Tuesday, 19 May 2020

ಜೂನ್ 5, 2020 - ಸಾಧಾರಣ ಕಾಲದ ಒಂಭತ್ತನೆಯ ವಾರ - ಶುಕ್ರವಾರ

                                  [ಹಸಿರು]
ಸಂತ ಬೊನಿಫೇಸ್ [ಧರ್ಮಾಧ್ಯಕ್ಷ / ರಕ್ತಸಾಕ್ಷಿ] (ಸ್ಮರಣೆ)
ಮೊದಲ ವಾಚನ: 2 ತಿಮೊಥಿ 3.10-17
ಕೀರ್ತನೆ 119:157, 160, 161, 165, 166, 168, ಶ್ಲೋಕ.165
ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ
ಶುಭಸಂದೇಶ: ಮಾರ್ಕ 12.35-37

ಮೊದಲ ವಾಚನ: 2 ತಿಮೊಥಿ 3.10-17
10 : ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ.
11 : ನಾನು ಅನುಭವಿಸಿದ ಹಿಂಸೆನೋವುಗಳ ಮತ್ತು ಕಷ್ಟ ದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು.
12 : ಕ್ರಿಸ್ತ ಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ.
13 : ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇದಿನೇ ಅಧೋಗತಿಗಿಳಿಯುತ್ತಾರೆ.
14 : ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು.
15 : ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸುಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಪವಿತ್ರಗ್ರಂಥದಿಂದಲೇ.
16 : ಪವಿತ್ರಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ.
17 : ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.

ಕೀರ್ತನೆ 119:157, 160, 161, 165, 166, 168, ಶ್ಲೋಕ.165
ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ
157 : ದ್ವೇಷಿಸಿದರು, ಹಿಂಸಿಸಿದರು, ಹಲವರು ನನ್ನನು / ಆದರೂ ಬಿಟ್ಟಿಲ್ಲ ನಾನು ನಿನ್ನ ಕಟ್ಟಳೆಗಳನು
160 : ಸತ್ಯವೇ ನಿನ್ನ ವಾಕ್ಯದ ಸಾರಾಂಶ / ನಿನ್ನಯ ನೀತಿವಿಧಿಗಳೆಲ್ಲವೂ ಅನಿಶ //
161 : ಪೀಡಿಸುತಿಹರು ನಿಷ್ಕಾರಣವಾಗಿ ರಾಜರುಗಳು / ನಿನ್ನ ವಾಕ್ಯದ ಭೀತಿ ಇಹುದು ನನ್ನ ಹೃದಯದೊಳು
165 : ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ / ವಿಘ್ನಕರವಾದುದೇನೂ ಇರದು ಅಂಥವರಿಗೆ
166 : ರಕ್ಷಣೆಯನು ಪ್ರಭು, ನಿರೀಕ್ಷಿಸುತ್ತಿರುವೆ / ನಿನ್ನ ಆಜ್ಞೆಗಳನು ನಾನು ಕೈಗೊಂಡಿರುವೆ
168 : ಅನುಸರಿಸಿದೆ ನಿನ್ನ ನೇಮ ನಿಯಮಗಳನೆಲ್ಲ / ನಿನಗೆ ಬಟ್ಟಬಯಲು ನನ್ನ ನಡತೆಯೆಲ್ಲ //

ಶುಭಸಂದೇಶ: ಮಾರ್ಕ 12.35-37
35 : ಬಳಿಕ ಯೇಸುಸ್ವಾಮಿ ಮಹಾದೇವಾಲಯದಲ್ಲಿ ಉಪದೇಶಮಾಡುತ್ತಾ ಪ್ರಶ್ನೆ ಎತ್ತಿದರು: “ಅಭಿಷಿಕ್ತನಾದ ಲೋಕೋದ್ಧಾರಕನನ್ನು ಧರ್ಮಶಾಸ್ತ್ರಿಗಳುದಾವೀದನ ಪುತ್ರಎಂದು ಕರೆಯುತ್ತಾರಲ್ಲ! ಅದು ಹೇಗಾದೀತು?
36 : ‘ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವ ತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ನನ್ನ ಪ್ರಭುವಿಗೆ ಸರ್ವೇಶ್ವರ ಹೇಳಿದ್ದಾರೆ,’ ಎಂದು ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದಾನಲ್ಲಾ!
37 : ದಾವೀದನೇ, ಕ್ರಿಸ್ತನನ್ನುನನ್ನ ಪ್ರಭುಎಂದು ಕರೆದಿರುವಲ್ಲಿ ಆತನು ದಾವೀದನ ಪುತ್ರನಾಗಿರುವುದು ಹೇಗೆ?” ಎಂದು ಪ್ರಶ್ನಿಸಿದರು.
---------------------

