Saturday, 28 March 2020

ಪಾಸ್ಕಕಾಲದ ಮೂರನೆಯ ವಾರ - ಬುಧವಾರ

ಏಪ್ರಿಲ್ 29, 2020 ಬುಧವಾರ                                             [ಬಿಳಿ]
ಸಿಯೆನ್ನಾದ ಸಂತ ಕಥರೀನ [ಸಂನ್ಯಾಸಿನಿ / ಧರ್ಮಪಂಡಿತೆ] (ಸ್ಮರಣೆ)
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:1-8
ಕೀರ್ತನೆ 66:1-7 ಶ್ಲೋಕ.1
ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 5.35-40

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:1-8
1 : ದಿನವೇ ಜೆರುಸಲೇಮಿನ ಧರ್ಮಸಭೆಯ ವಿರುದ್ಧ ಕ್ರೂರ ಹಿಂಸೆ ಪ್ರಾರಂಭವಾಯಿತು. ಪ್ರೇಷಿತರ ಹೊರತು ಇತರ ಭಕ್ತವಿಶ್ವಾಸಿಗಳು ಜುದೇಯ ಮತ್ತು ಸಮಾರಿಯ ಪ್ರಾಂತ್ಯಗಳಲ್ಲೆಲ್ಲಾ ಚದರಿ ಹೋದರು.
2 : ಕೆಲವು ಭಕ್ತಾದಿಗಳು ಸ್ತೇಫನನನ್ನು ಸಮಾಧಿಮಾಡಿ ಅವನಿಗಾಗಿ ಅತ್ತು ಗೋಳಾಡಿದರು.
3 : ಇತ್ತ ಸೌಲನು ಧರ್ಮಸಭೆಯನ್ನು ನಾಶಪಡಿಸಲು ತೊಡಗಿದನು; ಮನೆಮನೆಗೂ ನುಗ್ಗಿ ಸ್ತ್ರೀಪುರುಷರೆನ್ನದೆ ಭಕ್ತರನ್ನು ಎಳೆದುತಂದು ಸೆರೆಮನೆಗೆ ತಳ್ಳುತ್ತಿದ್ದನು.
4 : ಸಮಾರಿಯದಲ್ಲಿ ಶುಭಸಂದೇಶ ಚದರಿ ಹೋದ ಭಕ್ತವಿಶ್ವಾಸಿಗಳು ಎಲ್ಲೆಲ್ಲೂ ಹೋಗಿ ಶುಭಸಂದೇಶವನ್ನು ಸಾರುತ್ತಿದ್ದರು.
5 : ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣ ಒಂದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕನೆಂದು ಸಾರಿದನು.
6 : ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಭುತಕಾರ್ಯಗಳನ್ನು ಕಣ್ಣಾರೆ ಕಂಡಿತು; ಅವನ ಬೋಧನೆಯನ್ನು ಒಮ್ಮನಸ್ಸಿನಿಂದ ಸ್ವೀಕರಿಸಿತು.
7 : ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟಗಲಿದವು; ಪಾಶ್ರ್ವವಾಯು ಪೀಡಿತರೂ ಕುಂಟರೂ ಸ್ವಸ್ಥರಾದರು.
8 : ಇದರಿಂದ ಪಟ್ಟಣದಲ್ಲಿ ಉಂಟಾದ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ.

ಕೀರ್ತನೆ 66:1-7 ಶ್ಲೋಕ.1
ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ
1 : ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ /
2 : ಹಾಡಲಿ ಆತನ ಶ್ರೀನಾಮ ಮಹಿಮೆಗೆ //
3 : “ನಿನ್ನ ಕಾರ್ಯಗಳೆನಿತೋ ಚೇತೋಹಾರಿ / ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ //
4 : ಜಗವೆಲ್ಲ ಪೂಜಿಪುದು ನಿನ್ನನು / ಪೊಗಳಿ ಮಾಳ್ಪುದು ಗುಣಗಾನವನು / ಕೀರ್ತಿಸುವುದು ನಿನ್ನ ನಾಮವನು”//
5 : ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ / ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ //
6 : ಒಣನೆಲವಾಗಿ ಮಾರ್ಪಡಿಸಿದ ಕಡಲನು / ಕಾಲು ನಡೆಯಲೇ ದಾಟಿಸಿದ ನದಿಯನು / ಇದ ನಿಮಿತ್ತ ಪಡೆಯೋಣ ಆನಂದವನು //
7 : ಆತನಾಳ್ವಿಕೆ ಶಕ್ತಿಯುತ, ನಿರಂತರ / ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ / ಜಂಬಕೊಚ್ಚದಿರಲಿ ದಂಗೆಕೋರ //

