Saturday, 25 April 2020

ಪಾಸ್ಖಕಾಲದ ನಾಲ್ಕನೆಯ ಭಾನುವಾರ

 3, 2020 ಭಾನುವಾರ                                                  [ಬಿಳಿ]
ಪಾಸ್ಕ ಕಾಲದ 4ನೇ ಭಾನುವಾರ
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:14, 36-41
ಕೀರ್ತನೆ 23: 1-6 ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ,
ಕುಂದುಕೊರತೆಗಳೆಲ್ಲಿಯವು ಎನಗೆ?
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಎರಡನೇ ವಾಚನ: 1 ಪೇತ್ರ 2.20-25
ಶುಭಸಂದೇಶ: ಯೊವಾನ್ನ 10.1-10

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:14, 36-41
14 : ಪೇತ್ರನ ಪ್ರಬೋಧನೆ ಆಗ ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನ ಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ.
36 : “ಇಸ್ರಯೇಲಿನ ಜನರೆಲ್ಲರಿಗೆ ಇದು ನಿಸ್ಸಂದೇಹವಾಗಿ ತಿಳಿದಿರಲಿ: ನೀವು ಶಿಲುಬೆಗೇರಿಸಿದ ಯೇಸುಸ್ವಾಮಿಯನ್ನೇ ದೇವರು ಪ್ರಭುವನ್ನಾಗಿಯೂ ಅಭಿಷಿಕ್ತ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ.”
37 : ಇದನ್ನು ಕೇಳಿದ ಜನರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪ್ರೇಷಿತರನ್ನು ಉದ್ದೇಶಿಸಿ, “ಸಹೋದರರೇ, ಈಗ ನಾವು ಮಾಡಬೇಕಾದುದು ಏನು?” ಎಂದು ಕೇಳಿದರು.
38 : ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿ ಒಬ್ಬನೂ ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗಲಿ; ಯೇಸುಕ್ರಿಸ್ತರ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆಯಲಿ. ಇದರಿಂದ ನೀವು ಪಾಪಕ್ಷಮೆಯನ್ನು ಪಡೆಯುವಿರಿ; ದೇವರ ವರವಾದ ಪವಿತ್ರಾತ್ಮರನ್ನು ಹೊಂದುವಿರಿ.
39 : ವಾಗ್ದಾನವನ್ನು ನಿಮಗೆ ಮಾತ್ರವಲ್ಲ, ನಿಮ್ಮ ಸಂತತಿಗೂ ದೂರ ಇರುವ ಎಲ್ಲರಿಗೂ ಮತ್ತು ಸರ್ವೇಶ್ವರನಾದ ದೇವರು ತಮ್ಮತ್ತ ಆಹ್ವಾನಿಸುವ ಪ್ರತಿಯೊಬ್ಬನಿಗೂ ಮಾಡಲಾಗಿದೆ,” ಎಂದನು.
40 : ಪೇತ್ರನು ಅವರಿಗೆ ಹಲವಾರು ವಿಧದಲ್ಲಿ ಮನವಿಮಾಡಿದನು. ‘ ದುಷ್ಟ ಪೀಳಿಗೆಯಿಂದ ನಿಮ್ಮನ್ನು ಸಂರಕ್ಷಿಸಿಕೊಳ್ಳಿ,’ ಎಂದು ಎಚ್ಚರಿಸಿದನು.
41 : ಅವನ ಬೋಧನೆಯನ್ನು ಅಂಗೀಕರಿಸಿದ ಅನೇಕರು ದೀಕ್ಷಾಸ್ನಾನ ಪಡೆದರು. ಅಂದೇ ಸುಮಾರು ಮೂರು ಸಾವಿರ ಜನರು ಸಭೆಯನ್ನು ಸೇರಿಕೊಂಡರು.


ಕೀರ್ತನೆ 23: 1-6 ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ,
ಕುಂದುಕೊರತೆಗಳೆಲ್ಲಿಯವು ಎನಗೆ?
