ಮೇ 25,
2020 ಸೋಮವಾರ [ಬಿಳಿ]
ಪೂಜ್ಯರಾದ ಸಂತ ಬೀಡ್ (ಐಚ್ಛಿಕ ಸ್ಮರಣೆ)
ಸಂತ ಗ್ರೆಗರಿ – 7 (ಐಚ್ಛಿಕ ಸ್ಮರಣೆ)
ಸಂತ ಮೇರಿ ಮಗ್ದಲೇನೆ ದೆ ಪಝ್ಝಿ (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 19.1-8
ಕೀರ್ತನೆ 68:2-6 ಶ್ಲೋಕ.32
ಭೂರಾಜ್ಯಗಳೇ, ಸ್ತುತಿಸಿರಿ ದೇವರನು!
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ
16.29-33
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 19.1-8
1 : ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗ, ಪೌಲನು ಮೇಲ್ನಾಡಿನ ಪ್ರಾಂತ್ಯದ ಮಾರ್ಗವಾಗಿ ಎಫೆಸಕ್ಕೆ ಬಂದನು. ಅಲ್ಲಿ ಕೆಲವು ಮಂದಿ ಶಿಷ್ಯರನ್ನು ಕಂಡು,
2 : “ನೀವು ವಿಶ್ವಾಸಿಸಿದಾಗ ಪವಿತ್ರಾತ್ಮ ಅವರನ್ನು ಪಡೆದಿರೋ?” ಎಂದು ಕೇಳಿದನು. ಅದಕ್ಕೆ ಅವರು, “ಪವಿತ್ರಾತ್ಮ ಎಂಬವರು ಇದ್ದಾರೆಂದು ನಾವು ಕೇಳಿಯೇ ಇಲ್ಲ,” ಎಂದು ಉತ್ತರಿಸಿದರು.
3 : “ಹಾಗಾದರೆ ನೀವು ಯಾವ ಸ್ನಾನದೀಕ್ಷೆಯನ್ನು ಪಡೆದಿರಿ?” ಎಂದು ಪೌಲನು ಕೇಳಲು, “ನಾವು ಯೊವಾನ್ನನ ಸ್ನಾನದೀಕ್ಷೆ ಪಡೆದೆವು,” ಎಂದರು.
4 : ಆಗ ಪೌಲನು, “ಯಾರು ತಮ್ಮ ಪಾಪದಿಂದ ವಿಮುಖರಾಗಿ ದೇವರಿಗೆ ಅಭಿಮುಖರಾಗುತ್ತಿದ್ದರೋ, ಅಂಥವರಿಗೆ ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದನು. ಆದರೆ ಆ ಯೊವಾನ್ನನೇ ‘ತನ್ನ ಬಳಿಕ ಬರುವಾತನಲ್ಲಿ ವಿಶ್ವಾಸವಿಡಿ; ಅವರೇ ಯೇಸು’ ಎಂದು ಇಸ್ರಯೇಲರಿಗೆ ಬೋಧಿಸಿದ್ದನು,” ಎಂದನು.
5 : ಇದನ್ನು ಕೇಳಿದಾಗ ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದರು.
6 : ಪೌಲನು ಅವರ ಮೇಲೆ ಹಸ್ತನಿಕ್ಷೇಪ ಮಾಡಲು, ಪವಿತ್ರಾತ್ಮ ಅವರ ಮೇಲೆ ಬಂದರು. ಆಗ ಅವರೆಲ್ಲರೂ ನಾನಾ ಭಾಷೆಗಳನ್ನು ಮಾತನಾಡುತ್ತಾ ಪ್ರವಾದಿಸಿದರು.
7 : ಇವರು ಸುಮಾರು ಹನ್ನೆರಡು ಮಂದಿ ಇದ್ದಿರಬಹುದು.
8 : ಅನಂತರ ಮೂರು ತಿಂಗಳ ಕಾಲ ಪೌಲನು ಪ್ರಾರ್ಥನಾಮಂದಿರಕ್ಕೆ ಹೋಗಿ ಧೈರ್ಯದಿಂದ ಮಾತನಾಡಿದನು. ದೇವರ ಸಾಮ್ರಾಜ್ಯದ ಬಗ್ಗೆ ಅಲ್ಲಿದ್ದವರೊಡನೆ ಚರ್ಚಿಸುತ್ತಾ, ಅವರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸಿದನು.
ಕೀರ್ತನೆ
68:2-6 ಶ್ಲೋಕ.32
ಭೂರಾಜ್ಯಗಳೇ, ಸ್ತುತಿಸಿರಿ ದೇವರನು!