ಚಿಂತನೆ 
ಮೆಸ್ಸೀಯನನ್ನು ‘ದಾವೀದನ ಪುತ್ರ’ ಎಂದು ಕರೆಯುವ ರೂಢಿ ಯೆಹೂದ್ಯರಲ್ಲಿತ್ತು. ಕ್ರಿಸ್ತ ಅಥವಾ ಅಭಿಷಕ್ತ ಎಂಬುವುದು ಮೆಸ್ಸೀಯ ಪದದ ಹಿಬ್ರೂ ಭಾಷೆಯ ಅವತರಿಕೆ. ಇಂದಿನ ಶುಭಸಂದೇಶದ ಪಠ್ಯವನ್ನು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. ಆದರೂ ಈ ಪಠ್ಯವು ಮತ್ತಾಯ ಮತ್ತು ಲೂಕನ ಶುಭಸಂದೇಶಗಳಲ್ಲೂ ಕಾಣಿಸಿಕೊಳ್ಳುವುದ್ದರಿಂದ ಇದು ಒಂದು ಮುಖ್ಯವಾದ ಪಠ್ಯವೇ ಆಗಿರಬೇಕೆಂದು ಬೈಬಲ್ ವಿಧ್ವಾಂಸರು ಅಭಿಪ್ರಾಯಿಸುತ್ತಾರೆ. ಈ ಪಠ್ಯದಲ್ಲಿ ಯೇಸು ಕ್ರಿಸ್ತರು ಕೀರ್ತನೆಯ 110.1 ಸಾಲನ್ನು ಉಲ್ಲೇಖಿಸುವುದನ್ನು ನಾವು ಕೇಳುತ್ತೇವೆ. ಮೇಸ್ಸಿಯನು ದಾವೀದನ ವಂಶಸ್ಥರಿಗಿಂತ ಶ್ರೇಷ್ಠನಾದವನು ಎಂದು ದೃಢಪಡಿಸಲು ಮತ್ತು ಈ ಸತ್ಯವನ್ನು ಪರಿಸಾಯರಿಗೆ ತಿಳಿಸಲು ಈ ಪಠ್ಯವನ್ನು ಉಲ್ಲೇಖಿಸುತ್ತಾರೆಂದು ಬೈಬಲ್ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಕೀರ್ತನೆಯ ಈ ಸಾಲುಗಳಲ್ಲಿ ದಾವೀದನ್ನೇ ಮೆಸ್ಸೀಯನನ್ನು ‘ನನ್ನ ಪ್ರಭು ಎಂದು ಕರೆದಿರುವುದರಿಂದ ಮೆಸ್ಸೀಯನ್ನು ದಾವೀದನ ವಂಶಸ್ಥಕ್ಕಿಂತ ಶ್ರೇಷ್ಠನೆಂಬುವುದು ಈ ಪಠ್ಯದ ಮೂಲಾರ್ಥ. ಪ್ರಭು ಎಂದರೆ ರಾಜ, ನಮ್ಮನ್ನು ಆಳುವವನು, ಆಳ್ವಿಕೆ ನಡೆಸುವವನೆಂದಾರ್ಥ. ‘ಪ್ರಭು’ ಎಂಬುವುದನ್ನು ಹಳೆಒಡಂಬಡಿಕೆಯಲ್ಲಿ ದೇವರಿಗೆ ಹಾಗು ಹೊಸಒಡಂಬಡಿಕೆಯಲ್ಲಿ ಯೇಸುಕ್ರಿಸ್ತನಿಗೆ ಅನ್ವಯಿಸಿ ಕರೆಯಲಾಗಿದೆ. ಕ್ರಿಸ್ತನು ನಮ್ಮ ಪ್ರಭುವೂ, ಕರ್ತನು ಹೌದು. ಮೆಸ್ಸೀಯ, ದಾವೀದನ ಪುತ್ರ, ದೇವರು, ಕರ್ತರೆಂದು ನಾವು ವಿಶ್ವಾಸಿಸುತ್ತೇವೆ. ನಮ್ಮ ಬದುಕನ್ನು ನಡೆಸುವವನ್ನು ಅವನೇ, ಆತನು ನಮ್ಮ ಬದುಕಿನ ಅಲೋಚನೆಗಳ, ಚಿಂತನೆಗಳ, ಮನಮನೆಗಳ, ಸಂಬಂಧಗಳ, ಕಾರ್ಯಗಳ ರಾಜನಾಗಿರಲೆಂದು ಪ್ರಾರ್ಥಿಸೋಣ.
-----------------

 


No comments:

Post a Comment