Tuesday, 19 May 2020

ಜೂನ್ 18 - ಸಾಧಾರಣಕಾಲದ ಹನ್ನೊಂದನೆಯ ವಾರ - ಗುರುವಾರ

ಜೂನ್ 18, 2020 ಗುರುವಾರ [ಹಸಿರು]
ಮೊದಲ ವಾಚನ: ಸಿರಾಖ 48.1-14
ಕೀರ್ತನೆ 97:1-2, 3-4, 5-6, 7 ಶ್ಲೋಕ.12
ಸಜ್ಜನರೇ, ಪ್ರಭುವಿನಲ್ಲಿ ಆನಂದಿಸಿರಿ
ಶುಭಸಂದೇಶ: ಮತ್ತಾಯ 6.7-15


ಮೊದಲ ವಾಚನ: ಸಿರಾಖ 48.1-14 
1 : ಎಲೀಯನು ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ.
2 : ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ.
3 : ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ.
4 : ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ?
5 : ಸತ್ತವನನ್ನು ನೀನೆಬ್ಬಿಸಿದೆ ಮರಣದಿಂದ, ಪಾತಾಳದಿಂದ ಇದು ಸಾಧ್ಯವಾಯಿತು ಮಹೋನ್ನತನ ವಾಕ್ಯ ಶಕ್ತಿಯಿಂದ.
6 : ಅರಸುಗಳನ್ನು ನಾಶನಕ್ಕೆ ಗುರಿಮಾಡಿದವನು ನೀನು ಗಣ್ಯವ್ಯಕ್ತಿಗಳನ್ನು ಮಂಚದಿಂದ ಇಳಿಸಿದವನು ನೀನು.
7 : ಸೀನಾಯಿನಲ್ಲಿ ಗದರಿಸಿಕೊಂಡವನು ನೀನು ಹೋರೇಬಿನಲ್ಲಿ ಮುಯ್ಯಿತೀರಿಸುವ ನಿರ್ಣಯ ಕೇಳಿಸಿಕೊಂಡವನು ನೀನು.
8 : ಪ್ರತೀಕಾರ ಮಾಡುವುದಕ್ಕೆ ಅರಸರನ್ನು, ನಿನ್ನಾನಂತರ ಇರಬೇಕಾದ ಪ್ರವಾದಿಯನ್ನು ಅಭಿಷೇಕಿಸಿದವನು ನೀನು.
9 : ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ.
10 : ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ.
11 : ನಿನ್ನನು ನೋಡುವವರು ಧನ್ಯರು ಪ್ರೀತಿಯಿಂದ ನಿಧನರಾದವರು ಧನ್ಯರು ! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು.
12 : ಎಲೀಷ ಸುಳಿಗಾಳಿಯಿಂದ ಆವರಿಸಲ್ಪಟ್ಟವನು ಎಲೀಯನು ಅವನ ಆತ್ಮದಿಂದ ತುಂಬಿಕೊಂಡವನು ಎಲೀಷನು. ಇವನು ತನ್ನ ಜೀವನದಲ್ಲಿ ಜಗ್ಗಲಿಲ್ಲ ಯಾವ ಅರಸನ ಬೆದರಿಕೆಗು ಇವನನ್ನು ಅಧೀನದಲ್ಲಿಟ್ಟುಕೊಳ್ಳುವ ಶಕ್ತಿ ಇರಲಿಲ್ಲ ಯಾರಿಗು.
13 : ಇವನು ಸೋಲಲಿಲ್ಲ ಯಾವ ಮಾತಿಗು ಇವನ ದೇಹ ಪ್ರವಾದಿಸಿತು ಸತ್ತ ಮೇಲೂ.
14 : ಜೀವಮಾನಕಾಲದಲ್ಲಿ ಎಸಗಿದನು ಮಹತ್ಕಾರ್ಯಗಳನ್ನು ಸತ್ತಮೇಲೂ ಅವನ ಕಾರ್ಯಗಳು ಅಗಾಧವಾಗಿದ್ದವು.

