Friday, 15 May 2020

ಜೂನ್ 1, 2020 - ಸಾಧಾರಣ ಕಾಲದ ಒಂಭತ್ತನೆಯ ವಾರ - ಸೋಮವಾರ


ಸಾಧಾರಣ ಕಾಲದ ಒಂಭತ್ತನೆಯ ವಾರ
ಜೂನ್ 1, 2020                  [ಹಸಿರು]
ಕನ್ಯಾಮಾತೆ ಮರಿಯ, ಧರ್ಮಸಭೆಯ ತಾಯಿ
ಸಂತ ಜಸ್ಟಿನ್ [ರಕ್ತಸಾಕ್ಷಿ] (ಸ್ಮರಣೆ)
ಮೊದಲ ವಾಚನ:  2 ಪೇತ್ರ 1:2-7
ಕೀರ್ತನೆ 91:1-2, 14-15, 15-16 ಶ್ಲೋಕ 2
 ಪ್ರಭುವೇ ದುರ್ಗವೂ ನಾ ನಂಬಿದ ದೇವನೂ
ಶುಭಸಂದೇಶ: ಮಾರ್ಕ 12:1-12

ಮೊದಲ ವಾಚನ:  2 ಪೇತ್ರ 1:2-7
2 : ದೇವರ ಮತ್ತು ಪ್ರಭು ಯೇಸುಕ್ರಿಸ್ತರ ಬಗ್ಗೆ ನೀವು ಪಡೆಯುತ್ತಿರುವ ಜ್ಞಾನಾರ್ಜನೆಯು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿ ಸಮಾಧಾನವನ್ನೂ ಅಧಿಕಾಧಿಕವಾಗಿ ತರಲಿ !
3 : ದೇವರಿಂದ ಕರೆ ಮತ್ತು ಆಯ್ಕೆ ತಮ್ಮ ಸ್ವಂತ ಮಹಿಮೆಯಲ್ಲೂ ಸೌಭಾಗ್ಯದಲ್ಲೂ ಭಾಗಿಗಳಾಗಲು ದೇವರು ನಮ್ಮನ್ನು ಕರೆದಿದ್ದಾರೆ. ಅವರನ್ನು ಅರಿತುಕೊಳ್ಳುವುದರ ಮೂಲಕ ನಾವು ಭಕ್ತಿಯುತ ಜೀವನವನ್ನು ನಡೆಸಲು ಬೇಕಾದುದೆಲ್ಲವನ್ನೂ ಯೇಸುವಿನ ದಿವ್ಯಶಕ್ತಿಯಿಂದ ಪಡೆದಿದ್ದೇವೆ.
4 : ಹೀಗೆ ನೀವು ಲೋಕದಲ್ಲಿ ಆಶಾಪಾಶಗಳಿಂದ ಉಂಟಾಗುವ ಭ್ರಷ್ಟಾಚಾರದಿಂದ ತಪ್ಪಿಸಿಕೊಂಡು ದೈವಿಕ ಸ್ವಭಾವದಲ್ಲಿ ಪಾಲುಗಾರರಾಗುವಂತೆ, ದೇವರು ಅಮೂಲ್ಯವೂ ಅತ್ಯುತ್ತಮವೂ ಆದ ವಾಗ್ದಾನಗಳನ್ನು ಅನುಗ್ರಹಿಸಿದ್ದಾರೆ.
5 : ಕಾರಣ, ನೀವು ಪೂರ್ಣಾಸಕ್ತಿಯಿಂದ ನಿಮ್ಮ ವಿಶ್ವಾಸಕ್ಕೆ ಸದ್ಗುಣವನ್ನು, ಸದ್ಗುಣಕ್ಕೆ ಸುಜ್ಞಾನವನ್ನು ಸೇರಿಸಿರಿ.
6 : ಸುಜ್ಞಾನಕ್ಕೆ ಸಂಯಮವನ್ನು, ಸಂಯಮಕ್ಕೆ ಸ್ಥೈರ್ಯವನ್ನು, ಸ್ಥೈರ್ಯಕ್ಕೆ ಸದ್ಭಕ್ತಿಯನ್ನು ಕೂಡಿಸಿರಿ.
7 : ನಿಮ್ಮ ಸದ್ಭಕ್ತಿಗೆ ಸೋದರ ಸ್ನೇಹವನ್ನು, ಸೋದರ ಸ್ನೇಹಕ್ಕೆ ಪ್ರೀತಿಯನ್ನು ಬೆರೆಸಿರಿ.

ಕೀರ್ತನೆ 91:1-2, 14-15, 15-16
ಪ್ರಭುವೇ ದುರ್ಗವೂ ನಾ ನಂಬಿದ ದೇವನೂ
1 : ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು / ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು //
2 : ನಾನಾತನಿಗೆ, ‘ನೀನೇ ನನ್ನ ರಕ್ಷಕನೂ / ದುರ್ಗವೂ ನಾ ನಂಬಿದ ದೇವನುಎನ್ನುವೆನು //
14 : ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿ ಸುವೆನು ಅವನನು / ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು //
15 : ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು / ಸಂಕಟದೊಳು ಅವನ ಸಂಗಡವಿರುವೆನು / ಅವನನು ಉದ್ಧರಿಸಿ ಘನಪಡಿಸುವೆನು //
16 : ದೀರ್ಘಾಯುಸ್ಸನ್ನಿತ್ತು ತೃಪ್ತಿಪಡಿಸುವೆನು / ನಾನು ನೀಡುವ ಮುಕ್ತಿಯನವನಿಗೆ ಮನಗಾಣಿಸುವೆನು” //

ಶುಭಸಂದೇಶ: ಮಾರ್ಕ 12:1-12
1 : ಅನಂತರ ಯೇಸುಸ್ವಾಮಿ ಅವರೊಡನೆ ಸಾಮತಿಗಳ ರೂಪದಲ್ಲಿ ಮಾತನಾಡತೊಡಗಿದರು: “ಒಬ್ಬನು ದ್ರಾಕ್ಷಿಯ ತೋಟ ಒಂದನ್ನು ಮಾಡಿ, ಅದರ ಸುತ್ತ ಬೇಲಿ ಹಾಕಿಸಿದ; ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಬಳಿಕ ತೋಟವನ್ನು ಗೇಣಿದಾರರಿಗೆ ವಹಿಸಿ, ಹೊರನಾಡಿಗೆ ಹೊರಟು ಹೋದ.
2 : ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಗೇಣಿದಾರರ ಬಳಿಗೆ ಕಳುಹಿಸಿದ.
3 : ಆದರೆ ಅವರು ಸೇವಕನನ್ನು ಹಿಡಿದು, ಹೊಡೆದು, ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು.
4 : ತೋಟದ ಯಜಮಾನ ಪುನಃ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವರು ಅವನ ತಲೆಯ ಮೇಲೆ ಹೊಡೆದು, ಅವಮಾನ ಮಾಡಿ ಕಳುಹಿಸಿದರು.
5 : ಯಜಮಾನ ಆಮೇಲೆ ಮತ್ತೊಬ್ಬ ಸೇವಕನನ್ನು ಕಳುಹಿಸಿದ. ಇವನನ್ನು ಅವರು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಲು, ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದು ಹಾಕಿದರು.
6 : ಯಜಮಾನನಿಗೆ ಇನ್ನು ಉಳಿದಿದ್ದವನೆಂದರೆ ಅವನ ಮುದ್ದು ಮಗನೊಬ್ಬನೇ. “ನನ್ನ ಮಗನಿಗಾದರೂ ಅವರು ಮರ್ಯಾದೆಕೊಟ್ಟಾರು,” ಎಂದು ಭಾವಿಸಿ, ಕಟ್ಟಕಡೆಗೆ ಯಜಮಾನ ತನ್ನ ಮಗನನ್ನೇ ಅವರ ಬಳಿಗೆ ಕಳುಹಿಸಿದ.
7 : ಆದರೆ ಗೇಣಿದಾರರು, ‘ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಹೂಡಿ,
8 : ಅವನನ್ನು ಹಿಡಿದು, ಕೊಂದುಹಾಕಿ ತೋಟದ ಆಚೆಗೆ ಎಸೆದುಬಿಟ್ಟರು.
9 : ಇಂತಹ ಪರಿಸ್ಥಿತಿಯಲ್ಲಿ ತೋಟದ ಯಜಮಾನ ಏನು ಮಾಡುವನು? ಅವನು ಬಂದು ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುವನು. ಪವಿತ್ರಗ್ರಂಥದಲ್ಲಿ:
10 : ‘ಮನೆಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು;
11 : ಸರ್ವೇಶ್ವರನಿಂದಲೇ ಆದ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ವರ್ಯ!’ ಎಂಬ ವಾಕ್ಯವನ್ನು ನೀವು ಓದಲಿಲ್ಲವೇ?” ಎಂದರು.
12 : ತಮ್ಮನ್ನು ಕುರಿತೇ ಸಾಮತಿಯನ್ನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಂಡ ಯೆಹೂದ್ಯ ಮುಖಂಡರು ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟು ಅವರನ್ನು ಬಿಟ್ಟು ಹೋದರು.
-------------------------

ಜನ ನಮ್ಮನ್ನು ಗುರುತಿಸಬೇಕು, ನಮ್ಮ ಬಗ್ಗೆ ಮಾತನಾಡಬೇಕು, ಪ್ರಶಂಸಿಸಬೇಕು ಎಂದು ನಾವು ಅಂದುಕೊಳ್ಳುವುದು ಸಹಜ. ಕೆಲವು ವ್ಯಕ್ತಿಗಳು ನಾವು ಮಾತನಾಡುವುದನ್ನು ಜನ ಕೇಳಿಸಿಕೊಳ್ಳಬೇಕು, ಹೇಳಿ ಮೆಚ್ಚುಗೆ ವ್ಯಕ್ತ ಪಡಿಸಬೇಕು ಎಂದು ಅನೇಕ ಕಸರತ್ತು ಮಾಡುತ್ತಾರೆ. ಹೊಸ ಹೊಸ ಪದಗಳನ್ನು ಬಳಕೆ ಮಾಡುತ್ತಾರೆ. ಜನರಿಗೆ ಹಿತ ನೀಡುವಂತಹ ಮಾತುಗಳನ್ನು ಬಳಸುತ್ತಾರೆ, ನಗಿಸುತ್ತಾರೆ, ಒಳ್ಳೆಯ ಬಟ್ಟೆಗಳನ್ನು ಕೊಡುತ್ತಾರೆ. ಹೀಗೆ ಒಬ್ಬ ಒಳ್ಳೆಯ ವಾಗ್ಮಿಯಾಗಲು ಹಲವಾರು ಪ್ರಯತ್ನಗಳಲ್ಲಿ ತೊಡಗುತ್ತಾರೆ
ಇಂದಿನ ಶುಭಸಂದೇಶದಲ್ಲಿ ಯೇಸುಕ್ರಿಸ್ತ ಅಂತಹ ಯಾವುದೇ ಕಸರತ್ತು ಮಾಡದೇ ಒಂದು ಪುಟ್ಟ ಸಾಮಿತಿಯನ್ನು ಬಳಸಿ ಜನರಿಗೆ ಮನ ಮುಟ್ಟುವ ರೀತಿಯಲ್ಲಿ ಸಂದೇಶವನ್ನು ನೀಡಿದ್ದಾರೆ. ಕ್ರಿಸ್ತ ಒಬ್ಬ ಅತ್ಯಂತ ಪ್ರಭಾವಶಾಲಿ ಬೋಧಕ ಮತ್ತು ಉತ್ತಮ ಮಾತುಗಾರ. ಆತನ ಮಾತುಗಳು ಇಂದಿಗೂ ಪ್ರಸ್ತುತ. ಜಗತ್ತಿನಾದ್ಯಂತ ಜನ ಇಂದು ಕ್ರಿಸ್ತನನ್ನು ಹಿಂಬಾಲಿಸುತ್ತಿದ್ದಾರೆ ಎಂದರೆ ಅದು ಆತ ಮಾಡಿದ ಪವಾಡದಿಂದಲ್ಲ, ಆತ ನುಡಿದ ಮಾತುಗಳಿಂದ. ಇಂದಿನ ಶುಭಸಂದೇಶದಲ್ಲಿ ಪ್ರೀತಿಯ ಪ್ರಾಣಾರ್ಪಣೆ ಬಗ್ಗೆ ಸಹಜವಾಗಿ ತಿಳಿಸುವುದನ್ನು ನಾವು ಕಾಣುತ್ತೇವೆ. ಇಲ್ಲಿ ಬರುವಂತಹ ವಿಷಯಗಳನ್ನು ನಾವು ವಿಚಾರ ಮಾಡಿದಾಗ ಅದರ ಗೂಡಾರ್ಥ ನಮಗೆ ತಿಳಿಯುತ್ತದೆ. ದೇವರು ಪ್ರೀತಿಯಿಂದ ಸಾಕಿ ಸಲಹಿದ ದ್ರಾಕ್ಷಿ ತೋಟ - ಇಸ್ರಯೇಲ್‌ ಜನಾಂಗಕ್ಕೆ ಬಂದ ಸೇವಕರು - ಪ್ರವಾದಿಗಳು ಮತ್ತು ನ್ಯಾಯ ಸ್ಥಾಪಕರು. ಕೊನೆಗೆ ಬಂದ ಮಗನೇ ಪ್ರಭು ಯೇಸು ಕ್ರಿಸ್ತ, ಇಸ್ರಾಯೇಲ ಜನರ ಅಜ್ಞಾನ ಅಂಧಕಾರಕ್ಕೆ ತಂದೆ ದೇವರು ತಮ್ಮ ಏಕಮಾತ್ರ ಪುತ್ರನನ್ನೇ ಧಾರೆ ಎರೆದರು. ಪ್ರಭುವಿನ ಶಿಲುಬೆ ಮರಣದ ನಮ್ಮನ್ನೆಲ್ಲ ದೇವರ ಪ್ರೀತಿಗೆ ಯೋಗ್ಯರನ್ನಾಗಿಸಿದೆ.
1 ನನ್ನ ಮಾತು ಬೇರೆಯವರಿಗೆ ಮನ ಮುಟ್ಟುವಂತೆ ಇದೆಯೇ? ಅದು ಪ್ರೀತಿ ಮತ್ತು ಅನುಕಂಪದಿಂದ ಕೂಡಿದೆಯೇ?
2.ದೇವರು ಸಾಕಿ ಸಲಹಿದ ದಾಕಿ ತೋಟ ನಾವಾದರೆ ನಾವು ಎಂಥ ಫಲವನ್ನು ಸಮಾಜಕ್ಕೆ ನಮ್ಮ ಧರ್ಮಕ್ಕೆ ನಮ್ಮ ಕುಟುಂಬಕ್ಕೆ ನೀಡುತ್ತಿದ್ದೇವೆ?

No comments:

Post a Comment