Sunday, 26 April 2020

ಪಂಚದಶಮಿ ಮಹೋತ್ಸವ

ಮೇ 31, 2020 ಭಾನುವಾರ                                                                [ಕೆಂಪು]
ಪಂಚದಶಮಿ ಮಹೋತ್ಸವ
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2.1-11
ಕೀರ್ತನೆ 104: 1, 24, 29-30, 31, 34 ಶ್ಲೋಕ.30
ನೀ ಉಸಿರನ್ನೂದಲು ಹೊಸದಾಗುವುವು,
ಪುನಶ್ಚೇತನಗೊಳ್ಳುವುದು ಜಗವೆಲ್ಲವು
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಎರಡನೇ ವಾಚನ: 1 ಕೊರಿಂಥಿಯರಿಗೆ 12.3-7, 12-13
(ಪವಿತ್ರಾತ್ಮರ ಸ್ತುತಿ ಗೀತೆ)
ಶುಭಸಂದೇಶ: ಯೊವಾನ್ನ 20.19-23
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2.1-11
1 : ಪಂಚಾಶತ್ತಮ ಹಬ್ಬದ ದಿನ ಭಕ್ತವಿಶ್ವಾಸಿಗಳೆಲ್ಲರೂ ಒಂದು ಸ್ಥಳದಲ್ಲಿ ಸಭೆಸೇರಿದ್ದರು.
2 : ಫಕ್ಕನೆ ಬಲವಾದ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಶಬ್ದವೊಂದು ಆಕಾಶದಿಂದ ಕೇಳಿ ಬಂತು. ಅದು ಅವರು ಕುಳಿತಿದ್ದ ಮನೆಯಲ್ಲೆಲ್ಲಾ ಮಾರ್ದನಿಸಿತು.
3 : ಅಲ್ಲದೆ ಅಗ್ನಿಜ್ವಾಲೆಗಳು ಕೆನ್ನಾಲಿಗೆಯಂತೆ ಕಾಣಿಸಿಕೊಂಡವು. ಅವು ವಿಂಗಡ ವಿಂಗಡವಾಗಿ ಪ್ರತಿಯೊಬ್ಬರ ಮೇಲೂ ನೆಲೆಸಿದವು.
4 : ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಆತ್ಮ ಪ್ರೇರಣೆಯಿಂದ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡತೊಡಗಿದರು.
5 : ಅದೇ ಸಮಯದಲ್ಲಿ ವಿಶ್ವದ ಎಲ್ಲಾ ದೇಶಗಳಿಂದ ಧರ್ಮನಿಷ್ಠ ಯೆಹೂದ್ಯರು ಜೆರುಸಲೇಮಿಗೆ ಬಂದು ತಂಗಿದರು.
6 : ಶಬ್ದವನ್ನು ಕೇಳಿದ್ದೇ, ಜನರ ದೊಡ್ಡ ಗುಂಪು ಸೇರಿತು. ಭಕ್ತಾದಿಗಳು ಮಾತನಾಡುತ್ತಿದ್ದುದನ್ನು ತಮ್ಮ ತಮ್ಮ ಭಾಷೆಗಳಲ್ಲೇ ಕೇಳಿದ ಜನರು ದಿಗ್ಭ್ರಮೆಗೊಂಡರು.
7 : ಅವರೆಲ್ಲರೂ ವಿಸ್ಮಿತರಾಗಿ, “ಹೀಗೆ ಮಾತನಾಡುವ ಇವರೆಲ್ಲಾ ಗಲಿಲೇಯದವರಲ್ಲವೇ?
8 : ನಮ್ಮಲ್ಲಿ ಪ್ರತಿಯೊಬ್ಬನೂ ಇವರು ಮಾತನಾಡುತ್ತಿರುವುದನ್ನು ತನ್ನ ತನ್ನ ಮಾತೃಭಾಷೆಯಲ್ಲೇ ಕೇಳುತ್ತಿರುವುದು ಹೇಗೆ?
9 : ನಮ್ಮಲ್ಲಿ ಪಾರ್ಥಿಯರು, ವಿೂಡಿಯರು ಮತ್ತು ಎಲಾಮಿನವರೂ, ಮೆಸಪೊಟೇಮಿಯ, ಜುದೇಯ ಮತ್ತು ಕಪ್ಪದೋಸಿಯದವರೂ ಇದ್ದಾರೆ. ಪೊಂತ ಮತ್ತು ಏಷ್ಯದವರೂ,
10 : ಫ್ರಿಜಿಯ ಮತ್ತು ಪಾಂಫಿಲಿಯದವರೂ ಇದ್ದಾರೆ. ಈಜಿಪ್ಟ್ ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರೂ ಸೇರಿದ್ದಾರೆ. ಅದಲ್ಲದೆ ನಮ್ಮಲ್ಲಿ ಕೆಲವರು ರೋಮ್ನಿಂದ ಬಂದಿದ್ದಾರೆ.
11 : ಯೆಹೂದ್ಯರೂ ಯೆಹೂದ್ಯ ಧರ್ಮಾವಲಂಬಿಗಳೂ ಆದ ಅನ್ಯರೂ, ಕ್ರೇಟ ಮತ್ತು ಅರೇಬಿಯದವರೂ ಇಲ್ಲಿದ್ದಾರೆ. ದೇವರ ಮಹತ್ಕಾರ್ಯಗಳನ್ನು ಕುರಿತು ಇವರು ಮಾತನಾಡುತ್ತಿರುವುದನ್ನು ನಾವೆಲ್ಲರೂ ನಮ್ಮ ನಮ್ಮ ಭಾಷೆಗಳಲ್ಲೇ ಕೇಳುತ್ತಿದ್ದೇವಲ್ಲಾ!” ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದರು.