1 : ಪ್ರಭು ಕುರಿಗಾಹಿಯಾಗಿರಲು ನನಗೆ / ಕುಂದುಕೊರತೆಗಳೆಲ್ಲಿಯವು ಎನಗೆ? //
2 : ಹಸಿರುಗಾವಲುಗಳಲೆನ್ನ ತಂಗಿಸುವನು / ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು //
3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ | ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ ||
4 : ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ | ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ | ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ ||
5 : ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು | ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು ||
6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ / ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //

ಎರಡನೇ ವಾಚನ: 1 ಪೇತ್ರ 2:20-25
20 : ನೀವು ತಪ್ಪುಮಾಡಿ, ಶಿಕ್ಷೆಗೆ ಗುರಿಯಾದಾಗ ತಾಳ್ಮೆಯಿಂದಿದ್ದರೆ ಅದೇನೂ ದೊಡ್ಡ ಕಾರ್ಯವಲ್ಲ. ಆದರೆ ಒಳ್ಳೆಯದನ್ನು ಮಾಡಿಯೂ ಬರುವ ಹಿಂಸೆಬಾಧೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡರೆ, ದೇವರು ನಿಮ್ಮನ್ನು ಮೆಚ್ಚುತ್ತಾರೆ.
21 : ನೀವು ಹೀಗೆ ಜೀವಿಸಬೇಕೆಂದೇ ದೇವರು ನಿಮ್ಮನ್ನು ಕರೆದಿದ್ದಾರೆ. ಕ್ರಿಸ್ತಯೇಸು ಸಹ ನಿಮಗಾಗಿ ಹಿಂಸೆಬಾಧೆಯನ್ನು ಅನುಭವಿಸಿದರು; ತಮ್ಮ ಹೆಜ್ಜೆಯ ಜಾಡನ್ನೇ ನೀವು ಅನುಸರಿಸುವಂತೆ ನಿಮಗೊಂದು ಆದರ್ಶವನ್ನು ಬಿಟ್ಟುಹೋದರು.
22 : ಅವರು ಯಾವ ಪಾಪವನ್ನೂ ಮಾಡಲಿಲ್ಲ. ಅವರ ಬಾಯಿಂದ ಅಬದ್ಧವಾದ ಮಾತೊಂದೂ ಕೇಳಿಬರಲಿಲ್ಲ.
23 : ಅವರು, ಅವಮಾನಪಡಿಸಿದವರನ್ನು ಪ್ರತಿಯಾಗಿ ಅವಮಾನ ಪಡಿಸಲಿಲ್ಲ. ಅವರು ಯಾತನೆಯನ್ನು ಅನುಭವಿಸುವಾಗಲೂ ಯಾರಿಗೂ ಬೆದರಿಕೆ ಹಾಕಲಿಲ್ಲ. ಬದಲಿಗೆ, ಸತ್ಯಸ್ವರೂಪರೂ ನ್ಯಾಯಾಧಿಪತಿಯೂ ಆದ ದೇವರಿಗೆ ತಮ್ಮನ್ನೇ ಒಪ್ಪಿಸಿಕೊಂಡರು.
24 : ನಾವು ಪಾಪದ ಪಾಲಿಗೆ ಸತ್ತು, ಸತ್ಯಕ್ಕೋಸ್ಕರ ಜೀವಿಸುವಂತೆ ಕ್ರಿಸ್ತಯೇಸು ತಮ್ಮ ದೇಹದಲ್ಲಿ ನಮ್ಮ ಪಾಪಗಳನ್ನು ಹೊತ್ತು ಶಿಲುಬೆಯ ಮರವನ್ನೇರಿದರು. ಅವರ ಗಾಯಗಳಿಂದ ನೀವು ಗುಣಹೊಂದಿದಿರಿ.
25 : ನೀವು ದಾರಿತಪ್ಪಿದ ಕುರಿಗಳಂತೆ ಅಲೆಯುತ್ತಿದ್ದಿರಿ. ಈಗಲಾದರೋ ನಿಮ್ಮ ಆತ್ಮಗಳನ್ನು ಕಾಯುವ ಕುರಿಗಾಹಿಯೂ ಸಂರಕ್ಷಕನೂ ಆದಾತನ ಬಳಿಗೆ ಮರಳಿದ್ದೀರಿ.

