Tuesday, 19 May 2020

ಜೂನ್ 28, 2020 - ಸಾಧಾರಣ ಕಾಲದ 13ನೇ ಭಾನುವಾರ

[ಹಸಿರು]
ಸಾಧಾರಣ ಕಾಲದ 13ನೇ ಭಾನುವಾರ
ಮೊದಲ ವಾಚನ: 2 ಅರಸರು 4:8-11, 14-16.
ಕೀರ್ತನೆ 89: 1-2, 15-16, 17-18. ಶ್ಲೋಕ.1
ಪ್ರಭೂ, ಕೀರ್ತಿಸುವೆನು ಸದಾ ನಿನ್ನ ಅಚಲ ಪ್ರೀತಿಯನು
ಎರಡನೇ ವಾಚನ: ರೋಮನರಿಗೆ 6:3-4, 8-11
ಶುಭಸಂದೇಶ: ಮತ್ತಾಯ 10:37-42
ಮೊದಲ ವಾಚನ: 2 ಅರಸರು 4:8-11, 14-16.
8 : ಒಂದು ಸಾರಿ ಎಲೀಷನು ಶೂನೇಮಿಗೆ ಹೋದನು. ಅಲ್ಲಿ ಒಬ್ಬ ಶ್ರೀಮಂತ ಮಹಿಳೆ ಇದ್ದಳು. ಆಕೆ ಅವನನ್ನು ತನ್ನ ಮನೆಯಲ್ಲಿ ಊಟಮಾಡಬೇಕೆಂದು ಒತ್ತಾಯಪಡಿಸಿದಳು. ಅಂದಿನಿಂದ ಅವನು ಆ ಮಾರ್ಗವಾಗಿ ಹೋಗುವಾಗಲೆಲ್ಲಾ ಆ ಮನೆಯಲ್ಲೇ ಊಟಮಾಡುತ್ತಿದ್ದನು.
9 : ಆ ಮಹಿಳೆ ತನ್ನ ಗಂಡನಿಗೆ, “ಯಾವಾಗಲೂ ಈ ದಾರಿಯಿಂದ ಹೋಗುತ್ತಾ ಬರುತ್ತಾ ಇರುವ ಆ ವ್ಯಕ್ತಿ ಒಬ್ಬ ಸಂತನು ಹಾಗು ದೈವಪುರುಷನು ಆಗಿರುತ್ತಾನೆಂದು ನನಗೆ ಗೊತ್ತಾಯಿತು.
10 : ಆದುದರಿಂದ ನಾವು ಅವನಿಗಾಗಿ ಮಾಳಿಗೆಯ ಮೇಲೆ ಒಂದು ಸಣ್ಣ ಕೋಣೆಯನ್ನು ಕಟ್ಟಿಸೋಣ. ಅದರಲ್ಲಿ ಒಂದು ಮಂಚ, ಮೇಜು, ಕುರ್ಚಿ, ದೀಪಸ್ತಂಭ ಇವುಗಳನ್ನು ಇಡೋಣ; ಅವನು ಇಲ್ಲಿಗೆ ಬಂದಾಗೆಲ್ಲಾ ಅದರಲ್ಲಿ ವಾಸ ಮಾಡಲಿ,” ಎಂದು ಹೇಳಿದಳು.
11 : ಒಂದು ದಿನ ಎಲೀಷನು ಅಲ್ಲಿಗೆ ಬಂದು ಆ ಕೋಣೆಯೊಳಗೆ ಪ್ರವೇಶಿಸಿ ದಣಿವಾರಿಸಿ ಕೊಂಡನು.
14 : ಆಮೇಲೆ ಎಲೀಷನು ಗೇಹಜಿಯನ್ನು, “ನಾವು ಆಕೆಗೆ ಯಾವ ಉಪಕಾರವನ್ನು ಮಾಡಬಹುದು?” ಎಂದು ಕೇಳಿದನು. ಅವನು, “ಆಕೆಗೆ ಮಗನಿಲ್ಲ, ಗಂಡನು ಮುದುಕನಾಗಿದ್ದಾನೆ,” ಎಂದನು.
15 : ಇದನ್ನು ಕೇಳಿ ಎಲೀಷನು ಆ ಮಹಿಳೆಯನ್ನು ಕರೆಯಬೇಕೆಂದು ಆಜ್ಞಾಪಿಸಿದನು. ಅವನು ಹೋಗಿ ಕರೆದನು. ಆಕೆ ಬಂದು ಬಾಗಿಲಿನ ಹತ್ತಿರ ನಿಂತಳು.