ಕೀರ್ತನೆ 104: 1, 24, 29-30, 31, 34 ಶ್ಲೋಕ.30
ನೀ ಉಸಿರನ್ನೂದಲು ಹೊಸದಾಗುವುವು,
ಪುನಶ್ಚೇತನಗೊಳ್ಳುವುದು ಜಗವೆಲ್ಲವು
1 : ಭಜಿಸು ನನ್ನ ಮನವೇ, ಭಜಿಸು, ಪ್ರಭುವನು / ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು / ಮಹಿಮೆ ಪ್ರತಾಪಗಳಿಂದ ಭೂಷಿತನು //
24 : ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ / ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ //
29 : ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು | ಮಣ್ಣುಪಾಲಾಗುವುವು ನೀನವುಗಳ ಉಸಿರನಡಗಿಸಲು ||
30 : ನೀ ಉಸಿರನ್ನೂದಲು ಹೊಸದಾಗುವುವು / ಪುನಶ್ಚೇತನಗೊಳ್ಳುವುದು ಜಗವೆಲ್ಲವು //
31 : ಸ್ವಾಮಿದೇವನ ಮಹಿಮೆಯಿರಲಿ ಶಾಶ್ವತ ವಾಗಿ / ಆತ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ //
34 : ಆತನಿಗೊಲಿಯಲಿ ನನ್ನ ಧ್ಯಾನ / ಆತನಲೇ ಹರ್ಷಿಸಲಿ ನನ್ನ ಮನ //

ಎರಡನೇ ವಾಚನ: 1 ಕೊರಿಂಥಿಯರಿಗೆ 12.3-7, 12-13
3 : ಇಷ್ಟು ಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು.
4 : ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ.
5 : ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ.
6 : ಶಕ್ತಿಸಾಮಥ್ರ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ.
7 : ಪ್ರತಿಯೊಬ್ಬನಲ್ಲಿ ಕಂಡು ಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ.
12 : ದೇಹ ಒಂದೇ; ಅಂಗಗಳು ಹಲವು. ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು.
13 : ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ - ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ.

