Saturday, 28 March 2020

ಪಾಸ್ಕ ಕಾಲದ ಮೊದಲ ವಾರ - ಬುಧವಾರ

 ಏಪ್ರಿಲ್ 15, 2020 ಬುಧವಾರ                                            [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 3:1-10
ಕೀರ್ತನೆ 105:1-5, 7-9 ಶ್ಲೋಕ.3
ಹೆಮ್ಮೆಪಡಿ, ನೆನೆದಾತನ ಶ್ರೀ ನಾಮ,
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಲೂಕ 24:13-35

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 3:1-10
1 : ಒಂದು ದಿನ ಮಧ್ಯಾಹ್ನ ಮೂರು ಗಂಟೆಯ ಸಮಯ. ಅದು ಪ್ರಾರ್ಥನಾವೇಳೆ, ಪೇತ್ರ ಮತ್ತು ಯೊವಾನ್ನ ಮಹಾದೇವಾಲಯಕ್ಕೆ ಹೋದರು.
2 : ‘ಸುಂದರ ದ್ವಾರಎಂದು ಕರೆಯಲಾದ ಬಾಗಿಲ ಬಳಿ ಹುಟ್ಟುಕುಂಟನೊಬ್ಬ ಇದ್ದನು. ಅವನನ್ನು ಪ್ರತಿದಿನ ಹೊತ್ತುತಂದು ದ್ವಾರದ ಬಳಿ ಬಿಡಲಾಗುತ್ತಿತ್ತು. ಅವನು ದೇವಾಲಯಕ್ಕೆ ಬರುತ್ತಿದ್ದ ಜನರಿಂದ ಭಿಕ್ಷೆ ಬೇಡುತ್ತಿದ್ದನು.
3 : ಪೇತ್ರ ಮತ್ತು ಯೊವಾನ್ನ ದೇವಾಲಯದೊಳಗೆ ಹೋಗುತ್ತಿರುವುದನ್ನು ಅವನು ಕಂಡನು. ತನಗೆ ಏನಾದರೂ ಭಿಕ್ಷೆ ಕೊಡಬೇಕೆಂದು ಬೇಡಿದನು.
4 : ಅವರು ಕುಂಟನನ್ನು ತದೇಕ ದೃಷ್ಟಿಯಿಂದ ಈಕ್ಷಿಸಿದರು. ಪೇತ್ರನು, “ಎಲ್ಲಿ, ನಮ್ಮನ್ನು ನೋಡು,” ಎಂದನು.
5 : ಕುಂಟನು ಅವರಿಂದ ಭಿಕ್ಷೆಯನ್ನು ಅಪೇಕ್ಷಿಸುತ್ತಾ ಅವರನ್ನೇ ನೋಡಿದನು.

ಕೀರ್ತನೆ 105:1-4, 6-9 ಶ್ಲೋಕ.3
ಹೆಮ್ಮೆಪಡಿ, ನೆನೆದಾತನ ಶ್ರೀ ನಾಮ,
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ

1 : ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು / ಮಾಡಿರಿ ಆತನ ನಾಮಸ್ಮರಣೆಯನು / ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
2 : ಹಾಡಿ ಪಾಡಿ ಹೊಗಳಿರಿ ಪ್ರಭುವನು / ಧ್ಯಾನಿಸಿ ನೀವು ಆತನ ಪವಾಡಗಳನು //
3 : ಹೆಮ್ಮೆಪಡಿ, ನೆನೆದಾತನ ಶ್ರೀನಾಮ / ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ //
4 : ಅರಸಿರಿ ಪ್ರಭುವನೂ ಆತನ ಶಕ್ತಿಯನೂ / ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು //
6 : ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು / ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು //
7 : ಪ್ರಭು ನಮ್ಮ ದೇವನೆಂಬುದು ಶ್ರುತ / ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ //
8 : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು / ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು //
9 : ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು / ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು //

ಶುಭಸಂದೇಶ: ಲೂಕ 24:13-35
13 : ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು.
14 : ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು.
15 : ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು.
16 : ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು.
17 : “ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು.
18 : ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು.
19 : “ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು.
20 : ನಮ್ಮ ಮುಖ್ಯ ಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು.
21 : ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳು ಆಗಿವೆ.
22 : ಆದರೂ ನಮ್ಮಲ್ಲಿ ಕೆಲವು ಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು.
23 : ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು.
24 : ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು.
25 : ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು!
26 : ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?” ಎಂದರು.
27 : ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರ ಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು.
28 : ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು.
29 : ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು.
30 : ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು.
31 : ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತುಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು.
32 : ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರ ಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೇ?” ಎಂದುಕೊಂಡರು.
33 : ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು.
34 : “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು.
35 : ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು.
--------------------
ಎಮ್ಮಾವು ಗ್ರಾಮದ ಹಾದಿಯಲ್ಲಿ ಸಾಗುತ್ತಿದ್ದ ಇಬ್ಬರು ಶಿಷ್ಯರಿಗೆ ಬಹಳ ಬೇಗನೆ ಯೇಸು ಮೆರೆತುಹೋದ ವ್ಯಕ್ತಿಯಾಗಿಬಿಟ್ಟರು. ಆದರೆ ಅವರ ಮಾತು, ಕಾರ್ಯ, ಭರವಸೆಗಳೆಲ್ಲವು ನೆನಪಿನ ಪುಟದಿಂದ ಅಳಿಸಿಹೋಗುವ ಮುನ್ನವೇ ಯೇಸು ಅವರ ಜೊತೆಯಾಗುವುದೇ ಒಂದು ಅಪೂರ್ವ ಸನ್ನಿವೇಶ. ಆ ಇಬ್ಬರು ಶಿಷ್ಯರು ಜೆರುಸಲೇಮಿಗೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದರು, ಅಂದರೆ ಕ್ರಿಸ್ತನ ಘೋರಮರಣದ ದೃಶ್ಯವನ್ನು ಕಂಡು ಭಯದಿಂದ ಪಲಾಯನ ಮಾಡುತ್ತಿದ್ದರು. ಅವರ ಜೊತೆ ಒಬ್ಬ ಅಪರಿಚಿತ ವ್ಯಕ್ತಿಯಂತೆ ಹೆಜ್ಜೆ ಹಾಕಿದ ಕ್ರಿಸ್ತ ತಮ್ಮ ದೈವೀ ನುಡಿಗಳಿಂದ ಅವರ ಮನದ ದುಗುಡವನ್ನು ದೂರಮಾಡುತ್ತಾರೆ, ಸಂಶಯವನ್ನು ಅಳಿಸಿಹಾಕುತ್ತಾರೆ, ಮಾತ್ರವಲ್ಲ ರೊಟ್ಟಿಯ ಮುರಿಯುವಿಕೆಯಲ್ಲಿ ಅವರ ವಿಶ್ವಾಸದ ಕಣ್ಣುಗಳನ್ನು ತೆರೆಯುತ್ತಾರೆ. ನಾವು ಕ್ರಿಸ್ತನಿಂದ ದೂರ ಹೋದಷ್ಟು ಕತ್ತಲೆ ನಮ್ಮ ಹೃದಯಗಳನ್ನು ಆವರಿಸುತ್ತದೆ, ಕ್ರಿಸ್ತಾನುಭವವಿಲ್ಲದೆ ಬಾಳುವ ಎಲ್ಲ ಸಮಯದಲ್ಲೂ ಭಯ, ಗೊಂದಲ ನಮ್ಮನ್ನು ಕಾಡುತ್ತದೆ, ನಡೆದಷ್ಟೂ ನಮ್ಮ ದಾರಿ ದೂರವೆಂಬತೆ ಅನಿಸುತ್ತದೆ. ಅದೇ ನಾವು ಕ್ರಿಸ್ತನೊಂದಿಗೆ ನಡೆಯುವಾಗ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ದೃಢ ಹೆಜ್ಜೆಗಳನ್ನು ಹಾಕಬಹುದು. ಬಲಿಪೂಜೆಯಲ್ಲಿ ರೊಟ್ಟಿಮುರಿಯುವಿಕೆಯಲ್ಲಿ ನಮ್ಮ ಮುಂದೆ ಪ್ರಸನ್ನರಾಗುವ ಕ್ರಿಸ್ತ ನಮ್ಮ ಆಪ್ತಸ್ನೇಹಿತನಂತೆ ಜೊತೆಯಾಗಿ ನಮ್ಮೆಲ್ಲ ಬದುಕಿನ ಸನ್ನಿವೇಶಗಳಲ್ಲಿ ಆಸರೆಯಾಗಿರುವರು. 
-----------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ





No comments:

Post a Comment