Tuesday, 19 May 2020

ಜೂನ್ 12 - ಸಾಧಾರಣ ಕಾಲದ ಹತ್ತನೆಯ ವಾರ - ಶುಕ್ರವಾರ

ಜೂನ್ 12, 2020 ಶುಕ್ರವಾರ                         [ಹಸಿರು]
ಮೊದಲ ವಾಚನ: 1 ಅರಸರು 19.9, 11-16
ಕೀರ್ತನೆ 27:7-8, 9, 13-14. ಶ್ಲೋಕ.8
ನಿಮ್ಮ ಮುಖದರುಶನವನ್ನು ಪ್ರಭೂ ಅರಸುವೆನು
ಶುಭಸಂದೇಶ: ಮತ್ತಾಯ 5.27-32

ಮೊದಲ ವಾಚನ: 1 ಅರಸರು 19.9, 11-16
9 : ದೇವಗಿರಿಯಾದ ಹೋರೇಬನ್ನು ಮುಟ್ಟಿ ಅಲ್ಲಿನ ಒಂದು ಗವಿಯಲ್ಲಿ ಇಳಿದುಕೊಂಡನು. ಎಲೀಯನಿಗೆ ಸರ್ವೇಶ್ವರನ ಸಂದರ್ಶನ ಆಗ ಅವನಿಗೆ ಸರ್ವೇಶ್ವರನಿಂದ, “ಎಲೀಯನೇ, ಇಲ್ಲೇನು ಮಾಡುತ್ತಿರುವೆ?” ಎಂಬ ವಾಣಿ ಕೇಳಿಸಿತು.
11 : ಆಗ ಇನ್ನೊಮ್ಮೆ, “ನೀನು ಹೊರಗೆ ಬಂದು ಬೆಟ್ಟದ ಮೇಲೆ ಸರ್ವೇಶ್ವರನ ಮುಂದೆ ನಿಲ್ಲು,” ಎಂದು ವಾಣಿಯಾಯಿತು; ಆಹಾ! ಸರ್ವೇಶ್ವರ ಅಲ್ಲೇ ಹಾದುಹೋದರು, ಅವರ ಮುಂದೆ ಪರ್ವತಗಳನ್ನು ಭೇದಿಸಿ ಬಂಡೆಗಳನ್ನು ಪುಡಿಪುಡಿಮಾಡುವಂಥ ದೊಡ್ಡ ಬಿರುಗಾಳಿ ಬೀಸಿತು; ಸರ್ವೇಶ್ವರ ಅದರಲ್ಲಿ ಇರಲಿಲ್ಲ. ತರುವಾಯ ಭೂಕಂಪವುಂಟಾಯಿತು; ಅದರಲ್ಲೂ ಅವರಿರಲಿಲ್ಲ.
12 : ಭೂಕಂಪವಾದನಂತರ ಸಿಡಿಲು ಉಂಟಾಯಿತು. ಕಡೆಗೊಂದು ಮೆಲುದನಿ!
13 : ಅದನ್ನು ಕೇಳಿದಕೂಡಲೆ ಎಲೀಯನು ತನ್ನ ಕಂಬಳಿಯಿಂದ ಮುಖವನ್ನು ಮುಚ್ಚಿಕೊಂಡು ಹೋಗಿ ಗವಿಯ ದ್ವಾರದಲ್ಲಿ ನಿಂತನು. ಆಗ, “ಎಲೀಯನೇ, ನೀನು ಇಲ್ಲೇನು ಮಾಡುತ್ತಿರುವೆ?” ಎಂಬ ವಾಣಿ ಕೇಳಿಸಿತು.
14 : ಅದಕ್ಕೆ ಅವನು, “ಸೇನಾಧೀಶ್ವರರಾದ ಸರ್ವೇಶ್ವರಾ, ಇಸ್ರಯೇಲರು ನಿಮ್ಮ ನಿಬಂಧನೆಯನ್ನು ಮೀರಿದ್ದಾರೆ; ಬಲಿಪೀಠಗಳನ್ನು ಕೆಡವಿ ಹಾಕಿದ್ದಾರೆ; ಪ್ರವಾದಿಗಳನ್ನು ಕತ್ತಿಯಿಂದ ಸಂಹರಿಸಿದ್ದಾರೆ; ನಾನೊಬ್ಬನೇ ಉಳಿದು ನಿಮ್ಮ ಗೌರವವನ್ನು ಕಾಪಾಡುವುದರಲ್ಲಿ ಆಸಕ್ತನಾಗಿದ್ದೆನು; ಆದರೆ ಅವರು ನನ್ನ ಪ್ರಾಣವನ್ನೂ ತೆಗೆಯಬೇಕೆಂದು ಇದ್ದಾರೆ,” ಎಂದು ಉತ್ತರಕೊಟ್ಟನು.
15 : ಆಗ ಸರ್ವೇಶ್ವರ, “ನೀನು ಬಂದ ದಾರಿಯಲ್ಲೇ ಹಿಂದಿರುಗಿ ದಮಸ್ಕದ ಮರುಭೂಮಿಗೆ ಹೋಗು; ಅಲ್ಲಿಂದ ಪಟ್ಟಣದೊಳಗೆ ಹೋಗಿ ಹಜಾಯೇಲನನ್ನು ಸಿರಿಯಾದವರ ಅರಸನನ್ನಾಗಿ ಅಭಿಷೇಕಿಸು;
16 : ನಿಂಷಿಯ ಮಗ ಯೇಹುವನ್ನು, ಇಸ್ರಯೇಲರ ಅರಸನನ್ನಾಗಿ ಅಭಿಷೇಕಿಸು. ಅಬೇಲ್ ಮಹೋಲದವನೂ ಶಾಫಾಟನ ಮಗನೂ ಆದ ಎಲೀಷನನ್ನು ನಿನ್ನ ಉತ್ತರಾಧಿಕಾರಿಯಾದ ಪ್ರವಾದಿಯನ್ನಾಗಿ ಅಭಿಷೇಕಿಸು.

