ಏಪ್ರಿಲ್ 28,
2020 ಮಂಗಳವಾರ [ಬಿಳಿ]
ಸಂತ ಪೀಟರ್ ಚಾನೆಲ್ (ಐಚ್ಛಿಕ ಸ್ಮರಣೆ)
ಸಂತ ಲೂಯಿ ಗ್ರಿಜ್ಞೊನ್ ಡಿ ಮಾಂಟ್ ಫೋರ್ಟ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 7:51-8:1
ಕೀರ್ತನೆ 31:3-4, 6-8, 17, 21 ಶ್ಲೋಕ.5
ನನಗಾಧಾರ ನೀನಲ್ಲವೇ? ನನ್ನಾತ್ಮವನು ನಿನಗೊಪ್ಪಿಸಿರುವೆ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 6.30-35
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು
7:51-8:1
51 : ಸ್ತೇಫನನು ಮುಂದುವರೆದು, “ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು; ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ.
52 : ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ.
53 : ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ,” ಎಂದನು.
54 : ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು.
55 : ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾಶ್ರ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು,
56 : “ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾಶ್ರ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು.
57 : ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. 58ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು.
58 : ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು.
59 : ಅವರು ತನ್ನ ಮೇಲೆ ಕಲ್ಲು ಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.
60 : ಅನಂತರ ಮೊಣಕಾಲೂರಿ, “ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ,” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು. ಆ ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರಹಿಂಸೆ ಪ್ರಾರಂಭವಾಯಿತು.
ಕೀರ್ತನೆ
31:3-4, 6-8, 17, 21 ಶ್ಲೋಕ.5
ನನಗಾಧಾರ ನೀನಲ್ಲವೇ? ನನ್ನಾತ್ಮವನು ನಿನಗೊಪ್ಪಿಸಿರುವೆ
3 : ಕೈ ಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ | ನೀನೆನಗೆ ಪೊರೆಬಂಡೆ, ಸ್ಥಿರ ಕೋಟೆಕೊತ್ತಲ ||
4 : ವೈರಿಗಳ ಉರುಲುಬಲೆಯಿಂದೆನ್ನನು ರಕ್ಷಿಸು | ಅದರಲಿ ನಾ ಸಿಕ್ಕಿ ಬೀಳುವುದನು ತಪ್ಪಿಸು ||
6 : ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ / ನಾನಾದರೋ ಪ್ರಭು, ಭರವಸೆಯಿಟ್ಟಿರುವುದು ನಿನ್ನಲ್ಲೆ //
7 : ಹರ್ಷಾನಂದಗೊಳ್ಳುವೆ ನೆನೆದು ನಿನ್ನ ಅನಂತ ಪ್ರೀತಿಯನು / ಈಕ್ಷಿಸಿದೆ ನೀ ಭಕ್ತನ ದೀನತೆಯನು, ಲಕ್ಷಿಸಿದೆ ಬಾಧೆಗಳನು //
8 : ವಿರೋಧಿಗಳ ವಶಕ್ಕೆ ಎನ್ನನು ನೀ ಬಿಟ್ಟುಬಿಡಲಿಲ್ಲ / ನಿರಾತಂಕದೆಡೆಯಲಿ ನನ್ನ ನಿಲ್ಲಿಸಿದೆಯಲ್ಲಾ //
17 : ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು, ಮಾನಭಂಗ / ದುರುಳರಿಗಾಗಲೀ ಆಶಾಭಂಗ, ಮೂಕರಾಗವರು ಸೇರಲಿ ನರಕ //
21 : ಮುತ್ತಿಗೆಗೆ ತುತ್ತಾದ ನಗರದೊಳಿಂದೆನ್ನ / ಅಚ್ಚರಿಯಿಂದ ರಕ್ಷಿಸಿದೊಡೆಯನಿಗೆ ನಮನ //
ಶುಭಸಂದೇಶ: ಯೊವಾನ್ನ 6.30-35
30 : ಅದಕ್ಕೆ ಆ ಜನರು, “ನಾವು ನೋಡಿ ನಿಮ್ಮಲ್ಲಿ ವಿಶ್ವಾಸ ಇಡುವಂತೆ ನೀವು ಏನು ಮಾಡುವಿರಿ? ಯಾವ ಸೂಚಕಕಾರ್ಯವನ್ನು ತೋರಿಸುವಿರಿ?
