Tuesday, 19 May 2020

ಜೂನ್ 21, 2020 - ಸಾಧಾರಣ ಕಾಲದ 12ನೇ ಭಾನುವಾರ

 [ಹಸಿರು]
ಮೊದಲ ವಾಚನ: ಯೆರೆಮೀಯ 20.10-13
ಕೀರ್ತನೆ 69:7-9, 13, 16, 32-34. ಶ್ಲೋಕ.13
ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ
ಎರಡನೇ ವಾಚನ: ರೋಮನರಿಗೆ 5.12-15
ಶುಭಸಂದೇಶ: ಮತ್ತಾಯ 10.26-33


ಮೊದಲ ವಾಚನ: ಯೆರೆಮೀಯ 20.10-13
10 : ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವರ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವುಎಂದು ಗುಸುಗುಟ್ಟುತ್ತಿರುವರು ಬಹು ಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿ ನೋಡುವೆವುಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ.
11 : ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯ ಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ.
12 : ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವರು ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ.
13 : ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ.
ಕೀರ್ತನೆ 69:7-9, 13, 16, 32-34. ಶ್ಲೋಕ.13
ಪ್ರೀತಿಮಯ ದೇವಾ, ಸದುತ್ತರ ನೀಡೆನಗೆ
8 : ನನ್ನವರಿಗೇ ನಾನನ್ಯನಾದೆನಯ್ಯಾ / ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ //
9 : ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ / ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ //
10 : ಅತ್ತತ್ತು ನಾ ಒಪ್ಪೊತ್ತಿದ್ದುದೆಲ್ಲಾ / ಚುಚ್ಚುಮಾತಿಗೆ ಕಾರಣವಾಯಿತಲ್ಲಾ //
11 : ಗೋಣಿತಟ್ಟನು ನಾನುಟ್ಟುಕೊಂಡೆನಯ್ಯಾ / ಅಣಕ ಅವಹೇಳನಕೆ ಗುರಿಯಾದೆನಯ್ಯಾ //
12 : ಊರ ಬಾಗಿಲಲಿ ಕೂರುವವರ ಹರಟೆಗೆ ಕಾರಣನಾದೆನಯ್ಯಾ / ಸಾರಾಯಿ ಮದ್ಯಸಾರ ಕುಡಿವವರ ಪದ್ಯವಸ್ತುವಾದೆನಯ್ಯಾ //
14 : ಕಳ್ಳುಸುಬಿನಲಿ ನಾನಿಳಿದು ಹೋಗದಂತೆ ಸೆಳೆದುಕೊ / ಪೊಳ್ಳು ದುರುಳರ ಮಡುವಿನಲಿ ನಾ ಮುಳುಗದಂತೆ ಎಳೆದುಕೊ //
17 : ನಿನ್ನ ದಾಸನಿಗೆ ವಿಮುಖನಾಗಬೇಡಯ್ಯಾ / ಆಪತ್ತಿನಲ್ಲಿರುವೆ, ತಡಮಾಡಬೇಡಯ್ಯಾ //
33 : ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು / ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು //
34 : ಭೂಮ್ಯಾಕಾಶಗಳು ಆತನನು ಕೊಂಡಾಡಲಿ / ಸಾಗರಗಳು, ಜಲಚರಗಳು ಆತನನು ಭಜಿಸಲಿ //
35 : ರಕ್ಷಿಸುವನು ದೇವನು ಸಿಯೋನ್ ಪಟ್ಟಣವನು / ಕಟ್ಟಿಸುವನು ಯೆಹೂದ ನಾಡಿನ ನಗರಗಳನು / ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು //

ಎರಡನೇ ವಾಚನ: ರೋಮನರಿಗೆ 5.12-15
12 : ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು.
13 : ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ.
14 : ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ವಿೂರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ.
15 : ಆದರೆ ಆದಾಮನ ಪಾಪಕ್ಕೂ ದೇವರ ಅನುಗ್ರಹಕ್ಕೂ ವ್ಯತ್ಯಾಸವಿದೆ. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥ ವರಗಳು ಇನ್ನೂ ಅಧಿಕಾಧಿಕವಾದುವು ಎಂಬುದೂ ನಿಜ.
ಶುಭಸಂದೇಶ: ಮತ್ತಾಯ 10.26-33
26 : "ಜನರಿಗೆ ಭಯಪಡಬೇಡಿ. ಮುಚ್ಚುಮರೆ ಆಗಿರುವುದೆಲ್ಲ ಬಟ್ಟಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು.
27 : ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರ ಪಡಿಸಿರಿ. ಕಿವಿಮಾತಾಗಿ ಕೇಳಿದ್ದನ್ನು ಮನೆ ಮಾಳಿಗೆಯ ಮೇಲೆ ನಿಂತು ಸಾರಿರಿ.
28 : ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ.
29 : ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ.
30 : ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.
31 : ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು.
32 : "ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ.
33 : ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ.
-----------------------------------------------

ಪೀಠಿಕೆ

ಪ್ರತಿಯೊಬ್ಬ ವ್ಯಕ್ತಿಯೂ ಭಯ / ಆತಂಕ / ಹೆದರಿಕೆ/ ಅಂಜಿಕೆಯನ್ನು ಎದುರಿಸುತ್ತಾನೆ. ಇದನ್ನು ಅನುಭವಿಸದ ವ್ಯಕ್ತಿಯೇ ಇಲ್ಲಾ. ಮುಗಿದ ಹೋದ ಹಾಗೂ ಭವಿಷ್ಯದ ಸಮಯವನ್ನು ನೆನೆದಾಗ, ಸಾಮಾನ್ಯವಾಗಿ ನಮ್ಮೆಲ್ಲಿ ವಿವಿದ ಕಾರಣಗಳಿಗೆ ಅಂಜಿಕೆ ಉಂಟಾಗುತ್ತದೆ. ಆಂತರಿಕ ಹಾಗೂ ಬಾಹ್ಯ ಆತಂಕಗಳನ್ನು ಮನದಲ್ಲಿರಿಸಿ ಬಳಲುತ್ತೇವೆ. ಭಯವು ನಮ್ಮ ಸಾರ್ವತ್ರಿಕ ಬೆಳವಣಿಗೆಯನ್ನು  ಕುಂಠಿತಗೊಳಿಸುತ್ತದೆ. ಹೆದರಿಕೆಯು, ದೇವರು ನಮಗೆ ನೀಡಿರುವ ವೈಯುಕ್ತಿಕ ಸ್ವಾತಂತ್ರ್ಯವನ್ನು ಅನುಭವಿಸಲು ಬಿಡುವುದಿಲ್ಲ. ಪ್ರತೀ ಸಮಯದಲ್ಲೂ ನಾವು ಭೀತಿಯ, ಬಂಧಿಗಳಾಗಿರುವ ಅನುಭವವಾಗಿರುತ್ತದೆ. ಭೀತಿ ಎಂಬುವುದಕ್ಕೆ ಭದ್ರತೆಯ ಸ್ಥಿರತೆ ಇರದಿದ್ದರೂ ಅದಕ್ಕೆ ಸ್ಥಿರತೆಯನ್ನು ಒದಗಿಸುತ್ತೇವೆ.  ಹಲವರು ಸೋಲಿನ ಭೀತಿಯಿಂದ ತಮ್ಮಲ್ಲಿನ ಹೊಸ ನವೀನ ಆಯೋಜನೆಗಳ ಸಾಮರ್ಥ್ಯ ಹಾಗೂ ಮರಳಿ ಪ್ರಯತ್ನಿಸುವ ಪ್ರವೃತ್ತಿಯನ್ನು ಕೈ ಬಿಡುವುದುಂಟು.

