Saturday, 25 April 2020

ಪಾಸ್ಕಕಾಲದ ಐದನೆಯ ಶನಿವಾರ

ಮೇ 16, 2020 ಶನಿವಾರ                                                     [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:1-10
ಕೀರ್ತನೆ 100:1-3, 5 ಶ್ಲೋಕ.1
ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 15.18-21
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:1-10
1 : ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಇವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು.
2 : ಲುಸ್ತ್ರ ಮತ್ತು ಇಕೋನಿಯದ ಸಹೋದರರೆಲ್ಲರಿಗೆ ತಿಮೊಥೇಯನ ಬಗ್ಗೆ ಸದಭಿಪ್ರಾಯವಿತ್ತು.
3 : ಪೌಲನು ತಿಮೊಥೇಯನನ್ನು ತನ್ನೊಡನೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಪ್ರದೇಶಗಳಲ್ಲಿದ್ದ ಯೆಹೂದ್ಯರಿಗೆ ತಿಮೊಥೇಯನ ತಂದೆ ಗ್ರೀಕನೆಂದು ತಿಳಿದಿದ್ದುದರಿಂದ ಅವನಿಗೆ ಸುನ್ನತಿ ಮಾಡಿಸಿದನು.
4 : ಊರಿಂದ ಊರಿಗೆ ಪ್ರಯಾಣ ಮಾಡುತ್ತಾ, ಜೆರುಸಲೇಮಿನಲ್ಲಿದ್ದ ಪ್ರೇಷಿತರೂ ಸಭಾಪ್ರಮುಖರೂ ನಿರ್ಧರಿಸಿದ ನಿಯಮಗಳನ್ನು ಭಕ್ತರಿಗೆ ಬೋದಿಸುತ್ತಾ, ಅವುಗಳನ್ನು ಪಾಲಿಸುವಂತೆ ಹೇಳಿದರು.
5 : ಹೀಗೆ ಕ್ರೈಸ್ತ ಸಭೆಗಳು ವಿಶ್ವಾಸದಲ್ಲಿ ದೃಢಗೊಂಡು ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು.
6 : ಏಷ್ಯದಲ್ಲಿ ಅವರು ಶುಭಸಂದೇಶವನ್ನು ಸಾರಕೂಡದೆಂದು ಪವಿತ್ರಾತ್ಮ ನಿಷೇಧಿಸಿದ್ದರಿಂದ ಅವರು ಫ್ರಿಜಿಯ ಮತ್ತು ಗಲಾತ್ಯ ಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು.
7 : ಮೂಸಿಯದ ಗಡಿಯನ್ನು ತಲುಪಿದಾಗ ಅವರು ಬಿಥೂನಿಯ ಪ್ರಾಂತ್ಯಕ್ಕೆ ಹೋಗಲು ಯತ್ನಿಸಿದರು. ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಬಿಡಲಿಲ್ಲ.
8 ಆದುದರಿಂದ ಅವರು ಮೂಸಿಯವನ್ನು ಹಾದು ನೇರವಾಗಿ ತ್ರೋವಕ್ಕೆ ಹೋದರು.
9 : ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು; ಮಕೆದೋನಿಯದ ಒಬ್ಬ ವ್ಯಕ್ತಿ ಅಲ್ಲಿ ನಿಂತು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡಿ,” ಎಂದು ಅಂಗಲಾಚಿದನು.
10 : ಪೌಲನಿಗೆ ದರ್ಶನವಾದ ತಕ್ಷಣ ಜನರಿಗೆ ಶುಭಸಂದೇಶವನ್ನು ಸಾರಲು ದೇವರು ನಮ್ಮನ್ನು ಕರೆದಿದ್ದಾರೆಂದು ನಾವು ಅರಿತುಕೊಂಡು ಮಕೆದೋನಿಯಕ್ಕೆ ಹೋಗಲು ಸಿದ್ಧರಾದೆವು.

ಕೀರ್ತನೆ 100:1-3, 5 ಶ್ಲೋಕ.1
ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ
1 : ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ /
2 : ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ / ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ //
3 : ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು / ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು / ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು //
5 : ಹೌದು, ಪ್ರಭುವೆನಿತೋ ಒಳ್ಳೆಯವನು / ಇರುವುದಾತನ ಪ್ರೀತಿ ಯುಗಯುಗಕು / ಆತನ ಸತ್ಯತೆ ತಲತಲಾಂತರಕು //

