Saturday, 28 March 2020

ಪಾಸ್ಕಕಾಲದ ಮೂರನೆಯ ವಾರ - ಗುರುವಾರ

ಏಪ್ರಿಲ್ 30, 2020 ಗುರುವಾರ                                            [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:26-40
ಕೀರ್ತನೆ 66:8-9, 16-17, 20 ಶ್ಲೋಕ.1
ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 6:44-51

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:26-40
26 : ಅನಂತರ ದೇವದೂತನು ಫಿಲಿಪ್ಪನಿಗೆ, “ನೀನು ಎದ್ದು ದಕ್ಷಿಣಾಭಿಮುಖವಾಗಿ ಹೋಗು. ಅದು ಜೆರುಸಲೇಮಿನಿಂದ ಗಾಜಕ್ಕೆ ಹೋಗುವ ಅರಣ್ಯಮಾರ್ಗ,” ಎಂದನು.
27 : ಅಂತೆಯೇ ಫಿಲಿಪ್ಪನು ಹೊರಟನು. ಆಗ ಇಥಿಯೋಪಿಯದ ಕಂಚುಕಿಯೊಬ್ಬನು ಅದೇ ಮಾರ್ಗವಾಗಿ ಬರುತ್ತಿದ್ದನು. ಅವನು ದೇಶದ ರಾಣಿ ಕಂದಾಕಿಯ ಕೋಶಾಧಿಕಾರಿ ಹಾಗೂ ಸಚಿವ.
28 : ದೇವಾರಾಧನೆಗೆಂದು ಜೆರುಸಲೇಮಿಗೆ ಹೋಗಿ ಹಿಂದಿರುಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತು ಯೆಶಾಯನ ಪ್ರವಾದನೆಯನ್ನು ಓದುತ್ತಿದ್ದನು.
29 : ಪವಿತ್ರಾತ್ಮರು ಫಿಲಿಪ್ಪನಿಗೆ, “ನೀನು ಮುಂದೆ ಹೋಗಿ ರಥದ ಜೊತೆಯಲ್ಲೇ ನಡೆ,” ಎಂದು ತಿಳಿಸಿದರು.
30 : ಫಿಲಿಪ್ಪನು ಮುಂದಕ್ಕೆ ಧಾವಿಸಿ, ಅವನು ಯೆಶಾಯನ ಪ್ರವಾದನೆಯನ್ನು ಓದುತ್ತಿರುವುದನ್ನು ಕೇಳಿಸಿಕೊಂಡನು. “ನೀವು ಓದುತ್ತಿರುವುದು ಅರ್ಥವಾಗುತ್ತಿದೆಯೇ?” ಎಂದು ಪ್ರಶ್ನಿಸಿದನು.
31 ಅಧಿಕಾರಿ ಪ್ರತ್ಯುತ್ತರವಾಗಿ, “ಯಾರಾದರೂ ವಿವರಿಸಿದ ಹೊರತು ಇದು ನನಗೆ ಅರ್ಥವಾಗುವುದಾದರೂ ಹೇಗೆ?” ಎಂದನು. ರಥವನ್ನು ಹತ್ತಿ ಕುಳಿತುಕೊಳ್ಳುವಂತೆ ಫಿಲಿಪ್ಪನನ್ನು ಆಹ್ವಾನಿಸಿದನು.
32 : ಅವನು ಓದುತ್ತಿದ್ದ ಪ್ರವಾದನೆ ಇದು: “ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ ಆತನು ಬಾಯ್ದೆರೆಯಲಿಲ್ಲ.
33 : ಆತನನ್ನು ಅವಮಾನಪಡಿಸಲಾಯಿತು, ನ್ಯಾಯವನ್ನೇ ಆತನಿಗೆ ನಿರಾಕರಿಸಲಾಯಿತು, ಆತನ ಸಂತತಿಯ ಮಾತೇಎತ್ತದಂತಾಯಿತು. ಇದಕಾರಣ ಆತನ ಭೌತಿಕ ಜೀವವನ್ನೇ ಮೊಟಕುಗೊಳಿಸಲಾಯಿತು.”
34 : ಅಧಿಕಾರಿ ಫಿಲಿಪ್ಪನಿಗೆ, “ಇಲ್ಲಿ ಪ್ರವಾದಿ ಯಾರನ್ನು ಕುರಿತು ಮಾತುಗಳನ್ನು ಹೇಳಿದ್ದಾನೆ. ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ, ಹೇಳಬಲ್ಲೆಯಾ?” ಎಂದು ಕೇಳಿದನು.
35 : ಆಗ ಫಿಲಿಪ್ಪನು ಮರುತ್ತರವಾಗಿ, ಪ್ರವಾದನೆಯನ್ನೇ ಆಧಾರವಾಗಿ ತೆಗೆದುಕೊಂಡು, ಯೇಸುವಿನ ಶುಭಸಂದೇಶವನ್ನು ಅವನಿಗೆ ಬೋಧಿಸಿದನು.
36 : ಅವರು ಪ್ರಯಾಣ ಮಾಡುತ್ತಾ ದಾರಿಯಲ್ಲಿ ನೀರಿದ್ದ ಒಂದು ಸ್ಥಳಕ್ಕೆ ಬಂದರು. ಅದನ್ನು ಕಂಡ ಅಧಿಕಾರಿ, “ಇಲ್ಲಿ ನೀರಿದೆ. ನಾನು ದೀಕ್ಷಾಸ್ನಾನವನ್ನು ಪಡೆಯಲು ಏನಾದರೂ ಅಭ್ಯಂತರವಿದೆಯೇಎಂದನು.
37 : (ಫಿಲಿಪ್ಪನು, “ನೀವು ಹೃದಯಪೂರ್ವಕವಾಗಿ ವಿಶ್ವಾಸಿಸುವುದಾದರೆ ದೀಕ್ಷಾಸ್ನಾನವನ್ನು ಪಡೆಯಬಹುದು,” ಎಂದನು. “ಯೇಸುಕ್ರಿಸ್ತ ದೇವರ ಪುತ್ರ ಎಂದು ನಾನು ವಿಶ್ವಾಸಿಸುತ್ತೇನೆ,” ಎಂದು ಅಧಿಕಾರಿ ಪ್ರತ್ಯುತ್ತರವಿತ್ತನು).
38 : ಅಧಿಕಾರಿಯ ಆಜ್ಞೆಯಂತೆ ರಥವನ್ನು ಅಲ್ಲಿಯೇ ನಿಲ್ಲಿಸಲಾಯಿತು. ಅವರಿಬ್ಬರೂ ನೀರಿಗೆ ಇಳಿದರು. ಫಿಲಿಪ್ಪನು ಅಧಿಕಾರಿಗೆ ದೀಕ್ಷಾಸ್ನಾನವನ್ನು ಕೊಟ್ಟನು.
39 : ಅವರಿಬ್ಬರು ನೀರಿನಿಂದ ಮೇಲಕ್ಕೆ ಬಂದೊಡನೆ ಪ್ರಭುವಿನ ಆತ್ಮವು ಫಿಲಿಪ್ಪನನ್ನು ಅಲ್ಲಿಂದ ಕೊಂಡೊಯ್ಯಿತು. ಅಧಿಕಾರಿ ಫಿಲಿಪ್ಪನನ್ನು ಪುನಃ ಕಾಣಲಿಲ್ಲ; ಅವನು ಸಂತೋಷಭರಿತನಾಗಿ ಪ್ರಯಾಣವನ್ನು ಮುಂದುವರಿಸಿದನು.
40 : ಫಿಲಿಪ್ಪನಾದರೋ ಆಜೋತ್ ಎಂಬಲ್ಲಿ ಕಾಣಿಸಿಕೊಂಡನು. ಅಲ್ಲಿಂದ ಸೆಜರೇಯವನ್ನು ತಲುಪುವವರೆಗೆ ಎಲ್ಲಾ ಊರುಗಳಲ್ಲೂ ಶುಭಸಂದೇಶವನ್ನು ಸಾರುತ್ತಾ ಹೋದನು.

ಕೀರ್ತನೆ 66:8-9, 16-17, 20 ಶ್ಲೋಕ.1
8 : ಜನಾಂಗಗಳೇ, ನಮಿಸಿರಿ ನಮ್ಮ ದೇವನನು / ಗಟ್ಟಿಯಾಗಿ ಮಾಡಿರಿ ಅವನ ಗುಣಗಾನವನು //
9 : ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ / ಕಾಲೆಡವದಂತೆ ಕಾಪಾಡಿದನಯ್ಯಾ //
16 : ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ / ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ //
17 : ದೇವನಿಗೆನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು / ಆತನ ಸ್ತುತಿ ನನ್ನ ಬಾಯಲಿ ತುಳುಕುತ್ತಿತ್ತು //
20 : ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ / ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ //

ಶುಭಸಂದೇಶ: ಯೊವಾನ್ನ 6:44-51
44 : ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ.
45 : ‘ದೇವರಿಂದಲೇ ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿ ಒಬ್ಬನೂ ನನ್ನ ಬಳಿಗೆ ಬರುತ್ತಾನೆ.
46 : ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ.
47 : ವಿಶ್ವಾಸವುಳ್ಳವನಲ್ಲಿ ನಿತ್ಯಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
48 : ಜೀವದಾಯಕ ರೊಟ್ಟಿ ನಾನೇ.
49 : ನಿಮ್ಮ ಪೂರ್ವಜರು ಮರಳುಗಾಡಿನಲ್ಲಿಮನ್ನಾವನ್ನು ತಿಂದರು; ಆದರೂ ಸಾವಿಗೆ ತುತ್ತಾದರು.
50 : ಸ್ವರ್ಗದಿಂದ ಇಳಿದು ಬಂದ ರೊಟ್ಟಿಯಾದರೋ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ.
51 : ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ರೋಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ,” ಎಂದು ಹೇಳಿದರು.
----------------