ಒಬ್ಬ ವ್ಯಕ್ತಿಯು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಕಂಡುಕೊಳ್ಳಲು ಹಾಗೂ ಬೆಳೆಯಲು ತನ್ನದೇ ಮನೋಭೀತಿಯು ತಡೆ ಒಡ್ಡುತ್ತದೆ. ಪ್ರಬಲ  ವ್ಯಕ್ತಿಗಳು ಇತರರನ್ನು ಅಂಜಿಕೆಯಲ್ಲಿ ಸಿಕ್ಕಿಸಿ ಅವರನ್ನು ತಮ್ಮ ಅನೂಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಾರೆ. ಇದೇ ಹೆದರಿಕೆಯ ಕಾರಣದಿಂದಾಗಿ ತಮ್ಮೆದುರೇ ನಡೆವ ಅನ್ಯಾಯ, ಕೃತ್ಯಗಳ ವಿರುದ್ಧ ಧ್ವನಿ ಎತ್ತದೆ, ಮೂಕ ಪ್ರೇಕ್ಷಕರಂತೆ ಜನರು ವರ್ತಿಸುತ್ತಾರೆ.  ಪ್ರತಿಯೊಬ್ಬ ಮಾನವನಲ್ಲೂ ಹೆದರಿಕೆ ಇದೆ. ಕಾರಣಗಳೇ ಇಲ್ಲದಿದ್ದರೂ ನಾವು ಹೆದರುತ್ತೇವೆ. ಯಾವುದಕ್ಕೆ ಹೆದರೆಬೇಕು  ಅದಕ್ಕೆ ಅಂಜದೆ, ಹೆದರಬಾರದ ವಿಷಯಗಳಿಗೆ ಅಂಜುತ್ತೇವೆ.  “ಯಾರಿಗೂ ಅಂಜಬೇಡಿ” ಎನ್ನುವ ಯೇಸುವಿನ ಸಂದೇಶ ಧೈರ್ಯ ತುಂಬುವಂತದ್ದಾಗಿದೆ. ದೇವರಲ್ಲಿ ವಿಶ್ವಾಸ ಹಾಗೂ ನಿತ್ಯ ಜೀವನದ ಭರವಸೆ ಇರುವ ವ್ಯಕ್ತಿ, ಅಂಜುವ ಅಗತ್ಯವಿಲ್ಲ. 

ಚಿಂತನೆ

ಯೆರೇಮಿಯ ಪ್ರವಾದಿಯ ಗ್ರಂಥದಿಂದ ಆರಿಸಲಾದ ಇಂದಿನ ಮೊದಲ ವಾಚನ, ಯೆರೇಮಿಯ ಅನುಭವಿಸಿದ ಕಷ್ಟಗಳ ಬಗ್ಗೆ ತಿಳಿಸುತ್ತದೆ. ಯೆರೇಮಿಯನನ್ನು ದ್ವೇಷಿಸುತ್ತಿದ್ದ ಅನೇಕರು ಅವರನ್ನು ಶಿಕ್ಷಿಸಲು, ಕೊಲ್ಲಲ್ಲು ಸಹ ಹವಣಿಸುತ್ತಿದ್ದರು. ಅವರ ಜೀವನವನ್ನು ನರಕವನ್ನಾಗಿಸ ಬಯಸಿದರು. ಅವರ ಗೆಳೆಯರೆನಿಸಿಕೊಂಡವರೂ ಸಹ ಅವರ ವಿರುದ್ಧ ಪಿತೂರಿ ಹೊಡುತ್ತಿದ್ದರು. ಆದಾಗ್ಯೂ ದೇವರು ಜೊತೆಗಿದ್ದಾರೆಂದು ಪ್ರವಾದಿ ದೃಢವಾಗಿ ನಂಬಿದ್ದರು. ಆದ್ದರಿಂದ ಯಾರಿಗೂ ಪ್ರವಾದಿ ಅಂಜಲಿಲ್ಲ. ದೇವರಿದ್ದಾರೆ ಜೊತೆಗೆ ಎಂದ ಮಾತ್ರಕ್ಕೆ ಕಷ್ಟಗಳೇ ಇಲ್ಲವೆಂದಲ್ಲ, ಬದಲಾಗಿ ವಿಶ್ವಾಸಿಸುವ ಪ್ರತಿಯೂಬ್ಬನೂ ದೇವರಿಂದ ಆಶೀರ್ವದಿಸಲ್ಪಟ್ಟು ಬರುವ ಕಷ್ಟಗಳನ್ನುಎದುರಿಸಲು ಶಕ್ತನಾಗುತ್ತಾನೆ. ದೇವರನ್ನು ಅವಲಂಬಿಸಿ ಜೀವಿಸುವುದು ನಮಗೆಲ್ಲರಿಗೂ ನೀಡುವ ಕರೆಯಾಗಿದೆ.