ಶುಭಸಂದೇಶ: ಯೊವಾನ್ನ 10:1-10
 1: “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿ ಬರುವವನು ಕಳ್ಳ ಹಾಗೂ ಕೊಳ್ಳೆಗಾರ.
2 : ಬಾಗಿಲ ಮೂಲಕ ಬರುವವನು ಕುರಿಗಾಹಿ.
3 : ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರಗೆ ಬಿಡುತ್ತಾನೆ.
4 : ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು.
5 : ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ.”
6 : ಯೇಸುಸ್ವಾಮಿ ಹೇಳಿದ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ.
7 : ಆದುದರಿಂದ ಯೇಸುಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು.
8 : ನನಗಿಂತ ಮೊದಲು ಬಂದವರೆಲ್ಲರು ಕಳ್ಳರು ಹಾಗೂ ಕೊಳ್ಳೆಗಾರರು, ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
9 : ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ.
10 : ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ, ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು.
-------------------
ಒಬ್ಬ ಪಾದ್ರಿ ತನ್ನ ಯಾಜಕೀಯ ಜೀವನದ ೫೦ನೇ ವಾರ್ಷಿಕೋತ್ಸವನ್ನು ಆಚರಿಸಿಕೊಂಡ ಕಥೆಯಿದು. ವಾರ್ಷಿಕೋತ್ಸದ ಆಚರಣೆಗೆ ಯಾಜಕ ತನ್ನ ಆತ್ಮೀಯ ಗೆಳೆಯ ರಿಚರ್ಡ್ ಬರ್ಟನ್‍‍ ನನ್ನು ಆಹ್ವಾನಿಸಿ ಕೀರ್ತನೆ ೨೩ನ್ನು ಹಾಡಬೇಕೆಂದು ಕೇಳಿಕೊಳ್ಳುತ್ತಾನೆ. ಆಗ ರಿಚರ್ಡ್ ಬರ್ಟನ್‍ ’ನಾನು ಹಾಡಿದ ನಂತರ ನೀವು ಕೂಡ ಆ ಕೀರ್ತನೆಯನ್ನು ಹಾಡುವುದಾದರೆ’ ಎಂಬ ಷರತ್ತನ್ನು ಹಾಕಿ ಹಾಡಲು ಒಪ್ಪಿಕೊಳ್ಳುತ್ತಾನೆ.
ಕಾರ್ಯಕ್ರಮದಲ್ಲಿ ಸಂಗೀತಜ್ಞ ರಿಚರ್ಡ್ ಬರ್ಟನ್‍ ಸಭಿಕರ ಮುಂದೆ ನಿಂತು ತನ್ನ ಜನಪ್ರಿಯ ಕೀರ್ತನೆಯನ್ನು ಸೊಗಸಾಗಿ ಹಾಡುತ್ತಿದ್ದಂತೆ ಸಭಿಕರೆಲ್ಲರೂ ಬೆರಗಾಗಿ ರಿಚರ್ಡ್ ಬರ್ಟನ್‍‍ನನ್ನು ಮನಸಾರೆ ಶ್ಲಾಘಿಸಿದರು. ನಂತರ ಪಾದ್ರಿಯು ಸಂಗೀತಜ್ಞಾನ ಇಲ್ಲದಿದ್ದರೂ ವಿನಮ್ರನಾಗಿ ಅದೇ ಕೀರ್ತನೆಯನ್ನು ತನ್ಮಯನಾಗಿ ಹಾಡುತ್ತಿದ್ದಂತೆ ನೆರೆದಿದ್ದ ಜನರು ಕಣ್ಣೀರಿಡುತ್ತಾ ಭಾವಪರವಶರಾದರು. ಅದನ್ನು ಗಮಿಸಿಸಿದ ಒಬ್ಬ ವ್ಯಕ್ತಿ ರಿಚರ್ಡ್ ಬರ್ಟನ್‍‍ನನ್ನು ಕೇಳಿದರು, “ನೀವು ಹಾಡಿದಾಗ ಜನರು ಶ್ಲಾಘಿಸಿದರು, ಆದರೆ ಪಾದ್ರಿ ಹಾಡಿದ್ದನ್ನು ಕೇಳಿ ಇಡೀ ಸಭೆಯು ಭಾವಪರವಶವಾದುದ್ದು ಹೇಗೆ?” ಅದಕ್ಕೆ ರಿಚರ್ಡ್ ಬರ್ಟನ್‍‍ “ನಾನು ಕೀರ್ತನೆ ಮಾತ್ರ ಬಲ್ಲೆ, ಆದರೆ ಗುರುಗಳು ಕುರುಬನನ್ನೇ ಬಲ್ಲವರು” ಎಂದು ಉದ್ಗರಿಸಿದರು.
