ಜೂನ್ 20, 2020 ಶನಿವಾರ [ಬಿಳಿ]
ಮರಿಯಮ್ಮನವರ ನಿರ್ಮಲಹೃದಯದ ಹಬ್ಬ (ಸ್ಮರಣೆ)
ಮೊದಲ ವಾಚನ: ಯೆಶಾಯ 61.9-11 [ಅಥವಾ] 2 ಪೂರ್ವಕಾಲದ ವೃತ್ತಾಂತ 24:17-25
ಕೀರ್ತನೆ 89:4-5, 29-30, 31-32, 33-34
ಮರಿಯಮ್ಮನವರ ನಿರ್ಮಲಹೃದಯದ ಹಬ್ಬ (ಸ್ಮರಣೆ)
ಮೊದಲ ವಾಚನ: ಯೆಶಾಯ 61.9-11 [ಅಥವಾ] 2 ಪೂರ್ವಕಾಲದ ವೃತ್ತಾಂತ 24:17-25
ಕೀರ್ತನೆ 89:4-5, 29-30, 31-32, 33-34
ಶ್ಲೋಕ. ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ
ಶುಭಸಂದೇಶ: ಲೂಕ 2.41-51
ಶುಭಸಂದೇಶ: ಲೂಕ 2.41-51
2 ಪೂರ್ವಕಾಲದ ವೃತ್ತಾಂತ 24:17-25
17 :
ಯೆಹೋಯಾದನು ಮೃತನಾದ ಮೇಲೆ, ಜುದೇಯದ ಪದಾಧಿಕಾರಿಗಳು ಅರಸ ಯೆಹೋವಾಷನ ಬಳಿಗೆ ಬಂದು, ಅವನಿಗೆ ಅಡ್ಡಬಿದ್ದು ಅವನನ್ನು ಒಲಿಸಿಕೊಂಡರು.
18 :
ಅಂದಿನಿಂದ ಅವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನ ಆಲಯವನ್ನು ನಿರಾಕರಿಸಿ, ಅಶೇರ ಸ್ತಂಭಗಳನ್ನೂ ವಿಗ್ರಹಗಳನ್ನೂ ಪೂಜಿಸತೊಡಗಿದರು. ಅವರ ಈ ಅಪರಾಧದಿಂದ ಜುದೇಯದ ಮೇಲೂ ಜೆರುಸಲೇಮಿನ ಮೇಲೂ ದೈವಕೋಪ ಎರಗಿತು.
19 :
ಸರ್ವೇಶ್ವರ ಅವರನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವುದಕ್ಕಾಗಿ ಅವರ ಬಳಿಗೆ ಪ್ರವಾದಿಗಳನ್ನು ಕಳುಹಿಸಿದರು. ಇವರ ಮುಖಾಂತರ ಎಷ್ಟು ಎಚ್ಚರಿಸಿದರೂ ಅವರು ಕಿವಿಗೊಡಲಿಲ್ಲ.
20 :
ಆಗ ಯಾಜಕ ಯೆಹೋಯಾದನ ಮಗ ಜೆಕರ್ಯನು ದೇವಾತ್ಮನಿಂದ ಆವೇಶ ಉಳ್ಳವನಾದನು. ಅವನು ಜನರ ಎದುರಿಗೆ ಉನ್ನತ ಸ್ಥಾನದಲ್ಲಿ ನಿಂತು, “ದೇವರ ಮಾತನ್ನು ಕೇಳಿರಿ; ನೀವೇಕೆ ಸರ್ವೇಶ್ವರನ ಆಜ್ಞೆಗಳನ್ನು ಮೀರಿ, ನಿಮ್ಮನ್ನೆ ನಾಶಮಾಡಿಕೊಳ್ಳುತ್ತೀರಿ? ನೀವು ಸರ್ವೇಶ್ವರಸ್ವಾಮಿಯನ್ನು ಬಿಟ್ಟದ್ದರಿಂದ ಅವರೂ ನಿಮ್ಮನ್ನು ಬಿಟ್ಟು ಬಿಟ್ಟಿದ್ದಾರೆ,” ಎಂದನು.
