Saturday, 25 April 2020

ಪಾಸ್ಕಕಾಲದ ಐದನೆಯ ಗುರುವಾರ


ಮೇ 14, 2020 ಗುರುವಾರ                                                  [ಕೆಂಪು]
ಸಂತ ಮತ್ತೀಯ [ಪ್ರೇಷಿತ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1.15-17, 20-26
ಕೀರ್ತನೆ 113:1-8 ಶ್ಲೋಕ.8
ಕೂರಿಸುವನಾತ ಅವರನು ಅಧಿಪತಿಗಳ ನಡುವೆ,
ತನ್ನ ಪ್ರಜೆಯನ್ನಾಳುವಾ ಅಧಿಪತಿಗಳ ನಡುವೆ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 15.9-17

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1.15-17, 20-26
15 : ಸ್ವಲ್ಪ ದಿನಗಳ ನಂತರ ಸುಮಾರು ನೂರ ಇಪ್ಪತ್ತು ಮಂದಿ ಭಕ್ತವಿಶ್ವಾಸಿಗಳು ಸಭೆಸೇರಿದ್ದರು. ಆಗ ಪೇತ್ರನು ಎದ್ದು ನಿಂತು ಹೀಗೆಂದನು:
16 : “ಪ್ರಿಯ ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮುಂದಾಳಾಗಿದ್ದವನು ಯೂದನು. ಅವನ ವಿಷಯವಾಗಿ ಪವಿತ್ರಾತ್ಮ ಅವರು ದಾವೀದನ ಮುಖಾಂತರ ಮುಂತಿಳಿಸಿದ ವಾಕ್ಯ ನೆರವೇರಲೇಬೇಕಾಗಿತ್ತು.
17 : ಯೂದನು ನಮ್ಮಲ್ಲಿ ಒಬ್ಬನಾಗಿದ್ದವನು, ನಾವು ಕೈಗೊಂಡಿರುವ ಸೇವೆಯಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದನು.
20 : ‘ಅವನ ಮನೆ ಹಾಳಾಗಲಿ, ಅದು ಪಾಳುಬೀಳಲಿ,’ ಎಂದೂ, ‘ಅವನ ಸ್ಥಾನ ಇನ್ನೊಬ್ಬನದಾಗಲಿ,’ ಎಂದೂ ಕೀರ್ತನಾಗ್ರಂಥದಲ್ಲಿ ಬರೆಯಲಾಗಿದೆ.
21 : “ಆದುದರಿಂದ ಪ್ರಭು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಡನೆ ಸಾಕ್ಷಿಯಾಗಿರಲು ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಸೇವಾಸಂಚಾರದಲ್ಲೆಲ್ಲಾ ನಮ್ಮೊಡನೆ ಇದ್ದವನಾಗಿರಬೇಕು.
22 : ಅಂದರೆ, ಸ್ನಾನಿಕ ಯೊವಾನ್ನನು ಸ್ನಾನದೀಕ್ಷೆಯನ್ನು ಕುರಿತು ಬೋಧಿಸಿದ ದಿನದಿಂದ ಯೇಸುವಿನ ಸ್ವರ್ಗಾರೋಹಣದ ದಿನದವರೆಗೂ ನಮ್ಮ ಸಂಗಡ ಇದ್ದವನಾಗಿರಬೇಕು.”
23 : ಆಗ ಬಾರ್ನಬ ಎಂದು ಹೆಸರಿಸಲಾದ ಜೋಸೆಫ್ (ಇವನನ್ನು ಯುಸ್ತ ಎಂದೂ ಕರೆಯುತ್ತಿದ್ದರು.) ಮತ್ತು ಮತ್ತೀಯ ಎಂಬ ಇಬ್ಬರ ಹೆಸರನ್ನು ಸೂಚಿಸಲಾಯಿತು.
24 : ಅನಂತರ ಎಲ್ಲರೂ ಪ್ರಾರ್ಥನೆ ಮಾಡುತ್ತಾ, “ಸರ್ವೇಶ್ವರಾ, ನೀವು ಸರ್ವರ ಅಂತರಂಗಗಳನ್ನು ಅರಿತಿರುವಿರಿ. ಯೂದನು ತನ್ನ ಪ್ರೇಷಿತ ಸ್ಥಾನದಿಂದ ಭ್ರಷ್ಟನಾದ, ತನಗೆ ತಕ್ಕುದಾದ ಸ್ಥಳಕ್ಕೆ ತೆರಳಿದ.
25 : ಸೇವಾಸ್ಥಾನಕ್ಕೆ ಇವರಿಬ್ಬರಲ್ಲಿ ನೀವು ಆರಿಸಿದವನು ಯಾರೆಂದು ನಮಗೆ ತೋರಿಸಿರಿ,” ಎಂದರು.
26 ಅನಂತರ ಚೀಟುಹಾಕಿದರು. ಅದು ಮತ್ತೀಯನ ಪರವಾಗಿತ್ತು. ಅವನನ್ನು ಹನ್ನೊಂದು ಮಂದಿಯೊಡನೆ ಪ್ರೇಷಿತಸ್ಥಾನಕ್ಕೆ ಸೇರಿಸಿಕೊಳ್ಳಲಾಯಿತು.

