ಏಪ್ರಿಲ್ 18,
2020 ಶನಿವಾರ [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 4:13-21
ಕೀರ್ತನೆ
118: 1, 14-21 ಶ್ಲೋಕ.21
ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಮಾರ್ಕ 16:9-15
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು
4:13-21
13 : ಅವಿದ್ಯಾವಂತರು ಹಾಗೂ ಜನ ಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತುಹಚ್ಚಿದರು.
14 : ಗುಣಹೊಂದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿಂತಿರುವುದನ್ನು ಕಂಡು ನಿರುತ್ತರರಾದರು.
15 : ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ ಚರ್ಚಿಸಲಾರಂಭಿಸಿದರು:
16 : ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಭುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ.
17 : ಆದರೂ, ಈ ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ,” ಎಂದುಕೊಂಡರು.
18 : ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, “ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು,” ಎಂದು ಕಟ್ಟಪ್ಪಣೆ ಮಾಡಿದರು.
19 : ಆಗ ಪೇತ್ರ ಮತ್ತು ಯೊವಾನ್ನರು, “ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ.
20 ನಾವಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿಂದಿರಲಾಗದು,” ಎಂದು ಬದಲು ನುಡಿದರು.
21 : ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು.
ಕೀರ್ತನೆ 118:
1, 14-21 ಶ್ಲೋಕ.21
ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ
1 : ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ / ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //
14 : ಪ್ರಭುವೇ ನನಗೆ ಬಲವು, ಧೈರ್ಯವು / ಆತನಿಂದಲೇ ನನಗೆ ಉದ್ಧಾರವು //
15 : ಜಯಘೋಷ, ಹರ್ಷಸುನಾದ ಸಜ್ಜನರ ಬಿಡಾರದಿಂದ / “ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ //
16 : ವಿಜಯಸಾಧನ ಪ್ರಭುವಿನಾ ಬಲಗೈಯಿಂದ / ಪರಾಕ್ರಮ, ಪ್ರದರ್ಶನವೂ ಅದರಿಂದ” //
17 : ಸಾಯೆನು, ಜೀವದಿಂದಿರುವೆನು ನಾನು / ಪ್ರಭುವಿನ ಕಾರ್ಯಗಳನು ಸಾರುವೆನು //
18 : ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ / ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ //
19 : ತೆರೆಯಿರಿ ಎನಗೆ ನೀತಿದ್ವಾರಗಳನು / ಒಳನುಗ್ಗಿ ಹೊಗಳುವೆನು ಪ್ರಭುವನು //
20 : ಇದುವೇ ದ್ವಾರ ಪ್ರಭುವಿನ ಮಂದಿರಕೆ / ಇದುವೇ ಪ್ರವೇಶಮಾರ್ಗ ಸಜ್ಜನರಿಗೆ //
21 : ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ / ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ //
ಶುಭಸಂದೇಶ: ಮಾರ್ಕ 16:9-15
9 : ಭಾನುವಾರ ಮುಂಜಾನೆ ಪುನರುತ್ಥಾನ ಹೊಂದಿದ ಯೇಸುಸ್ವಾಮಿ, ಮೊತ್ತಮೊದಲು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡರು. ಅವರು ಏಳು ದೆವ್ವಗಳನ್ನು ಹೊರಗಟ್ಟಿದ್ದು ಈಕೆಯಿಂದಲೇ.
10 : ಈಕೆ ಹೋಗಿ ತಾನು ಕಂಡದ್ದನ್ನು ಯೇಸುವಿನ ಸಂಗಡಿಗರಿಗೆ ತಿಳಿಸಿದಳು. ಅವರಾದರೋ ಇನ್ನೂ ಶೋಕಭರಿತರಾಗಿ ಅಳುತ್ತಾ ಕುಳಿತಿದ್ದರು.
11 : ಆದರೆ ಯೇಸು ಜೀವಂತರಾಗಿದ್ದಾರೆ ಮತ್ತು ಆಕೆಗೆ ಕಾಣಿಸಿಕೊಂಡಿದ್ದಾರೆ ಎಂಬ ವಾರ್ತೆಯನ್ನು ಕೇಳಿದಾಗ ಅವರು ಅದನ್ನು ನಂಬಲೇ ಇಲ್ಲ. ಶಿಷ್ಯರಿಬ್ಬರಿಗೆ ದರ್ಶನ (ಲೂಕ 24.13-35)
12 : ತರುವಾಯ, ಹಳ್ಳಿಯೊಂದಕ್ಕೆ ಪ್ರಯಾಣ ಮಾಡುತ್ತಿದ್ದ ತಮ್ಮ ಇಬ್ಬರು ಶಿಷ್ಯರಿಗೆ ಯೇಸುಸ್ವಾಮಿ ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು.
13 : ಇವರಿಬ್ಬರೂ ಹಿಂದಿರುಗಿ ಬಂದು, ಮಿಕ್ಕ ಶಿಷ್ಯರಿಗೆ ಇದನ್ನು ತಿಳಿಸಿದರು. ಆದರೆ ಅದನ್ನು ಅವರು ನಂಬದೆ ಹೋದರು. ಪ್ರೇಷಿತರಿಗೆ ಕೊಟ್ಟ ದರ್ಶನ ಹಾಗೂ ಆದೇಶ (ಮತ್ತಾ. 28.16-20; ಲೂಕ 24.36-49; ಯೊವಾ. 20.19-23; ಪ್ರೇ.ಕಾ. 1.6-8)
14 : ಅನಂತರ, ಹನ್ನೊಂದು ಮಂದಿ ಶಿಷ್ಯರು ಊಟಮಾಡುತ್ತಿದ್ದಾಗ ಯೇಸುಸ್ವಾಮಿ ಪ್ರತ್ಯಕ್ಷರಾದರು. ತಾವು ಪುನರುತ್ಥಾನ ಹೊಂದಿದ ಮೇಲೆ, ತಮ್ಮನ್ನು ಕಂಡವರ ಮಾತನ್ನು ಅವರು ನಂಬದಿದ್ದ ಕಾರಣ ಅವರ ಅವಿಶ್ವಾಸವನ್ನೂ ಹೃದಯ ಕಾಠಿಣ್ಯವನ್ನೂ ಯೇಸು ಖಂಡಿಸಿದರು.
15 : ಬಳಿಕ ಅವರಿಗೆ, ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.
------------------------
------------------------
ಪ್ರಭು ಯೇಸು ಹಿಂದೊಮ್ಮೆ ತಮ್ಮ ಶಿಷ್ಯರನ್ನುದ್ದೇಶಿಸಿ, ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕಾಣಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ (ಲೂಕ ೧೦:೨೪) ಎಂದಿದ್ದರು. ಪ್ರಭು ತಮ್ಮ ಜೀವಿತಾವಧಿಯಲ್ಲಿ ಮಾತ್ರವಲ್ಲ ಮರಣದ ನಂತರ ಜೀವಂತರಾಗಿ ಎದ್ದು ಬಂದ ಮೇಲೂ ಬೇರೆ ಎಲ್ಲರನ್ನೂ ಬಿಟ್ಟು ಪದೇ ಪದೇ ತಮ್ಮ ಪ್ರೇಷಿತರಿಗೆ ಕಾಣಿಸಿಕೊಂಡರು. ಆದರೂ ಅವರ ಮಂದಬುದ್ಧಿಗೆ ಪ್ರಭುವಿನ ಆಶಯ, ಕಾಳಜಿ ಅರ್ಥವಾಗಲೇ ಇಲ್ಲ, ಹೀಗಾಗಿ ಅವರ ಅವಿಶ್ವಾಸವನ್ನು ತೀವ್ರವಾಗಿ ಖಂಡಿಸಿದರು ಮಾತ್ರವಲ್ಲ, ಶುಭಸಂದೇಶವನ್ನು ಪ್ರಬೋಧಿಸಲು ಶೀಘ್ರವೇ ಎದ್ದು ಹೊರಡುವಂತೆ ಆಜ್ಞಾಪಿಸಿದರು. ಆ ಪ್ರೇಷಿತರಂತೆಯೇ ನಾವೂ ಸಹ ಪ್ರಭು ಯೇಸುವಿನ ವಾಕ್ಯಗಳನ್ನು ನಿತ್ಯವೂ ಆಲಿಸಿದರೂ, ಬಲಿಯರ್ಪಣೆಯಲ್ಲಿ ಅವರನ್ನು ಕಂಡು ಆರಾಧಿಸಿದರೂ, ಅವರನ್ನೇ ಪರಮಪ್ರಸಾದದಲ್ಲಿ ಭುಜಿಸಿದರೂ ಮಂದಮತಿಗಳಂತೆ ವರ್ತಿಸುತ್ತೇವೆ. ನಾವು ಪುನರುತ್ಥಾನದ ಅನುಭವದಿಂದ ತುಂಬಿದವರಾಗಿ ಅಂಜಿಕೆ, ಅವಿಶ್ವಾಸವನ್ನು ತೊರೆದು ನಮ್ಮ ಸಂಕುಚಿತ ಮನಸ್ಸಿನ ಕೋಣೆಗಳಿಂದ ಶೀಘ್ರವೇ ಹೊರಬರೋಣ.
-----------------

No comments:
Post a Comment