ಆದಾಮನಿಂದ ಪಾಪವು ಈ ಭೂಲೋಕ  ಪ್ರವೇಶಿಸಿದರೆ ಯೇಸುವಿನ ಮೂಲಕ ದೈವ ವರಪ್ರಸಾದ, ಪಾಪ ಕ್ಷಮೆ, ದೈವ ಮಹಿಮೆ, ನಿತ್ಯಜೀವ ಸಕಲ ವಿಶ್ವಾಸಿಗಳಿಗೆ ಲಭಿಸುವಂತಾಯಿತೆಂದು ಎರಡನೆಯ ವಾಚನ ತಿಳಿಸುತ್ತದೆ. ಇದರ ಸಂದೇಶ, ನಿಜವಾದ ವಿಜಯ ಇರುವುದು ಸುಳ್ಳಿಗಲ್ಲ. ದುಷ್ಟರಿಗೆಲ್ಲ ಬದಲಾಗಿ ದೇವರಲ್ಲಿ ವಿಶ್ವಾಸವಿಡುತ್ತಾ ಅವರ ಆಜ್ಞೆಯಂತೆ ಜೀವಿಸುವವರಿಗೆ, ಈ ಸತ್ಯವನ್ನು ನಂಬಲು ನಾವು ನಿಜವಾದ ಆಧ್ಯಾತ್ಮಿಕ ವ್ಯಕ್ತಿಗಳಾಗಬೇಕಾಗಿದೆ.

ಇಂದಿನ ಶುಭಸಂದೇಶದಲ್ಲಿ ಯೇಸು ಅಂಜೆಕೆಯ ವಾಸ್ತವತೆಯ ಬಗ್ಗೆ ತಿಳಿಸುತ್ತಾರೆ. ಮೂರು ಬಾರಿ ಹೆದರಬೇಡಿ ಎಂದು ಯೇಸು ತಮ್ಮ ಶಿಷ್ಯರಿಗೆ ನುಡಿಯುತ್ತಾರೆ. ಮಾನವನಿಗೆ ಹೆದರದೆ, ದೇವರಿಗೆ ಅಂಜಿರಿ ಎಂದು ತಿಳಿಸುತ್ತಾರೆ.  ಶುಭಸಂದೇಶದಲ್ಲಿ ಯೇಸು ಯಾರಿಗೆ ಹೆದರುವ ಅವಶ್ಯಕತೆ ಇಲ್ಲವೆಂದು ಹಾಗೂ  ಯಾರಿಗೆ ಹೆದರಬೇಕು ಎಂದು ತಿಳಿಸುತ್ತಾರೆ.

ದೈವ ಸಂದೇಶ ಪ್ರಚಾರ ಪಡಿಸಲು ಹೆದರಬೇಡ, ವಚನ 26ರಲ್ಲಿ – ಮುಚ್ಚುಮರೆಯಾಗಿರುವುದೆಲ್ಲವೂ ಬಟ್ಟ ಬಯಲಾಗುವುದು. ಯೇಸು ಇದನ್ನು ಅನೇಕ ಸಂದರ್ಭಗಳಲ್ಲಿ ತಮ್ಮ ಬೋಧನೆಯಲ್ಲಿ  ತಿಳಿಸಿದ್ದಾರೆ. ತಮ್ಮ ಶಿಷ್ಯರು ಶುಭ ಸಂದೇಶವನ್ನು ಮುಚ್ಚುಮರೆ ಇಲ್ಲದೆ ಸಾರಬೇಕೆಂದು ತಿಳಿಸುತ್ತಾರೆ. ಹೀಗಿರುವಾಗ ಆತನ ಹಿಂಬಾಲಕರಾದ ನಾವು ಇಂದು ನಮ್ಮೆದುರಿಗೆ ನಡೆಯುವ ಅನ್ಯಾಯ ಕೃತ್ಯಗಳ ವಿರುದ್ಧ ದ್ವನಿ ಎತ್ತಿ ಖಂಡಿಸಬೇಕಾಗುತ್ತದೆ. ವಿಶ್ವಾಸದಲ್ಲಿ ದೇವರನ್ನು ಅವಲಂಬಿಸಲು ಅಂಜದಿರಿ ದೇವರ ಅನುಗ್ರಹದ ಆಪ್ತತೆಯಲ್ಲಿ ವಿಶ್ವಾಸವಿಡಲು ಅಂಜದಿರು. ನಿನ್ನ ದೇಹವನ್ನು ಕೊಲ್ಲುವವರಿಗಾಗಿ ಅಂಜಬೇಡ. ನಾನು ನಿಮ್ಮೊಡನೆ ಇದ್ದೇನೆ ಎಂದು ಯೇಸು ಭರವಸೆ ನೀಡುತ್ತಾರೆ.

ದೇವರು ಗುಬ್ಬಿಗಳಿಗೆ ನೀಡುವ ಪೋಷಣೆಯನ್ನು ಉದಾಹರಣೆಯನ್ನಾಗಿಸಿ ತನ್ನ ಶಿಷ್ಯರಿಗೆ ಧೈರ್ಯ ತುಂಬುತ್ತಾರೆ. ದೇವರು ಸರ್ವಶಕ್ತರಾಗಿದ್ದಾರೆ. ಗುಬ್ಬಿಗಳಿಗಿಂತಲೂ ನಾವು ಬಹು ಮೌಲ್ಯವುಳ್ಳವರೆಂದು ತಿಳಿಸುತ್ತಾರೆ.

ಕೊನೆಯದಾಗಿ ದೇಹವನ್ನು ಕೊಲ್ಲುವವರಿಗೆ ಅಂಜದೆ, ದೇಹ, ಆತ್ಮ ಎರಡನ್ನು ನಾಶ ಮಾಡಲು ಶಕ್ತರಾಗಿರುವ ದೇವರಿಗೆ ಅಂಜಿರಿ ಎಂದು ತಿಳಿಸುತ್ತಾರೆ ಯೇಸು. ದೇವಪುತ್ರ ಯೇಸುವನ್ನು ನಿರಾಕರಿಸುವ ಪ್ರತಿಯೊಬ್ಬನೂ ಅವರ ಅನುಗ್ರಹ ಹಾಗೂ ಆತ್ಮರ ವರಗಳನ್ನು ನಿರಾಕರಿಸುತ್ತಾನೆ. ಹಾಗೂ ಕೊನೆಗೆ ಅಂತಿಮ ತೀರ್ಪಿಗೆ ಗುರಿಯಾಗುತ್ತಾನೆ.

 ನಾವು ಇತರರ ಜೀವನಕ್ಕೆ ಪ್ರೇರಣೆಗಳಾಗೋಣ ಅನ್ಯಾಯದ ವಿರುದ್ಧ ಹೋರಾಡೋಣ. ದೇವರಲ್ಲಿ ಅಚಲ ವಿಶ್ವಾಸವಿಟ್ಟು ಜೀವಿಸೋಣ ದೈವ ಭಯ ಬೆಳೆಸಿಕೊಳ್ಳೋಣ. ಭರವಸೆಯ ಜೀವನ ಜೀವಿಸೋಣ.  

