Tuesday, 19 May 2020

ಜೂನ್ 17,- ಸಾಧಾರಣಕಾಲದ ಹನ್ನೊಂದನೆಯ ವಾರ - ಬುಧವಾರ

ಜೂನ್ 17, 2020 ಬುಧವಾರ [ಹಸಿರು]
ಮೊದಲ ವಾಚನ: 2 ಅರಸರು 2.1, 6-14
ಕೀರ್ತನೆ 31:19, 20, 23. ಶ್ಲೋಕ.24
ಪ್ರಭುವಿಗಾಗಿ ಕಾದಿಹ ಜನರೇ, ನಿಮಗಿರಲಿ ಅಭಯ

ಶುಭಸಂದೇಶ: ಮತ್ತಾಯ 6.1-6, 16-18

ಮೊದಲ ವಾಚನ: 2 ಅರಸರು 2.1, 6-14
1 : ಸರ್ವೇಶ್ವರಸ್ವಾಮಿ ಎಲೀಯನನ್ನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಸೇರಿಸುವ ಸಮಯ ಬಂದಿತು. ಆಗ ಎಲೀಯನು ಎಲೀಷನೊಡನೆ ಗಿಲ್ಗಾಲನ್ನು ಬಿಟ್ಟು ಹೊರಟನು.
6 : ಎಲೀಯನು ಮತ್ತೆ ಎಲೀಷನಿಗೆ, “ದಯವಿಟ್ಟು ನೀನು ಇಲ್ಲೆಯಿರು; ಸರ್ವೇಶ್ವರ ನನಗೆ ಜೋರ್ಡನಿಗೆ ಹೋಗಬೇಕೆಂದು ಆಜ್ಞಾಪಿಸಿ ಇದ್ದಾರೆ,” ಎಂದನು. ಆಗ ಅವನು, “ಸರ್ವೇಶ್ವರನ ಆಣೆ, ನಿಮ್ಮ ಜೀವದಾಣೆ, ನಾನು ನಿಮ್ಮನ್ನು ಬಿಟ್ಟಿರಲಾಗದು,” ಎಂದು ಉತ್ತರಕೊಟ್ಟನು. ಆದುದರಿಂದ ಇಬ್ಬರೂ ಹೊರಟು ಜೋರ್ಡನ್ ನದಿಯ ದಡಕ್ಕೆ ಬಂದರು.
7 : ಪ್ರವಾದಿ ಮಂಡಲಿಯವರಲ್ಲಿ ಐವತ್ತು ಮಂದಿ ಇವರ ಹಿಂದಿನಿಂದಲೇ ಬಂದು ಸ್ವಲ್ಪ ದೂರದಲ್ಲಿ ನಿಂತುಕೊಂಡರು.
8 : ಅನಂತರ ಎಲೀಯನು ತನ್ನ ಕಂಬಳಿಯನ್ನು ಮಡಿಚಿ, ಅದರಿಂದ ನೀರನ್ನು ಹೊಡೆದನು. ನೀರು ಇಬ್ಭಾಗವಾಯಿತು; ಅವರಿಬ್ಬರೂ ಒಣ ನೆಲದ ಮೇಲೆ ದಾಟಿಹೋದರು.
9 : ಅವರು ಆಚೆ ದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು, “ನಿನ್ನನ್ನು ಬಿಟ್ಟು ಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತಿ ಹೇಳು?,” ಎಂದು ಕೇಳಿದನು. ಅದಕ್ಕೆ ಎಲೀಷನು, “ನಿಮಗಿರುವ ಆತ್ಮಶಕ್ತಿಯಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸಿ,” ಎಂದು ಬೇಡಿಕೊಂಡನು.
10 : ಆಗ ಎಲೀಯನು, “ನೀನು ದುರ್ಲಭವಾದದ್ದನ್ನು ಕೇಳಿಕೊಂಡೆ; ಆದರೂ ನನ್ನನ್ನು ನಿನ್ನ ಬಳಿಯಿಂದ ತೆಗೆಯಲಾಗುವಾಗ ನೀನು ನನ್ನನ್ನು ನೋಡುವುದಾದರೆ ಅದು ದೊರಕುವುದು; ಇಲ್ಲವಾದರೆ ದೊರಕುವುದಿಲ್ಲ,” ಎಂದನು.
11 : ಅವರು ಮಾತನಾಡುತ್ತಾ ಮುಂದೆ ಹೋಗುತ್ತಿರುವಾಗ ಫಕ್ಕನೆ ಅಗ್ನಿಮಯವಾದ ರಥರಥಾಶ್ವಗಳು ನಡುವೆ ಬಂದು ಅವರನ್ನು ವಿಂಗಡಿಸಿದವು. ಎಲೀಯನು ಸುಂಟರಗಾಳಿಯಲ್ಲಿ ಪರಲೋಕಕ್ಕೆ ಹೋದನು.
12 : ಎಲೀಷನು ಅದನ್ನು ನೋಡುತ್ತಾ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಯೇಲರಿಗೆ ರಥರಥಾಶ್ವಗಳಾಗಿದ್ದವರೇ,” ಎಂದು ಕೂಗಿಕೊಂಡನು. ಎಲೀಯನು ತನಗೆ ಕಾಣಿಸದೆ ಹೋದಮೇಲೆ ದುಃಖದಿಂದ ತನ್ನ ಬಟ್ಟೆಗಳನ್ನು ಹರಿದು ಎರಡು ತುಂಡುಮಾಡಿದನು.
13 : ಅನಂತರ ಅವನು ಮೇಲಿನಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು ಜೋರ್ಡನ್ ನದೀತೀರಕ್ಕೆ ಬಂದನು.
14 : “ಎಲೀಯನ ದೇವರಾದ ಸರ್ವೇಶ್ವರನೆಲ್ಲಿ?” ಎಂದುಕೊಂಡು ಕಂಬಳಿಯಿಂದ ನೀರನ್ನು ಹೊಡೆದನು. ಅದು ಇಬ್ಭಾಗ ಆಯಿತು. ಅವನು ದಾಟಿಹೋದನು.

