ಜೂನ್ 13, 2020 ಶನಿವಾರ [ಬಿಳಿ]
ಪಾದ್ವದ ಸಂತ ಅಂತೋಣಿ [ಯಾಜಕ / ಧರ್ಮಪಂಡಿತ] (ಸ್ಮರಣೆ)
ಮೊದಲ ವಾಚನ: 1 ಅರಸರು 19.19-21
ಕೀರ್ತನೆ 16:1-2, 5, 7-8, 9-10. ಶ್ಲೋಕ.5
ಪ್ರಭೂ, ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ
ಶುಭಸಂದೇಶ: ಮತ್ತಾಯ 5.33-37
ಮೊದಲ ವಾಚನ: 1 ಅರಸರು 19.19-21
19 : ಎಲೀಯನು ಅಲ್ಲಿಂದ ಹೊರಟುಹೋಗಿ ಶಾಫಾಟನ ಮಗನಾದ ಎಲೀಷನನ್ನು ಕಂಡನು. ಅವನು ಹೊಲವನ್ನು ಉಳುವುದಕ್ಕೆ ಹನ್ನೆರಡು ಜೋಡಿ ಎತ್ತುಗಳನ್ನು ತಂದು ಹನ್ನೆರಡನೆಯ ಜೋಡಿಯಿಂದ ತಾನಾಗಿ ಉಳುತ್ತಿದ್ದನು. ಎಲೀಯನು ಅಲ್ಲಿಂದ ಹಾದುಹೋಗುವಾಗ ತನ್ನ ಕಂಬಳಿಯನ್ನು ಅವನ ಮೇಲೆ ಹಾಕಿದನು.
20 : ಕೂಡಲೆ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, “ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ; ಅನಂತರ ನಿನ್ನನ್ನು ಹಿಂಬಾಲಿಸುವೆನು,” ಎಂದನು. ಅದಕ್ಕೆ ಎಲೀಯನು, “ಹೋಗಿ ಬಾ; ನಾನು ನಿನಗೆ ಮಾಡಬೇಕಾದ್ದನ್ನು ಮಾಡಿದ್ದೇನೆ,” ಎಂದು ಉತ್ತರಕೊಟ್ಟನು.
21 : ಎಲೀಷನು ಹಿಂದಿರುಗಿ ಹೋಗಿ ತಾನು ಉಳುತ್ತಿದ್ದ ಜೋಡಿ ಎತ್ತುಗಳನ್ನು ತೆಗೆದುಕೊಂಡು ವಧಿಸಿ ಮಾಂಸವನ್ನು ನೊಗದ ಕಟ್ಟಿಗೆಯಿಂದ ಬೇಯಿಸಿ, ಜನರಿಗೆ ಔತಣಮಾಡಿಸಿದನು. ಅನಂತರ ಅವನು ಎದ್ದು ಎಲೀಯನನ್ನು ಹಿಂಬಾಲಿಸಿ ಅವನ ಶಿಷ್ಯನಾದನು.
ಕೀರ್ತನೆ 16:1-2, 5, 7-8, 9-10. ಶ್ಲೋಕ.5
ಪ್ರಭೂ, ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ
1 : ನೀಡು ದೇವಾ ರಕ್ಷಣೆಯನು / ನಾ ನಿನಗೆ ಶರಣಾಗತನು //
2 : “ನೀನೇ ನನ್ನೊಡೆಯ”ನೆಂದು ನಾ ನುಡಿದೆ / ನಿನ್ನ ಹೊರತು ನನಗಿಲ್ಲ ಒಳಿತು” ಎಂದೆ /
5 : ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ / ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ //
6 : ನನ್ನ ಪಾಲಿಗೆ ಬಂದುದು ರಮಣೀಯವಾದುದು / ನನಗದೆ ಪರಮಾನಂದ ದಾಯಕವಾದುದು //
7 : ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ / ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ //
8 : ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ / ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ? //
9 : ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ / ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ //
10 : ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ / ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು ಪಾತಾಳಕೆ //
11 : ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು / ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು / ನಿನ್ನ ಬಲಗೈ ನೀಡುವುದು ನಿತ್ಯ ಭಾಗ್ಯವನು //
ಶುಭಸಂದೇಶ: ಮತ್ತಾಯ 5.33-37
33 :
" ‘ಸುಳ್ಳಾಣೆಯಿಡಬೇಡ;
ದೇವರಿಗೆ
ಆಣೆಯಿಟ್ಟು
ವಾಗ್ದಾನಮಾಡಿದಂತೆ
ನಡೆದುಕೊಳ್ಳಲೇ
ಬೇಕು’ ಎಂದು ಪೂರ್ವಿಕರಿಗೆ ಹೇಳಿದ್ದು ನಿಮಗೆ ತಿಳಿದೇ ಇದೆ.