21 :
ಆಗ ಅವರು ಅವನಿಗೆ ವಿರೋಧವಾಗಿ ಒಳಸಂಚು ಮಾಡಿ, ಸರ್ವೇಶ್ವರನ ಆಲಯದ ಪ್ರಾಕಾರದಲ್ಲಿ ಅವನನ್ನು ಕಲ್ಲೆಸೆದು ಕೊಂದರು. ಇದು ಅರಸ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು.
22 :
ಜೆಕರೀಯನ ತಂದೆ ಯೆಹೋಯಾದನಿಂದ ತನಗಾದ ಉಪಕಾರವನ್ನು ನೆನಪುಮಾಡಿಕೊಳ್ಳದೆ ಈ ಯೆಹೋವಾಷನು ಅವನ ಮಗನನ್ನು ಕೊಲ್ಲಿಸಿದನು. ಜೆಕರೀಯನು ಸಾಯುವಾಗ, “ಸರ್ವೇಶ್ವರ ಸ್ವಾಮಿಯೇ ಇದನ್ನು ನೋಡಿ ತಕ್ಕ ಶಾಸ್ತಿಮಾಡಲಿ” ಎಂದನು.
23 :
ವರ್ಷಾಂತ್ಯದಲ್ಲಿ ಸಿರಿಯಾದ ಸೈನ್ಯ ಯೆಹೋವಾಷನ ಮೇಲೆ ದಾಳಿಮಾಡಲು ಹೊರಟಿತು. ಆ ಸೈನ್ಯದವರು ಜುದೇಯ ನಾಡಿನೊಳಗೆ ನುಗ್ಗಿ ಜೆರುಸಲೇಮಿಗೆ ಬಂದು, ಇಸ್ರಯೇಲರ ಎಲ್ಲ ಜನಾಧಿಪತಿಗಳನ್ನು ನಿರ್ನಾಮ ಮಾಡಿ ಅವರಲ್ಲಿ ಸಿಕ್ಕಿದ ಕೊಳ್ಳೆಯನ್ನೆಲ್ಲಾ ದಮಸ್ಕದ ಅರಸನಿಗೆ ಕಳುಹಿಸಿದರು.
24 :
ಸಿರಿಯಾದ ಸೈನ್ಯದಿಂದ ಬಂದ ಗುಂಪು ಚಿಕ್ಕದಾಗಿದ್ದರೂ ಯೆಹೂದ್ಯರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನನ್ನು ಬಿಟ್ಟು ಬಿಟ್ಟದ್ದರಿಂದ ಶಿಕ್ಷೆಗೆ ಗುರಿಯಾದರು. ತಮ್ಮದು ಮಹಾಸೈನ್ಯವಾಗಿದ್ದರೂ ಸಿರಿಯಾದವರ ಕೈಯಲ್ಲಿ ಸೋಲನ್ನು ಅನುಭವಿಸಿದರು; ಯೆಹೋವಾಷನಿಗೆ ದಂಡನೆಯಾಯಿತು.
25 :
ಕಠಿಣವಾಗಿ ಗಾಯಗೊಂಡಿದ್ದ ಅವನನ್ನು ಸಿರಿಯಾದವರು ಬಿಟ್ಟುಹೋದರು. ಅವನ ಸೇವಕರೇ, ಯಾಜಕ ಯೆಹೋಯಾದನ ಮಗನ ವಧೆಯ ನಿಮಿತ್ತ, ಅವನಿಗೆ ವಿರೋಧವಾಗಿ ಒಳಸಂಚುಮಾಡಿ ಅವನನ್ನು ಹಾಸಿಗೆಯಲ್ಲೇ ಕೊಂದುಹಾಕಿದರು. ಅವನ ಶವವನ್ನು ದಾವೀದ ನಗರದೊಳಗೆ ಸಮಾಧಿಮಾಡಿದರು; ಆದರೆ ರಾಜಸ್ಮಶಾನದಲ್ಲಿ ಮಾಡಲಿಲ್ಲ.
