ಏಪ್ರಿಲ್ 23,
2020 ಗುರುವಾರ [ಬಿಳಿ]
ಸಂತ ಜಾರ್ಜ್ [ರಕ್ತಸಾಕ್ಷಿ] (ಐಚ್ಛಿಕ ಸ್ಮರಣೆ)
ಸಂತ ಅಡಾಲ್ಬರ್ಟ್ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:27-33
ಕೀರ್ತನೆ 34:1, 8, 15, 17, 18-19. ಶ್ಲೋಕ.6
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 3.31-36
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು
5:27-33
27 : ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ,
28 : “ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ,” ಎಂದು ಆಪಾದಿಸಿದನು.
29 : ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, “ನಾವು ವಿಧೇಯರಾಗಬೇಕಾದದ್ದು ದೇವರಿಗೆ, ಮಾನವರಿಗಲ್ಲ.
30 : ನೀವು ಶಿಲುಬೆಗೇರಿಸಿ ಕೊಂದು ಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆ ಎಬ್ಬಿಸಿದ್ದಾರೆ.
31 : ದೇವರು ಅವರನ್ನು ತಮ್ಮ ಬಲಪಾಶ್ರ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ.
32 : ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ,” ಎಂದನು.
33 : ಇದನ್ನು ಕೇಳಿದ ಸಭಾಸದಸ್ಯರು ಕ್ರೋಧಭರಿತರಾಗಿ ಪ್ರೇಷಿತರನ್ನು ಕೊಲ್ಲಬೇಕೆಂದಿದ್ದರು.
ಕೀರ್ತನೆ -34:
2,9, 17, 18-19. ಶ್ಲೋಕ.6
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
2 : ಪ್ರಭುವಿನಲ್ಲಿದೆ ನನ್ನ ಮನದಭಿಮಾನ / ದೀನರಿದನು ಕೇಳಿ, ಪಡೆಯಲಿ ಸುಮ್ಮಾನ //
9 : ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ / ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ //
17 : ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ / ನೆರವೀವನವರ ಕಷ್ಟನಿವಾರಣೆಗೆ //
18 : ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ / ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ //
19 : ಸಜ್ಜನನಿಗೊದಗುವ ಸಂಕಟಗಳು ವಿಪರೀತ / ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //
20 : ಕಾಪಾಡುವನು ಅವನೆಲಬುಗಳೆಲ್ಲವನ್ನೂ / ಮುರಿಯಬಿಡನು ಪ್ರಭು ಅವುಗಳ ಲ್ಲೊಂದನ್ನೂ //
ಶುಭಸಂದೇಶ: ಯೊವಾನ್ನ 3:31-36
31 : “ಮೇಲಿಂದ ಬಂದವನೇ ಎಲ್ಲರಿಗಿಂತ ಮೇಲಾದವನು. ಇಹಲೋಕದಿಂದ ಬಂದವನು ಆದರೋ ಈ ಲೋಕಕ್ಕೆ ಸೇರಿದವನು; ಅವನು ಲೌಕಿಕವಾದುದನ್ನೇ ಹೇಳುವವನು. ಸ್ವರ್ಗದಿಂದ ಬಂದವನಾದರೋ ಸರ್ವರಿಗೂ ಶ್ರೇಷ್ಠನು.
32 : ಆತನು ತಾನು ಕಂಡದ್ದನ್ನೂ ಕೇಳಿದ್ದನ್ನೂ ಕುರಿತೇ ಸಾಕ್ಷಿಹೇಳುತ್ತಾನೆ. ಆದರೂ ಆತನ ಮಾತನ್ನು ಯಾರೂ ಅಂಗೀಕರಿಸುವುದಿಲ್ಲ.
33 : ಆತನ ಮಾತನ್ನು ಅಂಗೀಕರಿಸುವವನು ದೇವರು ಸತ್ಯಸ್ವರೂಪಿ ಎಂದು ಸಾದೃಶ್ಯಪಡಿಸುತ್ತಾನೆ.
34 : ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ. ಏಕೆಂದರೆ ದೇವರು ಆತನಿಗೆ ಪವಿತ್ರಾತ್ಮ ಅವರನ್ನು ಪೂರ್ಣವಾಗಿ ಕೊಟ್ಟಿರುತ್ತಾರೆ.
35 : ಪಿತ ಪುತ್ರನನ್ನು ಪ್ರೀತಿಸಿ ಸರ್ವಸ್ವವನ್ನೂ ಆತನ ಕೈಗೆ ಕೊಟ್ಟಿದ್ದಾರೆ.
36 : ಪುತ್ರನಲ್ಲಿ ವಿಶ್ವಾಸವಿಟ್ಟವನು ನಿತ್ಯಜೀವವನ್ನು ಪಡೆದಿರುತ್ತಾನೆ; ಪುತ್ರನಿಗೆ ಶರಣಾಗದವನು ನಿತ್ಯಜೀವವನ್ನು ಸವಿಯನು. ಅವನು ದೇವರ ಕೋಪಾಗ್ನಿಗೆ ಗುರಿಯಾಗುತ್ತಾನೆ,” ಎಂದು ಉತ್ತರಕೊಟ್ಟನು.
