Saturday, 25 April 2020

ಪಾಸ್ಕಕಾಲದ ಮೂರನೆಯ ವಾರ ಶುಕ್ರವಾರ - ಕಾರ್ಮಿಕರ ಪಾಲಕರಾದ ಸಂತ ಜೋಸೆಫ್

ಮೇ 1, 2020 ಶುಕ್ರವಾರ                                                     [ಬಿಳಿ]
ಕಾರ್ಮಿಕರ ಪಾಲಕರಾದ ಸಂತ ಜೋಸೆಫ್
ಮೊದಲ ವಾಚನ: ಆದಿಕಾಂಡ 1:26-2:3 (ಪ್ರೇಷಿತರ ಕಾರ್ಯಕಲಾಪಗಳು 9:1-20)
ಕೀರ್ತನೆ 90:2-4, 12-14, 16
ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ, ಪ್ರಭುವೇ
 [ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಮತ್ತಾಯ 13:54-58(ಯೊವಾನ್ನ 6:52-59)
Prayer to Saint Joseph the Worker--Aleteia

ಮೊದಲ ವಾಚನ: ಆದಿಕಾಂಡ 1:26-2:3 (ಪ್ರೇಷಿತರ ಕಾರ್ಯಕಲಾಪಗಳು 9:1-20)
26 : ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ವಿೂನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು:
27 : ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ.
28 : ಅವರನ್ನು ದೇವರು ಆಶೀರ್ವದಿಸಿ, “ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ವಿೂನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ.
29 : ಇನ್ನೂ, ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ.
30 : ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿ ಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ,” ಎಂದು ಹೇಳಿದರು. ಹಾಗೆಯೇ ಆಯಿತು.
31 : ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು.
3 : ಏಳನೆಯ ದಿನವು ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದರು. ತಮ್ಮ ಸೃಷ್ಟಿಕಾರ್ಯವನ್ನೆಲ್ಲ ಮುಗಿಸಿ ದಿನದಂದು ವಿಶ್ರಮಿಸಿಕೊಂಡ ಕಾರಣ ಹಾಗೆ ಮಾಡಿದರು.

ಕೀರ್ತನೆ 90:2-4, 12-14, 16
ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ, ಪ್ರಭುವೇ
2 : ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ | ಭೂದೇಶಗಳು ಆಗುವುದಕೆ ಮೊದಲಿಂದ | ನೀನೆಮಗೆ ದೇವರು ಯುಗಯುಗಗಳಿಂದ ||
3 : ಇಳೆಯ ಮಾನವರನು ನೀ ಮಣ್ಣುಪಾಲಾಗಿಸುತಿಹೆ / ‘ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿಎನ್ನುತಿಹೆ //
4 : ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ / ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ //
12 : ಜೀವನಾವಧಿಯನು ಲೆಕ್ಕಿಸುವುದನು ನಮಗೆ ಕಲಿಸು / ಪರಿಜ್ಞಾನವುಳ್ಳಂಥ ಹೃದಯವನು ನೀ ಕರುಣಿಸು //
13 : ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ?/ ನಿನ್ನೀ ಸೇವಕರ ಮೇಲಿರಲಿ ಮರುಕ //
14 : ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ / ಹರ್ಷಿಸಿ ಆನಂದಿಸುವೆವು ಆಗ ದಿನವಾದ್ಯಂತ //
16 : ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಕ್ತರಿಗೆ / ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ //

ಶುಭಸಂದೇಶ: ಮತ್ತಾಯ 13:54-58(ಯೊವಾನ್ನ 6:52-59)
54 : ತಮ್ಮ ಸ್ವಂತ ಊರಿಗೆ ಮರಳಿ ಬಂದು ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಬೋಧನೆ ಮಾಡಿದರು. ಅದನ್ನು ಕೇಳುತ್ತಿದ್ದ ಜನರು ಆಶ್ಚರ್ಯಚಕಿತರಾಗಿ, " ಪರಿಜ್ಞಾನ ಇವನಿಗೆಲ್ಲಿಂದ ಬಂತು? ಮಹತ್ಕಾರ್ಯಗಳನ್ನು ಇವನು ಮಾಡುವುದಾದರೂ ಹೇಗೆ?
55 : ಇವನು ಬಡಗಿಯ ಮಗನಲ್ಲವೇ? ಮರಿಯಳು ಇವನ ತಾಯಲ್ಲವೇ? ಯಕೋಬ, ಜೋಸೆಫ್, ಸಿಮೋನ, ಯೂದ ಇವರು ಇವನ ಸೋದರರಲ್ಲವೇ?
56 : ಇವನ ಸೋದರಿಯರೆಲ್ಲಾ ಇಲ್ಲೇ ವಾಸಮಾಡುತ್ತಿಲ್ಲವೇ? ಹಾಗಾದರೆ ಇವನಿಗೆ ಇದೆಲ್ಲಾ ಎಲ್ಲಿಂದ ಬಂತು?" ಎಂದು ಮಾತಾಡಿಕೊಂಡು ಯೇಸುವನ್ನು ತಿರಸ್ಕರಿಸಿದರು.
57 : ಅವರಿಗೆ ಯೇಸು, "ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು; ಆದರೆ ಸ್ವಗ್ರಾಮದಲ್ಲಿ ಹಾಗೂ ಸ್ವಗೃಹದಲ್ಲಿ ಮಾತ್ರ ಗೌರವ ದೊರಕದು," ಎಂದು ಹೇಳಿದರು.
58 : ಅವರ ಅವಿಶ್ವಾಸದ ಕಾರಣ ಯೇಸು ಅದ್ಭುತ ಕಾರ್ಯಗಳನ್ನು ಅಲ್ಲಿ ಹೆಚ್ಚಾಗಿ ಮಾಡಲಿಲ್ಲ.
---------------------
ಇಂದು ತಾಯಿ ಧರ್ಮಸಭೆ ಕಾರ್ಮಿಕರ ಪಾಲಕರಾದ 'ಸಂತ ಜೋಸೆಫರ'ಹಬ್ಬವನ್ನು ಕೊಂಡಾಡುತ್ತದೆ. ಧರ್ಮಸಭೆ ಇವರ ಮುಖಾಂತರ ಲೋಕದ ಪ್ರತಿಯೊಂದು ದೈಹಿಕ ಜೀವಿಗೂ ಕೆಲಸವು ಪರಿಶುದ್ಧತೆ, ಘನತೆ ಮತ್ತು ಗೌರವವನ್ನು ತಂದುಕೊಡುತ್ತದೆ ಎಂದು ತಿಳಿಸುತ್ತದೆ. ಸಂತ ಜೋಸೆಫರ ಮೂಲಕ ನಮಗೆ 'ಕೆಲಸ, ಸೇವಾ ಕಾರ್ಯ, ದುಡಿಮೆಯ ಅಗತ್ಯ ಮತ್ತು ಮಹತ್ವ ಹಾಗೂ ಶ್ರಮಜೀವನದ' ಬಗ್ಗೆ ಜೀವನಪಾಠವನ್ನು ಕಲಿಸಿಕೊಡುತ್ತದೆ.

