Saturday, 28 March 2020

ಪಾಸ್ಕ ಕಾಲದ ಮೊದಲ ವಾರ - ಮಂಗಳವಾರ

ಏಪ್ರಿಲ್ 14, 2020 ಮಂಗಳವಾರ                                       [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:36-41
ಕೀರ್ತನೆ 33:4-5, 18-20, 22 ಶ್ಲೋಕ.5
ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 20.11-18

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:36-41
36 : “ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ.”
37 : ಇದನ್ನು ಕೇಳಿದ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, “ಸಹೋದರರೇ, ಈಗ ನಾವು ಮಾಡಬೇಕಾದುದು ಏನು?” ಎಂದು ಕೇಳಿದರು.
38 : ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ.
39 : ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು.
40 : ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. ‘ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ,’ ಎಂದು ಎಚ್ಚರಿಸಿದನು.
41 : ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು.

ಕೀರ್ತನೆ 33:4-5, 18-19, 20, 22 ಶ್ಲೋಕ.5
ಅಚಲ ಪ್ರೀತಿಯಿಂದ ಪ್ರಭು ಜಗವನು ತುಂಬಿಹನು
4 : ಸತ್ಯವಾದುದು ಆತನ ಪವಿತ್ರ ವಾಕ್ಯ / ಸ್ತುತ್ಯವಾದುದು ಆತನ ಪುನೀತ ಕಾರ್ಯ //
5 : ಸತ್ಯಸಂಧನು, ನ್ಯಾಯಪ್ರಿಯನು ಆತನು | ಅಚಲ ಪ್ರೀತಿಯಿಂದ ಜಗವನು ತುಂಬಿಹನು ||
18 : ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು / ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು //
19 : ತಪ್ಪಿಸುವನವನು ಪ್ರಾಣವನು ಮರಣದಿಂದ / ಉಳಿಸುವನು ಜೀವವನು ಕ್ಷಾಮಡಾಮರದಿಂದ //
20 : ಕಾದಿದೆ ಎನ್ನ ಮನ ಪ್ರಭುವಿಗಾಗಿ / ಆತನಿಹನು ಎನಗೆ ಗುರಾಣಿಯಾಗಿ //
22 : ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ / ಕಾದಿಹೆವು ಇದೋ ನಿನ್ನ ನಂಬಿ ಭರವಸದಿ //
    
ಶುಭಸಂದೇಶ: ಯೊವಾನ್ನ 20:11-18
11 : ಮರಿಯಳು ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು.
12 : ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥಿವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು ಅವರ ತಲೆಯಿದ್ದ ಕಡೆಯಲ್ಲೂ ಮತ್ತೊಬ್ಬನು ಕಾಲಿದ್ದ ಕಡೆಯಲ್ಲೂ ಕುಳಿತಿದ್ದರು.
13 : ಅವರು ಆಕೆಯನ್ನು, “ಏಕಮ್ಮಾ ಅಳುತ್ತಿರುವೆ?” ಎಂದು ಕೇಳಿದರು. “ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ. ಎಲ್ಲಿ ಇಟ್ಟಿದ್ದಾರೋ ತಿಳಿಯದು,” ಎಂದಳು.
14 : ಹಾಗೆ ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಯೇಸುವೇ ಅವರೆಂದು ಆಕೆಗೆ ತಿಳಿಯಲಿಲ್ಲ.
15 : ಯೇಸು, “ಏಕಮ್ಮಾ ಅಳುತ್ತಿರುವೇ? ಏನನ್ನು ಹುಡುಕುತ್ತಿರುವೇ?” ಎಂದು ಕೇಳಿದಾಗಲೂ ಮರಿಯಳು ಅವರು ತೋಟಗಾರನೆಂದು ಭಾವಿಸಿ, “ಅಯ್ಯಾ, ನೀವೇನಾದರೂ ಅವರನ್ನು ಕೊಂಡೊಯ್ದಿದ್ದರೆ ಎಲ್ಲಿ ಇಟ್ಟಿರುವಿರಿ, ಹೇಳಿ; ನಾನು ತೆಗೆದುಕೊಂಡು ಹೋಗುತ್ತೇನೆ,” ಎಂದು ಹೇಳಿದಳು.
16 : ಆಗ ಯೇಸು, “ಮರಿಯಾಎಂದು ಹೆಸರಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ, “ರಬ್ಬೂನಿಎಂದಳು. (ಯೆಹೂದ್ಯರ ಭಾಷೆಯಲ್ಲಿ ಹಾಗೆಂದರೆಗುರುದೇವಾಎಂದರ್ಥ).
17 : ಯೇಸು ಆಕೆಗೆ, “ನನ್ನನ್ನು ಹಿಡಿದುಕೊಂಡಿರಬೇಡ, ನಾನು ಇನ್ನೂ ಪಿತನ ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ನನ್ನ ಪಿತನೂ ನಿಮ್ಮ ಪಿತನೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು,” ಎಂದು ಹೇಳಿದರು.
18 : ಮಗ್ದಲದ ಮರಿಯಳು ಶಿಷ್ಯರ ಬಳಿಗೆ ಬಂದು, “ನಾನು ಪ್ರಭುವನ್ನು ಕಂಡೆ. ಅವರು ಹೀಗೆಲ್ಲಾ ಹೇಳಿದರು,” ಎಂದು ತಿಳಿಸಿದಳು.
--------------