-      ಫಾ . ಪ್ರವೀಣ್ ಕುಮಾರ್ ಯೇ.ಸ

-----------------

 ಸಂತ ಅಲೋಶಿಯಸ್ ಗೊಂಜ಼ಾಗ (ಸನ್ಯಾಸಿ)
1568ರಲ್ಲಿ ಇಟಲಿಯ ಓರ್ವ ದೈವಭಕ್ತ ಕುಟುಂಬದಲ್ಲಿ ಜನಿಸಿದವರು ಅಲೋಶಿಯಸ್ ಗೊಂಜ಼ಾಗ. ತನ್ನ 7ನೇ ವಯಸ್ಸಿನಲ್ಲಿ ಆಧ್ಯಾತ್ಮದೆಡೆಗೆ ಆಕರ್ಷಿತನಾಗಿದ್ದ ಈತ ‘ಯೇಸುಸಭೆ ಸದಸ್ಯರ ಭಾರತ ದೇಶದ ಸೇವಾನುಭವಗಳು’ ಎಂಬ ಪುಸ್ತಕದಿಂದ ಪ್ರೇರಿತನಾಗಿ ತಾನು ಆ ಸಭೆ ಸೇರುವ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಹಲವು ವರ್ಷಗಳವರೆಗೆ ಈ ನಿರ್ಧಾರಕ್ಕೆ ಒಪ್ಪದ ತಂದೆ ಕೊನೆಗೆ, 1585ರಲ್ಲಿ ಧಾರ್ಮಿಕ ಸಭೆ ಸೇರುವ ಈತನ ಆಸೆಗೆ ಸಮ್ಮತಿಸುತ್ತಾರೆ. ಯೇಸುಸಭೆ ಸೇರಿ 1587 ರಲ್ಲಿ ತನ್ನ ಧಾರ್ಮಿಕ ವಾಗ್ದಾನಗಳನ್ನು ಸ್ವೀಕರಿಸಿದ ಅಲೋಶಿಯಸ್, ತಾನು ಅನುಸರಿಸುತ್ತಿದ್ದ ಕಠಿನ ಆಧ್ಯಾತ್ಮಿಕ ಅಭ್ಯಾಸಗಳಿಂದ ಶಾರೀರಿಕವಾಗಿ ಕುಂದಿದವನಾಗಿ ಆಸ್ಪತ್ರೆಯಲ್ಲಿ ತಾನು ಶುಶ್ರೂಷೆ ಮಾಡುತ್ತಿದ್ದ ರೋಗಿಗಳಿಂದ ಪ್ಲೇಗ್ ರೋಗಕ್ಕೆ ತುತ್ತಾಗಿ 1591 ರಲ್ಲಿ ತನ್ನ 23ನೇ ವಯಸ್ಸಿನಲ್ಲಿ ಮರಣವನ್ನಪ್ಪುತ್ತಾನೆ.
1726 ರಲ್ಲಿ ಇವರನ್ನು ಸಂತಪದವಿಗೇರಿಸಲಾಗುತ್ತದೆ. ಜಗದ್ಗುರು 13ನೇ ಬೆನೆಡಿಕ್ಟ್‍ರು, ಸಂತರನ್ನು ಯುವ ವಿದ್ಯಾರ್ಥಿಗಳ ಸಂರಕ್ಷಕ ಪಾಲಕರಾಗಿಯೂ ಮತ್ತು ಜಗದ್ಗುರು 11ನೇ ಭಕ್ತಿನಾಥರು ಸಂತರನ್ನು ಕಥೋಲಿಕ ಯುವಕರ ಪಾಲಕ ಸಂತರೆಂಬುದಾಗಿಯೂ ಘೋಷಿಸಿದ್ದಾರೆ.
----------------------------
ದನಿ ಮಾಧ್ಯಮ ಮನೆ

No comments:

Post a Comment