ಮೇ 24,
2020 ಭಾನುವಾರ [ಬಿಳಿ]
ಪ್ರಭುವಿನ ಸ್ವರ್ಗಾರೋಹಣದ ಮಹೋತ್ಸವ
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1.1-11
ಕೀರ್ತನೆ 47: 1-2, 5-8 ಶ್ಲೋಕ.5
ಏರಿದನು ಪ್ರಭು ಜಯಜಯಕಾರದೊಂದಿಗೆ,
ಆರೋಹಣವಾದನು ತುತೂರಿ ನಾದದ ಜೊತೆಗೆ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಎರಡನೇ ವಾಚನ: ಎಫೆಸದವರಿಗೆದವರಿಗೆ 1.17-23
ಶುಭಸಂದೇಶ: ಮತ್ತಾಯ
28.16-20
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1.1-11
1 : ಸನ್ಮಾನ್ಯ ಥೆಯೊಫಿಲನೇ, ಯೇಸುಸ್ವಾಮಿ ಸ್ವರ್ಗಕ್ಕೆ ಆರೋಹಣವಾದ ದಿನದವರೆಗೆ ಮಾಡಿದ ಕಾರ್ಯಗಳನ್ನೂ ನೀಡಿದ ಬೋಧನೆಗಳನ್ನೂ ಕುರಿತು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದಿದ್ದೇನೆ.
2 : ಸ್ವರ್ಗಾರೋಹಣಕ್ಕೆ ಮೊದಲು ಪ್ರೇಷಿತರನ್ನಾಗಿ ತಾವು ಆರಿಸಿಕೊಂಡಿದ್ದವರಿಗೆ ಪವಿತ್ರಾತ್ಮ ಅವರ ಮುಖಾಂತರ ಉಪದೇಶ ಮಾಡಿದರು.
3 : ತಮ್ಮ ಮರಣದ ನಂತರ ಅವರು ನಲವತ್ತು ದಿನಗಳವರೆಗೆ ಆ ಪ್ರೇಷಿತರಿಗೆ ಪ್ರತ್ಯಕ್ಷರಾದರು. ತಾವು ಜೀವಂತವಾಗಿರುವುದನ್ನು ವಿವಿಧ ರೀತಿಯಲ್ಲಿ ಸ್ಪಷ್ಟಪಡಿಸಿದರು. ದೇವರ ಸಾಮ್ರಾಜ್ಯವನ್ನು ಕುರಿತು ಅವರಿಗೆ ಬೋಧಿಸಿದರು.
4 : ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಜೆರುಸಲೇಮನ್ನು ಬಿಟ್ಟು ಹೋಗಬೇಡಿ; ನಾನು ನಿಮಗೆ ತಿಳಿಸಿದಂತೆ ನನ್ನ ಪಿತನು ವಾಗ್ದಾನ ಮಾಡಿರುವ ವರಕ್ಕಾಗಿ ಕಾದುಕೊಂಡಿರಿ.
5 : ಏಕೆಂದರೆ, ಯೊವಾನ್ನನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದನು; ಆದರೆ ಇನ್ನು ಕೆಲವೇ ದಿನಗಳಲ್ಲಿ ನೀವು ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು.
6 : ಯೇಸುಸ್ವಾಮಿಯ ಸ್ವರ್ಗಾರೋಹಣ ಮತ್ತೊಮ್ಮೆ ಯೇಸುಸ್ವಾಮಿ ತಮ್ಮೊಡನೆ ಇದ್ದಾಗ ಪ್ರೇಷಿತರು, “ಪ್ರಭೂ, ನೀವು ಇದೀಗಲೇ ಇಸ್ರಯೇಲ್ ಜನರ ರಾಜ್ಯವನ್ನು ಪುನರ್ ಸ್ಥಾಪಿಸುವಿರೋ?” ಎಂದು ಕೇಳಿದರು.
