Saturday, 28 March 2020

ಪಾಸ್ಕ ಕಾಲದ ಮೊದಲ ವಾರ - ಶುಕ್ರವಾರ

ಏಪ್ರಿಲ್ 17, 2020 ಶುಕ್ರವಾರ                                             [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:1-12
ಕೀರ್ತನೆ 118:1-2, 4, 22-27 ಶ್ಲೋಕ.22
ಮನೆ ಕಟ್ಟುವವರು ಮೂಲೆಗೆಸೆದ ಕಲ್ಲು
ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು
ಶುಭಸಂದೇಶ: ಯೊವಾನ್ನ 21.1-14
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:1-12
1 : ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರೂ ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬಂದರು.
2 : ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊಂದುವರು ಎಂದು ಇಬ್ಬರು ಪ್ರೇಷಿತರು ಬೋಧಿಸುತ್ತಿದ್ದರು.
3 : ಇದನ್ನು ಕೇಳಿ ಸಿಟ್ಟುಗೊಂಡಿದ್ದ ಅವರು ಪೇತ್ರ, ಯೊವಾನ್ನರನ್ನು ಬಂಧಿಸಿದರು. ಆಗಲೇ ಹೊತ್ತು ವಿೂರಿದ್ದರಿಂದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು.
4 : ಆದರೆ ಪ್ರೇಷಿತರ ಬೋಧನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಶ್ವಾಸಿಗಳ ಸಂಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು.
5 : ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆ ಸೇರಿದರು.
6 : ಪ್ರಧಾನ ಯಾಜಕ ಅನ್ನಾ ಹಾಗೂ ಕಾಯಫ, ಯೊವಾನ್ನ, ಅಲೆಕ್ಸಾಂಡರ್ ಮತ್ತು ಪ್ರಧಾನ ಯಾಜಕನ ಕುಟುಂಬದವರು ಸಭೆಯಲ್ಲಿ ಹಾಜರಿದ್ದರು.
7 ಪ್ರೇಷಿತರನ್ನು ಸಭೆಯ ಮುಂದೆ ನಿಲ್ಲಿಸಿ, “ಇದೆಲ್ಲವನ್ನು ನೀವು ಯಾರ ಹೆಸರಿನಲ್ಲಿ ಮತ್ತು ಯಾವ ಅಧಿಕಾರದಿಂದ ಮಾಡಿದಿರಿ?” ಎಂದು ಪ್ರಶ್ನಿಸಿದರು.
8 : ಪೇತ್ರನು ಪವಿತ್ರಾತ್ಮಭರಿತನಾಗಿ ಹೀಗೆಂದು ಉತ್ತರಕೊಟ್ಟನು: “ಜನರ ಅಧಿಕಾರಿಗಳೇ, ಪ್ರಮುಖರೇ,
9 : ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ.
10 : ನಿಮಗೂ ಇಸ್ರಯೇಲಿನ ಎಲ್ಲಾ ಜನರಿಗೂ ವಿಷಯ ತಿಳಿದಿರಲಿ: ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿಂದಲೇ ಮನುಷ್ಯನು ಪೂರ್ಣ ಗುಣಹೊಂದಿ ನಿಮ್ಮ ಮುಂದೆ ನಿಂತಿದ್ದಾನೆ.
11 : ನೀವು ಶಿಲುಬೆಗೇರಿಸಿ ಕೊಂದದ್ದು ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ. ‘ಮನೆಕಟ್ಟುವವರಾದ ನೀವು ಬೇಡವೆಂದು ಮೂಲೆಗೆಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತುಎಂದು ಬರೆದಿರುವುದು ಇವರನ್ನು ಕುರಿತೇ.
12 : ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.”
ಕೀರ್ತನೆ 118:1-2, 4, 22-27 ಶ್ಲೋಕ.22
1 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //
2 : ಸಾರಲಿ ಇಸ್ರಯೇಲಿನ ಜನತೆ / ‘ಆತನ ಪ್ರೀತಿ ಶಾಶ್ವತಎಂದೆ //
4 : ಸಾರಲಿ ಆತನ ಭಕ್ತರ ಪಂಥ / ಆತನ ಪ್ರೀತಿ ಶಾಶ್ವತ ಅಂಥ //
22 : ಮನೆಕಟ್ಟುವವರು ಮೂಲೆಗೆಸೆದ ಕಲ್ಲು / ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು //
23 : ಪ್ರಭುವಿನಿಂದಲೆ ಆದ ಕಾರ್ಯ / ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! //
24 : ಪ್ರಭುವೇ ನಿಯೋಜಿಸಿದ ದಿನವಿದು / ಹರ್ಷಿಸಿ ಆನಂದಿಸೋಣ ಇಂದು //
25 : ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು / ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು //
26 : ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ / ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ //
27 : ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು / ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು //

ಶುಭಸಂದೇಶ: ಯೊವಾನ್ನ 21:1-14
1 : ತರುವಾಯ ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು:
2 : ಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು.
3 : ಆಗ ಸಿಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ,” ಎಂದನು. ಮಿಕ್ಕವರು, “ನಾವೂ ನಿನ್ನೊಡನೆ ಬರುತ್ತೇವೆ,” ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ರಾತ್ರಿಯೆಲ್ಲಾ ಅವರಿಗೆ ಒಂದು ವಿೂನೂ ಸಿಗಲಿಲ್ಲ.
4 : ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ.
5 : ಯೇಸು ಅವರಿಗೆ, “ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?” ಎಂದು ಕೇಳಿದರು. “ಏನೂ ಇಲ್ಲ,” ಎಂದರು ಅವರು.
6 : “ದೋಣಿಯ ಬಲಗಡೆಗೆ ಬಲೆ ಬೀಸಿರಿ; ವಿೂನುಗಳು ಸಿಗುತ್ತವೆ,” ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ವಿೂನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆ ಹೋಯಿತು.
7 : ಆಗ ಯೇಸುವಿನ ಆಪ್ತಶಿಷ್ಯನು ಪೇತ್ರನಿಗೆ, “ಅವರೇ ಪ್ರಭುಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನು.
8 : ಮಿಕ್ಕ ಶಿಷ್ಯರು ವಿೂನು ತುಂಬಿದ್ದ ಬಲೆಯನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿದ್ದ ದಡಕ್ಕೆ ದೋಣಿಯಲ್ಲೇ ಬಂದರು.
9 : ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ವಿೂನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು.
10 : ಯೇಸು ಅವರಿಗೆ, “ನೀವು ಈಗ ತಾನೇ ಹಿಡಿದ ವಿೂನುಗಳಲ್ಲಿ ಕೆಲವನ್ನು ತನ್ನಿ,” ಎಂದು ಹೇಳಿದರು.
11 : ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದು ತಂದನು. ಬಲೆಯ ತುಂಬ ದೊಡ್ಡ ವಿೂನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ವಿೂನುಗಳಿದ್ದರೂ ಬಲೆಯು ಹರಿದಿರಲಿಲ್ಲ.
12 : ಯೇಸು ಅವರಿಗೆ, “ಬಂದು ಊಟಮಾಡಿ,” ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, “ನೀವು ಯಾರು?” ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ.
13 : ಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು; ಹಾಗೆಯೇ ವಿೂನನ್ನೂ ಕೊಟ್ಟರು.
14 : ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ
-------------------

ಅಂದು ಸಿಮೋನ ಪೇತ್ರನಿಗೆ, ಹೆದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ (ಲೂಕ ೫:೧-೧೦) ಎಂದು ಆರಿಸಿಕೊಂಡಿದ್ದರು. ತಮ್ಮ ಧರ್ಮಸಭೆಯೆಂಬ ದೋಣಿಯನ್ನು ನಡೆಸುವ ನಾವಿಕನಾಗಲು ಪೇತ್ರನನ್ನು ಕರೆದಿದ್ದರು. ಆದರೆ ಆತನಿಗೆ ಇವೆಲ್ಲವೂ ಮರೆತಂತೆ ಕಾಣುತ್ತಿದೆ. ಮತ್ತೊಮ್ಮೆ ಪೇತ್ರನ ಬದುಕಿನ ನಿಜವಾದ ಉದ್ದೇಶವನ್ನು ನೆನಪಿಸಲು ’ಮೀನುಗಳ ಅದ್ಭುತವನ್ನು’ ಪುನರಾವರ್ತಿಸುತ್ತಾರೆ. ಪೇತ್ರನು ನಾಚಿಕೆಯಿಂದ ಪ್ರಭುವನ್ನು ಎದುರಿಸಲಾಗದೆ ನೀರಿಗೆ ಧುಮುಕಿದನು. ಆದರೆ ಕರುಣಾಮಯಿ ಮತ್ತು ಕೃಪಾಪೂರ್ಣರೂ ಆದ ಪ್ರಭು ಸರೋವರದ ದಡದಲ್ಲೇ ಸಹಭೋಜನವನ್ನೇರ್ಪಡಿಸಿ ಅವರೊಡನೆ ಊಟಮಾಡುತ್ತಾರೆ. ಆ ಕ್ಷಣದಲ್ಲಿ ಅವರ ನೆನಪಿನ ಬುತ್ತಿ ಮಾತ್ರವೇ ಬಿಚ್ಚಿಕೊಳ್ಳುವುದಿಲ್ಲ, ಅವರ ಅಂತರಂಗದ ಭಾವನೆಗಳು ಅರಳಿ ಪ್ರಭುವಿನಲ್ಲಿ ವಿಶ್ವಾಸ ಮೂಡುತ್ತದೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ (ಯೊವಾನ್ನ ೧೫:೧೬) ಎನ್ನುವ ಯೇಸುವಿಗೆ ’ನಾವು ಯಾರು? ಏತಕ್ಕಾಗಿ ಆರಿಸಿಕೊಂಡಿರುವವರು?’ ಎಂಬುದರ ಅರಿವು ಚೆನ್ನಾಗಿದೆ. ನಾವು ನಮ್ಮ ಬದುಕಿನ ಉದ್ದೇಶವನ್ನು ಮರೆತರೂ ಅವರು ಅದನ್ನು ಮರೆಯುವುದಿಲ್ಲ. ಅವರೊಂದಿಗೆ ಒಂದಾಗಿ ದೈವಪ್ರೇರಣೆಗೆ ಒಳಗಾದಾಗ ಮಾತ್ರ ನಮ್ಮ ಜೀವನೋದ್ದೇಶಗಳು ಕಾರ್ಯರೂಪಕ್ಕೆ ಬರುತ್ತವೆ. 
-------------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ



No comments:

Post a Comment