----
ಒಬ್ಬ ಕುರುಬ ತನ್ನ ಕುರಿಗಳನ್ನು ಮೇಯಿಸುತ್ತಿದ್ದಾಗ ವೇಗವಾಗಿ ಒಂದು ಕಾರು ಬಂದು ನಿಂತಿತು. ಕಾರಿನಿಂದ ಸೂಟುಬೂಟು ಹಾಕಿಕೊಂಡಿದ್ದ ಒಬ್ಬ ವ್ಯಕ್ತಿ ಹೊರಬಂದು ಕುರುಬನನ್ನು ಮತ್ತು ದೊಡ್ಡದಾದ ಕುರಿ ಮಂದೆಯನ್ನು ನೋಡಿ, “ಏಯ್, ನಿನ್ನಲ್ಲಿ ಎಷ್ಟು ಕುರಿಗಳಿವೆ ಎಂದು ನಾನು ಒಮ್ಮಲೇ ಹೇಳಿದರೆ ನನಗೆ ನಿನ್ನ ಒಂದು ಕುರಿಯನ್ನು ಕೊಡುವೆಯಾ?” ಎಂದು ಕೇಳಿದ. ಕುರುಬ ಆ ವ್ಯಕ್ತಿಯನ್ನು ದಿಟ್ಟಿಸಿ ಶಾಂತನಾಗಿ “ಆಗಬಹುದು” ಎಂದ. 
ಸೂಟುಬೂಟಿನ ವ್ಯಕ್ತಿ ಕೂಡಲೇ ತನ್ನ ಸೆಲ್‍ಪೋನನ್ನು ಲ್ಯಾಪ್‍ಟಾಪ್‍ಗೆ ಜೋಡಿಸಿದ. ಇಂರ್ನೆಟ್‍ನಲ್ಲಿ ಸ್ಯಾಟ್ಲೈಟ್ ನ್ಯಾವಿಗೇಷನ್ ಮೂಲಕ ಆ ಪ್ರದೇಶವನ್ನು ಸರ್ಫಿಂಗ್ ಮಾಡಿ ಕೆಲವೇ ನಿಮಿಷಗಳಲ್ಲಿ “ನಿಖರವಾಗಿ ೧೫೮೬ ಕುರಿಗಳಿವೆ” ಎಂದು ಹೇಳಿದ.
ಆನಂತರ ಆತ ಒಂದು ಕುರಿಯನ್ನು ತನ್ನ ಕಾರಿನಲ್ಲಿ ಹಾಕಿಕೊಂಡು ಹೋಗಲು ತಯಾರಾಗುತ್ತಿದ್ದಂತೆ ಕುರುಬನು ಅವನಿಗೆ “ನಿಮ್ಮ ವ್ಯವಹಾರ (Business) ಏನೆಂದು ಹೇಳಿದರೆ ನೀವು ನನ್ನ ಕುರಿಯನ್ನು ಹಿಂತಿರುಗಿಸುವಿರಾ?” ಎಂದು ಕೇಳುತ್ತಾನೆ. ಅದಕ್ಕೆ ಆ ವ್ಯಕ್ತಿ ಸಮ್ಮತಿಸಿದ. ಕೂಡಲೇ ಕುರುಬ ತಡವರಿಸದೆ “ನೀವೊಬ್ಬ consultant/ಸಲಹೆಗಾರರಾಗಿದ್ದೀರಿ“ ಎಂದುತ್ತರಿಸಿದ.