7 : ಯೇಸು ಪ್ರತ್ಯುತ್ತರವಾಗಿ, “ಸಮಯ ಸಂದರ್ಭಗಳು ನನ್ನ ಪಿತನ ಸ್ವಾಧೀನದಲ್ಲಿವೆ. ಅವುಗಳನ್ನು ತಿಳಿಯುವುದು ನಿಮ್ಮ ಕೆಲಸವಲ್ಲ.
8 : ಆದರೆ ಪವಿತ್ರಾತ್ಮ ಅವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯುತರಾಗುವಿರಿ. ಆಗ ನೀವು ಜೆರುಸಲೇಮಿನಲ್ಲೂ ಜುದೇಯದಲ್ಲೂ ಸಮಾರಿಯದಲ್ಲೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು.
9 : ಇದನ್ನು ಹೇಳಿದ ಮೇಲೆ ಪ್ರೇಷಿತರು ನೋಡುತ್ತಿದ್ದಂತೆಯೇ, ಯೇಸು ಸ್ವರ್ಗಾರೋಹಣವಾದರು. ಮೇಘವೊಂದು ಕವಿದು ಅವರನ್ನು ಕಣ್ಮರೆಮಾಡಿತು.
10 : ಹೀಗೆ ಮೇಲೇರುತ್ತಿದ್ದ ಯೇಸುಸ್ವಾಮಿಯನ್ನು ನೋಡುತ್ತಿದ್ದ ಪ್ರೇಷಿತರ ದೃಷ್ಟಿ ಇನ್ನೂ ಆಕಾಶದತ್ತ ನಾಟಿತ್ತು. ಆಗ ಬಿಳಿಯ ವಸ್ತ್ರ ಧರಿಸಿದ್ದ ವ್ಯಕ್ತಿಗಳಿಬ್ಬರು ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತರು.
11 : “ಗಲಿಲೇಯದ ಜನರೇ, ನೀವು ಆಕಾಶವನ್ನು ದಿಟ್ಟಿಸಿ ನೋಡುತ್ತಾ ನಿಂತಿರುವುದೇಕೆ? ಸ್ವರ್ಗಾರೋಹಣರಾದ ಈ ಯೇಸು ನಿಮ್ಮ ಬಳಿಯಿಂದ ಹೇಗೆ ಸ್ವರ್ಗಕ್ಕೆ ಏರಿ ಹೋಗುವುದನ್ನು ಕಂಡಿರೋ ಹಾಗೆಯೇ ಅವರು ಹಿಂದಿರುಗಿ ಬರುವರು,” ಎಂದು ಹೇಳಿದರು.
ಕೀರ್ತನೆ
47: 1-2, 5-8 ಶ್ಲೋಕ.5
ಏರಿದನು ಪ್ರಭು ಜಯಜಯಕಾರದೊಂದಿಗೆ,
ಆರೋಹಣವಾದನು ತುತೂರಿ ನಾದದ ಜೊತೆಗೆ
2 : ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ / ಆನಂದದಾಯಕ ರಾಜಾಧಿರಾಜನ ಆ ನಗರ //
3 : ಅದರ ಕೋಟೆಕೊತ್ತಲಗಳ ನಡುವೆ ದೇವನು / ತಾನೇ ಸುಭದ್ರ ದುರ್ಗವೆಂದು ತೋರಿಹನು //
4 : ಕೂಡಿದರೊಂದಾಗಿ ರಾಜರುಗಳು, ದಾಳಿಮಾಡಬಂದರು / ನೋಡಿ ನಿಬ್ಬೆರಗಾದರು, ತಲ್ಲಣಗೊಂಡು ಓಡಿಹೋದರು //
5 : ಕೂಡಿದರೊಂದಾಗಿ ರಾಜರುಗಳು, ದಾಳಿಮಾಡಬಂದರು / ನೋಡಿ ನಿಬ್ಬೆರಗಾದರು, ತಲ್ಲಣಗೊಂಡು ಓಡಿಹೋದರು //
6 : ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ / ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ //
7 : ದೇವನು ಭೂಮಂಡಲಕ್ಕೆಲ್ಲಾ ಒಡೆಯನು / ಕೀರ್ತನೆಯಿಂದ ಕೊಂಡಾಡಿರಿ ಆತನನು //
8 : ವಹಿಸಿಕೊಂಡನು ದೇವನು ಸರ್ವಾಧಿಪತ್ಯ / ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ //
9 : ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು / ಅಬ್ರಹಾಮನ ದೇವಜನರೊಡನೆ ಸೇರಿಕೊಂಡರು // ಭೂಪಾಲರೆಲ್ಲರೂ ದೇವರಿಗೆ ಅಧೀನರು / ಸರ್ವೋನ್ನತನು, ಸಾರ್ವಭೌಮನು ದೇವರು //
ಎರಡನೇ ವಾಚನ: ಎಫೆಸದವರಿಗೆದವರಿಗೆ 1.17-23
17 : ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ ತಂದೆಯೂ ಆದವರು, ನಿಮಗೆ ಜ್ಞಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ; ತಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ, ಎಂದು ಪ್ರಾರ್ಥಿಸುತ್ತೇನೆ.