ಶುಭಸಂದೇಶದ ಪ್ರಚಾರಕಾರ್ಯಕ್ಕೆ ನಾವು ಯಾವಾಗಲೂ ಸಿದ್ಧವಿರಬೇಕು ಎಂಬುದನ್ನು ಮೊದಲನೆಯ ವಾಚನ ತಿಳಿಸುತ್ತದೆ. ಇನ್ನೊಂದು ಕಡೆ, ಶುಭಸಂದೇಶವನ್ನು ಓದಿ ಅರ್ಥಮಾಡಿಕೊಳ್ಳಲು ಪಾಂಡಿತ್ಯದ ನೆರವನ್ನು ಪಡೆದುಕೊಳ್ಳುವುದರ ಬಗ್ಗೆ ಒತ್ತಿ ಹೇಳುತ್ತದೆ. ಶುಭಸಂದೇಶವನ್ನು ಅರ್ಥ ಮಾಡಿಕೊಳ್ಳಲು ವಿಫಲವಾದರೆ ಅದು ಪರಿವರ್ತನೆಗೆ ದಾರಿ ಮಾಡಿಕೊಡದ ನಿರ್ಜೀವ ಪುಸ್ತಕವಾಗಿಬಿಡುತ್ತದೆ. ಶುಭಸಂದೇಶವನ್ನು ಅರ್ಥಮಾಡಿಕೊಳ್ಳಲು ಇನ್ನೊಬ್ಬರ ಪಾಂಡಿತ್ಯದ ನೆರವನ್ನು ಪಡೆದುಕೊಳ್ಳೋಣ. ಶುಭಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಶುಭಸಂದೇಶದ ಪ್ರಸಾರಕರಾಗೋಣ. ನಾವು ಹುಲುಮಾನವರು. ಕ್ರಿಸ್ತನಂತೆ ಈ ಲೋಕದಲ್ಲಿ ಬಾಳಬೇಕಾದರೆ ಕ್ರಿಸ್ತನ ಶಕ್ತಿ ನಮಗೆ ಬೇಕೇ ಬೇಕು. ಆದ್ದರಿಂದ ರೊಟ್ಟಿಯ ರೂಪದ ಕ್ರಿಸ್ತನನ್ನು ಪ್ರತಿದಿನ ನಮ್ಮ ಬದುಕಿಗೆ ಬರಮಾಡಿಕೊಂಡು ಕ್ರಿಸ್ತನಂತಾಗೋಣ. ನಿತ್ಯ ಜೀವ ಕೊಡುವ ಅವನ ಮಾತುಗಳು ನಮ್ಮ ಬದುಕಿನ ರೊಟ್ಟಿಯಾಗಲಿ.
------------
``ದೇವರನ್ನು ಅರಸುವವರಿಗೆ ತಕ್ಕ ಪ್ರತಿಫಲ ಸಿಗುವುದೆಂಬುದನ್ನು ನಂಬಬೇಕು’’ (ಹಿಬ್ರಿಯ 11:6) ಇಬ್ಬರು ವ್ಯಕ್ತಿಗಳ ಬದುಕಿನಲ್ಲಿ ಸತ್ಯವಾದುದನ್ನು ಮೊದಲ ವಾಚನ ತಿಳಿಸುತ್ತದೆ.
ಮೊದಲಿಗೆ ಫಿಲಿಪ್ಪನು: ದೇವದೂತನು ಫಿಲಿಪ್ಪನಿಗೆ ಆಜ್ಞೆಯೊಂದನ್ನು ನೀಡಿದರು. ಕಾರಣ ತಿಳಿಯದೆ, ಏಕೆ ಹೇಗೆ ಎಂದೇನೂ ಕೇಳದೆ ಫಿಲಿಪ್ಪ ಹೊರಡುತ್ತಾರೆ. ದಾರಿಯಲ್ಲಿ ಕಂಡ ರಥದೊಡನೆ ನಡೆಯುವಂತೆ ಆಜ್ಞೆ ನೀಡಲಾಗುತ್ತದೆ. ಪವಿತ್ರಗ್ರಂಥದ ವಿವರಣೆ, ದೀಕ್ಷಾಸ್ನಾನಕ್ಕಾಗಿ ಕೋರಿಕೆ ಬಂದಾಗ ನೆರವೇರಿಸುವುದು, ಇವೆಲ್ಲವೂ ದೇವರ ಮಾರ್ಗ, ಫಿಲಿಪ್ಪ ಪ್ರಶ್ನೆಸಿದೆ ನೆರವೇರಿಸುತ್ತಾರೆ. ಇನ್ನು ಇಥಿಯೋಪಿಯಾದ ಕಂಚುಕಿಗೆ ದೈವಕರೆಯಿತ್ತು ಆತನಲ್ಲಿ ದೇವರಿಗಾಗಿ ಹುಡುಕಾಟ, ದಾಹವಿತ್ತು. ದೇವಯೋಜನೆಯಂತೆ ಕಂಚುಕಿ ದೈವ ಮಗನಾಗುತ್ತಾನೆ. ಆತನಲ್ಲಿ ವಿಶ್ವಾಸವುಳ್ಳವರಿಗೆ ನಿರಾಸೆಯೆಂದೂ ಆಗದು.
------------------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment