Tuesday, 19 May 2020

ಜೂನ್ 4, 2020 - ಸಾಧಾರಣ ಕಾಲದ ಒಂಭತ್ತನೆಯ ವಾರ - ಗುರುವಾರ

                       [ಹಸಿರು]
ಮೊದಲ ವಾಚನ: 2 ತಿಮೊಥಿ 2.8-15
ಕೀರ್ತನೆ 25:4-5, 8-9, 10, 14. ಶ್ಲೋಕ.4
ನಿನ್ನ ಮಾರ್ಗವನ್ನು ಪ್ರಭೂ, ನನಗೆ ತೋರಿಸು
ಶುಭಸಂದೇಶ: ಮಾರ್ಕ 12.28-34

ಮೊದಲ ವಾಚನ: 2 ತಿಮೊಥಿ 2.8-15
8 : ಕ್ರಿಸ್ತಯೇಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ.
9 : ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ.
10 : ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತ ಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ ಸಹಿಸುತ್ತಿದ್ದೇನೆ.
11 : ಮಾತು ನಂಬತಕ್ಕದ್ದಾಗಿದೆ:
12 : ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ; ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ, ನಮ್ಮನ್ನಾತನು ನಿರಾಕರಿಸುತ್ತಾನೆ.
13 : ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ; ಕಾರಣ, ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ.
14 : ವಿಷಯಗಳನ್ನು ನಿನ್ನ ಸಭೆಯವರಿಗೆ ಜ್ಞಾಪಕಪಡಿಸು. ವ್ಯರ್ಥವಾದ ವಾಗ್ವಾದಗಳನ್ನು ನಿಲ್ಲಿಸಬೇಕೆಂದು ಅವರನ್ನು ದೇವರ ಮುಂದೆ ಖಂಡಿತವಾಗಿ ಎಚ್ಚರಿಸು. ಇಂಥ ವಾಗ್ವಾದಗಳಿಂದ ಕೇಳುವವರಿಗೆ ಕೇಡಾಗುವುದೇ ಹೊರತು ಒಳಿತೇನೂ ಆಗದು.
15 : ನೀನಾದರೋ ದೇವರಿಗೆ ಮೆಚ್ಚುಗೆಯಾದವನಂತೆ, ತನ್ನ ಕೆಲಸಕ್ಕೆ ಹಿಂದೆಗೆಯದ ಕೆಲಸಗಾರನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ ಬಾಳಲು ಪ್ರಯತ್ನಪಡು.

ಕೀರ್ತನೆ 25:4-5, 8-9, 10, 14. ಶ್ಲೋಕ.4
ನಿನ್ನ ಮಾರ್ಗವನ್ನು ಪ್ರಭೂ, ನನಗೆ ತೋರಿಸು
4 : ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು / ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು //
5 : ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ / ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ //
8 : ತ್ಯಸ್ವರೂಪನು, ದಯಾವಂತನು ಪ್ರಭು / ದಾರಿತಪ್ಪಿದವರಿಗೆ ಬೋಧಕನು ವಿಭು //
9 : ದೀನರನು ನಡೆಸುವನು ತನ್ನ ವಿಧಿಗನುಸಾರ / ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ //
10 : ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ / ಆತನ ವಿಧಿ ನಿಬಂಧನೆಗಳ ಪರಿಪಾಲಕರಿಗೆ ಅವುಗಳು ಸುಪ್ರೀತ //
14 : ಬಾಳುವನಂಥವನು ಸುಖಸೌಭಾಗ್ಯದಿಂದ ಬದುಕುವುದವನ ಸಂತತಿ ನಾಡಿನೊಡೆತನದಿಂದ //


ಶುಭಸಂದೇಶ: ಮಾರ್ಕ 12.28-34
28 : ತರ್ಕವನ್ನು ಕೇಳುತ್ತಿದ ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು.
29 : ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ;
30 : ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ.
31 : “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು.
32 : ಇದನ್ನು ಕೇಳಿದ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ;
33 : ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನು.
34 : ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,” ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ
--------------------------
ಚಿಂತನೆ 