18 : ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ; ಅವರ ಬೆಳಕು ನಿಮಗೆ ಕಾಣುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು.
19 : ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು.
20 : ಈ ಮಹಿಮಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಆಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೇಸುಕ್ರಿಸ್ತರೇ ಆಡಳಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ.
21 : ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿಗಳಿಸಿದವರೆಲ್ಲರಿಗಿಂತಲೂ ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು.
22 : ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ, ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ.
23 : ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣ ಉಳ್ಳದ್ದಾಗಿದೆ.
ಶುಭಸಂದೇಶ:
ಮತ್ತಾಯ
28.16-20
16 : ಹನ್ನೊಂದು ಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು.
17 : ಅಲ್ಲಿ ಯೇಸುಸ್ವಾಮಿಯನ್ನು ಕಂಡು ಅವರನ್ನು ಪೂಜಿಸಿದರು. ಆದರೆ ಕೆಲವರು ಸಂದೇಹಪಟ್ಟರು.
18 : ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ.
19 : ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ, ಮತ್ತು ಪವಿತ್ರಾತ್ಮ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ.
20 : ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು.
-----------------
-----------------
ಪ್ರಭುವಿನ ಸ್ವರ್ಗಾರೋಹಣ ಹಬ್ಬವನ್ನು ಆಚರಿಸುತ್ತಿರುವ ನಮಗೆ ಕ್ರಿಸ್ತರ ಮಹಾಮಹಿಮೆಯ ದರ್ಶನವಾಗುತ್ತದೆ. ಈ ಮಹಿಮೆಯ ಕ್ರಿಸ್ತರ ವಿನಯದಿಂದ ಹಾಗೂ ತಂದೆಯ ಚಿತ್ತಕ್ಕೆ ಮಣಿಯುವುದರ ಮೂಲಕವೇ ಆದದ್ದು ಎಂಬುದನ್ನು ನೆನಪಿಸುತ್ತದೆ. ಶಿಲುಬೆ ಹೊತ್ತು ನಡೆದ ಕ್ರಿಸ್ತರು, ನೋವಿನಿಂದ ಸಂತೋಷದೆಡೆಗೆ ಸಾಗುವ ಸಾಹಸಿಯಾಗಿದ್ದರು. ಶಿಲುಬೆಹೊತ್ತು ನಡೆದ ಕ್ರಿಸ್ತ ಸ್ವರ್ಗವೇರುವ ಅನ್ವೇಷಕರಾಗುತ್ತಾರೆ. ಶಿಲುಬೆ-ಕಷ್ಟಗಳು ಕ್ರಿಸ್ತ ಜೀವನಕ್ಕೆ ಗುರಿನೀಡುತ್ತವೆ. ಪುನರುತ್ಥಾನಗೊಂಡ ಪ್ರಭು ನಲವತ್ತು ದಿನಗಳ ನಂತರ ಸ್ವರ್ಗಕ್ಕೇರಿ ತಾನು ಪ್ರಾರಂಭಿಸಿದ ರಕ್ಷಣಾ ಕಾರ್ಯವನ್ನು ಸಂಪನ್ನಗೊಳಿಸಿದರು.