31 : ನಮ್ಮ ಪೂರ್ವಜರಿಗೆ ಮರುಭೂಮಿಯಲ್ಲಿ ತಿನ್ನಲು ‘ಮನ್ನಾ’ ಸಿಕ್ಕಿತು, ತಿನ್ನಲು ಅವರಿಗೆ ಸ್ವರ್ಗದಿಂದ ರೊಟ್ಟಿ ದೊರಕಿತು, ಎಂದು ಪವಿತ್ರಗ್ರಂಥವೇ ಹೇಳುತ್ತದೆಯಲ್ಲವೇ?” ಎಂದರು.
32 : ಯೇಸು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ; ಸ್ವರ್ಗದಿಂದ ನಿಮಗೆ ರೊಟ್ಟಿಯನ್ನು ಕೊಟ್ಟವನು ಮೋಶೆಯಲ್ಲ; ನಿಮಗೆ ಸ್ವರ್ಗದಿಂದ ನಿಜವಾದ ರೊಟ್ಟಿಯನ್ನು ಕೊಡುವವರು ನನ್ನ ಪಿತನೇ.
33 : ಏಕೆಂದರೆ, ಸ್ವರ್ಗದಿಂದ ಇಳಿದು ಬಂದು ಲೋಕಕ್ಕೆ ಸಜ್ಜೀವವನ್ನೀಯುವಾತನೇ ದೇವರು ಕೊಡುವ ರೊಟ್ಟಿ,” ಎಂದು ಹೇಳಿದರು.
34 : ಅದಕ್ಕೆ ಆ ಜನರು, “ಅಂಥಾ ರೊಟ್ಟಿಯನ್ನೇ ನಮಗೆ ಯಾವಾಗಲೂ ಕೊಡಿ,” ಎಂದು ಕೇಳಿದರು.
35 : ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.
-------------
-------------
ಅದ್ಬುತಕರವಾಗಿ ಉಂಡ ಉಚಿತ ರೊಟ್ಟಿಯ ಭೋಜನದಿಂದ ಜನರು ತೃಪ್ತರಾಗಿರಲಿಲ್ಲ. ಹಸಿವೆ ಇನ್ನೂ ಇದೆ, ಬಯಕೆ ಬಲವಾಗುತ್ತಿದೆ. ``ಅದ್ಬುತ ರೊಟ್ಟಿ’’ಯು ಜನರಿಗೆ ಬೇಕಿತ್ತು. ಅವರ ಗಮನವೆಲ್ಲಾ ಹೊಟ್ಟೆಯ ಕಡೆ. ಕ್ರಿಸ್ತ ಹೇಳುತ್ತಾರೆ ``ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು.’’ ಅಂಥಾ ರೊಟ್ಟಿ ಕೊಡಿ ನಮಗೆ, ಸಾಕು ಈ ಬಡತನ, ಹಸಿವು, ನಿರುದ್ಯೋಗ, ಅನ್ಯಾಯದ ಸಂಬಳ. ಅದ್ಭುತವಾಗಿ ಈ ಎಲ್ಲವನ್ನು ನೀಗಿಸಿಬಿಡಿ ಸಾಕು, ಎಂಬುದಾಗಿತ್ತಲ್ಲವೇ ಆ ಜನರ ಬಯಕೆ? ಕ್ರಿಸ್ತ ಹೇಳುತ್ತಾರೆ ಅಂಥಹ ರೊಟ್ಟಿಯು ನಾನೇ. ನನ್ನಲ್ಲಿ ಒಂದಾದರೆ ಸಾಕು, ಇದು ಯಾವುದೂ ನಿಮ್ಮನ್ನು ಕಾಡಲಾರವು.