ಕೀರ್ತನೆ 27:7-8, 9, 13-14. ಶ್ಲೋಕ.8
ನಿಮ್ಮ ಮುಖದರುಶನವನ್ನು ಪ್ರಭೂ ಅರಸುವೆನು
7 : ಪ್ರಭೂ, ನಿನಗೆ ಮೊರೆಯಿಡುವೆನು / ಕರುಣಿಸೆನಗೆ ಸದುತ್ತರವನು //
8 : “ಅರಸೆನ್ನ ಮುಖದರುಶನವನು”, ಎಂದೆ ನೀನು / “ಅರಸುವೆನು ಅದನೆ”, ಎಂದು ಮರುನುಡಿದೆ ನಾನು //
9 : ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ / ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ //
13 : ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು / ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು //
14 : ಪ್ರಭುವನು ಎದುರುನೋಡುತ್ತಿರು ಮನವೇ / ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //

ಶುಭಸಂದೇಶ: ಮತ್ತಾಯ 5.27-32
27 : "ವ್ಯಭಿಚಾರ ಮಾಡಕೂಡದು ಎಂಬ ನಿಯಮವನ್ನು ನೀವು ಕೇಳಿದ್ದೀರಿ;
28 : ಆದರೆ ನಾನು ಹೇಳುತ್ತೇನೆ, ಕೇಳಿ: ಪರಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ತನ್ನ ಹೃದಯದಲ್ಲಿ ಆಕೆಯೊಡನೆ ಆಗಲೇ ವ್ಯಭಿಚಾರ ಮಾಡಿದವನೇ ಆಗುತ್ತಾನೆ.
29 : ನಿನ್ನ ಬಲಗಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತೆಸೆದುಬಿಡು; ನಿನ್ನ ಇಡೀ ದೇಹ ನರಕಕ್ಕೆ ತುತ್ತಾಗುವುದಕ್ಕಿಂತ ನಿನ್ನ ಒಂದು ಅಂಗ ನಾಶವಾಗುವುದೇ ಲೇಸು.
30 : ನಿನ್ನ ಬಲಗೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಬಿಸಾಡಿಬಿಡು; ನಿನ್ನ ಇಡೀ ದೇಹ ನರಕದ ಪಾಲಾಗುವುದಕ್ಕಿಂತ ಒಂದು ಅವಯವ ನಾಶವಾಗುವುದು ಎಷ್ಟೋ ಮೇಲು."