ಶುಭಸಂದೇಶ: ಯೊವಾನ್ನ 20.19-23
19 : ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು.
20 : “ನಿಮಗೆ ಶಾಂತಿಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು.
21 : ಯೇಸು ಪುನಃ, “ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,” ಎಂದರು.
22 : ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ.
23 : ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು; ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು,” ಎಂದು ನುಡಿದರು.
-------------
ಪಂಚಶತ್ತಮ ಹಬ್ಬ ಯೆಹೂದ್ಯರ ಪ್ರಮುಖ ಹಬ್ಬಗಳಲ್ಲೊಂದು. ಕ್ರೈಸ್ತರಿಗಾದರೋ ಇದು ಹೊಸ ಅರ್ಥನೀಡುವ ಆಚರಣೆ. ಪುನರುತ್ಥಾನರಾದ ಕ್ರಿಸ್ತರು ತಾವು ಆಶ್ವಾಸನೆಯಂತೆ ಪವಿತ್ರಾತ್ಮರನ್ನು ಪಂಚಾಶತ್ತಮದಂದು ಕಳುಹಿಸಿಕೊಟ್ಟರು. ಬೆಂಕಿಯ ಜ್ವಾಲೆಗಳ ರೂಪದಲ್ಲಿ ಬರುವ ಪವಿತ್ರಾತ್ಮರು ಪ್ರೇಷಿತರನ್ನೇಲ್ಲಾ ಹೊಸ ಶಕ್ತಿಯಿಂದ ತುಂಬುತ್ತಾರೆ. ಶುಭಸಂದೇಶ ಸಾರಲು ಧೈರ್ಯದಿಂದ ಹೋಗುತ್ತಾರೆ ಪ್ರೇಷಿತರು.

