ಮೇ 2,
2020 ಶನಿವಾರ [ಬಿಳಿ]
ಸಂತ ಅಥನಾಸಿಯುಸ್ [ಧರ್ಮಾಧ್ಯಕ್ಷ / ಧರ್ಮಪಂಡಿತ] (ಸ್ಮರಣೆ)
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 9:31-32
ಕೀರ್ತನೆ 116: 12-17. ಶ್ಲೋಕ.12
ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ,
ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ
6.60-69
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 9:31-32
31 : ಇಂತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ ಇತ್ತು.
32 : ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿಕೊಡುತ್ತಾ ಲುದ್ದ ಎಂಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬಂದನು.
33 : ಅಲ್ಲಿ ಪಾಶ್ರ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಐನೇಯಾ ಎಂಬವನನ್ನು ಕಂಡನು.
34 : ಪೇತ್ರನು ಅವನಿಗೆ, “ಐನೇಯಾ, ಯೇಸುಕ್ರಿಸ್ತರು ನಿನ್ನನ್ನು ಸ್ವಸ್ಥಪಡಿಸುತ್ತಾರೆ. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು,” ಎಂದನು, ಆ ಕ್ಷಣವೇ ಅವನು ಎದ್ದನು.
35 : ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು.
36 : ಜೊಪ್ಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು ‘ದೋರ್ಕ’) ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು.
37 : ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ ಕೋಣೆಯಲ್ಲಿ ಇರಿಸಿದರು.
38 : ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, “ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ” ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು.
39 : ಪೇತ್ರನು ಎದ್ದು ಅವರ ಜೊತೆಯಲ್ಲೇ ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ, ದೋರ್ಕಳು ಜೀವದಿಂದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆ ಬರೆಗಳನ್ನು ಅವನಿಗೆ ತೋರಿಸಿದರು.
40 : ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಅನಂತರ ಶವದ ಕಡೆಗೆ ತಿರುಗಿ, “ತಬಿಥಾ, ಮೇಲಕ್ಕೇಳು,” ಎಂದನು. ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು.
41 : ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು.
42 : ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು.
ಕೀರ್ತನೆ
116: 12-17. ಶ್ಲೋಕ.12
ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ,
ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?
12 : ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ / ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? //
13 : ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
14 : ಆತನಿಗೆ ನಾ ಹೊತ್ತ ಹರಕೆಗಳನು / ಆತನ ಸಭೆಮುಂದೆಯೆ ತೀರಿಸುವೆನು //
15 : ಪ್ರಭು ಅಲ್ಪವೆಂದೆಣಿಸನು / ತನ್ನ ಭಕ್ತರ ಮರಣವನು //
16 : ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು / ನಿನ್ನ ದಾಸಿಯ ಮಗನು, ನಿನ್ನ ಸೇವಕನು / ಬಿಡಿಸಿರುವೆ ನೀನು ನನ್ನ ಬಂಧನಗಳನು //
17 : ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು / ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //
ಶುಭಸಂದೇಶ:
ಯೊವಾನ್ನ
6:60-69
60 : ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, “ಇವು ಕಟುವಾದ ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?” ಎಂದು ಮಾತನಾಡಿಕೊಂಡರು.
61 : ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, “ಇಷ್ಟು ಮಾತ್ರಕ್ಕೆ ನೀವು ಕಂಗೆಡಬೇಕೆ?
62 : ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ ಮರಳಿ ಏರುವುದನ್ನು ನೀವು ಕಂಡಾಗ ಏನನ್ನುವಿರಿ?
63 : ಸಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ. ನರಮಾಂಸದಿಂದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ.
64 : ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ,” ಎಂದು ಹೇಳಿದರು. (ವಿಶ್ವಾಸವಿಲ್ಲದವರು ಯಾರು, ತಮ್ಮನ್ನು ಹಿಡಿದುಕೊಡುವ ಗುರುದ್ರೋಹಿ ಯಾರು, ಎಂದು ಯೇಸುವಿಗೆ ಮೊದಲಿನಿಂದಲೂ ತಿಳಿದಿತ್ತು.)
