Saturday, 25 April 2020

ಪಾಸ್ಕಕಾಲದ ಐದನೆಯ ಶುಕ್ರವಾರ


ಮೇ 15, 2020 ಶುಕ್ರವಾರ                                                   [ಬಿಳಿ]
ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15: 22-31
ಕೀರ್ತನೆ 57;7-11 ಶ್ಲೋಕ.9
ನಿನ್ನ ಸ್ತುತಿಸುವೆನು ಪ್ರಭೂ ಜನಾಂಗಗಳ ಮುಂದೆ;\.
[ಅಥವಾ] ಅಲ್ಲೆಲೂಯ, ಅಲ್ಲೆಲೂಯ, ಅಲ್ಲೆಲೂಯ
ಶುಭಸಂದೇಶ: ಯೊವಾನ್ನ 15.12-17

ಮೊದಲ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15: 22-31
22 : ಅನಂತರ ಪ್ರೇಷಿತರೂ ಸಭಾಪ್ರಮುಖರೂ ಇಡೀ ಧರ್ಮಸಭೆಯ ಸಮ್ಮತಿ ಪಡೆದು, ತಮ್ಮಲ್ಲಿ ಕೆಲವರನ್ನು ಆರಿಸಿ, ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು. ಅಂತೆಯೇ, ಸಹೋದರರಲ್ಲಿ ಬಹು ಗೌರವಾನ್ವಿತರಾದ ಬಾರ್ಸಬ ಎಂದು ಕರೆಯಲಾದ ಯೂದ ಮತ್ತು ಸೀಲ ಎಂಬ ಇಬ್ಬರನ್ನು ಆರಿಸಿದರು. ಕೆಳಗಿನ ಪತ್ರವನ್ನು ಬರೆದು ಅವರ ಕೈಯಲ್ಲಿ ಕಳುಹಿಸಿದರು.
23 : “ಅಂತಿಯೋಕ್ಯ, ಸಿರಿಯ ಮತ್ತು ಸಿಲಿಸಿಯಗಳಲ್ಲಿ ವಾಸಿಸುವ ಯೆಹೂದ್ಯೇತರ ಸಹೋದರರಿಗೆ - ಪ್ರೇಷಿತರೂ ಸಭಾಪ್ರಮುಖರೂ ನಿಮ್ಮ ಸಹೋದರರೂ ಆದ ನಮ್ಮ ಶುಭಾಶಯಗಳು!
24 : ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ.
25 : ಆದುದರಿಂದ ನಾವೆಲ್ಲರೂ ಸಭೆಸೇರಿ ಪ್ರತಿನಿಧಿಗಳನ್ನು ಆರಿಸಿ ನಿಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆವು.
26 : ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ನಮ್ಮೊಲವಿನ ಬಾರ್ನಬ ಮತ್ತು ಪೌಲರೊಡನೆ ಪ್ರತಿನಿಧಿಗಳು ಬರುತ್ತಿದ್ದಾರೆ.
27 : ಇವರೇ ನಾವು ಕಳುಹಿಸುತ್ತಿರುವ ಯೂದ ಮತ್ತು ಸೀಲ. ಇವರು ನಾವು ಬರೆದಿರುವುದನ್ನು ನಿಮಗೆ ಖುದ್ದಾಗಿ ತಿಳಿಸುವರು.
28 : ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು. ಅದನ್ನು ಸೇವಿಸಬಾರದು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿಕೊಂದ ಪ್ರಾಣಿಗಳನ್ನಾಗಲಿ ತಿನ್ನಬಾರದು; ಅನೈತಿಕತೆಯಿಂದ ದೂರವಿರಬೇಕು.
29 : ಅಗತ್ಯ ನಿಯಮಗಳ ಹೊರತು ಬೇರೆ ಯಾವ ಹೊರೆಯನ್ನೂ ನಿಮ್ಮ ಮೇಲೆ ಹೇರುವುದು ವಿಹಿತವಲ್ಲವೆಂಬುದು ಪವಿತ್ರಾತ್ಮ ಅವರ ಹಾಗೂ ನಮ್ಮ ತೀರ್ಮಾನ. ನಿಯಮಗಳನ್ನು ಅನುಸರಿಸಿದರೆ, ನಿಮಗೆ ಒಳಿತಾಗುವುದು, ನಿಮಗೆ ಶುಭವಾಗಲಿ!”
30 : ಅಂತೆಯೇ ಪ್ರತಿನಿಧಿಗಳು ಅಲ್ಲಿಂದ ಅಪ್ಪಣೆ ಪಡೆದು ಅಂತಿಯೋಕ್ಯಕ್ಕೆ ಹೋದರು. ಅಲ್ಲಿ ಭಕ್ತ ಸಭೆಯನ್ನು ಒಟ್ಟುಗೂಡಿಸಿ ಅವರಿಗೆ ಪತ್ರವನ್ನು ಕೊಟ್ಟರು.
31 : ಪತ್ರದಲ್ಲಿದ್ದ ಪ್ರೋತ್ಸಾಹದಾಯಕ ಸಂದೇಶವನ್ನು ಓದಿದ್ದೇ ಭಕ್ತಾದಿಗಳು ಆನಂದಭರಿತರಾದರು.

