Tuesday, 19 May 2020

ಜೂನ್ 14, 2020 ಭಾನುವಾರ - ಪ್ರಭುವಿನ ಪೂಜ್ಯ ಶರೀರ ಮತ್ತು ರಕ್ತದ ಮಹೋತ್ಸವ

 [ಬಿಳಿ] 
ಪ್ರಭುವಿನ ಪೂಜ್ಯ ಶರೀರ ಮತ್ತು ರಕ್ತದ ಮಹೋತ್ಸವ 
ಮೊದಲ ವಾಚನ: ಧರ್ಮೋ 8:2-3, 14-16 
ಕೀರ್ತನೆ 147:12-15, 19-20. ಶ್ಲೋಕ.12 
ಜೆರುಸಲೇಮೇ, ಕೀರ್ತಿಸು ಪ್ರಭುವನು 
ಎರಡನೇ ವಾಚನ: 1 ಕೊರಿಂಥಿಯರಿಗೆ 10:16-17 
ಶುಭಸಂದೇಶ: ಯೊವಾನ್ನ 6:51-58

ಮೊದಲ ವಾಚನ: ಧರ್ಮೋ 8:2-3, 14-16 
2 : “ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದ್ದನ್ನು ಹಾಗು ನೀವು ಅವರ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದು ಕೊಳ್ಳುವುದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ.
3 : ಮಾನವರು ಆಹಾರ ಮಾತ್ರದಿಂದಲ್ಲ, ಸರ್ವೇಶ್ವರ ಆಡುವ ಪ್ರತಿಯೊಂದು ನುಡಿಯಿಂದಲೂ ಜೀವಿಸುತ್ತಾರೆಂಬುದು ನಿಮಗೆ ತಿಳಿಯುವಂತೆ ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿದರು. ಹಸಿವೆಯಿಂದ ಬಳಲಿಸಿದರು. ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದರು.
14 : ನೀವು ಗರ್ವಗೊಂಡು ನಿಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟೀರಿ!
15 : ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದನಂತರ ನಿಮಗೆ ಒಳಿತನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದರು. ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾಮರುಭೂಮಿಯನ್ನೂ ನೀರು ಬತ್ತಿಹೋಗಿದ್ದ ಭೂಮಿಗಳನ್ನೂ ದಾಟಿಸಿದರು;
16 : ಗಟ್ಟಿಯಾದ ಬಂಡೆಯೊಳಗಿಂದ ನೀರನ್ನು ಹೊರಡಿಸಿಕೊಟ್ಟರು. ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದರು. 
ಕೀರ್ತನೆ 147:12-15, 19-20. ಶ್ಲೋಕ.12 
ಜೆರುಸಲೇಮೇ, ಕೀರ್ತಿಸು ಪ್ರಭುವನು 
12 : ಜೆರುಸಲೇಮೇ, ಕೀರ್ತಿಸು ಪ್ರಭುವನು / ಸಿಯೋನೇ, ಸ್ತುತಿಸು ನಿನ್ನ ದೇವರನು
13 : ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು
14 : ನಿನ್ನ ಪ್ರಾಂತದೊಳಗೆಲ್ಲಾ ಇರುವುದು ನೆಮ್ಮದಿ / ನೀಡುವನು ನಿನಗೆ ಅತ್ಯುತ್ತಮ ಗೋದಿ
15 : ಕಳಿಸುವನು ಧರೆಗೆ ತನ್ನ ಆಣತಿ / ಸಿದ್ಧಿಯಾಗುವುದದು ಬಲು ಶೀಘ್ರದಿ
19 : ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ / ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ
20 : ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ / ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ / ಅಲ್ಲೆಲೂಯ!

ಎರಡನೇ ವಾಚನ: 1 ಕೊರಿಂಥಿಯರಿಗೆ 10:16-17 
16 : ನಾವು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ?
17 : ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.