ಪ್ರೀತಿ - ಈ ಪದದಲ್ಲಿ ಏನೋ ಒಂದು ವಿಶೇಷವಿದೆ. ಪ್ರೀತಿ ಎಲ್ಲರಿಗೂ ಬೇಕಾಗಿರುವುದು. ಎಲ್ಲರೂ ಅದನ್ನು ಹಂಬಲಿಸುವವರೇ. ಯುವ ಪೀಳಿಗೆ ಈ ಪ್ರೀತಿಗಾಗಿ ಏನು ಬೇಕಾದರೂ ಮಾಡುವುದಕ್ಕೆ ತಯಾರಿದ್ದಾರೆ. ಆದರೆ ಈ ಪ್ರೀತಿ ಎಂಥದ್ದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪ್ರೀತಿಯಲ್ಲಿ ಅನೇಕ ಬಗೆಗಳಿವೆ. ನಾವು ಸಾಮಾನ್ಯವಾಗಿ ಪ್ರೀತಿ ಎಂದರೆ ಒಂದೇ ಎಂದು ಭಾವಿಸುತ್ತೇವೆ. ವಸ್ತು ಪ್ರೀತಿ, ವಾತ್ಸಲ್ಯ ಪ್ರೀತಿ, ಕಾಮ ಪ್ರೀತಿ ಹಾಗೂ ನಿಷ್ಕಳಂಕ ಪ್ರೀತಿ ಹೀಗೆ ಬೇರೆ ಬೇರೆ ಬಗೆಗಳು. ನಾವು ಯಾವಾಗಲೂ ಬೇರೆಯವರು ನಮ್ಮನ್ನು ಪ್ರೀತಿಸಬೇಕು ಎಂದುಕೊಳ್ಳುತ್ತೇವೆ. ಆದರೆ ನಮ್ಮ ಪ್ರೀತಿ ಬೇರೆಯವರಿಗೆ ಎಷ್ಟು ಸಿಕ್ಕಿದೆ ಎನ್ನುವುದು ಪ್ರಶ್ನೆ. ಇಂದು ಕ್ರಿಸ್ತ ಪ್ರಪಂಚದಾದ್ಯಂತ ಪ್ರಸ್ತುತ. ಏಕೆಂದರೆ ಆತ ಪ್ರೀತಿಯ ಇನ್ನೊಂದು ಬಗೆಯನ್ನು ಅನಾವರಣಗೊಳಿಸಿದ. ಪ್ರೀತಿಯ ಸಾಮ್ರಾಜ್ಯವನ್ನು ಸ್ಥಾಪಿಸಿದ. ಇಂದಿನ ಶುಭಸಂದೇಶದಲ್ಲಿ ಒಬ್ಬ ಧರ್ಮಶಾಸ್ತ್ರಿ ಸ್ವಾಮಿಗೆ ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆಯಾವುದೆಂದು ಕೇಳುತ್ತಾನೆ. ಸ್ವಾಮಿಯ ಪ್ರೀತಿಯ ಆಜ್ಞೆ ಕೇಳಿ ಆತನೊಬ್ಬ ಯೆಹೂದಿ ಧರ್ಮಶಾಸ್ತ್ರಿಯಾದ್ದರಿಂದ ಅದನ್ನು ಅರಿತು ಅದನ್ನು ಪಾಲಿಸುವುದು ತನ್ನ ಸಮ್ಮತಿಯನ್ನು ಸೂಚಿಸುತ್ತಾನೆ. ಇದಕ್ಕೆ ಯೇಸುಸ್ವಾಮಿ ದೇವರ ಸಾಮ್ರಾಜ್ಯವೇನು ದೂರವಿಲ್ಲ 

ಎಂದು ಹೇಳುತ್ತಾರೆ. ಪ್ರೀತಿ ಎಲ್ಲರನ್ನೂ ಒಂದುಗೂಡಿಸುವ ಬಂಧ. ಅದರಲ್ಲಿ ಕ್ರಿಸ್ತ ಪ್ರೀತಿಯ ವೈಶಿಷ್ಟ್ಯ ವಿಭಿನ್ನ. ಅದು ಬಗೆದಷ್ಟೂ ಚಿಮ್ಮುವಂಥದ್ದು. ಅಂತಹ ಪ್ರೀತಿ ನಮ್ಮದಾಗಲಿ. 

ಆತ್ಮಾವಲೋಕನ : 

1. ನಮ್ಮ ಪ್ರೀತಿ ಎಂಥದ್ದು? ಯಾವುದನ್ನು ಆವಲಂಬಿಸಿದೆ? 

2. ಬೇರೆಯವರಿಗೆ ನಾನೆಷ್ಟು ಪ್ರೀತಿಯನ್ನು ಕೊಟ್ಟಿದ್ದೇನೆ? 

3. ಕ್ರಿಸ್ತ ಪ್ರೀತಿಯ ಅಭಿರುಚಿ ನನ್ನಲ್ಲಿದೆಯೇ.?

No comments:

Post a Comment