34 : ಈಗ ನಾನು ಹೇಳುವುದನ್ನು ಕೇಳಿ: ನೀವು ಆಣೆಯಿಡಲೇಬೇಡಿ. ಆಕಾಶದ ಮೇಲೆ ಆಣೆಯಿಡಬೇಡಿ, ಅದು ದೇವರ ಸಿಂಹಾಸನ;
35 : ಭೂಮಿಯ ಮೇಲೆ ಆಣೆಯಿಡಬೇಡಿ, ಅದು ದೇವರ ಪಾದಪೀಠ; ಜೆರುಸಲೇಮಿನ ಮೇಲೆ ಆಣೆಯಿಡಬೇಡಿ, ಅದು ರಾಜಾಧಿರಾಜನ ಪಟ್ಟಣ;
36 : ನಿಮ್ಮ ತಲೆಯ ಮೇಲೂ ಆಣೆಯಿಡಬೇಡಿ; ಹಾಗೆ ಆಣೆಯನ್ನಿಟ್ಟು ಅದರ ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲು ನಿಮ್ಮಿಂದಾಗದು.
37 : ಹೌದಾದರೆ ಹೌದೆನ್ನಿ, ಅಲ್ಲವಾದರೆ ಅಲವೆನ್ನಿ; ಇದಕ್ಕಿಂತ ಮಿಗಿಲಾದುದು ಪಿಶಾಚಿಯಿಂದ ಪ್ರೇರಿತವಾದುದು."
--------------------
--------------------
ಚಿಂತನೆ
“ನಮ್ಮ ವ್ಯಕ್ತಿತ್ವದತೂಕದಿಂದ ಪರರ ನಂಬಿಕೆ ಗೆಲ್ಲೋಣ”
ಮಾನವ ಸಮಾಜ ಅಸ್ತಿತ್ವಕ್ಕೆ ಬಂದಂದಿನಿಂದ ವಾಗ್ದಾನ, ಒಡಂಬಡಿಕೆ, ಹರಕೆ, ಒಪ್ಪಂದಗಳೂ ರೂಢಿಯಲ್ಲಿವೆ. ಇವು ಪರಸ್ಪರ ನಂಬಿಕೆಯಿರಿಸಲು ಕೈಗೊಳ್ಳುವ ನಿರ್ಧಾರಗಳು. ನಾವು ಎಳೆಯವರಿದ್ದಾಗ ಪುರಾಣಕಥೆಗಳಿಂದ, ನೀತಿಪಾಠಗಳಿಂದ ಕೇಳಿದ ಸತ್ಯಹರಿಶ್ಚಂದ್ರ, ಪುಣ್ಯಕೋಟಿಯ ಕಥೆಗಳು ನಂಬಿಕೆ ಉಳಿಸಿಕೊಳ್ಳುವುದರೇನೆಂದು ನೆನಪಿಸುತ್ತವೆ. ಹಳೆಯ ಒಡಂಬಡಿಕೆಯ ಕಾಲದಲ್ಲಿ ವಾಗ್ದಾನಗಳಿಗೆ ದೈವತ್ವದ ಸ್ಥಾನವಿತ್ತು. ದೇವರು ಇಸ್ರಾಯೇಲರೊಡನೆ ಮಾಡಿದ ಒಪ್ಪಂದದಂತೆ ಯಾರೇ ವಾಗ್ದಾನ ಹರಕೆಗಳನ್ನು ಮಾಡಿದರೂ ಅದನ್ನು ಮುರಿಯುವಂತಿರಲಿಲ್ಲ ಬದಲಿಗೆ ಪೂರೈಸಬೇಕಾಗಿತ್ತು. ಈಗಲೂ ವಿವಾಹ, ಗುರುದೀಕ್ಷೆ ಸಂಸ್ಕಾರಗಳಾಚರಣೆಯಲ್ಲಿ ವಾಗ್ದಾನಗಳನ್ನು ಸ್ವೀಕರಿಸುವುದುಂಟು. ಇದು ನಾವು ದೇವರಿಗೆ ಮತ್ತು ಸಂಬಂಧಗಳಿಗೆ ಪ್ರಾಮಾಣಿಕರಾಗಿರಬೇಕೆಂಬುದನ್ನು ಸೂಚಿಸುತ್ತದೆ. ಇದಲ್ಲದೆ ನಮ್ಮದೈನಂದಿನ ಆಗುಹೋಗುಗಳಲ್ಲಿ, ಚಿಕ್ಕಪುಟ್ಟ ವಿಷಯಗಳಲ್ಲೂ ಬೇರೆಯವರನ್ನು ನಂಬಿಸಲು ನಾವು ವಾಗ್ದಾನದ/ ಆಣೆಯ ಮಾತುಗಳನ್ನಾಡುವುದುಂಟು. ಇಂತಹ ಸನ್ನಿವೇಶಗಳನ್ನು ಕಂಡು ಶುಭಸಂದೇಶ ನಮ್ಮನ್ನು ಎಚ್ಚರಿಸುತ್ತದೆ. ನಾಳೆಗಳ ಅನಿಶ್ಚಿತತೆಯಲ್ಲಿ ಆಣೆಗಳ ಸುರಿಮಳೆಗೈದು ಪರರನ್ನು ನಂಬಿಸುವುದು ಬೇಡ. ನಮ್ಮ ವ್ಯಕ್ತಿತ್ವದ ತೂಕದಿಂದ ಪರರ ನಂಬಿಕೆ ಗೆಲ್ಲೋಣ.
No comments:
Post a Comment