ಪವಿತ್ರಾತ್ಮರ ಅನುಗ್ರಹವಿಲ್ಲದೆ ನಾವೇನೂ ಮಾಡಲು ಸಾಧ್ಯವಿಲ್ಲ, ವಿಶ್ವಾಸ ಪ್ರಕಟಣೆ ಮಾಡಲೂ ಆಗದು. ಇಂದು ನಮ್ಮೆಲ್ಲರಿಗೆ ಪವಿತ್ರಾತ್ಮರು ಸ್ಪೂರ್ತಿಯನ್ನು, ಶಕ್ತಿಯನ್ನು, ಧೈರ್ಯವನ್ನು ತುಂಬಲಿ.
---------------------------
"ಪಂಚದಶಮಿಯ ಹಬ್ಬ ನಾವಾಗಲಿ ಆತ್ಮ ಸಿದ್ದ ಸದಾ ಬದ್ದ"
ಯೆಹೂದ್ಯರು ಆಚರಿಸುತ್ತಿದ್ದ ಪ್ರಮುಖ ಹಬ್ಬಗಳಲ್ಲಿ ಪಂಚದಶಮಿಯ ಹಬ್ಬ ಪ್ರಮುಖವಾದದ್ದು. ಪಂಚ ಎಂದರೆ ಐದು ಎಂದಾದರೆ, ದಶಮಿ ಎಂದರೆ, ಹತ್ತು ಎಂದರ್ಥ. ಈ ಹತ್ತು ಐದುಗಳನ್ನು ಒಟ್ಟುಗೂಡಿಸಿದರೆ, ಐವತ್ತು ಎಂದಾಗುತ್ತದೆ. ಪಾಸ್ಖ ಹಬ್ಬದ ಐವತ್ತನೇ ದಿನದಂದು ಯೆಹೂದ್ಯರು ಪಂಚದಶಮಿಯ ಹಬ್ಬವನ್ನು ಆಚರಿಸುತ್ತಿದ್ದರು. ಇದು ಅವರಿಗೆ ಸುಗ್ಗಿಯ ಮತ್ತು ಕೃತಜÐತೆಯ ಹಬ್ಬವಾಗಿತ್ತು. ಕ್ರೈಸ್ತ ಧರ್ಮದ ಉಗಮದ ನಂತರ ಇದು ಹೊಸ ರೂಪವನ್ನು ಪಡೆದುಕೊಳ್ಳುತ್ತದೆ. ನಮ್ಮನ್ನು ಅನಾಥರನ್ನಾಗಿ ಬಿಟ್ಟು ಹೋಗದೆ ಪೋಷಕರನ್ನಾಗಿ ಪವಿತ್ರಾತ್ಮರನ್ನು ಪ್ರಭುಯೇಸು ಕಳುಹಿಸುತ್ತಾರೆ (ಯೊವಾ 14:18). ಹಾಗಾಗಿ, ಪುನರುತ್ಥಾನ ಹಬ್ಬದ ಐವತ್ತನೇ ದಿನವನ್ನು ಪಂಚದಶಮಿಯ ಹಬ್ಬವೆಂದು ಆಚರಿಸಲಾಗುತ್ತದೆ.
ಇಂದಿನ ಶುಭಸಂದೇಶದಲ್ಲಿ ಪ್ರಭು ಯೇಸು ತಮ್ಮ ಶಿಷ್ಯರ ಮೇಲೆ ಉಸಿರೂದಿ "ಪವಿತ್ರಾತ್ಮರನ್ನು ಸ್ವೀಕರಿಸಿರಿ" ಎಂದರು. ಧರ್ಮಸಭೆ ಉಗಮವಾಯಿತು. ಆದಿಕಾಂಡ 2:17 ರಲ್ಲಿ ನಾವು ನೋಡುತ್ತೇವೆ, "ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು." ಆಗ ಮನುಷ್ಯನು ಜೀವಾತ್ಮನಾದನು. ಆದಿಕಾಂಡದಲ್ಲಿ ನಿರ್ಜೀವ ಮೂರ್ತಿಗೆ ಉಸಿರನ್ನೂದಿ ಸರ್ವೇಶ್ವರ ಸ್ವಾಮಿ ಜೀವ ನೀಡಿದರೆ, ಇಂದು ಪ್ರಭುಯೇಸು ತಮ್ಮ ಉಸಿರನ್ನೂದಿ ಭಯದಿಂದ ಅಂಜಿ ಮನೆಯ ಕೋಣೆಯಲ್ಲಿ ಬಂಧಿಯಾಗಿದ್ದ ಶಿಷ್ಯರಿಗೆ ಶಾಂತಿಯ ಜೀವವನ್ನೀಯುತ್ತಾರೆ. ಅಂದು ಸರ್ವೇಶ್ವರ ಸ್ವಾಮಿ ತಮ್ಮ ಉಸಿರನ್ನೂದಿ ಸಕಲ ಪ್ರಾಣಿ-ಪಕ್ಷಿಗಳ, ಜೀವ-ಜಂತುಗಳ ಮೇಲೆ ದೊರೆತನ ಮಾಡಿಎಂದರೆ, ಇಂದು ತಮ್ಮ ಉಸಿರನ್ನೂದಿ ಪ್ರಭುಯೇಸು ಪಾಪಾತ್ಮನನ್ನು ಪುಣ್ಯಾತ್ಮನ್ನಾಗಿ ಮಾಡಲು ಕ್ಷಮಿಸುವ ಅಧಿಕಾರವನ್ನೀಯುತ್ತಾರೆ. ನಿರಾಕಾರವಾಗಿಯೂ ಬರಿದಾಗಿಯೂ ಇದ್ದ ಭೂಮಿಯ ಮೇಲೆ ಅಂದು ಚಲಿಸುತ್ತಿದ್ದ ಅದೇ ದೇವರಾತ್ಮ(ಆದಿ 1:1), ಇಂದು ಭಯಭೀತಿಯಿಂದ ಅಶಾಂತಿಯಿಂದ ತುಂಬಿ ತುಳುಕುತ್ತಿದ್ದ ಶಿಷ್ಯರ ಮನಸ್ಸನ್ನು ಶಾಂತಗೊಳಿಸಿ, ಸರ್ವರಿಗೂ ಇದೇ ಶಾಂತಿಯನ್ನುಕೋರುವ ಅಧಿಕಾರವನ್ನೀಯುತ್ತಾರೆ.
                ಇಂದಿನ ಮೊದಲನೆ ವಾಚನದಲ್ಲಿ ಪವಿತ್ರಾತ್ಮರು ಪಂಚದಶಮಿಯ ಹಬ್ಬದ ದಿನ ಒಂದು ಸ್ಥಳದಲ್ಲಿ ಸಭೆಸೇರಿ ಪ್ರಾರ್ಥಿಸುತ್ತಿದ್ದವರ ಮೇಲೆ ಅಗ್ನಿಜ್ವಾಲೆಯ ರೂಪದಲ್ಲಿ ಇಳಿದುಬರುತ್ತಾರೆ. ಹೀಗೆ, ವಿಶ್ವದ ಸುಮಾರು ಹದಿನೈದು ಸ್ಥಳಗಳಿಂದ ಬಂದ ವಿಶ್ವಾಸಿಗಳು ತಮ್ಮತಮ್ಮ ಭಾಷೆಗಳಲ್ಲೇ ಮಾತನಾಡುತ್ತಿದ್ದುದ್ದನ್ನು ಕೇಳುತ್ತಾರೆ.
ಪವಿತ್ರಾತ್ಮನಿಂದ ತುಂಬಿದ ವ್ಯಕ್ತಿ ಪಾಪದಿಂದ ದೂರವಿರುತ್ತಾನೆ. ದೈಹಿಕ ವ್ಯಾಮೋಹಗಳಿಗೆ ಒಳಗಾಗುವುದಿಲ್ಲ ಎಂದುವುದನ್ನು ಸಂತ ಪೌಲರು ಗಲಾತ್ಯರಿಗೆ ಬರೆದ ಪತ್ರದಲ್ಲಿ ತಿಳಿಸುವಾಗ, ದೈಹಿಕ ವ್ಯಾಮೋಹದ ದುಷ್ಪರಿಣಾಮಗಳನ್ನು ಹಾಗೂ ಪವಿತ್ರಾತ್ಮರ ಸತ್ಫಲಗಳನ್ನು ತಿಳಿಸುತ್ತಾರೆ.
ಸಂತ ಪೌಲರೇ ಹೇಳುವಂತೆ, ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದರೆ, ಅವರೇ ನಮ್ಮ ಮಾರ್ಗದರ್ಶಿಯೂ ಆಗಿರಬೇಕು. ಹೇಗೆ ಒಂದು ಮಗುವನ್ನು ನಾವು ಅದರ ಜವಾಬ್ದಾರಿಗಳಿಗೆ, ತಪ್ಪು-ಒಪ್ಪುಗಳಿಗೆ ಹೆಚ್ಚು ಜವಾಬ್ದಾರಿಯುತರನ್ನಾಗಿ ಮಾಡುವುದಿಲ್ಲವೋ ಹಾಗೆಯೇ ಶಿಷ್ಯರು ಪವಿತ್ರಾತ್ಮರಆಗಮನದ ತನಕ ಮಕ್ಕಳಂತೆ ಹೆಚ್ಚು ಜವಾಬ್ದಾರಿಯಿಲ್ಲದೆ ಇದ್ದರು ಪವಿತ್ರಾತ್ಮರ ಆಗಮನದಿಂದ ಅವರು ಹೆಚ್ಚು ಪ್ರೌಢರಾಗುತ್ತಾರೆ, ಜವಾಬ್ದಾರಿಯುತರಾಗುತ್ತಾರೆ. ತಮ್ಮ ಮಂದೆಯನ್ನು ಮುನ್ನಡೆಸುವ ಶಾಂತಿಕೋರುವ ವರವನ್ನು ಪಡೆಯುತ್ತಾರೆ. ನಾವು ಕೂಡ ಶಿಷ್ಯರಂತೆ ಪ್ರೌಢರಾಗಬೇಕಾದರೆ, ನಮ್ಮ ಸ್ನಾನದೀಕ್ಷೆಯಂದು, ದೃಢೀಕರಣ ಸಂಸ್ಕಾರದಂದು ಸ್ವೀಕರಿಸಿದ ಪವಿತ್ರಾತ್ಮರನ್ನುಜೀವಿಸುವುದಾಗಿದೆ.

 ನಮ್ಮ ಬದುಕು ಅಶಾಂತಿಯಲ್ಲಿದ್ದಾಗ, ಪ್ರಭುಯೇಸುವಿನ ಪಾಪಕ್ಷಮೆ, ಶಾಂತಿ ಸಮಾಧಾನ ನಮಗೆ ಅತ್ಯಗತ್ಯ ಎಂಬುದನ್ನು ಅರಿತು ಪಂಚದಶಮಿಯ ಹಬ್ಬ ನಾವಾಗಲಿ ಆತ್ಮ ಸಿದ್ದ ಸದಾ ಬದ್ದ ಎಂದು ಪ್ರಾರ್ಥಿಸೋಣ. ಆಮೆನ್.
---------------
© 'ದನಿಮಾಧ್ಯಮ ಮನೆ



ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ



No comments:

Post a Comment