ಶುಭಸಂದೇಶ: ಯೊವಾನ್ನ 6:35-40
35 : ಆಗ ಯೇಸು, “ನಾನೇ ಜೀವದಾಯಕ ರೊಟ್ಟಿ, ನನ್ನ ಬಳಿ ಬರುವವನಿಗೆ ಹಸಿವೇ ಇರದು; ನನ್ನಲ್ಲಿ ವಿಶ್ವಾಸವಿಡುವವನಿಗೆ ಎಂದಿಗೂ ದಾಹವಾಗದು.
36 : ಆದರೆ, ನಾನು ನಿಮಗೆ ಹೇಳಿದಂತೆ, ನೀವು ನನ್ನನ್ನು ನೋಡಿಯೂ ವಿಶ್ವಾಸಿಸದೆ ಇದ್ದೀರಿ.
37 : ಪಿತನು ನನಗೆಂದು ಕೊಟ್ಟಿರುವ ಪ್ರತಿಯೊಬ್ಬನೂ ನನ್ನಲ್ಲಿಗೆ ಬರುತ್ತಾನೆ. ನನ್ನಲ್ಲಿಗೆ ಬರುವವನನ್ನು ನಾನೆಂದಿಗೂ ತಳ್ಳಿಬಿಡುವುದಿಲ್ಲ.
38 : ನಾನು ಸ್ವರ್ಗದಿಂದ ಇಳಿದು ಬಂದುದು ನನ್ನ ಇಚ್ಛೆಯಂತೆ ನಡೆಯುವುದಕ್ಕಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದಕ್ಕೆ.
39 : ಅವರ ಚಿತ್ತವೇನೆಂದರೆ: ಅವರು ನನಗೆ ಕೊಟ್ಟವರಲ್ಲಿ ಒಬ್ಬನನ್ನೂ ಕಳೆದುಕೊಳ್ಳದೆ ಅಂತಿಮ ದಿನದಂದು ಅವರೆಲ್ಲರನ್ನೂ ನಾನು ಜೀವಕ್ಕೆ ಎಬ್ಬಿಸಬೇಕು.
40 : ಪುತ್ರನನ್ನು ಕಂಡು ಆತನಲ್ಲಿ ವಿಶ್ವಾಸ ಇಡುವ ಪ್ರತಿಯೊಬ್ಬನೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ನನ್ನ ಪಿತನ ಸಂಕಲ್ಪ. ಅಂಥವನನ್ನು ಅಂತಿಮ ದಿನದಂದು ನಾನು ಜೀವಕ್ಕೆ ಎಬ್ಬಿಸುತ್ತೇನೆ,” ಎಂದು ನುಡಿದರು.
----------------