-----------------
-----------------
ಸತ್ಯವನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಪ್ರೇಷಿತರು ಪುನರುತ್ಥಾನಿ ಕ್ರಿಸ್ತನ ಕುರಿತು ಬೋಧಿಸಬಾರದೆಂದು ಪ್ರಧಾನ ಯಾಜಕನೂ, ಸದ್ದುಕಾಯರೂ ಅವರನ್ನು ಸೆರಮನೆಯಲ್ಲಿ ಕೂಡಿಹಾಕಿದರು. ಆದರೆ ಸೆರೆಮನೆ ಅವರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರೇಷಿತರು ಲೌಕಿಕ ಅಧಿಪತಿಗಳ ಕಟ್ಟಪಾಡಿಗೆ ಅಳುಕದೆ ಸತ್ಯವನ್ನು ಬಿತ್ತರಿಸಲು ಉತ್ಸುಕರಾಗಿದ್ದರು. ಏಕೆಂದರೆ ಅದು ನಿತ್ಯಜೀವವನ್ನು ತರುವ ಸಂದೇಶವಾಗಿತ್ತು.
ನಿತ್ಯಜೀವ ದೇವರ ವರದಾನ. ಅದು ನಮಗೆ ದೇವರು ನೀಡುವ ಉಚಿತ ಕೊಡುಗೆ. ಆದರೆ ಇದು ನಮಗೆ ದೊರಕಬೇಕಾದರೆ ರಕ್ಷಕ ಪ್ರಭು ಯೇಸುವಿಗೆ ಶರಣಾಗಬೇಕು. ಆಗ ಮಾತ್ರ ಅದನ್ನು ಸವಿಯಲು ಸಾಧ್ಯ. ಲೌಕಿಕ ಆಸೆ ಆಕಾಂಕ್ಷೆಗಳಿಗೆ ಮರುಳಾಗಿ ಸ್ವರ್ಗದಿಂದ ಇಳಿದುಬಂದು ನಮಗಾಗಿ ಶಿಲುಬೆಗೇರಿದ ರಕ್ಷಕನನ್ನು ಮರೆತರೆ ನಿತ್ಯಜೀವವನ್ನು ಕಳೆದುಕೊಂಡು ದೇವರ ಕೋಪಾಗ್ನಿಗೆ ಗುರಿಯಾಗಬೇಕಾಗುತ್ತದೆ.
---------------
ಪ್ರೇ. ಕಾ. ಕಲಾಪದ ಇಂದಿನ ಭಾಗದಲ್ಲಿ ಪ್ರೇಷಿತರನ್ನು ಮತ್ತೊಮ್ಮೆ ಬಂಧಿಸುತ್ತಾರೆ. 4:3ರಲ್ಲಿ ಪೇತ್ರ ಮತ್ತು ಯೋವಾನ್ನರನ್ನು ಮಹಾದೇವಾಲಯದ ಬಳಿ ಬಂಧಿಸಿದ್ದರು. ಮಹಾಯಾಜಕರೂ, ಯೆಹೂದ್ಯ ಅಧಿಕಾರಿಗಳು ನ್ಯಾಯಸಭೆ ನಡೆಸಿ ಪ್ರಶ್ನಿಸಿದರು. ಪೇತ್ರನಾದರೋ ``ನೀವೇ ಯೇಸುವನ್ನು ಶಿಲುಬೆಗೇರಿಸಿಕೊಂಡಿದ್ದು,’’ ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ (ವಾಕ್ಯ 11) ಎಂದು ಧೈರ್ಯವಾಗಿ ಸಾರಿದನು.
ಈಗ ಮತ್ತೊಮ್ಮೆ ಬಂಧನ, ಕಟ್ಟೆಚ್ಚರಿಕೆ ಹಾಗೂ ಚಾವಟಿಗಳಿಂದ ಹೊಡೆತ. ಪ್ರೇಷಿತರು ತಮ್ಮ ದೈವ ಸಾಮ್ರಾಜ್ಯದ ಕಾರ್ಯವನ್ನು ಇವುಗಳ ನಡುವೆಯೂ ಸಂತೋಷದಿಂದ ಮುಂದುವರಿಸುತ್ತಾರೆ. ಎದೆಗುಂದಬಾರದು ನಾವು, ದೀಪವಿರುವಲ್ಲಿ ಗಾಳಿಯೂ ಉಂಟು. ಕುಂದುಹೋಗದೆ ಉರಿಯುತ್ತಾ ಬೆಳಕು ನೀಡುವವರಾಗಬೇಕಿದೆ.
---------------

No comments:
Post a Comment