-------------
ಪವಿತ್ರ ಧರ್ಮಸಭೆ ಇಂದು ಯೇಸುವಿನ ಸ್ವರ್ಗಾರೋಹಣದ ಹಬ್ಬವನ್ನು ಕೊಂಡಾಡುತ್ತಿದೆ. ಪ್ರೆಷಿತರು ನೊಡುತ್ತಿದ್ದಂತೆಯೇ ಯೇಸು ಸ್ವರ್ಗಾರೊಹಣರಾದರು ಎಂದು ಶುಭಸಂದೇಶ ಸಾರುತ್ತದೆ. ಯೇಸುವಿನ ಪುನರುತ್ಥಾನವು ಅವರಿಗೆ ತನ್ನ ತಂದೆಯಿಂದ ಕೊಡಲ್ಪಟ್ಟಿರುವ ಮಹಿಮೆಯನ್ನು ಸಾರುತ್ತದೆ. ಮರಣದ ಮೇಲಿರುವ ಕ್ರಿಸ್ತನ ಅಧಿಕಾರವನ್ನು ತೋರುತ್ತದೆ. ಯೇಸುವಿನ ಸ್ವರ್ಗಾರೊಹಣ ಎಂಬುದು ಯೇಸು ಲೋಕಕ್ಕೆ ಸೇರಿದವರಲ್ಲ, ಸ್ವರ್ಗದಿಂದ ಬಂದ ದೇವರ ಪುತ್ರ ಎಂಬುದನ್ನು ದೃಢಪಡಿಸುತ್ತದೆ. ಮಾನವರಾದ ನಾವು ನಮ್ಮ ಪಾಪಗಳಿಂದ ದಿನೇ ದಿನೇ ದೇವರಿಂದ ದೂರದೂರ ಸಾಗುತ್ತಿರುವಾಗ ನಮ್ಮ ಮೇಲಿನ ಪ್ರೀತಿಯಿಂದ ದೇವರು ತನ್ನ ಮಗನ ಮೂಲಕ ಹೊಸ ನಿಕಟ ಸಂಪರ್ಕವನ್ನು ಏರ್ಪಡಿಸಿದರು. ಹೀಗೆ ದೇವರಿಂದ ಬಂದ ಯೇಸು ತನ್ನ ತಂದೆಯ ಕಾರ್ಯವನ್ನು ಮುಗಿಸಿದ ಬಳಿಕ ತನ್ನ ತಂದೆಯ ಬಳಿ ಹಿಂತಿರುಗುತ್ತಾರೆ.
ಯೇಸುವಿನ ಸ್ವರ್ಗಾರೊಹಣ ನಮಗೆ ಮೂರು ವಿಷಯಗಳನ್ನು ತಿಳಿಸುತ್ತದೆ; ಒಂದು ಯೇಸುಕ್ರಿಸ್ತರು ಈ ಲೋಕದಲ್ಲಿ ತನ್ನ ಕಾರ್ಯವನ್ನು ನೆರವೇರಿಸಿ ತಮ್ಮ ತಂದೆಯ ಮನೆಗೆ ಮರಳಿದರು. ಎರಡು, ನಾವೂ ಸಹ ಇಹಲೋಕದ ಯಾತ್ರೆ ಮುಗಿಸಿ ತಂದೆಯ ಬಳಿ ಸೇರಬೇಕು. ಅದು ನಮ್ಮ ಜೀವನದ ಗುರಿಯಾಗಬೇಕು. ಮೂರು, ಯೇಸುಕ್ರಿಸ್ತರು ಭೂಪರ ಲೋಕಗಳ ಒಡೆಯ, ಸ್ವರ್ಗಕ್ಕೇರಿ ಪಿತನ ಸನಿಹದಲ್ಲಿದ್ದಾರೆ. ತನ್ನ ಸಂದೇಶವನ್ನು ಆಲಿಸಿ ತನ್ನ ಬಲಿಯರ್ಪಣೆಯಿಂದ ಮತ್ತೆ ತನ್ನ ತಂದೆಯ ಪ್ರೀತಿಯನ್ನು ಗಳಿಸಿದವರು ತಾನಿರುವಡೆ ಎಲ್ಲರು ಬರಬೇಕೆಂಬುದೇ ಅವರ ಇಚ್ಚೇ. ಈ ಸ್ವರ್ಗಾರೋಹಣ ಹಬ್ಬದಂದು ನಾವು ಈ ಸಂದೇಶವನ್ನು ಪ್ರಕಟಪಡಿಸಿ ಇದಕ್ಕೆ ಸಾಕ್ಷಿಗಳಾಗಬೇಕು.