ಯೇಸು ನಾನೇ ಜೀವದಾಯಕ ರೊಟ್ಟಿ ಎಂದು ತನ್ನನ್ನು ತಾನೇ ಏಕೆ ಕರೆದುಕೊಂಡರು? ನಾವು ಆಹಾರವಿಲ್ಲದೆ ಜೀವಿಸಲು ಸಾಧ್ಯವಿಲ್ಲ. ಆಹಾರ ನಮ್ಮೆಲ್ಲರ ಜೀವನಾಧಾರ. ಹಾಗಾದರೆ ಜೀವನವೆಂದರೆ ಏನು? ಈ ಜೀವನ ಕೇವಲ ಭೌತಿಕ ಅಸ್ತಿತ್ವಕ್ಕಷ್ಟೇ ಸೀಮಿತವೇ? ಜೀವನವೆಂಬುದು ನಮ್ಮಈ ಭೌತಿಕ ಅಸ್ತಿತ್ವಕ್ಕಿಂತ ಹೆಚ್ಚಿನದು ಎಂಬ ಸ್ಪಷ್ಟ ನಿಲುವು ಕ್ರಿಸ್ತನದಾಗಿತ್ತು. ಕ್ರಿಸ್ತನು ಉಲ್ಲೇಖಿಸುವ ಜೀವನ ದೇವರ ಮತ್ತು ನಮ್ಮ ನಡುವಿನ ಬಾಂಧವ್ಯವಾಗಿದೆ. ನಿಜದೇವರೊಂದಿಗಿನ ಈ ಬಾಂಧವ್ಯ ಪ್ರೀತಿ, ಐಕ್ಯತೆ, ವಿಧೇಯತೆ, ನಂಬಿಕೆ ಮತ್ತು ಸಂತೋಷದ ಬಾಂಧವ್ಯವಾದಾಗ ಜೀವನ ಸಾರ್ಥಕವಾಗುತ್ತದೆ. ಕ್ರಿಸ್ತನನ್ನು ಹೊರತುಪಡಿಸಿ ಯಾರೂ ನಮ್ಮ-ದೇವರ ನಡುವೆ ಆ ರೀತಿಯ ಬಾಂಧವ್ಯವನ್ನು ಏರ್ಪಡಿಸಲು ಸಾಧ್ಯವಾಗಲಿಲ್ಲ. ಕ್ರಿಸ್ತ ಇಂದು ಮೂರು ಮುಖ್ಯ ವರದಾನಗಳನ್ನು ನಮಗೆ ನೀಡುತ್ತಾರೆ. ಮೊದಲನೆಯದಾಗಿ, ನಮಗೆ ದೈವೀಕ ಜೀವನವನ್ನು ಕೊಡುವ ಆಧ್ಯಾತ್ಮಿಕ ಭೋಜನವನ್ನಾಗಿ ಕ್ರಿಸ್ತ ತನ್ನನ್ನೇ ನಮಗರ್ಪಿಸಿಕೊಳ್ಳುತ್ತಾರೆ. ಎರಡನೆಯದಾಗಿ, ದೇವರೊಂದಿಗಿನ ಅಳಿಯದ ಸಂಬಂಧದ ಭರವಸೆಯನ್ನು ನಮಗೆಲ್ಲರಿಗೂ ನೀಡುತ್ತಾರೆ. ಮೂರನೆಯದಾಗಿ, ತನ್ನ ಪುನರುತ್ಥಾನದಲ್ಲಿ ಪಾಲ್ಗೊಳ್ಳುವ ಭರವಸೆಯನ್ನು ಕ್ರಿಸ್ತ ಪ್ರತಿಯೊಬ್ಬ ಭಕ್ತ-ವಿಶ್ವಾಸಿಗೂ ನೀಡುತ್ತಾರೆ. ಯೇಸು ಪುನರುತ್ಥಾನವಾದುದು ಮತ್ತೆ ಸಾಯುವುದಕ್ಕಲ್ಲ ಬದಲಿಗೆ ನಮಗೆಲ್ಲರಿಗೂ ನಿತ್ಯಜೀವದ ಭರವಸೆಯ ಜೊತೆಗೆ ನಮಗೆಲ್ಲರಿಗೂ ಅದನ್ನು ಧಾರೆಯೆರೆಯಲು.
------------
ಕಷ್ಟ ಸಂಕಟಗಳು ಬಂದ ಮನುಷ್ಯ ಮಾನವನಾಗಿ ಮಾರ್ಪಡುತ್ತಾನೆ. ಬರೀ ಸುಃಖ ಸಂತೋಷ ಒಬ್ಬ ವ್ಯಕ್ತಿಯನ್ನು ಹಾಳು ಮಾಡುವುದೇ ಹೆಚ್ಚು. ಆದಿ ಧರ್ಮಸಭೆ ಬೆಳೆದಿದ್ದು, ಹರಡಿಕೊಂಡಿದ್ದು, ನಾವು ಇಂದು ಕ್ರಿಸ್ತನ ಅನುಯಾಯಿಗಳಾಗಿರುವುದು "ಹಿಂಸೆ-ಕಷ್ಟಗಳಿಂದ" ಎಂದರೆ ತಪ್ಪಾಗಲಾರದು. ರಕ್ತಸಾಕ್ಷಿಯ ರಕ್ತದ ಹನಿಹನಿಯೂ ಧರ್ಮಸಭೆಯು ಹರಡಲು ಬೀಜವಾಯಿತು. ಆ ಬೀಜವು ಇಂದು ಬೆಳೆದು ಫಲ ನೀಡುತ್ತಿದೆ ಹಾಗೂ ನಾವು ಅದರ ನೆರಳಿನಲ್ಲಿ ಇದ್ದೇವೆ ಎಂದರೆ ಅದಕ್ಕೆ ಸಾಕ್ಷಿಗಳ ತ್ಯಾಗ, ಅನುಭವಿಸಿದ ನೋವು ಮತ್ತು ಸಾವು. ನಾವು ಇವುಗಳಿಗೆ ಕುರುಡರೂ, ಕಿವುಡರೂ ಆಗಬಾರದು.
-------------
© 'ದನಿ' ಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment