Tuesday, 19 May 2020

ಜೂನ್ 26, 2020 - ಸಾಧಾರಣ ಕಾಲದ ಹನ್ನೆರಡನೆಯ ವಾರ - ಶುಕ್ರವಾರ

[ಹಸಿರು]
ಮೊದಲ ವಾಚನ: 2 ಅರಸರು 25.1-12
ಕೀರ್ತನೆ 137: 1-2, 3, 4-5. 6. ಶ್ಲೋಕ.6
ಜೆರುಸಲೇಮನ್ನು ನಾ ಸ್ಮರಣೆ ಮಾಡದಿದ್ದಲ್ಲಿ, 
ಸೇದಿ ಹೋಗಲಿ ನಾಲಿಗೆ ನನ್ನ ಬಾಯಲಿ
ಶುಭಸಂದೇಶ: ಮತ್ತಾಯ 8.1-4
ಮೊದಲ ವಾಚನ: 2 ಅರಸರು 25.1-12
1 : ಚಿದ್ಕೀಯನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ವಿರುದ್ಧ ದಂಗೆ ಎದ್ದನು. ಇವನು ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ ಸರ್ವಸೈನ್ಯ ಸಮೇತ ಜೆರುಸಲೇಮಿಗೆ ಬಂದನು. ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಎಬ್ಬಿಸಿದನು.
2 : ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಅದಕ್ಕೆ ಮುತ್ತಿಗೆ ಹಾಕಿದನು.
3 : ಘೋರ ಕ್ಷಾಮದ ಕಾರಣ ನಗರದವರಿಗೆ ಆಹಾರ ಸಿಕ್ಕದೆ ಹೋಯಿತು. ನಗರಕ್ಕೆ ಮುತ್ತಿಗೆಹಾಕಿದ್ದ ಬಾಬಿಲೋನಿಯರು ಹನ್ನೊಂದನೆಯ ತಿಂಗಳಿನ ಒಂಬತ್ತನೆಯ ದಿವಸ ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದರು.
4 : ಒಳಗಿದ್ದ ಅರಸನೂ ಅವನ ಎಲ್ಲ ಸೈನಿಕರೂ ಅದೇ ರಾತ್ರಿ, ಅರಸನ ತೋಟದ ಬಳಿಯಿದ್ದ ಬಾಗಿಲಿನ ಮೂಲಕ, ನಗರದಿಂದ ಓಡಿಹೋದರು. ಆ ಬಾಗಿಲು ಎರಡು ಗೋಡೆಗಳ ಮಧ್ಯೆಯಿತ್ತು. ಅರಸನು ಅರಾಬಾ ಎಂಬ ಕಣಿವೆ ಪ್ರದೇಶದ ಮಾರ್ಗವಾಗಿ ಓಡಿಹೋದನು.
5 : ಬಾಬಿಲೋನಿಯದ ಸೈನಿಕರು ಅವನನ್ನು ಹಿಂದಟ್ಟಿ ಜೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಸೈನಿಕರೆಲ್ಲರು ಅವನನ್ನು ಬಿಟ್ಟು ಚದರಿ ಹೋಗಿದ್ದರು.
6 : ಅನಂತರ ಬಾಬಿಲೋನಿಯರು ಅವನನ್ನು ರಿಬ್ಲದಲ್ಲಿದ್ದ ತಮ್ಮ ಅರಸನ ಬಳಿಗೆ ಎಳೆದು ತಂದು ಅವನಿಗೆ ಶಿಕ್ಷೆಯನ್ನು ವಿಧಿಸಿದರು.
7 : ಅವನ ಇಬ್ಬರು ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿ, ಅವನಿಗೆ ಬೇಡಿಹಾಕಿ ಎರಡು ಕಣ್ಣುಗಳನ್ನೂ ಕಿತ್ತು ಬಾಬಿಲೋನಿಗೆ ತೆಗೆದುಕೊಂಡು ಹೋದರು.
8 : ಐದನೆಯ ತಿಂಗಳಿನ ಏಳನೆಯ ದಿನ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ ಬಾಬಿಲೋನಿನ ಅರಸನ ಸೇವಕನೂ ರಕ್ಷಾದಳದ ಅಧಿಪತಿಯೂ ಆಗಿದ್ದ ನೆಬೂಜರದಾನ್ ಎಂಬವನು ಜೆರುಸಲೇಮಿಗೆ ಬಂದನು.
9 : ಸರ್ವೇಶ್ವರನ ಆಲಯವನ್ನೂ ಅರಮನೆಯನ್ನೂ ಜೆರುಸಲೇಮಿನ ಎಲ್ಲ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.
10 : ಅವನ ಜೊತೆಯಲ್ಲಿ ಬಂದಿದ್ದ ಬಾಬಿಲೋನಿಯದ ಸೈನ್ಯದವರು ಜೆರುಸಲೇಮಿನ ಸುತ್ತು ಗೋಡೆಗಳನ್ನೆಲ್ಲ ಕೆಡವಿದರು.
11 : ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ನಗರದಲ್ಲಿ ಉಳಿದವರನ್ನು, ಮೊದಲೇ ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನು ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು.
12 : ಹೊಲಗಳನ್ನು ಮತ್ತು ದ್ರಾಕ್ಷೀತೋಟಗಳನ್ನು ಮಾಡುವುದಕ್ಕಾಗಿ ನಾಡಿನ ಜನರಲ್ಲಿ ಕೇವಲ ದರಿದ್ರರನ್ನು ಮಾತ್ರ ಬಿಟ್ಟು ಹೋದನು.
ಕೀರ್ತನೆ 137: 1-2, 3, 4-5. 6. ಶ್ಲೋಕ.6
ಜೆರುಸಲೇಮನ್ನು ನಾ ಸ್ಮರಣೆ ಮಾಡದಿದ್ದಲ್ಲಿ, 
ಸೇದಿ ಹೋಗಲಿ ನಾಲಿಗೆ ನನ್ನ ಬಾಯಲಿ
1 : ಬಾಬಿಲೋನಿನ ನದಿಗಳ ತೀರದಲಿ ಕುಳಿತು / ಅತ್ತು ಪ್ರಲಾಪಿಸಿದೆವು ಸಿಯೋನನ್ನು ನೆನೆದು
2 : ಆ ನಾಡಿನಲಿ ಕಿನ್ನರಿಗಳನ್ನೆ ತೂಗುಹಾಕಿದೆವು / ನೀರವಂಜಿ ಮರಗಳಿಗೆ ಅವನ್ನು ನೇತು ಹಾಕಿದೆವು
3 : ಸೆರೆಹಿಡಿದು ಬಂಧಿಸಿದಾ ಜನ ಈ ಪರಿ ಪೀಡಿಸಿದರೆಮ್ಮನು: / “ಹಾಡಿ, ನಮ್ಮ ವಿನೋದಕ್ಕಾಗಿ ಸಿಯೋನಿನ ಗೀತೆಗಳಲೊಂದನು”
4 : ಪ್ರಭುಗೀತೆಗಳ ನಾವು ಗಾನ ಮಾಡುವುದೆಂತು / ಅನ್ಯನಾಡಿನೊಳು ಅವುಗಳನು ಹಾಡುವುದೆಂತು
5 : ಜೆರುಸಲೇಮ್, ನಾನು ನಿನ್ನ ಮರೆತಲ್ಲಿ / ನನ್ನ ಬಲಹಸ್ತ ಬತ್ತಿಹೋಗಿಬಿಡಲಿ
6 : ಜೆರುಸಲೇಮನು ನಾ ಸ್ಮರಣೆಮಾಡದಿದ್ದಲ್ಲಿ / ಆ ಸ್ಮರಣೆ ಸರ್ವೋತ್ತಮ ನಲಿವು ನನಗಾಗದಿದ್ದಲ್ಲಿ / ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ
ಶುಭಸಂದೇಶ: ಮತ್ತಾಯ 8.1-4
1 : ಯೇಸುಸ್ವಾಮಿ ಬೆಟ್ಟದಿಂದ ಇಳಿದು ಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು.
2 : ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, "ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣ ಮಾಡಬಲ್ಲಿರಿ," ಎಂದು ಬೇಡಿದನು.
3 : ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು.
4 : ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ.
--------------------------
ಕುಷ್ಠರೋಗಿಗಳು ಸಮಾಜದಿಂದ ಬಹಿಷ್ಕೃತಗೊಂಡು ಪ್ರತ್ಯೇಕವಾಗಿ ಜೀವಿಸಬೇಕಿತ್ತು. ಕುಷ್ಠರೋಗವು ಒಂದು ಭಯಾನಕರ ರೋಗವೆಂದು ತಿಳಿದ ಯೆಹೂದ್ಯರು ತಮ್ಮ ಕಾನೂನುಗಳಿಂದ ಕುಷ್ಠರೋಗಿಗಳನ್ನು ಮುಟ್ಟುವುದನ್ನು ನಿಷೇಧಿಸಿದ್ದರು. ಕುಷ್ಠರೋಗಿಗಳು ‘ನಾನು ಅಶುದ್ಧ’ ‘ನಾನು ಅಶುದ್ಧ’ ಎಂದು ಕೂಗಿಕೊಳ್ಳುತ್ತಾ ಬೀದಿಗಳಲ್ಲಿ ನಡೆಯಬೇಕಿತ್ತು. ಇತರರಿಂದ ಸುಮಾರು ೨ ಮೀಟರಷ್ಟು ಅಂತರವನ್ನು ಕಾಯ್ದುಕೊಳ್ಳಬೇಕಿತ್ತು. ಇಂತಹ ಕಟ್ಟುನಿಟ್ಟಿನ ಸಮಾಜದಲ್ಲಿ ಯೇಸು ಕುಷ್ಠರೋಗಿಯನ್ನು ಮುಟ್ಟಿ ಗುಣಪಡಿಸುತ್ತಾರೆ. ಇದೊಂದು ಕ್ರಿಸ್ತನ ಕಾಂತ್ರಿಕಾರಿ ಹೆಜ್ಜೆಯೇ ಸರಿ. ಹೌದು ಕ್ರಿಸ್ತನು ಕುಷ್ಠರೋಗಿಯ ಗುಣಪಡಿಸುತ್ತಾರೆ. ಕ್ರಿಸ್ತನ ಸ್ವರ್ಶದಿಂದ ಅವನ ಒಂಟಿತನ, ಪ್ರತ್ಯೇಕತೆ, ಹತಾಶೆ, ಶಾಪಗ್ರಸ್ತ ಎಂಬ ಭಾವನೆ ಹೀಗೆ ಎಲ್ಲಾ ರೀತಿಯ ಋಣಾತ್ಮಕತೆಯಿಂದ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸುತ್ತಾರೆ. ಕ್ರಿಸ್ತನು ನಮ್ಮನ್ನು ಸಹ ಮುಟ್ಟಿ ನಮ್ಮಲ್ಲಿರುವ ಎಲ್ಲಾ ರೀತಿಯ ರೋಗಗಳಿಂದ ಗುಣಪಡಿಸಲೆಂದು ಪ್ರಾರ್ಥಿಸೋಣ.
-------------------------- ಯೇಸು ಕುಷ್ಟರೋಗಿಯನ್ನು ಗುಣಪಡಿಸುತ್ತಾರೆ ಇಂದಿನ ಶುಭಸಂದೇಶದ ವಾಚನದಲ್ಲಿ ಎರಡು ಮುಖ್ಯ ಅಂಶಗಳನ್ನು ಗಮನಿಸಬಹುದು • ಕುಷ್ಟರೋಗಿ ಯೇಸುವಿನ ಹತ್ತಿರ ಬರುವುದು • ಯೇಸುಕ್ರಿಸ್ತರ ಪ್ರತಿಕ್ರಿಯೆ ಯೇಸು ಈ ರೋಗಿಯ ಆತ್ಮವಿಶ್ವಾಸ, ನಂಬಿಕೆ ಮತ್ತು ವಿನಯತೆಯನ್ನು, ಕರುಣೆಯಿಂದ ಆತನನ್ನು ಮುಟ್ಟಿ ಆತನ ಕುಷ್ಟರೋಗವನ್ನು ಗುಣಪಡಿಸುತ್ತಾರೆ. ಆ ಕುಷ್ಟರೋಗಿಯಂತೆ ವಿನಯತೆಯಿಂದ, ದೀನತೆಯಿಂದ ಪ್ರಭುವಿನಲ್ಲಿಗೆ ಬಂದು ನಮ್ಮಲ್ಲಿರುವ ಎಲ್ಲಾ ರೀತಿಯ ಕಾಯಿಲೆಗಳಿಂದ ಗುಣಹೊಂದುವರಾಗೋಣ.