ಕೀರ್ತನೆ 57;7-11 ಶ್ಲೋಕ.9
ನಿನ್ನ ಸ್ತುತಿಸುವೆನು ಪ್ರಭೂ ಜನಾಂಗಗಳ ಮುಂದೆ
8 : ಚೇತನಗೊಳ್ಳು ಮನವೇ, ಚೇತನಗೊಳ್ಳು / ಎಚ್ಚರಗೊಳ್ಳಲಿ ವೀಣೆ ತಂಬೂರಿಗಳು / ಎಬ್ಬಿಸೆ ರವಿಯನು ಪ್ರಾತಃಕಾಲದೊಳು //
9 : ನಿನ್ನ ಸ್ತುತಿಯನು ಪ್ರಭು ಜನಾಂಗಗಳ ಮುಂದೆ// ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ //
10 : ನಿನ್ನಚಲ ಪ್ರೀತಿ ಮುಟ್ಟುತ್ತಿದೆ ಗಗನ ಮಂಡಲವನು / ನಿನ್ನ ಸತ್ಯಸಂಧತೆ ತಾಕುತ್ತಿದೆ ಮೇಘಮಂಡಲವನು //
11 : ಮೇಲಣ ಲೋಕದಲಿ ಮೆರೆಯಲಿ ದೇವಾ, ನಿನ್ನ ಹಿರಿಮೆ / ಭೂಮಂಡಲದಲಿ ಹಬ್ಬಿ ಹರಡಲಿ ನಿನ್ನಾ ಮಹಿಮೆ //

ಶುಭಸಂದೇಶ: ಯೊವಾನ್ನ 15.12-17
12 : ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು.
13 : ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ.
14 : ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು.
15 : ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ.
16 : ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು.
17 : ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ.