ಅವಾಕ್ಕಾದ ಆ ವ್ಯಕ್ತಿ “ನಿಮ್ಮ ಉತ್ತರ ಸರಿಯಾಗಿದೆ ನೀವು ಹೇಗೆ ಊಹಿಸಿದಿರಿ?” ಎಂದು ಅಚ್ಚರಿ ವ್ಯಕ್ತಪಡಿಸಿದ. ಅದಕ್ಕೆ ಕುರುಬ “ನಾನು ಕೇಳದಿದ್ದರೂ ನೀವೇ ಬಂದು ನಾನು ಕೇಳದ ಪಶ್ನೆಗೆ ಉತ್ತರಿಸಿ.. ನನಗೆ ಗೊತ್ತಿರುವ ಮಾಹಿತಿಯನ್ನೇ ನನಗೆ ಕೊಟ್ಟು… ನನ್ನ ನಾಯಿಯನ್ನು ಕುರಿಯೆಂದು ನಿಮ್ಮ ಕಾರಿಗೆ ಹಾಕಿಕೊಂಡಿದ್ದೀರಿ.. ದಯವಿಟ್ಟು ನನ್ನ ನಾಯಿಯನ್ನು ಹಿಂದಿರುಗಿಸಿ..”
ಈಗ ಯೇಸುವಿನ ಕುರುಬತನದ ಬಗ್ಗೆ ಫಾದರ್ ಚಸರಾ ಪುಸ್ತಕ ’ಆಂತರ್ಯ’ ದಿಂದ ಕೆಲ ಮಾತುಗಳನ್ನು ಉಲ್ಲೇಖಿಸುತ್ತೇನೆ.
· ಅದು ಆತನ ಉದ್ಯೋಗ ಅಥವಾ ಕೆಲಸವಾಗಿರಲಿಲ್ಲ
· ಅದು ಹಣಕ್ಕಾಗಿ ಅಥವಾ ಸುಖಕ್ಕಾಗಿ ಮಾಡಿದ್ದಲ್ಲ
· ಆತನಿಗೆ ಮೆಚ್ಚುಗೆ ಅಥವಾ ಅಂಗೀಕಾರ ಬೇಕಿರಲಿಲ್ಲ
· ಸ್ಥಾನಮಾನಗಳಿಗೆ ಆತ ಆಶಿಸಲಿಲ್ಲ
ಅಧಿಕಾರ ಅಥವಾ ಘನತೆ ಬೇಕಿರಲಿಲ್ಲ
ಆತ ಒಳ್ಳೆಯ ಕುರಿಗಾಹಿ ಎನ್ನುವುದಕ್ಕೆ ಶುಭಸಂದೇಶದಲ್ಲಿ ನಾಲ್ಕು ಸಾಕ್ಷಿಗಳು ಸಿಗುತ್ತವೆ:
· ಆತ ತನ್ನ ಕುರಿಗಳನ್ನು ಅರಿತಿದ್ದ, ಕುರಿಗಳು ಆತನನ್ನು ಅರಿತಿದ್ದವು
· ಕುರಿಗಳ ಒಡೆಯ ತನ್ನ ತಂದೆಯನ್ನು ಅರಿತಿದ್ದ
· ಆತ ಕುರಿಗಾಗಿ ಸಾಯಲು ಸಿದ್ಧನಿದ್ಧ
· ಬೇರೆ ಕುರಿಗಳನ್ನು ತನ್ನ ಮಂದೆಗೆ ಸೇರಿಸಲು ಆತ ಇಚ್ಛಿಸಿದ್ದ. ಅವು ಆತನ ಸ್ವರ ಕೇಳಿದೊಡನೆಯೇ ಆತನ ಮಂದೆಗೆ ಸೇರಲಿದ್ದವು.
------------------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ



No comments:

Post a Comment