ಕೀರ್ತನೆ 89:4-5, 29-30, 31-32, 33-34
ಶ್ಲೋಕ. ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ
4 :
“ಸ್ಥಾಪಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು / ಸ್ಥಿರಪಡಿಸುವೆ ಯುಗಯುಗಕು ನಿನ್ನ ಸಿಂಹಾಸನವನು”//
5 : ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು / ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು //
29 :
ಉಳಿಸುವೆನು ಅವನ ಸಂತಾನವನು ನಿರಂತರವಾಗಿ / ಅವನ ಸಿಂಹಾಸನವಿರುವುದು ಗಗನದಂತೆ ಸ್ಥಿರವಾಗಿ //
30 :
ಅವನ ಕುವರರು ತೊರೆದರಾದರೆ ನನ್ನ ಧರ್ಮಶಾಸ್ತ್ರವನು / ಉಲ್ಲಂಘಿಸಿ ನಡೆದರಾದರೆ ನನ್ನ ಆಜ್ಞಾವಿಧಿಗಳನು //
31 :
ವಿೂರಿ ನಡೆದರಾದರೆ ನನ್ನ ಶಾಸನಗಳನು / ಪರಿಪಾಲಿಸದೆ ಹೋದರೆ ಎನ್ನ ನಿಯಮಗಳನು //
32 :
ದಂಡಿಸುವೆನವರ ದ್ರೋಹವನು ದಂಡದಿಂದ / ಶಿಕ್ಷಿಸುವೆನವರ ಅಪರಾಧವನು ಚಾಟಿ ಯಿಂದ //
33 :
ಆದರೆ ನನ್ನೊಲವು ಅವನನ್ನು ಕೈಬಿಡದು / ನನ್ನ ಪ್ರಾಮಾಣಿಕತೆಗದು ಚ್ಯುತಿಯಾಗದು //
34 :
ಭಂಗಪಡಿಸೆನು ಎನ್ನ ಒಡಂಬಡಿಕೆಯನು / ವಿೂರೆನು ನಾನವನಿಗೆ ಕೊಟ್ಟ ಮಾತನು //
ಶುಭಸಂದೇಶ: ಲೂಕ 2.41-51
41 : ಯೇಸುಸ್ವಾಮಿಯ ತಂದೆತಾಯಿಗಳು ಪ್ರತಿವರ್ಷವೂ ಪಾಸ್ಕಹಬ್ಬಕ್ಕೆ ಜೆರುಸಲೇಮಿಗೆ ಹೋಗುತ್ತಿದ್ದರು.
42 : ಯೇಸುವಿಗೆ ಹನ್ನೆರಡು ವರ್ಷವಾದಾಗ ವಾಡಿಕೆಯ ಪ್ರಕಾರ ಹಬ್ಬಕ್ಕೆ ಹೋದರು.
43 : ಹಬ್ಬ ಮುಗಿಸಿಕೊಂಡು ಅವರು ಹಿಂದಿರುಗಿ ಬರುವಾಗ ಬಾಲಕಯೇಸು ಜೆರುಸಲೇಮಿನಲ್ಲಿಯೇ ಉಳಿದುಬಿಟ್ಟರು.