ಪುನರುತ್ಥಾನಿ ಕ್ರಿಸ್ತರ ಬೆಳಕು ಸಮಾಧಿಯಿಂದ ಪ್ರಖರವಾಗಿ ಹೊಮ್ಮಿಬಂದರೂ ಅವರ ಶಿಷ್ಯರ ಹೃದಯಗಳನ್ನು ತುಂಬಿ ಬೆಳಗಿಸಲು ಸ್ವಲ್ಪ ಕಾಲಾವಕಾಶ ಬೇಕಾಯಿತು ಎನಿಸುತ್ತದೆ. ಒಂದು ಪುಟ್ಟ ಹಣತೆಯ ಬೆಳಕು ನಿಧಾನವಾಗಿ ಹೊತ್ತಿಕೊಂಡು ಕ್ರಮೇಣವಾಗಿ ಕತ್ತಲನ್ನು ಹೊರದೂಡುವಂತೆ ಒಬ್ಬೊಬ್ಬರ ಹೃದಯಗಳಲ್ಲೂ ಪ್ರಭುವಿನ ಪುನರುತ್ಥಾನದ ಘಟನೆ ಒಂದು ಅಂತರಂಗದ ಅನುಭವವಾಗಿ ಪರಿವರ್ತಿತವಾಗಿ ಅವರ ಹೃದಯಗಳನ್ನು ಆವರಿಸಿಕೊಂಡಿತು. ಸಮಾಧಿಯಲ್ಲಿ ತನ್ನ ಪ್ರಭುವಿನ ಮೃತದೇಹವನ್ನು ಹುಡುಕುತ್ತಿದ್ದ ಮರಿಯಳಿಗೆ ಕ್ರಿಸ್ತಯೇಸು ಜೀವಂತ ವ್ಯಕ್ತಿಯಾಗಿ ಎದುರು ನಿಂತು ’ಮರಿಯಾ’ ಎಂದು ಹೆಸರಿಡಿದು ಕರೆದಾಗ, ಪ್ರಭುವಿನ ಪುನರುತ್ಥಾನದ ಘಟನೆ ಮರಿಯಳಲ್ಲಿ ಹೃದಯದ ಅನುಭವವಾಗಿ ಮಾರ್ಪಟ್ಟಿತು. ಇದಕ್ಕೆ ಪ್ರತಿಯಾಗಿ ಮರಿಯ ’ರಬ್ಬೂನಿ ಅಥವಾ ಗುರುದೇವಾ’ ಎನ್ನುತ್ತಾ ಅವರನ್ನು ತನ್ನ ಗುರುವಾಗಿ ಸ್ವೀಕರಿಸುತ್ತಾಳೆ. ಅಂತೆಯೇ ನಮಗೂ ಸಹ ಕ್ರಿಸ್ತಯೇಸು ಇತಿಹಾಸದ ಒಬ್ಬ ವ್ಯಕ್ತಿ ಮಾತ್ರವೇ ಆಗಿ ಉಳಿಯದೆ ನಮ್ಮ ಬದುಕನ್ನು ನಿರ್ದೇಶಿಸುವ ಪ್ರಭಾವಿ ಶಕ್ತಿಯಾಗಬೇಕು, ಹೃದಯಗಳನ್ನು ತುಂಬುವ ಅನುಭವವಾಗಬೇಕು. ಪ್ರಭುವಿನ ಪುನರುತ್ಥಾನ ಒಂದು ಇತಿಹಾಸದಲ್ಲಿ ನಡೆದು ಹೋದ ಘಟನೆಯಾಗಿ ಅಥವಾ ಕಥೆಯಾಗಿ ಮಾತ್ರವೇ ಉಳಿಯದೆ ನಮ್ಮ ಹೃದಯಗಳನ್ನು ಬೆಳಗುವ ಅಪೂರ್ವ ಅನುಭವವಾಗಲಿ
----------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment