ಮೇ 13,
2020 ಬುಧವಾರ [ಬಿಳಿ]
(ಐಚ್ಛಿಕ ಸ್ಮರಣೆ) ಫಾತಿಮಾ ಮಾತೆ
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:1-6
ಕೀರ್ತನೆ 122:1-5 ಶ್ಲೋಕ.1
ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ,
ಆಯಿತೆನಗೆ ಆನಂದ, ಜನರೆನ್ನ ಕರೆದಾಗ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ
15:1-8
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:1-6
1 : ಜುದೇಯದಿಂದ ಕೆಲವು ಜನರು ಅಂತಿಯೋಕ್ಯಕ್ಕೆ ಬಂದು ಅಲ್ಲಿನ ಭಕ್ತವಿಶ್ವಾಸಿಗಳಿಗೆ, “ಮೋಶೆಯ ನಿಯಮದಂತೆ ನೀವು ಸುನ್ನತಿ ಮಾಡಿಸಿಕೊಂಡ ಹೊರತು ಜೀವೋದ್ಧಾರ ಪಡೆಯಲಾರಿರಿ,” ಎಂದು ಬೋಧಿಸತೊಡಗಿದರು.
2 : ಈ ವಿಷಯವಾಗಿ ಅವರಿಗೂ ಪೌಲ ಮತ್ತು ಬಾರ್ನಬರಿಗೂ ಭಿನ್ನಾಭಿಪ್ರಾಯ ಉಂಟಾಗಿ ತೀವ್ರ ವಿವಾದವೆದ್ದಿತು. ಆದುದರಿಂದ ಈ ಸಮಸ್ಯೆಯ ಬಗ್ಗೆ ಪೌಲ ಮತ್ತು ಬಾರ್ನಬರು ಅಂತಿಯೋಕ್ಯದ ಇನ್ನೂ ಕೆಲವರ ಸಮೇತ ಜೆರುಸಲೇಮಿಗೆ ಹೋಗಿ ಪ್ರೇಷಿತರನ್ನೂ ಪ್ರಮುಖರನ್ನೂ ಕಾಣಬೇಕೆಂದು ತೀರ್ಮಾನಿಸಲಾಯಿತು.
3 : ಅಂತೆಯೇ ಕ್ರೈಸ್ತಸಭೆ ಅವರನ್ನು ಬೀಳ್ಕೊಟ್ಟಿತು. ಅವರು ಫೆನಿಷ್ಯ ಹಾಗೂ ಸಮಾರಿಯದ ಮಾರ್ಗವಾಗಿ ಪ್ರಯಾಣಮಾಡುತ್ತಾ ಅಲ್ಲಿಯ ಭಕ್ತವಿಶ್ವಾಗಳಿಗೆ ಅನ್ಯಧರ್ಮೀಯರು ಹೇಗೆ ಕ್ರೈಸ್ತರಾದರೆಂಬುದನ್ನು ವಿವರಿಸಿದರು. ಇದನ್ನು ಕೇಳಿದ ಭಕ್ತಾದಿಗಳು ಸಂತೋಷಭರಿತರಾದರು.
4 : ಪೌಲ, ಬಾರ್ನಬ ಮತ್ತು ಸಂಗಡಿಗರು ಜೆರುಸಲೇಮಿಗೆ ಆಗಮಿಸಿದಾಗ, ಅಲ್ಲಿಯ ಕ್ರೈಸ್ತಸಭೆ ಪ್ರೇಷಿತರ ಹಾಗೂ ಪ್ರಮುಖರ ಸಮೇತ ಅವರನ್ನು ಸ್ವಾಗತಿಸಿತು. ಆಗ ಅವರು, ದೇವರು ತಮ್ಮೊಡನೆ ಇದ್ದು, ಸಾಧಿಸಿದ ಎಲ್ಲಾ ಕಾರ್ಯಗಳನ್ನು ವರದಿ ಮಾಡಿದರು.
5 ಫರಿಸಾಯ ಪಂಥಕ್ಕೆ ಸೇರಿದ ಕೆಲವು ಭಕ್ತರು ಮಾತ್ರ ಎದ್ದುನಿಂತು, ಅನ್ಯಧರ್ಮೀಯರು ಸುನ್ನತಿಮಾಡಿಸಿಕೊಳ್ಳಲೇಬೇಕು, ಅವರು ಮೋಶೆಯ ನಿಯಮಗಳನ್ನು ಅನುಸರಿಸುವಂತೆ ಆಜ್ಞೆ ಮಾಡಲೇಬೇಕು,” ಎಂದರು.
6 : ಈ ಸಮಸ್ಯೆಯನ್ನು ಪರಿಶೀಲಿಸಲು ಪ್ರೇಷಿತರು ಮತ್ತು ಸಭಾಪ್ರಮುಖರು ಸಭೆ ಸೇರಿದರು.
7 : ಸುದೀರ್ಘ ಚರ್ಚೆಯಾದ ನಂತರ ಪೇತ್ರನು ಎದ್ದು ನಿಂತು ಹೀಗೆಂದನು: “ಸಹೋದರರೇ, ಅನ್ಯಧರ್ಮೀ
ಕೀರ್ತನೆ
122:1-5 ಶ್ಲೋಕ.1
ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ,
ಆಯಿತೆನಗೆ ಆನಂದ, ಜನರೆನ್ನ ಕರೆದಾಗ
1 : ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ / ಆಯಿತೆನಗೆ ಆನಂದ, ಜನರೆನ್ನ ಕರೆದಾಗ
2 : ನಮ್ಮ ಕಾಲುಗಳು ಓ ಜೆರುಸಲೇಮೇ / ತಲುಪಿವೆ ನಿನ್ನ ಪುರದ್ವಾರಗಳನೇ
3 : ನೋಡು, ಜೆರುಸಲೇಮ್ ಪಟ್ಟಣವಿದು / ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು
4 : ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ / ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ / ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ
5 : ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು / ದಾವೀದನ ಮನೆತನದವರ ಸಿಂಹಾಸನ ಗಳು
ಶುಭಸಂದೇಶ:
ಯೊವಾನ್ನ
15:1-8
1 : “ನಾನೇ ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ.
2 : ನನ್ನಲ್ಲಿದ್ದೂ ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಫಲಕೊಡುವಂತೆ ಅವನ್ನು ಸವರಿ ಶುದ್ಧಗೊಳಿಸುವರು.
3 : ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ.
4 : ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವೂ ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ.
5 : “ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು.
6 : ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟು ಹಾಕಲಾಗುವುದು.
7 : “ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು. ನಿಮಗದು ಸಿಗುವುದು.
8 : ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು.
------------
ಇಂದಿನ ಮೊದಲನೆಯ ವಾಚನದಲ್ಲಿ ಪ್ರೇಷಿತರಲ್ಲಿ ಮತ್ತು ಜನರಲ್ಲಿ ಜೀವೋದ್ಧಾರ ಪಡೆಯಬೇಕಾದರೆ ನಾವು ಏನು ಮಾಡಬೇಕು? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಹಾಗೆಯೇ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಇದಕ್ಕೆ ತಕ್ಕ ಉತ್ತರವನ್ನು ಯೇಸು ಶುಭಸಂದೇಶದ ವಾಚನದಲ್ಲಿ ಕೊಡುತ್ತಾರೆ. ಜೀವೋದ್ಧಾರ ಪಡೆಯಬೇಕಾದರೆ ನೀವೆಲ್ಲರೂ ನನ್ನಲ್ಲಿ ನೆಲೆಗೊಳ್ಳಬೇಕು ಎಂದು ಅವರು ತಿಳಿಸುತ್ತಾರೆ. ನಾನೇ ನಿಜವಾದ ದ್ರಾಕ್ಷಾಬಳ್ಳಿ, ನನ್ನಲ್ಲಿ ನೆಲೆಗೊಂಡರೆ ನೀವು ಶುದ್ಧರಾಗುವಿರಿ ಹಾಗೂ ಯಥೇಚ್ಛವಾಗಿ ಫಲಕೊಡುವಿರಿ. ಇದರಿಂದ ನಿಮಗೆ ಶಾಶ್ವತ ಜೀವನಮುಕ್ತಿ ದೊರಕುವುದು ಎನ್ನುತ್ತಾರೆ ಪ್ರಭುಯೇಸು. ನಾವೆಲ್ಲರು ಕವಲುಬಳ್ಳಿಗಳು, ಯೇಸು ಅದರ ದ್ರಾಕ್ಷಾಬಳ್ಳಿಯಾದರೆ ಪಿತ ದೇವರೇ ಅದರ ತೋಟಗಾರರೆಂದು ಪ್ರಕಟಪಡಿಸುತ್ತಾರೆ. ನಾವೆಲ್ಲರು ನಮ್ಮ ಕಷ್ಟ-ದುಃಖಗಳಲ್ಲಿ, ಸಾವು -ನೋವುಗಳಲ್ಲಿ, ಜೀವನದ ಭರವಸೆಯ ಕಿರಣಗಳು ಬತ್ತಿದಾಗ, ಕವಲುಬಳ್ಳಿಗಳಂತಿರುವ ನಾವು ದ್ರಾಕ್ಷಾಬಳ್ಳಿಯಂತಿರುವ ಯೇಸುವಿನೊಂದಿಗೆ ಸತ್ಸಂಬಂಧದ ಮತ್ತು ಇತರ ಮೌಲ್ಯಗಳೊಂದಿಗೆ ಬೆರೆತಾಗ ಮಾತ್ರ ಶುದ್ಧರಾಗಿ ಯಥೇಚ್ಛ ಫಲವನ್ನು ಕೊಟ್ಟು ಜೀವೋದ್ಧಾರ ಅಥವಾ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ನನ್ನ ಜೀವನದಲ್ಲಿ ಈ ಸಮೃದ್ಧ ಫಲ ದೊರಕಿದೆಯೇ? ನಾನು ನನ್ನ ಜೀವನದ ಮೂಲಕ ಇತರರಿಗೆ ಒಳ್ಳೆಯ ಫಲವಾಗಲು ಸಾಧ್ಯವೇ?
----------------