-------------------

ಇಂದಿನ ಕೆಲ ಕ್ರೈಸ್ತ ಪಂಗಡಗಳ ಕಾರ್ಯವೈಖರಿ ಇಂದಿನ ಮೊದಲ ವಾಚನದ ಹಿನ್ನಲೆಯನ್ನು ಮರುಕಳಿಸುವಂತಿದೆಅದು ಬೇಡಇದು ತರವಲ್ಲಮತ್ತೊಂದು ಪಾಪ ..... ಹೀಗೆ ಜನರನ್ನು ಖಂಡಿಸುತ್ತಾ ಅವರನ್ನು ತಮ್ಮತ್ತ ಸೆಳೆದುಕೊಳ್ಳುವುದು ಇಂತಹ ಗುಂಪುಗಳ ಉದ್ದೇಶನಮಗಿರುವ ಒಂದೇ ಒಂದು ಕಟ್ಟಳೆ ``ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನೊಬ್ಬರು ಪ್ರೀತಿಸಬೇಕು’’ ಎಂಬುದುಪ್ರೀತಿಸಿರಿ ಮತ್ತು ಬೇರೆ ಎಲ್ಲವೂ ಸರಿಹೋಗುತ್ತದೆಎಲ್ಲವೂ ಸರಿದಾರಿಗೆ ಬರುತ್ತದೆ.
------------
`ಪ್ರೀತಿಯು ಸ್ವಾಮಿಯ ಏಕೈಕ ಆದೇಶ, ಕ್ರೈಸ್ತರ ಬಾಳಿಗೆ ಮೂಲ ಅವಶೇಷ' ಎಂಬ ಹಾಡಿನಂತೆ, ಯೇಸು ತಮ್ಮ ಶಿಷ್ಯರಿಗೆ ಪ್ರೀತಿಯ ಕಟ್ಟಳೆಗಳನ್ನು ಕೊಡುತ್ತಾರೆ. ದೇವರ ಕರುಣಾಭರಿತ ಪ್ರೀತಿಯು ಯೇಸುವಿನ ಕಾಯಕದ ಮೂಲ ತಿರುಳಾಗಿತ್ತು. ಆದ್ದರಿಂದಲೇ ಯೇಸು ತಮ್ಮ ಶಿಷ್ಯರನ್ನು ಕರೆದು `ನಾನು ನಿಮ್ಮನ್ನು ಪ್ರೀತಿಸಿದಂತೆಯೇ, ನೀವು ಸಹ ಒಬ್ಬರೊಬ್ಬರನ್ನು ಪ್ರೀತಿಸಿರಿ' ಎಂದು ಕರೆಕೊಡುತ್ತಾರೆ. ಇದಲ್ಲದೆ, `ಗೆಳೆಯನಿಗೋಸ್ಕರ ತನ್ನ ಪ್ರಾಣವನ್ನೇ ಕೊಡುವ ಸ್ನೇಹಿತನ ಪ್ರೀತಿ ಅಪಾರವಾದುದು' ಎಂಬುದನ್ನು ತನ್ನ ನೈಜ ಜೀವನದಲ್ಲಿ ಅವರು ತೋರಿಸಿಕೊಟ್ಟರು. ಕುಂಟರಿಗೆ, ಕುರುಡರಿಗೆ, ಜಾರಿಣಿಯರಿಗೆ ಮತ್ತು ಸಮಾಜದಿಂದ ದೂಷಿಸಲ್ಪಟ್ಟ ಅನೇಕರಿಗೆ ತಂದೆಯ ಪ್ರೀತಿಯನ್ನು ಉಣಿಸಿದರು. ಹೀಗೆ ಪ್ರೀತಿಯು ಶಾಶ್ವತವಾದುದು, ನಿಸ್ವಾರ್ಥದಿಂದ ಕೂಡಿದ್ದು, ನಮ್ಮನ್ನು ಎಲ್ಲಾ ತರದ ಬಂಧನದಿಂದ ವಿಮುಕ್ತಗೊಳಿಸಿ ನಿತ್ಯ ಜೀವವನ್ನು ಕೊಡುತ್ತದೆಂದು ಸಾರಿದರು. ಇಂದು ನಾವು ಸಹ ನಮ್ಮಲ್ಲಿರುವ ಕೋಪ, ಮಧ, ಮತ್ಸರ, ಅಸೂಯೆ, ದ್ವೇಷ, ದಬ್ಬಾಳಿಕೆ ಮತ್ತು ಸ್ವಾರ್ಥ ಎಂಬ ಗುಣಗಳಿಂದ ದೂರವಿದ್ದು ಪ್ರಭುಯೇಸುವಿನಂತೆ ನಮ್ಮ ಕುಟುಂಬಗಳಲ್ಲಿ, ಸಮಾಜದಲ್ಲಿ ಹಾಗೂ ನೆರೆಹೊರೆಯವರಲ್ಲಿ ಕ್ರಿಸ್ತನ ಪ್ರೀತಿಯನ್ನು ಬಿತ್ತಿ ಅದೇ ಕ್ರಿಸ್ತನ ಪ್ರತಿರೂಪಗಳಾಗುವಂತೆ ಪ್ರಾರ್ಥಿಸೋಣ.
-----------------------

----------------
© 'ದನಿಮಾಧ್ಯಮ ಮನೆ





ದನಿ ಮಾಧ್ಯಮ ಮನೆಯ 'ದನಿ' ಇ-ಮಾಸಿಕಕ್ಕೆ ಬೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ






No comments:

Post a Comment