ಶುಭಸಂದೇಶ: ಯೊವಾನ್ನ 6:51-58
51 : ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೋಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ,” ಎಂದು ಹೇಳಿದರು.
52 : ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. “ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?” ಎಂದು ಕೇಳತೊಡಗಿದರು.
53 : ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ.
54 : ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ.
55 : ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ.
56 : ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ.
57 : ಜೀವಸ್ವರೂಪಿ ಆದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ.
58 : ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,” ಎಂದು ಹೇಳಿದರು.
----------------------
ಯೇಸು ಕ್ರಿಸ್ತರು ತಾವೇ ಕಲ್ವಾರಿಯಲ್ಲಿ ಬಲಿಯಾಗಿ ತಮ್ಮ ಶರೀರವನ್ನು ಭೋಜನವಾಗಿ ಮತ್ತು ತಮ್ಮ ರಕ್ತವನ್ನು ಪಾನವಾಗಿ ನೀಡುವ ಬಲಿಯರ್ಪಣೆಯೇ ಮಹೋತ್ಸವವಾಗಿದೆ. ಸ್ಮರಣೆಯೊಂದೇ ಸಾಲದು, ಅದು ಬದುಕಾಗಬೇಕು. ವಿಶ್ವಾಸಿಸಿ, ಭುಜಿಸಿ, ಕ್ರಿಸ್ತನಂತಾಗಬೇಕು. ಸಂತ ಪೌಲರು ಕೊರಿಂಥದವರಿಗೆ ಪ್ರಭುವಿನ ಭೋಜನ ಮಾಡುವಾಗ ನಿಮ್ಮಲ್ಲಿ ಪಂಗಡಗಳಿರಬಾರದು, ತಾರತಮ್ಯ ವಿರಬಾರದು ಒಂದಾಗಿ ಒಂದೇ ಕುಟುಂಬವಾಗಿ ನೀವಿದರಲ್ಲಿ ಪಾಲ್ಗೊಳ್ಳಬೇಕು ಎನ್ನುತ್ತಾರೆ. ನಮ್ಮನ್ನು ವಿಭಜಿಸಲು ಅನೇಕ ಕಾರಣಗಳು, ಶಕ್ತಿಗಳು, ಮಾರ್ಗಗಳಿವೆ. ಆದರೆ ನಮ್ಮನ್ನು ಒಂದುಗೂಡಿಸಲು ಇರುವುದೊಂದೇ ಮಾರ್ಗ, ಅದೇ ದಿವ್ಯಬಲಿಯಲ್ಲಿ ನಾವು ಪಾಲ್ಗೊಳ್ಳುವ, ಕ್ರಿಸ್ತರು ನೀಡುವ ಭೋಜನ.
-----------------