ಕೀರ್ತನೆ 31:19, 20, 23. ಶ್ಲೋಕ.24
ಪ್ರಭುವಿಗಾಗಿ ಕಾದಿಹ ಜನರೇ, ನಿಮಗಿರಲಿ ಅಭಯ
20 : ಪಾರುಮಾಡುವುದವರನು ನಿನ್ನ ಸಾನ್ನಿಧ್ಯ ಸೆರಗು, ಜನರೊಳಸಂಚಿನಿಂದ / ದೂರವಿಡುವುದವರನು ನಿನ್ನಾಸರೆಯು, ವ್ಯಾಜ್ಯ ಮಾಡುವ ಜಿಹ್ವೆಯಿಂದ //
21 : ಮುತ್ತಿಗೆಗೆ ತುತ್ತಾದ ನಗರದೊಳಿಂದೆನ್ನ / ಅಚ್ಚರಿಯಿಂದ ರಕ್ಷಿಸಿದೊಡೆಯನಿಗೆ ನಮನ //
24 : ಪ್ರಭುವಿಗಾಗಿ ಕಾದಿಹ ಜನರೆ, ನಿಮಗಿರಲಿ ಅಭಯ / ಧೈರ್ಯದಿಂದಿರಲಿ ನಿರುತ ನಿಮ್ಮೆಲ್ಲರ ಹೃದಯ //

ಶುಭಸಂದೇಶಮತ್ತಾಯ 6.1-6, 16-18
1 : "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು.
2 : ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.
3 : ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.
4 : ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."
5 : "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ.
6 : ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."
16 : "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.
17 : ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ.
18 : ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."
---------------------
ದಾನಧರ್ಮ ಪ್ರತೀಧರ್ಮದ ಆಧಾರ ಸ್ಥಂಭಗಳಲ್ಲೊಂದು ಅದರ ಜೊತೆಗೆ ಪ್ರಾರ್ಥನೆ ಹಾಗೂ ಉಪವಾಸವೂ ಮುಖ್ಯವಾದವುಗಳು. ಮಾತಾಡದೇ ಕೊಡುವವನು ಉತ್ತಮನು, ಮಾತಾಡಿ ಕೊಡುವವನು ಮಧ್ಯಮನು ಮತ್ತು ಮಾತಾಡಿ ಕೊಡದವನು ಅಧಮನುಎನ್ನುತ್ತದೆ ನಾಣ್ನುಡಿಯೊಂದು. ತೋರಿಕೆಗೆ ಆಡುವ ಮಾತು, ಮಾಡಿದ ಕ್ರಿಯೆಗಳು ಸ್ವಾರ್ಥಕ್ಕಲ್ಲದೆ ಬೇರೆಯದಕ್ಕಲ್ಲ.
------------------

No comments:

Post a Comment