44 : ಇದು ತಂದೆತಾಯಿಗಳಿಗೆ ತಿಳಿಯದು. ಮಗನು ಯಾತ್ರಿಕರ ಗುಂಪಿನಲ್ಲಿ ಬರುತ್ತಿರಬಹುದೆಂದು ಭಾವಿಸಿ ಒಂದು ದಿನದ ಪ್ರಯಾಣ ಬಂದುಬಿಟ್ಟಿದ್ದರು. ನಂತರ ಮಗನನ್ನು ಕಾಣದೆ ತಮ್ಮ ಬಂಧುಬಳಗದವರಲ್ಲೂ ಪರಿಚಿತರಲ್ಲೂ ಹುಡುಕಾಡಿದರು.
45 : ಅಲ್ಲೆಲ್ಲೂ ಕಾಣದೆ ಅವರನ್ನು ಹುಡುಕಿಕೊಂಡು ಜೆರುಸಲೇಮಿಗೆ ಮರಳಿ ಬಂದರು.
46 : ಮೂರು ದಿನಗಳ ಮೇಲೆ ಮಹಾದೇವಾಲಯದಲ್ಲಿ ಅವರನ್ನು ಕಂಡಾಗ ಅಲ್ಲಿ ಯೇಸು, ಬೋಧಕರ ಮಧ್ಯೆ ಕುಳಿತುಕೊಂಡು ಅವರ ಉಪದೇಶವನ್ನು ಆಲಿಸುತ್ತಾ ಅವರಿಗೆ ಪ್ರಶ್ನೆಹಾಕುತ್ತಾ ಇದ್ದರು.
47 : ಬಾಲಕನ ಪ್ರಶ್ನೋತ್ತರಗಳನ್ನು ಕೇಳುತ್ತಿದ್ದ ಎಲ್ಲರೂ ಆತನ ಜ್ಞಾನವನ್ನು ಕಂಡು ಬೆರಗಾದರು.
48 : ತಂದೆತಾಯಿಗಳು ಮಗನನ್ನು ಅಲ್ಲಿ ಕಂಡು ವಿಸ್ಮಯಗೊಂಡರು. ಆಗ ತಾಯಿಯು, “ಕಂದಾ, ನಮಗೆ ಏಕೆ ಹೀಗೆ ಮಾಡಿದೆ? ನಿನ್ನ ತಂದೆಯೂ ನಾನೂ ಎಷ್ಟೋ ಕಳವಳಪಟ್ಟು ನಿನ್ನನ್ನು ಹುಡುಕಾಡಿದೆವಲ್ಲಾ,” ಎಂದಳು.
49 : ಅದಕ್ಕೆ ಉತ್ತರವಾಗಿ ಯೇಸು, “ನೀವು ನನ್ನನ್ನು ಹುಡುಕಿದ್ದೇಕೆ? ನಾನು ನನ್ನ ತಂದೆಯ ಆಲಯದಲ್ಲೇ ಇರಬೇಕೆಂದು ನಿಮಗೆ ತಿಳಿಯದೆ ಹೋಯಿತೆ?” ಎಂದರು.
50 : ಆದರೆ ಅವರ ಮಾತು ತಂದೆತಾಯಿಗಳಿಗೆ ಅರ್ಥವಾಗಲಿಲ್ಲ.
51 : ಬಳಿಕ ಯೇಸು ತಂದೆತಾಯಿಗಳೊಡನೆ ನಜರೇತಿಗೆ ಬಂದರು. ಅಲ್ಲಿ ಅವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಿದ್ದರು.
