು ನಮ್ಮೊಂದಿಗಿದ್ದಾರೆ. ಅವರು ನಮ್ಮನ್ನು ಸ್ಪರ್ಶಿಸಿ ಗುಣಪಡಿಸುತ್ತಾರೆ. ನಮಗೆಲ್ಲರಿಗೂ ಎಲ್ಲಾ ರೀತಿಯ ಸೌಖ್ಯ ನೀಡಿ ಸ್ವಸ್ಥಪಡಿಸುತ್ತಾರೆ. ಅಂತಹ ವಿಶ್ವಾಸ ನಮ್ಮದಾಗಲಿ ಹಾಗೂ ಅಂತಹ ವಿಶ್ವಾಸದಲ್ಲಿ ಸದಾ ಬೆಳೆದು ಕೃತಾರ್ಥರಾಗೋಣ.
--------------------------------
ಇಂದಿನ ಶುಭಸಂದೇಶದಲ್ಲಿ ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಅಧಿಕಾರಿಯ ವಿಶ್ವಾಸವನ್ನು ಕಾಣುತ್ತೇವೆ. ಸಾಮಾನ್ಯವಾಗಿ ಯೇಸು ಅದ್ಭುತಗಳನ್ನು ಮಾಡುವಾಗ ಆ ವ್ಯಕ್ತಿಯ ವಿಶ್ವಾಸವನ್ನು ಪರೀಕ್ಷಿಸುತ್ತಿದ್ದರು (ಮತ್ತಾಯ 9:28). ಆ ಅಧಿಕಾರಿಯು ಯೇಸುವಿನ ಮೇಲಿನ ವಿಶ್ವಾಸದಿಂದ ದೂರ ಪ್ರಯಾಣ ಮಾಡಿ ಬಂದಿದ್ದನು. ಯೇಸುವಿನಲ್ಲಿ ಆತನಿಗಿದ್ದ ವಿಶ್ವಾಸ ಆತನ ಮಗನನ್ನು ಬದುಕಿಸಿತು.
ಯೇಸು ಗಲಿಲೇಯ ಪ್ರಾಂತ್ಯದಲ್ಲಿ ಅನೇಕ ಸೂಚಕ ಕಾರ್ಯಗಳನ್ನು ಮಾಡಿದರು. ಆದರೂ ಆ ಜನರು ಯೇಸುವನ್ನು ವಿಶ್ವಾಸಿಸದೆ ಹೋದರು. ಹಾಗಾಗಿ ಯೇಸು ಕೊರಾಜ್ಜಿನ್, ಬೆತ್ಸಾಯಿದ, ಕಫೆರ್ನವುಮ್ ಪಟ್ಟಣಗಳನ್ನು ಖಂಡಿಸಿದರು (ಮತ್ತಾಯ 11:20-24). ನಮ್ಮ ವಿಶ್ವಾಸವು ಅದ್ಬುತಗಳ ಮೇಲೆ ಅವಲಂಬಿತವಾಗಿರಬಾರದು. ಪುಣ್ಯಕ್ಷೇತ್ರಗಳಿಗೆ, ಧ್ಯಾನ ಕೇಂದ್ರಗಳಿಗೆ ಅದ್ಭುತಗಳನ್ನು ಬಯಸಿ ಹೋಗಬಾರದು. ಅಚಲ ವಿಶ್ವಾಸವಿದ್ದರೆ ನಮ್ಮಲ್ಲೂ ಆದ್ಭುತಗಳನ್ನು ಕಾಣಬಹುದು.
----------------------
© 'ದನಿ' ಮಾಧ್ಯಮ ಮನೆ

No comments:
Post a Comment