ಕೀರ್ತನೆ 113:1-8 ಶ್ಲೋಕ.8
ಕೂರಿಸುವನಾತ ಅವರನು ಅಧಿಪತಿಗಳ ನಡುವೆ,
ತನ್ನ ಪ್ರಜೆಯನ್ನಾಳುವಾ ಅಧಿಪತಿಗಳ ನಡುವೆ
1 : ಅಲ್ಲೆಲೂಯ / ಪ್ರಭುವಿನ ದಾಸರೇ, ಸ್ತುತಿಮಾಡಿ / ಪ್ರಭುವಿನ ನಾಮಸ್ತುತಿಯನು ಮಾಡಿ //
2 : ಪ್ರಭುವಿನ ಸಿರಿನಾಮವು ಪೂಜ್ಯ / ಇಂದಿಗೂ ಎಂದೆಂದಿಗೂ ಪೂಜ್ಯ //
3 : ಪ್ರಭುವಿನಾ ಸಿರಿನಾಮವು ಸ್ತುತ್ಯ / ಪೂರ್ವ ಪಶ್ಚಿಮದವರೆಗೂ ಸ್ತುತ್ಯ //
4 : ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ / ಆತನ ಮಹಿಮೆ ಗಗನಕ್ಕಿಂತಲೂ ಉತ್ಕøಷ್ಟ //
5 : ನಮ್ಮ ಪ್ರಭು ದೇವನಂತೆ ಯಾರು ಸಮರ್ಥ /
6 : ಇಹಪರಗಳನು ವೀಕ್ಷಿಸಲಾತ ಶಕ್ತ //
7 : ದೀನರನು ಎಬ್ಬಿಸುವನು ಧೂಳಿನಿಂದ / ಬಡವರನು ಎತ್ತುವನು ತಿಪ್ಪೆಯಿಂದ //
8 : ಕೂರಿಸುವನಾತ ಅವರನು ಅಧಿಪತಿಗಳ ನಡುವೆ / ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ //

ಶುಭಸಂದೇಶ: ಯೊವಾನ್ನ 15.9-17
9 : ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ.
10 : ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.
11 : “ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ.
12 : ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.
13 : ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ.
14 : ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು.
15 : ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ.
16 : ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು.
17 : ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ.
---------------------
ನೋಬೆಲ್ ಪ್ರಶಸ್ತಿ ಪಡೆಯುವ ಕಾರ್ಯಕ್ರಮದ ನಂತರ ಪತ್ರಿಕಾ ವರದಿಗಾರನೊಬ್ಬ ಮದರ್ ತೆರೇಸಾರವರನ್ನು ಕೇಳಿದ, ``ಶಾಂತಿ ಪ್ರೀತಿಯ ಪ್ರಶಸ್ತಿ ಪಡೆದ ನೀವು, ಪ್ರಪಂಚದಲ್ಲಿರುವ ದ್ವೇಷವನ್ನು ಹೋಗಲಾಡಿಸಲು ಸೂಚಿಸುವ ಮಾರ್ಗವೇನು? ನಾವೇನು ಮಾಡೋಣ’’? ಮದರ್ ಹೇಳುತ್ತಾರೆ `` ಕಾರ್ಯಕ್ರಮ ಮುಗಿದ ನಂತರ ಮನೆಗೆ ಹೋಗಿ, ಎಲ್ಲರನ್ನು ಹೆಚ್ಚಾಗಿ ಪ್ರೀತಿಸಿರಿ.”

`ಪ್ರೀತಿಪರಿವರ್ತನೆ ಮಾಡುತ್ತದೆ, ಪ್ರೀತಿ ಪ್ರೀತಿಸುತ್ತದೆ, ಪ್ರೀತಿಯಲ್ಲಿ ಕಾಳಜಿ ಕರುಣೆಯಿದೆ. ಇದೇ ಅಪರಿಮಿತ ಪ್ರೀತಿಯನ್ನು ಕ್ರಿಸ್ತ ನಮಗೆ ತೋರಿದ್ದಾರೆ. ಅದನ್ನೇ ಮಾಡುವಂತೆ ತಿಳಿಸುತ್ತಾರೆ. ``ನಾನು ನಿಮ್ಮನ್ನು ಪ್ರೀತಿಸಿದಂತೆ ನೀವೂ ಒಬ್ಬರನೊಬ್ಬರು ಪ್ರೀತಿಸಿರಿ.’’
-----------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ




No comments:

Post a Comment