2 : ಅವರನು ಊದಿಬಿಡು ದೇವಾ, ತೇಲಿಹೋಗಲಿ ಹೊಗೆಯಂತೆ / ಕರಗಿಹೋಗಲಿ ನಿನ್ನೆದುರಿಗೆ ಅಗ್ನಿಮುಟ್ಟಿದ ಮೇಣದಂತೆ //
3 : ಸಜ್ಜನರಾದರೊ ಸಂತೋಷಿಸಲಿ / ದೇವರ ಮುಂದೆ ಆನಂದಿಸಲಿ / ಅತುಳ ಹರ್ಷಾನಂದಗೊಳ್ಳಲಿ //
4 : ಗಾಯನ ಮಾಡಿರಿ ದೇವನಿಗೆ, ಕೊಂಡಾಡಿರಿ ಆತನ ನಾಮವನು / ಮೇಘಾರೂಢನಾಗಿ ಬರುವವಗೆ ಸಿದ್ಧಮಾಡಿರಿ ರಾಜಮಾರ್ಗವನು / “ಪ್ರಭು” ಆತನ ನಾಮಧೇಯ, ಹರ್ಷದಿ ಸೇರಿರಿ ಆತನ ಸನ್ನಿಧಿಯನು //
5 : ದಿವ್ಯಧಾಮದಲ್ಲಿಹ ಆ ದೇವ / ತಬ್ಬಲಿಗೆ ತಂದೆ, ವಿಧವೆಗಾಶ್ರಯ //
6 : ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ / ಬಿಡುಗಡೆಯ ಭಾಗ್ಯವನು ನೊಂದ ಬಂಧಿಗಳಿಗೆ / ದ್ರೋಹಿಗಳಿಗಾದರೋ ಮರಳುಗಾಡೇ ಮಾಳಿಗೆ //
7 : ದೇವಾ, ಪ್ರಜೆಗೆ ಮುಂದಾಳಾಗಿ ನೀ ಹೊರಟಾಗ / ಅರಣ್ಯ ಮಾರ್ಗವಾಗಿ ನೀ ಪ್ರಯಾಣಮಾಡಿದಾಗ /
ಶುಭಸಂದೇಶ:
ಯೊವಾನ್ನ
16.29-33
29 : ಅದಕ್ಕೆ ಶಿಷ್ಯರು, “ಈಗ ನೀವು ಸಾಮತಿಗಳನ್ನು ಬಳಸದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ.
30 : ನೀವು ಎಲ್ಲವನ್ನೂ ಬಲ್ಲವರು. ಪ್ರಶ್ನೆಗಳಿಗಾಗಿ ನೀವು ಕಾಯಬೇಕಿಲ್ಲ ಎಂದು ನಮಗೀಗ ತಿಳಿಯಿತು. ಆದುದರಿಂದ ನೀವು ದೇವರಿಂದ ಬಂದವರೆಂದು ನಾವು ವಿಸ್ವಾಸಿಸುತ್ತೇವೆ,” ಎಂದರು.
31 : ಆಗ ಯೇಸುಸ್ವಾಮಿ, “ಈಗ ನೀವು ವಿಶ್ವಾಸಿಸುತ್ತೀರೋ?
32 : ನೀವೆಲ್ಲರೂ ನನ್ನನ್ನು ಒಬ್ಬಂಟಿಗನಾಗಿ ಬಿಟ್ಟು ನಿಮ್ಮ ನಿಮ್ಮ ಮನೆಗೆ ಚದರಿ ಹೋಗುವ ಕಾಲವು ಬರುತ್ತದೆ. ಈಗಾಗಲೇ ಬಂದಿದೆ. ಆದರೆ ಪಿತನು ನನ್ನೊಡನೆ ಇರುವುದರಿಂದ ನಾನು ಒಬ್ಬಂಟಿಗನಲ್ಲ.
33 : ನಿಮಗೆ ನನ್ನಲ್ಲಿ ಶಾಂತಿಸಮಾಧಾನ ಲಭಿಸಲೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಕಷ್ಟಸಂಕಷ್ಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ,” ಎಂದು ಹೇಳಿದರು.
----------------
----------------
ಕ್ರಿಸ್ತ ಹೇಳುತ್ತಿದ್ದ ಮಾತುಗಳನ್ನು ಕೇಳುತ್ತಿದ್ದ ಶಿಷ್ಯರ ವಿಶ್ವಾಸ ವೃದ್ದಿಸುತ್ತಿತ್ತು. ಕೆಲವೊಮ್ಮೆ ನಂಬಲು ಅಸಾಧ್ಯವಿತ್ತು. ವಿಷಯ ಮನದಟ್ಟಾಗುತ್ತಿರಲಿಲ್ಲ, ತಮ್ಮ ನಿರೀಕ್ಷೆಗೂ ಮತ್ತು ಕ್ರಿಸ್ತರ ಮಾತುಗಳಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಆದರೂ ಅವರು ವಿಶ್ವಾಸಿಗಳಾಗುತ್ತಿದ್ದರು. ``ನೀವು ಎಲ್ಲವನ್ನು ಬಲ್ಲವರು ನೀವು ದೇವರಿಂದ ಬಂದವರೆಂದು ವಿಶ್ವಾಸಿಸುತ್ತೇವೆ’’ ಎಂದ ಶಿಷ್ಯರಂತೆ ನಾವೂ ವಿಶ್ವಾಸ ಹೊಂದಬೇಕು.
---------------------------
© 'ದನಿ' ಮಾಧ್ಯಮ ಮನೆ

No comments:
Post a Comment