ಸಂತ ಜೋಸೆಫರು ಕೇವಲ ಬಡಗಿಯಾಗಿ ಮಾತ್ರವಲ್ಲದೆ, ತಮ್ಮ ಆಧ್ಯಾತ್ಮಿಕ ಶ್ರಮಜೀವನದಿಂದ, ಕುಟುಂಬದ ಸದ್ಗುಣಗಳನ್ನು ಅಳವಡಿಸಿಕೊಂಡು, ಸಂಸಾರಿಕ ಜವಾಬ್ದಾರಿಯನ್ನು ಹೊತ್ತು ಇತರರಿಗೆ ಆದರ್ಶಮಯವಾಗಿದ್ದಾರೆ. ತಮ್ಮ ಸುಕೃತ್ಯ ಕೆಲಸ ಕಾರ್ಯಗಳಿಂದ ಕಾಯಕವೇ ಕೈಲಾಸ'ವೆಂದು ಅವರು ತೋರಿಸಿ ಕೊಟ್ಟರು. ತಂದೆಯ ಸ್ಥಾನವನ್ನು ಅಲಂಕರಿಸಿ ಪೀತಿ, ವಿಶ್ವಾಸ, ದೈವಭಕ್ತಿ, ಜವಾಬ್ದಾರಿ ಮತ್ತು ಶ್ರಮಜೀವನದ ಬಗ್ಗೆ ಇತರರಿಗೆ ಸಾಕ್ಷಿಯಾದರು. ಆದ್ದರಿಂದಲೇ ಜನರು ಯೇಸುವಲ್ಲಿ ಜೋಸೆಫರ ಗುಣಗಳನ್ನು ಗುರುತಿಸಿ, 'ಇವನು ಬಡಗಿಯ ಮಗನಲ್ಲವೇ?' ಎಂದು ಪ್ರಶ್ನಿಸುತ್ತಾರೆ. ಯೇಸುವಾದರೋ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಾಯಕದ ಜೊತೆಗೆ ತನ್ನ ಪಿತನಾದ ಸರ್ವೇಶ್ವರಸ್ವಾಮಿಯ ಸುಕೃತ್ಯಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಬಹಳ ಅದ್ಭುತಕರವಾಗಿ ಮಾಡಿ ತೋರಿಸಿತ್ತಾರೆ. ಇಂದಿನ ಮೊದಲನೆಯ ವಾಚನವು ಇದನ್ನೇ ನಾವು ಸೃಷ್ಟ್ಠಿ ಕರ್ತನ ಸುಕಾರ್ಯಗಳು ಪೂರ್ಣಗೊಂಡು ಎಲ್ಲವೂ ಕಣ್ಣಿಗೆ ಆನಂದಮಯವಾಗಿತ್ತು ಎಂದು ತಿಳಿಸಿ ಕೊಡುತ್ತದೆ. ಆದ್ದರಿಂದ ಯೇಸು ಬಡಗಿಯ ಮಗನೂ ಹೌದು, ಸರ್ವೇಶ್ವ್ವರನ ಪೀತಿಯ ಕುವರನೂ ಹೌದು' ಎಂದು ತಮ್ಮ ನೈಜ ಜೀವನದಲ್ಲಿ ತೋರಿಸಿ ಕೊಡುತ್ತಾರೆ. ಆದರೆ ಜನರು ತಮ್ಮ ವಕ್ರದೃಷ್ಠಿಯಿಂದ ಯೇಸುವಿನ ಸುಕಾರ್ಯಗಳಲ್ಲಿ ವಿಶ್ವಾಸವಿಡದೆ ಯೇಸುವಿನ ಮಹತ್ಕಾರ್ಯಗಳಿಗೆ ಅಪಾತ್ರರಾಗುತ್ತಾರೆ. ಇಂಥ ಸುದಿನದಂದು ಸಂತ ಜೋಸೆಫರು ಕುಟುಂಬದ ಹಾಗೂ ಕಾಯಕ ಶ್ರಮ ಜೀವನದ ಗುಣಗಳನ್ನು ನಮ್ಮಲ್ಲಿ ಅಳವಡಿಸಿ ಬಾಳಲು ಧೈರ್ಯ ತುಂಬುತ್ತಾರೆ. ಇದಲ್ಲದೆ ನಮ್ಮ ಜೀವನದ ಪಯಣದಲ್ಲಿ ಪೀತಿ, ವಿಶ್ವಾಸ, ದೈವಭಕ್ತಿ, ಜವಾಬ್ದಾರಿ ಮತ್ತು ಶ್ರಮಜೀವನದ ಬಗ್ಗೆ ಇತರರಿಗೆ ಸಾಕ್ಷಿಯಾಗಲು ಕರೆ ನೀಡುತ್ತಾರೆ. ಆದ್ದರಿಂದ ಪ್ರಿಯರೇ, ನಾವೇಲ್ಲರೂ ನಮ್ಮ ಬುದ್ಧಿಶಕ್ತಿ, ಜಾಣ್ಮೆ ಮತ್ತು ಸಾಮರ್ಥ್ಯವನ್ನು ಬಳಸಿ ಉತ್ತಮ ಕೆಲಸ ಮಾಡಬೇಕು ಹಾಗೂ ಪ್ರಭುವಿನ ಸೇವಾಕಾರ್ಯವನ್ನು ನಮ್ಮ ಪ್ರೀತಿಯ ಸೇವೆಯಿಂದ ಪರಿಪೂರ್ಣಗೊಳಿಸಬೇಕು. ಇಂದು ಕಾರ್ಮಿಕ ಪಾಲಕರ ದಿನವನ್ನು ಆಚರಿಸುತ್ತಿರುವ ನಾವೆಲ್ಲರೂ 'ಬಾಲ ಕಾರ್ಮಿಕ' ಪದ್ಧತಿಯನ್ನು ಹೋಗಲಾಡಿಸಲು ಬೇಕಾದ ವರಗಳಿಗಾಗಿ ಹಾಗೂ ಪ್ರಪಂಚದ ಎಲ್ಲಾ ಕಾರ್ಮಿಕರಿಗಾಗಿ ಪ್ರಾರ್ಥಿಸೋಣ.
---------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

No comments:

Post a Comment