16 : ಎಲೀಷನು ಆಕೆಗೆ, “ನೀನು ಬರುವ ವರ್ಷ ಇದೇ ಕಾಲದಲ್ಲಿ ಒಬ್ಬ ಮಗನನ್ನು ಅಪ್ಪಿಕೊಂಡಿರುವೆ,” ಎಂದನು. ಅದಕ್ಕೆ ಆಕೆ, “ದೈವಪುರುಷರೇ, ಒಡೆಯರೇ, ಹೀಗೆ ಹೇಳಿ ನಿಮ್ಮ ದಾಸಿಯನ್ನು ವಂಚಿಸಬೇಡಿ,” ಎಂದು ನುಡಿದಳು.
ಕೀರ್ತನೆ 89: 1-2, 15-16, 17-18. ಶ್ಲೋಕ.1
ಪ್ರಭೂ, ಕೀರ್ತಿಸುವೆನು ಸದಾ ನಿನ್ನ ಅಚಲ ಪ್ರೀತಿಯನು
2 : ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ / ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ //
3 : ನೀನೆಂದೆ, “ನಾನರಿಸಿದವನೊಡನೆ ಮಾಡಿರುವೆ ಒಪ್ಪಂದ / ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರನಾದ ಶಪಥ : //
16 : ಆನಂದಿಸುವರವರು ಸದಾ ನಿನ್ನ ನಾಮದಲಿ / ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ //
17 : ಅವರ ಶಕ್ತಿಸಾಮಥ್ರ್ಯದ ಪ್ರತಿಭೆ ನಿನ್ನದೆ / ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ //
18 : ಗುರಾಣಿಯಂತಿಹ ನಮ್ಮ ರಾಜನು ಪ್ರಭುವಿನವನೇ / ಇಸ್ರಯೇಲಿನ ಪರಮಪಾವನ ಸ್ವಾಮಿಗೆ ಸೇರಿದವನೇ //
19 : ಹಿಂದೊಮ್ಮೆ ನೀ ದರ್ಶನವಿತ್ತು ಇಂತೆಂದೆ ನಿನ್ನ ಭಕ್ತರಿಗೆ: / “ರಕ್ಷಾಬಲವನು ಅನುಗ್ರಹಿಸಿರುವೆ ಶೂರವೀರನೋರ್ವನಿಗೆ / ಪ್ರಜೆಗಳಲೊರ್ವ ಯುವಕನನು ಏರಿಸಿರುವೆ ಉನ್ನತಸ್ಥಾನಕೆ //

ಎರಡನೇ ವಾಚನ: ರೋಮನರಿಗೆ 6:3-4, 8-11
3 : ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ?
4 : ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ.
8 : ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ.
9 : ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ.
10 : ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ.
11 : ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.
ಶುಭಸಂದೇಶ: ಮತ್ತಾಯ 10:37-42
37 : "ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅತವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.
38 : ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.
39 : ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. ಸತ್ಕಾರಕ್ಕೆ ತಕ್ಕ ಸಂಭಾವನೆ (ಮಾರ್ಕ 9:41)
40 : "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ.
41 : ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ.
42 : ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ."
----------------------
ಪೀಠಿಕೆ
ಹಲವು ಬಾರಿ ನಾವು ಇತರರೊಂದಿಗೆ ಬಹಳ ಕ್ರೂರವಾಗಿ ವರ್ತಿಸುತ್ತೇವೆ. ಬೇರೆಯವರಿಂದ ಪಡೆದ ಉಪಕಾರವನ್ನು ನೆನೆಯದೆ ಸ್ವಾರ್ಥಿಗಳಾಗುತ್ತೇವೆ. ಜನರನ್ನು ನಮ್ಮ ಇಷ್ಟಬಂದಂತೆ ಉಪಯೋಗಿಸಿ ಎಸೆಯುವ ಮನೋಭಾವ ಕೆಲವೊಮ್ಮೆ ನಮ್ಮದಾಗಿರುತ್ತದೆ. ಸಂಬಂಧಗಳ ನಿಜವಾದ ಅರ್ಥ ತಿಳಿಯದೆ ಬಾಹ್ಯಾಚರಣೆಗೋಸ್ಕರ ಸಂಬಂಧಗಳನ್ನು ಬೆಳೆಸುವ ಪ್ರಕೃತಿ ನಮ್ಮದಾಗಿರುತ್ತದೆ. ಇನ್ನೊಂದೆಡೆ, ಜನರು ವ್ಯಕ್ತಿಗಳಿಗೆ, ವಸ್ತುಗಳಿಗೆ ಮಾರುಹೋಗಿರುವ ಸನ್ನಿವೇಶಗಳು ನಮಗೆ ಕಾಣಸಿಗುತ್ತವೆ. ಹಣ, ಅಧಿಕಾರ ಕೆಲವರ ಜೀವನಧ್ಯೇಯವಾಗಿರುತ್ತದೆ. ಇಂದು ನಾವು ಕೇಳಬೇಕಾದ ಪ್ರಶ್ನೆ, ನನ್ನ ಮತ್ತು ನನ್ನ ಮನೆಯವರ ನಡುವಿನ ಸಂಬಂಧ ಹೇಗಿದೆ? ನನ್ನ ಸ್ನೇಹಿತರನು ನಾನು ಯಾವರೀತಿ ನೋಡುತ್ತೇನೆ? ನನ್ನ ಮೇಲಾಧಿಕಾರಿಗಳಡನೆ ನನ್ನ ಸಂಬಂಧ ಏನು? ಈ ವಾರದ ವಾಚನಗಳು ಈ ಎಲ್ಲ ಮೇಲಿನ ಪ್ರಶ್ನೆಗಳನ್ನು ನಮ್ಮ ಮುಂದೆ ಇಡುತ್ತವೆ. 
2 ಅರಸರು 4:8-11, 14-16A
ಇಂದಿನ ಮೊದಲನೆಯ ವಾಚನದಲ್ಲಿ ನಾವು ತನಗೆ ಉಪಕಾರ ಮಾಡಿದ ಹೆಂಗಸಿನ ಮೇಲೆ ಪ್ರವಾದಿ ಎಲೀಷ ತೋರುವ ಕಾಳಜಿಯನ್ನು ಕಾಣುತ್ತೇವೆ. ನಮಗೆ ಉಪಕಾರ ಮಾಡಿದವರನ್ನು ಮರೆತುಬಿಡುವ ನಮ್ಮ ಮನೋಭಾವನೆಗೆ ಪ್ರವಾದಿಯು ಸವಾಲನ್ನು ಎಸೆಯುತ್ತಾರೆ. ಇಂದಿನ ವಾಚನವನ್ನು ಮುಂದುವರಿಸಿದರೆ, ಪ್ರವಾದಿಯ ಅನುಗ್ರಹದಿಂದ ಮಗು ಮುಂದೊಮ್ಮೆ ಅಕಾಲ ಮರಣಕ್ಕೆ ಗುರಿಯಾಗುತ್ತದೆ ಮತ್ತು ಆ ತಾಯಿ ಪುನಃ ಪ್ರವಾದಿಗೆ ಮೊರೆಯಿಡುತ್ತಾಳೆ. ದೇವರಿಂದ ಬರುವ ವರದಾನಗಳು ಬರಿ ಸಂತೋಷ ಮಾತ್ರ ಅಲ್ಲ ಕಷ್ಟಗಳನ್ನೂ ತರುತ್ತವೆ. ಆದರೆ ನಾವು ಸಹಿಸಲಾರದ ಕಷ್ಟಗಳಲ್ಲ.
ರೋಮ  6:3-4, 8-11
ಇಂದಿನ ಎರಡನೆಯ ವಾಚನದಲ್ಲಿ ನಾವು ಯಾವುದಕ್ಕೆ ಸಾಯಬೇಕು ಹಾಗು ಯಾರಿಗಾಗಿ ಜೀವಿಸಬೇಕು ಎಂಬುದನ್ನು ತಿಳಿಸುತ್ತದೆ. ದೀಕ್ಷಾಸ್ನಾನ ಪಡೆದ ನಾವೆಲ್ಲರು ಕ್ರಿಸ್ತರ ಮರಣದಲ್ಲಿ ಭಾಗಿಗಳಾಗಿ ಅವರ ಪುನರುತ್ಥಾನದಲ್ಲಿ ಪಾಲ್ಗೊಳ್ಳುವ ಆಹ್ಬಾನವನ್ನು ಪಡೆದಿದ್ದೇವೆ. ಕ್ರಿಸ್ತರು ಪಾಪವನ್ನು ಜಯಿಸಲು ಮರಣಹೊಂದಿದರು. ನಾವು ಸಹ ನಮ್ಮ ಪಾಪಗಳಿಗೆ ಸಾಯಬೇಕು. ನಮ್ಮನ್ನು ದೇವರಿಂದ ದೂರ ಸರಿಸುವ ಎಲ್ಲಾ ಕೃತ್ಯಗಳಿಂದ ನಮ್ಮನ್ನು ದೂರವಿಡಬೇಕು. ಇದು ಸುಲಭದ ಕೆಲಸವಲ್ಲ. ಆದರೆ ದೇವರ ಅನುಗ್ರಹ ಹಾಗು ನಮ್ಮ ದೃಢತೆಯಿಂದ ಸಾಧ್ಯ.  ಪುನರುತ್ಥಾನದ ಆನಂದವನ್ನು ಸವಿಯಬೇಕಾದರೆ ಕಷ್ಟದ ಕೊಡವನ್ನು ಕುಡಿಯಲೇ ಬೇಕು. ಹೀಗೆ ಮಾಡುವುದರಿಂದ, ನಾವು ದಿನೇ ದಿನೇ ದೇವರ ಸನಿಹಕ್ಕೆ ಬರಲು ಸಾಧ್ಯವಾಗುತ್ತದೆ.