31 : "ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ವಿವಾಹ ವಿಚ್ಛೇದನ ಪತ್ರವನ್ನು ಅವಳಿಗೆ ಕೊಡಲಿ,’ ಎಂದು ವಿಧಿಸಲಾಗಿದೆ.
32 : ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಹೆಂಡತಿಯ ದುರ್ನಡತೆಯ ಕಾರಣದಿಂದಲ್ಲದೆ, ಅವಳನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರಿಣಿಯಾಗುವುದಕ್ಕೆ ಕಾರಣನಾಗುತ್ತಾನೆ; ಅಲ್ಲದೆ ಗಂಡ ಬಿಟ್ಟವಳನ್ನು ಮದುವೆಯಾಗುವವನು ಕೂಡ ವ್ಯಭಿಚಾರಿಯಾಗುತ್ತಾನೆ."
-------------
ಚಿಂತನೆ
“ದೈವತ್ವದ ಸಹಕಾರದಿಂದ ನಮ್ಮ ಬಲಹೀನತೆಯನ್ನುಗೆಲ್ಲೋಣ”              
ಇಂದಿನ ಶುಭಸಂದೇಶಇಂದ್ರಿಯ ನಿಗ್ರಹದ ಬಗ್ಗೆ ಎಚ್ಚರಿಸುವಂತಿದೆ.ನಮ್ಮ ಆದಿಪಾಪದ ಫಲವಾಗಿ ನಾವು ದೇವರಿಗೆ ವ್ಯತಿರಿಕ್ತವಾಗಿಆಲೋಚಿಸುತ್ತೇವೆ, ತಿಳಿದಿದ್ದರೂ ತಪ್ಪುಗಳನ್ನು ಮಾಡುತ್ತೇವೆ. ಬಿದ್ದಾಗಎದ್ದರೂ ಮತ್ತೊಮ್ಮೆ ಬೀಳುತ್ತೇವೆ. ಇದುಮಾನವ ಬದುಕಿನ ಒಳಿತು-ಕೆಡುಕುಗಳ ನಿರಂತರ ಹೋರಾಟ.ಇಲ್ಲಿ ಎಚ್ಚರಿಕೆಯು ಹೋರಾಟದಂತೆ ನಿರಂತರವಾಗಿದ್ದರೆ ಮಾತ್ರ ದೈಹಿಕ ಆಸೆಗಳನ್ನು ಅಗತ್ಯತೆಗಳು ಎನ್ನುವ ಅನಿಸಿಕೆಗಳಿಂದ ದೂರವಿರಿಸುತ್ತೇವೆ. ಗೌರವದಿಂದ ಬದುಕುವ ರೀತಿಯನ್ನು ರೂಢಿಸಿಕೊಳ್ಳುತ್ತೇವೆ. ಅದಕ್ಕಾಗಿಯೇ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳು ಸಂಬಂಧಗಳೆಂಬ ಕಡಿವಾಣದಿಂದ ಕಾಮವೆಂಬ ಅರಿಷಡ್ವರ್ಗವನ್ನು ಬಂಧಿಸಿರುವುದು.
ಆದರೆ ಈ ಬಂಧನಕ್ಕಿಂತ ಮಿಗಿಲಾದದ್ದು ಪ್ರೀತಿ. ಇದು ನಮ್ಮಯೋಚನೆ, ನಡೆ-ನುಡಿಗಳನ್ನು ಉನ್ನತಮಟ್ಟಕ್ಕೇರಿಸಬಹುದು. ಅದೇ ಪ್ರೀತಿಯಿಂದ ದೈವತ್ವದ ಸಹಕಾರದಿಂದ ನಮ್ಮ ಬಲಹೀನತೆಯನ್ನುಗೆಲ್ಲೋಣ.
--------------------

No comments:

Post a Comment