------------------
ನಮ್ಮಲ್ಲಿ ಒಂದು ಗಾದೆ ಮಾತಿದೆ- "ತುಂಬಿದ ಕೊಡ ತುಳುಕುವುದಿಲ್ಲ" ಎಂದು. ಅಂದರೆ ತುಂಬಾ ತಿಳಿದಂಥವರು, ಅನುಭವಸ್ಥರು, ಮೇಧಾವಿಗಳು ಮತ್ತು ಪ್ರಜ್ಞಾಶೀಲರುಜಾಸ್ತಿ ಮಾತಾಡುವುದಿಲ್ಲ. ಅವರು ಮಾತಿಗಿಂತ ಕೆಲಸ ಮತ್ತು ಯೋಚನೆಗಳಲ್ಲಿ ತಲ್ಲೀನರಾಗಿರುತ್ತಾರೆ. ಇನ್ನೂ ಕೆಲವರು ಏನೂ ಗೊತ್ತಿಲ್ಲದೆ ಎಲ್ಲಾ ತಿಳಿದಿರುವಂತೆ ವರ್ತಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಆದರೆ ಅವರ ಹತ್ತಿರ ಜ್ಞಾನವಾಗಲಿ, ಅನುಭವವಾಗಲಿ ಇರುವುದಿಲ್ಲ. ಹೀಗೆ ಮಹಾನ್ ವ್ಯಕ್ತಿಗಳು ಮಾತ್ರ ತುಂಬಿದ ಕೊಡದ ಹಾಗೆ ಜೀವಿಸುತ್ತಾರೆ. ಎಲೆ ಮರೆಯ ಕಾಯಿಯ ರೀತಿಯಲ್ಲಿ ಬದುಕುತ್ತಾರೆ. ಅಂಥವರಲ್ಲಿ ಮಾತೆ ಮರಿಯಮ್ಮನವರು ಸಹ ಒಬ್ಬರು. ನಾವು ಸೂಕ್ಷ್ಮವಾಗಿ ಗಮನಿಸಿದರೆ ಪವಿತ್ರ ಬೈಬಲ್ ಶ್ರೀಗ್ರಂಥದಲ್ಲಿ ಅವರು ಮಾತನಾಡಿದ್ದು ಕಡಿಮೆ ಕೆಲಸ ಮಾಡಿದ್ದು ಜಾಸ್ತಿ. ಆಕೆ ಮಾತನಾಡಿದ ಮಾತುಗಳಲ್ಲಿ ಮುಖ್ಯವಾದುವು ಇವೆರಡು.
1) ನಿಮ್ಮ ಚಿತ್ತದಂತೆ ನನಗಾಗಲಿ (ಲೂಕ 1:38). 2) ಆತ ಹೇಳಿದಂತೆ ಮಾಡಿ. (ಯೊವಾನ್ನ 2:5).
ಈ ಎರಡು ವಾಕ್ಯಗಳಲ್ಲಿ ನಾನು ನನ್ನದು ಎಂಬುದು ಯಾವುದೂ ಇಲ್ಲ. ಬರೀ ನಿರ್ಲಿಪ್ತತೆಯಿಂದ ದೀನತೆಯಿಂದ ಕೂಡಿದ ಮಾತುಗಳಷ್ಟೇ ಮಾತೆಯಿಂದ ಹೊರಬಂದವು. ಎಷ್ಟೋ ಕಠಿಣ, ದುಃಖ, ಆತಂಕದ ಮಾತುಗಳನ್ನು ಅದುಮಿಟ್ಟು ಎಷ್ಟೋ ವಿಷಯಗಳು ಹೃದಯಕ್ಕೆ ಈಟಿ ತಿವಿದಿದ್ದರೂ ಎಲ್ಲವನ್ನು ಮರೆತು. ಕಾನಾದಿಂದ ಕಲ್ವಾರಿಯೆಡೆಗೆ ಸಾಗಿದ ಹಾಗೂ ಯೇಸುಸ್ವಾಮಿಯನ್ನು ಹಿಂಬಾಲಿಸಿದ ಏಕೈಕ ವ್ಯಕ್ತಿ ಮಾತೆ ಮರಿಯ.
ಆತ್ಮಾವಲೋಕನ :
1.ನಾನು ತುಂಬಿದ ಕೊಡವೋ ಅಥವ ಖಾಲಿ ಪಾತ್ರೆಯೋ?
2. ನನ್ನ ಹೃದಯ ನಿಷ್ಕಳಂಕವಾಗಿದೆಯೇ?
No comments:
Post a Comment