---------------
ಇಂದಿನ ಮೊದಲನೆಯ ವಾಚನದಲ್ಲಿ ಕಾಣುವ ನ್ಯಾಯಸಭೆಯ ಸದಸ್ಯರು, ದೇವರ ವಿರುದ್ಧ ಎಷ್ಟು ಹಠಮಾರಿಗಳಾಗಿದ್ದರು, ಎಂಥಾ ಕಠಿಣ ಹೃದಯಿಗಳಾಗಿದ್ದರು, ದೇವರ ಸಂದೇಶಕ್ಕೆ ಎಷ್ಟು ಕಿವುಡರಾಗಿದ್ದರು, ಪವಿತ್ರಾತ್ಮರನ್ನು ಎಷ್ಟು ಪ್ರತಿಭಟಿಸತ್ತಿದ್ದರು ಎಂಬುದನ್ನು ಸ್ತೇಫನನ ಮಾತುಗಳಿಂದ ನಾವು ಅರಿತುಕೊಳ್ಳಬಹುದು. ಅದರಂತೆ ಸಾವಿರಾರು ಜನರಿಗೆ ರೊಟ್ಟಿ ನೀಡಿದ ಕ್ರಿಸ್ತನನ್ನು ಅದೇ ಜನ 'ನಿಮ್ಮಲ್ಲಿ ವಿಶ್ವಾಸವಿಡುವಂತೆ ನೀವು ಏನು ಮಾಡುವಿರಿ?' ಎಂದು ಪ್ರಶ್ನಿಸುತ್ತಾ ಯೇಸುವನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಯೇಸುವಿನ ರೊಟ್ಟಿಯ ಪವಾಡ ಜನರಿಂದ ಮರೆಯಾಗದೆ ಅವರ ಮಧ್ಯೆಯೇ ಪ್ರಸ್ತುತವಾಗಿತ್ತು, ಅದರ ಲಾಭ ಪಡೆದವರು ಜೀವಂತ ಸಾಕ್ಷಿಗಳಾಗಿದ್ದರು. ಆದರೂ ಇವರು ಯೇಸುವಿನಲ್ಲಿ ವಿಶ್ವಾಸವಿಡಲು ಸೂಚಕಕಾರ್ಯಗಳನ್ನು ಮಾಡಬೇಕೆಂದು ಆಗ್ರಹಪಡಿಸುತ್ತಿದ್ದರು. ತಪ್ಪನ್ನು ಹುಡುಕಬೇಕು ಎಂದುಕೊಂಡವನನ್ನು ಯಾವುದೇ ಸರಿಯಾದ ಉತ್ತರದಿಂದ ತೃಪ್ತಿಪಡಿಸಲು ಸಾಧ್ಯವಿಲ್ಲ. ಅಂತೆಯೇ ವಿಶ್ವಾಸಿಸಲು ಮನಸ್ಸಿಲ್ಲದವನಿಗೆ ಯಾವುದೇ ಪವಾಡವನ್ನು ಎಷ್ಟೇ ಬಾರಿ ತೋರಿಸಿದರೂ ಏನೂ ಪ್ರಯೋಜನವಿರದು. ನಾವು ಇದೇ ಗುಂಪಿಗೆ ಸೇರಿದ್ದೇವೆಯೇ? ಎಷ್ಟು ಸಲ ನಾವು ದೇವರ ವಿರುದ್ಧ ಹಠಮಾರಿಗಳಾಗಿದ್ದೆವು? ಕಠಿಣ ಹೃದಯಿಗಳಾಗಿದ್ದೆವು? ದೇವರ ವಾರ್ತೆಗೆ ಕಿವುಡರಾಗಿದ್ದೆವು? ದೇವರನ್ನು ಬರಮಾಡಿಕೊಳ್ಳದೆ ಪ್ರತಿಭಟಿಸಿದ್ದೆವು? ಎಂಬುದಾಗಿ ನಮ್ಮನ್ನು ನಾವೇ ಕೇಳಿಕೊಳ್ಳೋಣ.
--------------

No comments:
Post a Comment