ಕ್ರಿಸ್ತನಿಗೂ ಬುದ್ಧನಿಗೂ ಇರುವ ವ್ಯತ್ಯಾಸವೇನು? ಈ ಪ್ರಶ್ನೆಯನ್ನು ಓಶೋ ರಜನೀಶ್‍ಗೆ ಕೇಳಿದಾಗ ಅವನು ಒಂದು ಕಥೆಯನ್ನು ಹೇಳಿದ. ಬುದ್ಧನು ಸಾಯುವ ವೇಳೆ. ಅವನ ಶಿಷ್ಯರು ಅವನನ್ನು ಸುತ್ತುವರಿದು ನಿಂತರು. ಬುದ್ಧನು ಸಾಯುವುದಿಲ್ಲ ಎಂದು ನಂಬಿದ್ದ ಶಿಷ್ಯರಿಗೆ ಬುದ್ಧನ ಸಾವಿನಿಂದ ಹತ್ತಾಶೆಯಾಗಿತ್ತು.ಮುಖ್ಯ ಶಿಷ್ಯನಾಗಿದ್ದ ಆನಂದ ಬುದ್ಧನಿಗೆ ಹೇಳಿದ. “ಗುರುಗಳೇ ನೀವು ಸಾಯುತ್ತಿದ್ದೀರಿ ನಿಮ್ಮ ನೆನಪು ಸದಾ ನಮ್ಮಲ್ಲಿರುವಂತೆ ಮಾಡಲು ನೀವು ಏನಾದರೂ ನಮಗೆ ಕೊಡಿ” ಎಂದು ಬೇಡಿಕೊಂಡ. ಬುದ್ಧ ಕೆಲವೊತ್ತು ಕಣ್ಣುಮುಚ್ಚಿ ನಂತರ ಒಂದು ಹೂವನ್ನು ಆನಂದನಿಗೆ ಕೊಟ್ಟ. ಹೂವನ್ನು ಕೊಡುವಾಗ ಬುದ್ಧ ಹೇಳಿದ “ಇದನ್ನು ನನ್ನ ನೆನಪಿಗೆ ಇಟ್ಟುಕೋ.. ಗುರುಗಳು ಕೊಟ್ಟ ಹೂವನ್ನು ಗುಡಾರದಲ್ಲಿ ಜೋಪಾನವಾಗಿ ಇಟ್ಟ. ಅದು ಗುರುವಿನ ಪರಿಮಳ ಹೂವಾಗಿ ಗುಡಾರದಲ್ಲೇ ಇತ್ತು. ಬುದ್ಧ ಸತ್ತನು. ಆ ಹೂವು ಕೂಡ ಬಾಡಿ ಸತ್ತುಹೋಯಿತು. ಗುರುವಿನ ನೆನಪು ಕೂಡ ಶಿಷ್ಯರಲ್ಲಿ ಮಾಸಿಹೋಯಿತು. ಕಿಸ್ತ ಸಾಯುವ ಹಿಂದಿನ ದಿನ ಶಿಷ್ಯರು ಕೂಡ ಅವನ ಸುತ್ತ ನೆರೆದರು. ಕ್ರಿಸ್ತನ ಸಾವಿನಿಂದ ಅವರು ಕೂಡ ನಿರಾಶರಾಗಿದ್ದರು. ಅವರಿಗೂ ಕೂಡ ಕ್ರಿಸ್ತನ ಬಗ್ಗೆ ಅನೇಕ ನೀರಿಕ್ಷೆಗಳಿದ್ದವು. ಅವರೆಲ್ಲಾರ ಕನಸುಗಳು ನುಚ್ಚುಚೂರಾದವು. ಪೇತ್ರ ಕ್ರಿಸ್ತನನ್ನು ಕೇಳಿದ 
ನೀವು ಸಾಯುತ್ತಿರುವಿರಿ… ನಿಮ್ಮ ಜ್ಞಾಪಕಕೊಸ್ಕರ ನಮಗೆ ಏನಾದರೂ ಕೊಡಿ. 
ಕ್ರಿಸ್ತ ಪೇತ್ರನ ಕೈಗಳಿಗೆ ರೊಟ್ಟಿಯನ್ನು ಕೊಡುವಾಗ ಹೇಳಿದ 
ಇದು ನನ್ನ ಶರೀರ ಇದನ್ನು ನೀವು ನನ್ನ ಸ್ಮರಣೆಗೊಸ್ಕರ ಭುಜಿಸಿರಿ.. 
ಕ್ರಿಸ್ತ ಶಿಲುಬೆಯ ಮೇಲೆ ಮರಣಹೊಂದಿದನು. ಪೇತ್ರ ಕ್ರಿಸ್ತನ ರೊಟ್ಟಿಯನ್ನು ತಿಂದನು. ಅದು ಅವನ ಅಸ್ತಿತ್ವದಲ್ಲಿ ಸಮೀಕರಣಗೊಂಡಿತು. ಅವನ ಬದುಕಿನ ಅವಿಭಾಜ್ಯ ಅಂಗವಾಯಿತು. ಅವನ ನರನಾಡಿಗಳಾದವು… ಮೂಳೆಮಾಂಸಗಳಾಯಿತು. ಅದು ಅವನ ಬದುಕಿನ ಸಂಗೀತವಾಯಿತು, ನೃತ್ಯವಾಯಿತು. ಗುರುವಿನ ಅರಿವಾಯಿತು, ನೆನಪಾಯಿತು. ಪೇತ್ರನ ಬದುಕು ವಿಕಸಗೊಳ್ಳಲಾರಂಭಿಸಿತು.. ಹೊಸಜೀವಿಯಾದ… ರೋಮ್‍ನಲ್ಲಿ ಶಿಲುಬೆಯ ಮೇಲೆ ತಲೆಕೆಳಗಾಗಿ ಜಡಿಯಲ್ಪಟ್ಟ. 
ಭಕ್ತನನ್ನು ಮತ್ತೊಬ್ಬ ಕ್ರಿಸ್ತನಾಗಿಸುವುದೇ ಬಲಿಪೂಜೆಯ ಅರ್ಥ…. 
.

No comments:

Post a Comment