ಕುಷ್ಟರೋಗಿಯು, ಆತ್ಮ-ವಿಶ್ವಾಸದಿಂದ, ಸಂಶಯವಿಲ್ಲದೆ ಯೇಸುವಿನ ಕಡೆಗೆ ಬರುತ್ತಾನೆ. ಯೇಸುವಿನ ಶಕ್ತಿಯಲ್ಲಿ ವಿಶ್ವಾಸವಿಡುತ್ತಾನೆ. ಅಂದು ಕುಷ್ಟರೋಗಕ್ಕೆ ಸರಿಯಾದ ಔಷಧಿ ಇರಲಿಲ್ಲ ಆದರೆ ಈ ರೋಗಿ ತನ್ನನ್ನು ಯೇಸು ಗುಣಪಡಿಸುತ್ತಾರೆಂದು ದೃಢವಿಶ್ವಾಸದಿಂದ ವಿನಯತೆಯಿಂದ ಯೇಸುವಿಗೆ “ ನೀವು ಮನಸ್ಸು ಮಾಡಿದರೆ ನನ್ನನ್ನು ಗುಣಪಡಿಸಬಹುದು” ಎನ್ನುತ್ತಾನೆ. ಕುಷ್ಟರೋಗಿಯಲ್ಲಿದ್ದ ವಿಶ್ವಾಸ ನಮದಾಗಲೆಂದು ಬಲಿಪೂಜೆಯಲ್ಲಿ ಪ್ರಾರ್ಥಿಸೋಣ.
-------------------------

No comments:

Post a Comment