ಮತ್ತಾಯ 10:37-42
ಇಂದಿನ ಶುಭಸಂದೇಶದಲ್ಲಿ ಸಂತ ಮತ್ತಾಯರು ಇಂದಿನ ಎರಡೂ ವಾಚನಗಳ ಸಾರಾಂಶವನ್ನು ನೀಡುತ್ತಾರೆ. ನಾವು ಎಲ್ಲಕ್ಕಿಂತಲೂ ಮಿಗಿಲಾಗಿ  ದೇವರನ್ನು ಪ್ರೀತಿಸಬೇಕು. ಕ್ರಿಸ್ತರ ಮೇಲಿನ ಪ್ರೀತಿ ಇತರ ಎಲ್ಲಾ ಪ್ರೀತಿಗಿಂತ ಮಿಗಿಲಾಗಿರಬೇಕು. ಅದಕ್ಕಾಗಿ ಯೇಸುಸ್ವಾಮಿ ಯಾರು ನನಗಿಂತ ತನ್ನ ತಂದೆತಾಯಿಯರನ್ನು, ಸಹೋದರ ಸಹೋದರಿಯರನ್ನು ಪ್ರೀತಿಸುತ್ತಾನೋ ಅವನು ನನ್ನನ್ನು ಹಿಂಬಾಲಿಸಲು ಅರ್ಹನಲ್ಲ ಎಂದು. ಇದರರ್ಥ, ನಮ್ಮ ಜೀವನದಲ್ಲಿ ಯೇಸುವಿಗೆ ಪ್ರಥಮ ಸ್ಥಾನವನ್ನು ಕೊಡಬೇಕು. ಯೇಸುಸ್ವಾಮಿಯ ನಂತರವೇ ಬೇರೆಲ್ಲ. 
ನಾವು ನಮ್ಮ ಜೀವನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದರೆ, ಅದನ್ನು ಕಳೆದುಕೊಳ್ಳುತ್ತೇವೆ. ಆದರೆ ಕ್ರಿಸ್ತನಿಗಾಗಿ ನಮ್ಮ ಜೀವನವನ್ನು ಕಳೆದುಕೊಳ್ಳಲು ಸಿದ್ದರಾಗಿದ್ದರೆ  ಅದನ್ನು ಮರಳಿ ಪಡೆಯುತ್ತೇವೆ. ನಮ್ಮ ಜೀವನ ಸದಾ ಪರರಿಗಾಗಿ ಮಿಸಲಾಗಿಡಬೇಕು. ಹೀಗೆ ಮಾಡಿದ್ದಲ್ಲಿ, ನಮ್ಮ ಕ್ರೈಸ್ತೀಯ ಜೀವನಕ್ಕೆ ನಿಜವಾದ ಅರ್ಥ ಸಿಗುತ್ತದೆ. ಪ್ರತಿದಿನ ದೇವರ ಇಚ್ಚೆಯನ್ನು ಮನಗಂಡು ಅದರಂತೆ ನಡೆಯಲು ಪ್ರಯತ್ನಿಸಿದರೆ, ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ.
ಸಂದೇಶ
ಇತರರ ಬಗ್ಗೆ ಕಾಳಜಿಯನ್ನು ತೋರಿಸೋಣ
ನಮ್ಮಜೀವನದಲ್ಲಿ ಸದಾ ಉಪಕಾರ ಸ್ಮರಣೆಯನ್ನು ಮಾಡೋಣ
ನಿಜವಾದ, ಆಳವಾದ, ಅರ್ಥಗರ್ಭಿತ ಸಂಬಂಧಗಳನ್ನು ಬೆಳೆಸೋಣ
ದೇವರನ್ನು ನಮ್ಮ ಜೀವನದ ಕೇಂದ್ರಬಿಂದುವಾಗಿಸೋಣ.
- ಫಾ. ಪ್ರವೀಣ್ ಕುಮಾರ್ ಯೇ.ಸ  
-----------------------------

No comments:

Post a Comment