65 : ‘ಪಿತನು ಅನುಗ್ರಹಿಸಿದ ಹೊರತು ಯಾರೂ ನನ್ನ ಬಳಿಗೆ ಬರಲಾರರು,’ ಎಂದು ನಾನು ಹೇಳಿದುದು ಇದಕ್ಕಾಗಿಯೇ,” ಎಂದು ಯೇಸು ಮತ್ತೆ ನುಡಿದರು.
66 : ಅಂದಿನಿಂದ ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ.
67 : ಆಗ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಕೂಡ ಹೋಗಬೇಕೆಂದು ಇದ್ದೀರಾ?” ಎಂದು ಕೇಳಿದರು.
68 : ಅದಕ್ಕೆ ಸಿಮೋನ ಪೇತ್ರನು, “ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ? ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ.
69 : ತಾವೇ ದೇವರಿಂದ ಬಂದ ಪರಮಪೂಜ್ಯರು. ಹೌದು, ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ,” ಎಂದು ಹೇಳಿದನು.
-----------------------
ಕ್ರಿಸ್ತನ ಮಾತುಗಳನ್ನು ಕೇಳಿದ ಅನುಯಾಯಿಗಳಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟು ಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ. ಕಾರಣವೇನೆಂದರೆ ಅವರಿಗೆ ಒಬ್ಬ ರಾಜಕೀಯ ಧುರೀಣ ಬೇಕಾಗಿತ್ತು ಅದರೆ ಕ್ರಿಸ್ತ ಅಧ್ಯಾತ್ಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರಿಂದ, ಜನರ ಸ್ವಾರ್ಥಭರಿತ ಅಭಿಲಾಷೆಗಳು ಕ್ರಿಸ್ತನಿಂದ ಈಡೇರಲಿಲ್ಲವಾಗಿ, ಕೊನೆಗೆ ಕ್ರಿಸ್ತನ ಬೋಧನೆಯನ್ನು ಅರ್ಥಮಾಡಿಕೊಳ್ಳುವುದೇ ಅವರಿಗೆ ಕಷ್ಟಕರವಾಯಿತು. ಆದ್ದರಿಂದ ಜನರು ಅವರನ್ನು ಬಿಟ್ಟು ಹೋದರು. ಕ್ರಿಸ್ತನ ಬೋಧನೆಯನ್ನು ಅರ್ಥಮಾಡಿಕೊಂಡು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಕೆಲವರು ಕ್ರಿಸ್ತನ ಬೋಧನೆ ಕೇಳಿ ಅವರಲ್ಲಿ ವಿಶ್ವಾಸವಿಟ್ಟು ಅವರ ಒಡನಾಡಿಗಳಾದರು. ಮತ್ತೆ ಕೆಲವರು ಜೂದಾಸನಂತೆ ಕ್ರಿಸ್ತನನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡರು. ಹೌದು ಕೆಲವರು ಕ್ರಿಸ್ತನ ಹಿಂಬಾಲಕರೆಂದು ನಾಟಕವಾಡುತ್ತಾ ಭಂಡ ಜೀವನ ಸಾಗಿಸುತ್ತಿದ್ದಾರೆ. ಕ್ರಿಸ್ತನ ಕರೆಗೆ ನಾವು ಕೇವಲ ಎರಡು ರೀತಿಯಲ್ಲಿ ಮಾತ್ರ ಪ್ರಕ್ರಿಯಿಸಬಹುದು: ಒಂದು, ಅವನನ್ನು ಪೂರ್ತಿಯಾಗಿ ಒಪ್ಪಿಕೊಳ್ಳುವುದು ಅಥವಾ ಸಂಪೂರ್ಣವಾಗಿ ತಿರಸ್ಕರಿಸುವುದು… ನಮ್ಮ ಪ್ರಕ್ರಿಯೆ ಏನಿರಬಹುದು?