ಶುಭಸಂದೇಶ: ಯೊವಾನ್ನ 15.18-21
18 : “ಲೋಕವು ನಿಮ್ಮನ್ನು ದ್ವೇಷಿಸಿದರೆ, ನನ್ನ ಮೇಲೆ ಅದಕ್ಕೆ ಮೊದಲೇ ದ್ವೇಷವಿತ್ತೆಂಬುದನ್ನು ನೆನಪಿನಲ್ಲಿಡಿ.
19 : ನೀವು ಲೋಕದ ಕಡೆಯವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಮಮತೆಯಿಂದ ಕಾಣುತ್ತಿತ್ತು. ನೀವಾದರೋ ಲೋಕದ ಕಡೆಗೆ ಸೇರಿದವರಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿರುವುದರಿಂದ ನೀವು ಲೋಕದಿಂದ ಬೇರ್ಪಟ್ಟಿದ್ದೀರಿ. ಎಂದೇ ಲೋಕಕ್ಕೆ ನಿಮ್ಮ ಮೇಲೆ ದ್ವೇಷವಿದೆ.
20 : ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ. ಅವರು ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು. ನನ್ನ ಬೋಧನೆಯ ಮಾತನ್ನು ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನು ಅನುಸರಿಸಿ ನಡೆಯುವರು.
21 : ನೀವು ನನ್ನವರಾದುದರಿಂದ ಅವರು ನಿಮ್ಮನ್ನು ಹೀಗೆ ಕಾಣುವರು. ಏಕೆಂದರೆ ನನ್ನನ್ನು ಕಳುಹಿಸಿದಾತನನ್ನು ಅವರು ಅರಿಯರು.
-----------------
ನಾವು ಯೇಸುವಿಗೆ ಸೇರಿದವರು. ದೀಕ್ಷಾಸ್ನಾನದ ಮುಖಾಂತರ ನಾವು ಪಾಪಗಳಿಂದ ತೊಳೆದು ಪರಿಶುದ್ದರಾಗುತ್ತೇವೆ ಹಾಗೂ ದೇವರ ಮಕ್ಕಳಾಗುತ್ತೇವೆ. ನಾವು ಸಂಸ್ಕಾರದ ಪರಿಣಾಮಗಳನ್ನು ಅರಿತು ತಕ್ಕದಾಗಿ ಬಾಳುವಾಗ ನಾವು ಕ್ರಿಸ್ತರಿಗೆ ಸೇರಿದವರು. ಹಣವಾಗಲಿ, ಅಂತಸ್ಥಾಗಲಿ, ದೈಹಿಕ ದುರಿಚ್ಛೆಗಳಾಗಲಿ..... ಇವುಗಳು ಕ್ರಿಸ್ತನ ವಿರೋಧವಾದವುಗಳು ಮತ್ತು ಇವೆಲ್ಲಾ `ಲೋಕವನ್ನು ಪ್ರತಿನಿಧಿಸುತ್ತವೆ. ಇವೇ ಕ್ರಿಸ್ತ ವಿರೋಧಿ ಶಕ್ತಿಗಳು.
------------------
ಇಂದಿನ ವಾಚನಗಳು ನಾವು ಯಾರ ಕಡೆಗೆ ಸೇರಿದ್ದೇವೆ? ಈ ಭೂಲೋಕಕ್ಕೋ? ಅಥವಾ ದೇವರ ಸ್ವರ್ಗನಾಡಿಗೋ? ಎಂಬುವುದನ್ನು ನಮಗೆ ಮನವರಿಕೆ ಮಾಡುತ್ತದೆ. ಈ ಭೂಲೋಕವು ಭಯಾನಕ ಪಾಪಕೃತ್ಯಗಳಿಂದ ತಲ್ಲೀನವಾಗಿ ಸತ್ಯ, ನ್ಯಾಯ, ಪ್ರೀತಿ, ಶಾಂತಿ ಮತ್ತು ಸಹೋದರತ್ವವನ್ನು ತೊರೆದಿದೆ. ಈ ಭೂಲೋಕವು ಯೇಸುವಿನ ಮೌಲ್ಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಈ ಕಾರಣಕ್ಕಾಗಿಯೇ ಯೇಸು ಶಿಷ್ಯರನ್ನು ಉದ್ದೇಶಿಸಿ, ನೀವು ಈ ಲೋಕಕ್ಕೆ ಸೇರಿದವರಲ್ಲ, ಹಾಗೇ ಸೇರಿದ್ದರೆ ನಿಮ್ಮನ್ನು ಅದು ಚೆನ್ನಾಗಿ ನೋಡಿಕೊಳ್ಳುತ್ತಿತ್ತು. ಆದರೆ ನೀವೆಲ್ಲರೂ ದೇವರ ಸ್ವರೂಪ ಮತ್ತು ನನ್ನ ಶಿಷ್ಯರು. ಆದ್ದರಿಂದ ಈ ಲೋಕವು ನಿಮ್ಮನ್ನು ದ್ವೇಷಿಸುತ್ತದೆ. ಇದಲ್ಲದೆ ನನ್ನನ್ನು ಹಿಂಸಿಸಿದಂತೆ ನಿಮ್ಮನ್ನು ಸಹ ಕಷ್ಟಕೋಟಲೆಗಳಿಗೆ ಮತ್ತು ಹಿಂಸೆಗಳಿಗೆ ಸಿಲುಕಿಸುವರು. ಇದಲ್ಲೆವೂ ನಡೆಯುವಾಗ ನಾನು ನಿಮ್ಮೊಂದಿಗೆ ಇರುತ್ತೇನೆ, ಸೈರಣೆಯಿಂದಿರಿ, ಎಂದು ಯೇಸು ಹೇಳಿ ಶಿಷ್ಯರಿಗೆ ಧೈರ್ಯ ತುಂಬುತ್ತಾರೆ. ಇಂದು ನಾವು ಯಾರ ಕಡೆ ಇದ್ದೇವೆ? ಯಾರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ನಾವು ಎಷ್ಟು ಅಳವಡಿಸಿಕೊಂಡಿದ್ದೇವೆ ಎಂದು ನಮ್ಮ ಅಂತರಾಳವನ್ನು ದೃಷ್ಟಿಸಿ ನೋಡಬೇಕಾಗಿದೆ. ನಾವೇನಾದರೂ ಎಡವಿದ್ದಲ್ಲಿ ಕರುಣಾಭರಿತ ಯೇಸುವಿನ ಗುಣ-ಮೌಲ್ಯಗಳು ನಮ್ಮದಾಗಿ ದೇವರ ಮಕ್ಕಳಾಗುವಂತೆ ಪ್ರಾರ್ಥಿಸೋಣ.
---------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ


No comments:

Post a Comment