ಕೀರ್ತನೆ 97:1-2, 3-4, 5-6, 7 ಶ್ಲೋಕ.12
ಸಜ್ಜನರೇ, ಪ್ರಭುವಿನಲ್ಲಿ ಆನಂದಿಸಿರಿ 

1 : ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ / ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ / ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ //
2 : ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು / ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು //
3 : ಚಲಿಸುತ್ತಿದೆ ಬೆಂಕಿ ಆತನ ಮುಂದುಗಡೆ / ಸುಡುತ್ತದೆ ಆತನ ವೈರಿಗಳನು ಎಲ್ಲೆಡೆ //
4 : ಇಳೆಯನು ಬೆಳಗಿಸುತ್ತದೆ ಆತನ ಮಿಂಚು | ನಡುಗುತ್ತದೆ ಭೂಮಿ ಅದಕೆ ಬೆಚ್ಚುಬಿದ್ದು ||
5 : ಸಾರ್ವಭೌಮನಾದ ಪ್ರಭುವಿನ ಮುಂದೆ / ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ //
6 : ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು / ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು //
7 : ನಾಚಲಿ ವ್ಯರ್ಥವಿಗ್ರಹಗಳನು ಪೂಜಿಸಿ ಹಿಗ್ಗುವವರು / ಪ್ರಭುವಿಗೆ ಅಡ್ಡಬೀಳಲಿ ದೇವರುಗಳೆಲ್ಲರು //

ಶುಭಸಂದೇಶ: ಮತ್ತಾಯ 6.7-15
7 : "ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ.
8 : ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ.
9 : ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ:
10 : "ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ.
11 : ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ.
12 : ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ.
13 : ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ.
14 : "ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು.
15 : ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು."
---------------
ಯೇಸು ಪ್ರಾರ್ಥಿಸುವಾಗ ಅವರ ಶಿಷ್ಯರು ಯೇಸುವಿನ ಪ್ರಾರ್ಥನೆಯಲ್ಲಿ ಬದಲಾವಣೆ ಮತ್ತು ವೈಶಿಷ್ಟ್ಯವನ್ನು ಗಮನಿಸಿದ್ದರು. ಏಕೆಂದರೆ ಹಳೆಯ ಕಾಲದ ವಿಧಿವಿಧಾನಗಳನ್ನು ಬಳಸಿ ಸಾಂಪ್ರದಾಯಿಕವಾಗಿ ಪ್ರಾರ್ಥಿಸದೆ ನವೀನವಾಗಿ ಪ್ರಾರ್ಥಿಸುತ್ತಿದ್ದರು. ಅದಕ್ಕಾಗಿಯೇ ತಾವೂ ಪ್ರಾರ್ಥಿಸಲು ಕಲಿಸುವಂತೆ ಆಶಿಸಿದರು. ಯೆಹೂದ್ಯರಲ್ಲಿ ಕೆಲವರು ಅಹಂಕಾರದಿಂದ ಇತರರು ತಮ್ಮನ್ನು ಗಮನಿಸಲಿ ಎಂದು ಕಪಟತನದಲ್ಲಿ ಪ್ರಾರ್ಥಿಸುತ್ತಿದ್ದರು. ಉದ್ದುದ್ದ ವಾಕ್ಯಗಳನ್ನು ಪಠಿಸುತ್ತಾ, ಓಲಾಡಿಕೊಂಡು ನಾಟಕೀಯವಾಗಿ ಪ್ರಾರ್ಥಿಸುತ್ತಿದ್ದರು. ನಾವೂ ಹಾಗೆ ಮಾಡಬೇಕಾ? ಬೇಕಿಲ್ಲ ಎನ್ನುತ್ತಾರೆ ಕ್ರಿಸ್ತ. ನಿನ್ನ ಅಂತರಂಗದಿಂದ ತಂದೆಯೊಂದಿಗೆ ಸಂಭಾಷಿಸು, ಅದೇ ನೈಜ ಪ್ರಾರ್ಥನೆ.
----------------

No comments:

Post a Comment