------------------
ಕಾಯಿಲೆಯಿಂದ ನರಳುವಾಗ ಪರಿಚಯವಿಲ್ಲದ ವೈದ್ಯರನ್ನು ನಂಬುತ್ತಾರೆ ಜನ. ದೀರ್ಘ ಪ್ರಯಾಣ ಮಾಡುವಾಗ ಚಾಲಕನನ್ನು ನಂಬಿ ಸುಃಖ ನಿದ್ರೆಗೆ ಜಾರುತ್ತಾರೆ ಮಂದಿ. ಹಿಂದೆ ಮುಂದೆ ತಿಳಿಯದ ಹೋಟೆಲ್ಗಳಲ್ಲಿ ನೀಡುವ ಆಹಾರವನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ ಮುಗಿಬಿದ್ದು ... ಒಳ್ಳೆಯದೇ. ಆದರೆ ಏಕೋ ಏನೋ ಆಧ್ಯಾತ್ಮಿಕ ವಿಚಾರದಲ್ಲಿ ವಿಶ್ವಾಸ ಭದ್ರವಾಗಿಲ್ಲ, ನಿಲುವುಗಳಿಲ್ಲ... ಸಂಶಯ, ಅನುಮಾನ ಕಾಡುತ್ತವೆ. ``ಅಂದಿನಿಂದ ಯೇಸುವಿನ ಹಿಂಬಾಲಕರಲ್ಲಿ ಹಲವರು ಅವರ ಸಹವಾಸ ಬಿಟ್ಟು ಬಿಟ್ಟರು’’ ಎಂದು ಶುಭಸಂದೇಶದಲ್ಲಿ ಓದುವಾಗ, ನಾನೂ ಅವರಲ್ಲಿ ಒಬ್ಬನಾಗಿದ್ದೇನಾ ಎಂದು ಚಿಂತನೆ ಮಾಡಬೇಕಾಗಿದೆ.
------------------
ಕಾಯಿಲೆಯಿಂದ ನರಳುವಾಗ ಪರಿಚಯವಿಲ್ಲದ ವೈದ್ಯರನ್ನು ನಂಬುತ್ತಾರೆ ಜನ. ದೀರ್ಘ ಪ್ರಯಾಣ ಮಾಡುವಾಗ ಚಾಲಕನನ್ನು ನಂಬಿ ಸುಃಖ ನಿದ್ರೆಗೆ ಜಾರುತ್ತಾರೆ ಮಂದಿ. ಹಿಂದೆ ಮುಂದೆ ತಿಳಿಯದ ಹೋಟೆಲ್ಗಳಲ್ಲಿ ನೀಡುವ ಆಹಾರವನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ ಮುಗಿಬಿದ್ದು ... ಒಳ್ಳೆಯದೇ. ಆದರೆ ಏಕೋ ಏನೋ ಆಧ್ಯಾತ್ಮಿಕ ವಿಚಾರದಲ್ಲಿ ವಿಶ್ವಾಸ ಭದ್ರವಾಗಿಲ್ಲ, ನಿಲುವುಗಳಿಲ್ಲ... ಸಂಶಯ, ಅನುಮಾನ ಕಾಡುತ್ತವೆ. ``ಅಂದಿನಿಂದ ಯೇಸುವಿನ ಹಿಂಬಾಲಕರಲ್ಲಿ ಹಲವರು ಅವರ ಸಹವಾಸ ಬಿಟ್ಟು ಬಿಟ್ಟರು’’ ಎಂದು ಶುಭಸಂದೇಶದಲ್ಲಿ ಓದುವಾಗ, ನಾನೂ ಅವರಲ್ಲಿ ಒಬ್ಬನಾಗಿದ್ದೇನಾ ಎಂದು ಚಿಂತನೆ ಮಾಡಬೇಕಾಗಿದೆ.
------------------------

No comments:
Post a Comment