ಸಾಕ್ಷಿಗಳಾಗುವುದೆಂದರೆ ಶುಭಸಂದೇಶಕ್ಕೆ ಅನುಗುಣವಾಗಿ ಬಾಳುವುದು. ಯೇಸು ಸ್ವರ್ಗಾರೋಹಣರಾದರು ಎಂದಾಗ ಅವರು ಸ್ವರ್ಗಕ್ಕೆ ಹೋದರು, ತಮ್ಮ ತಂದೆಯ ಬಳಿಹೋದರು, ತಮ್ಮ ಮಹಿಮೆಯನ್ನು ಹೊಂದಿದರು ಎಂಬ ಹಲವು ರೀತಿಯ ಅರ್ಥಗಳನ್ನು ಗ್ರಹಿಸಕೊಳ್ಳಬಹುದು. ಬೈಬಲ್ ಗ್ರಂಥದಲ್ಲಿ, ಯೇಸು ಮೇಲಕ್ಕೆ ಹೊದಂತೆ ಮೋಡವು ಅವರನ್ನು ಆವರಿಸಕೊಂಡಿತು ಎಂದು ನಾವು ಓದುತ್ತೇವೆ. ಅಂದರೆ, ಯೇಸು ದೈವಶಕ್ತಿಯಿಂದ ದೈವ ಪ್ರಸನ್ನತೆಯಿಂದ ಆವರಿಸಿಲ್ಪಟ್ಟರು ಎಂದಾರ್ಥ. ಸ್ವರ್ಗಕ್ಕೆ ಹೋದರು ಎಂದರೆ ಸಂಪೂರ್ಣತೆಯನ್ನು ಪಡೆದರು, ದೇವರ ಮಹಿಮೆಯಲ್ಲಿ ಭಾಗಿಯದರು, ದೇವರ ಸಮ್ಮುಖದಲ್ಲಿ ಸದಾ ಇರುವರು ಎಂದು ಹೆಳಬಹುದು. ಯೆಸುವಿನ ಸ್ವರ್ಗರೊಹಣ, ಅವರ ವಿಧೇಯೆತೆಗೆ ತಮ್ಮ ಯಾತನೆ ಮತ್ತು ಶಿಲುಬೆಯ ಮರಣದ ಮೂಲಕ ಪಾಪದ ಮತ್ತು ಮರಣದ ಮೇಲೆ ಪಡೆದ ವಿಜಯಕ್ಕೆ ಪಿತ ದೇವರು ನೀಡಿದ ಅತ್ಯಂತ ದೊಡ್ಡ ಸಂಭಾವನೆ
ಯೇಸುವಿನ ಸ್ವರ್ಗಾರೋಹಣ ಧರ್ಮಸಭೆಗೆ ಒಂದು ಕರ್ತವ್ಯವನ್ನು, ಪ್ರತಿಯೊಬ್ಬ ಕ್ರೈಸ್ತಭಕ್ತನು ನೆರವೇರಿಸಬೇಕಾದ ಒಂದು ಜವಾಬ್ದಾರಿಯನ್ನು ನೀಡಿದೆ. ಭೂಲೋಕದ ಕಟ್ಟಕಡೆವರೆಗೂ ನನಗೆ ಸಾಕ್ಷಿಗಳಾಗಿರಿ ಎಂದು ಹೇಳುವುದರ ಮೂಲಕ ಯೇಸು ಅವರು ಆರಂಭಿಸಿದ ರಕ್ಷಣಾ ಕಾರ್ಯವನ್ನು ಪೂರ್ಣಗೊಳಿಸಲು ಆದೇಶಿಸುತ್ತಾರೆ. ಈ ಆದೇಶ ಪ್ರೆಷಿತರಿಗೆ, ಶಿಷ್ಯರಿಗೆ ಮತ್ತು ಅವರಲ್ಲಿ ವಿಶ್ವಾಸವಿರಿಸಿರುವ ಎಲ್ಲಾರಿಗೂ ಅನ್ವಯಿಸುತ್ತದೆ. ಸಾಕ್ಷಿಗಳಾಗುವುದೆಂದರೆ ಅವರು ಶುಭಸಂದೇಶವನ್ನು ಬೋಧನೆ ಅಥವಾ ಬರಹದ ಮೂಲಕ ಪ್ರಕಟಿಸುವುದು, ಪ್ರಚಾರ ಮಡುವುದು ಎಂದಷ್ಟೆ ಅಲ್ಲ. ಆ ಶುಭಸಂದೇಶಕ್ಕೆ ಅನುಗುಣವಾಗಿ ಜೀವಿಸುವುದು. ಉತ್ತಮ ಕ್ರೈಸ್ತ ಜಿವನದ ಮೂಲಕ ನೀಡುವ ಸಾಕ್ಷ್ಯ ನಾವು ನೀಡಬಹುದಾದ ಅತ್ಯುತ್ತಮ ಸಾಕ್ಷ್ಯವಾಗಿದೆ.
ಯೇಸುವು ನಮ್ಮನ್ನಗಲಿ ದೇವರ ಬಳಿಗೆ ಹೋಗುವುದರಿಂದ ನಮಗೆ ಪರಮತ್ರಿತ್ವದ ಮೂರನೇ ವ್ಯಕ್ತಿಯನ್ನು ಕಳುಹಿಸಿಕೊಟ್ಟರು. ಅವರೇ ಪವಿತ್ರಾತ್ಮರು. ಆ ಆತ್ಮರು ಯಾವಾಗಲು ನಮ್ಮೊಂದಿಗಿದ್ದು ನಮ್ಮನ್ನು ಕೈಹಿಡಿದು ನಡೆಸುವವರಗಿದ್ದಾರೆ. ಹೀಗೆ ನಾವು ಪ್ರಭುಕ್ರಿಸ್ತರ ಶಕ್ತಿಯುತ ಸಾಕ್ಷಿಗಳಾಗಿ, ಭೂಲೋಕದ ಕಟ್ಟಕಡೆಯವರೆಗೆ ಶುಭಸಂದೇಶವನ್ನು ಧೈರ್ಯವಾಗಿ ಸಾರಲು ಸಾಧ್ಯ. ಇಂದು ನಾವು ನಮ್ಮಬಳಿ ಇರುವ ಅಲ್ಪಸ್ವಲ್ಪ ವಿಶ್ವಾಸವನ್ನು ಪವಿತ್ರಾತ್ಮರಿಂದ ಬಲಗೊಳಿಸಬೇಕಾಗಿದೆ. ಇದೇ ವಿಶ್ವಾಸವು ನಮ್ಮನ್ನು ಪ್ರಭುಕ್ರಿಸ್ತರ ಎರಡನೇ ಬರುವಿಕೆಗೆ ಧೈರ್ಯದಿಂದ ಎದುರುಗೊಳ್ಳುವಂತೆ ಸ್ಫೂರ್ತಿ ತುಂಬುತ್ತದೆ.
------------------------
© 'ದನಿ' ಮಾಧ್ಯಮ ಮನೆ

No comments:
Post a Comment