Tuesday, 19 May 2020

ಜೂನ್ 3- ಸಾಧಾರಣ ಕಾಲದ ಒಂಭತ್ತನೆಯ ವಾರ - ಬುಧವಾರ

ಜೂನ್ 3, 2020 ಬುಧವಾರ                                      [ಹಸಿರು]
ಸಂತ ಚಾರ್ಲ್ಸ್ ಲ್ವಾಂಗ ಮತ್ತು ಸಂಗಡಿಗರು [ರಕ್ತಸಾಕ್ಶಿ] (ಸ್ಮರಣೆ)
ಮೊದಲ ವಾಚನ: 2 ತಿಮೊಥಿ 1.1-3, 6-12
ಕೀರ್ತನೆ 123: 1-3. ಶ್ಲೋಕ.1
ನನ್ನ ಕಣ್ಣುಗಳನ್ನು ಪ್ರಭೂ, ನಿನ್ನ ಕಡೆಗೆ ಎತ್ತಿರುವೆ
ಶುಭಸಂದೇಶ: ಮಾರ್ಕ 12.18-27

ಮೊದಲ ವಾಚನ: 2 ತಿಮೊಥಿ 1.1-3, 6-12
1 : ನನ್ನ ಪ್ರೀತಿಯ ಪುತ್ರ ತಿಮೊಥೇಯನಿಗೆ ಪೌಲನು ಬರೆಯುವ ಪತ್ರ. ಕ್ರಿಸ್ತಯೇಸುವಿನಲ್ಲಿರುವವರಿಗೆ ಲಭಿಸುವ ಅಮರ ಜೀವದ ವಾಗ್ದಾನವನ್ನು ಸಾರಲು ದೈವಚಿತ್ತಾನುಸಾರ ಪ್ರೇಷಿತನಾದ ನಾನು ತಿಳಿಸುವುದೇನೆಂದರೆ:
2 : ಪಿತನಾಗಿರುವ ದೇವರೂ ಒಡೆಯರಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ!
3 : ನಾನು ಹಗಲಿರುಳೂ ನನ್ನ ಪ್ರಾರ್ಥನೆಯಲ್ಲಿ ತಪ್ಪದೆ ನಿನ್ನನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಪೂರ್ವಿಕರ ಹಾಗೆ ಶುದ್ಧಮನಸ್ಸಾಕ್ಷಿಯಿಂದ ನನ್ನ ಆರಾಧ್ಯ ದೇವರಿಗೆ ನಿನ್ನ ವಿಷಯವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
6 : ನಾನು ನಿನ್ನ ಮೇಲೆ ಹಸ್ತ ನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಫಿಸುತ್ತೇನೆ.
7 : ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ.
8 : ಆದ್ದರಿಂದ ಕ್ರಿಸ್ತಯೇಸುವಿಗೆ ಸಾಕ್ಷಿ ಆಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೋಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು.
9 : ನಾವು ಸ್ವಂತ ಸತ್ಕಾರ್ಯಗಳಿಂದಲ್ಲ, ದೇವರ ಯೋಜನೆ ಹಾಗೂ ಅನುಗ್ರಹಗಳಿಂದಲೇ ಜೀವೋದ್ಧಾರ ವರವನ್ನು ಪಡೆದಿದ್ದೇವೆ; ದೇವರ ಪ್ರಜೆಗಳೆನಿಸಿಕೊಂಡಿದ್ದೇವೆ. ಅನುಗ್ರಹವನ್ನು ಕ್ರಿಸ್ತಯೇಸುವಿನಲ್ಲಿ ಅನಾದಿಯಿಂದಲೇ ನಮಗೆ ಕೊಡಲಾಯಿತು.
10 : ಕಾಲದಲ್ಲೂ ನಮ್ಮ ಉದ್ಧಾರಕ ಕ್ರಿಸ್ತಯೇಸುವಿನ ಪ್ರತ್ಯಕ್ಷದ ಮೂಲಕ ಅದನ್ನು ಬಹಿರಂಗಪಡಿಸಲಾಗಿದೆ. ಮೃತ್ಯುಶಕ್ತಿಯನ್ನು ವಿನಾಶಗೊಳಿಸಿ ಅಮರ ಜೀವವನ್ನು ಶುಭಸಂದೇಶದ ಮೂಲಕ ಬೆಳಕಿಗೆ ತಂದವರು ಯೇಸುವೇ.
11 : ಶುಭಸಂದೇಶವನ್ನು ಸಾರುವುದಕ್ಕೇ ಎಂದು ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಬೋಧಕನನ್ನಾಗಿಯೂ ಶಿಕ್ಷಕನನ್ನಾಗಿಯೂ ನೇಮಿಸಿದ್ದಾರೆ.
12 : ಇದಕ್ಕಾಗಿಯೇ ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳನ್ನು ನಾಚಿಕೆಪಡದೆ ಅನುಭವಿಸುತ್ತಿದ್ದೇನೆ. ನಾನು ಯಾರಲ್ಲಿ ವಿಶ್ವಾಸವನ್ನಿಟ್ಟಿದ್ದೇನೆ ಎಂದು ಚೆನ್ನಾಗಿ ಬಲ್ಲೆ. ನನ್ನ ವಶಕ್ಕೆ ಒಪ್ಪಿಸಿರುವುದನ್ನು ದಿನದವರೆಗೂ ಕಾಪಾಡುವುದಕ್ಕೆ ಅವರು ಶಕ್ತರು. ಆದ್ದರಿಂದ ನಾನು ಪೂರ್ಣ ಭರವಸೆಯಿಂದ ಇದ್ದೇನೆ.

ಕೀರ್ತನೆ 123: 1-3. ಶ್ಲೋಕ.1
ನನ್ನ ಕಣ್ಣುಗಳನ್ನು ಪ್ರಭೂ, ನಿನ್ನ ಕಡೆಗೆ ಎತ್ತಿರುವೆ
1 : ಪರಲೋಕದಲಿ ಆಸೀನನಾಗಿರುವ ಪ್ರಭುವೆ / ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ
2 : ದಾಸನ ಕಣ್ಣು ಯಜಮಾನನತ್ತ / ದಾಸಿಯ ಕಣ್ಣು ಯಜಮಾನಿಯತ್ತ // ನನ್ನ ಕಣ್ಣು ಸ್ವಾಮಿದೇವನತ್ತ / ಆತನ ಕಟಾಕ್ಷವನ್ನು ನಿರೀಕ್ಷಿಸುತ್ತಾ

ಶುಭಸಂದೇಶ: ಮಾರ್ಕ 12.18-27
18 : ಅನಂತರ ಸದ್ದುಕಾಯರು ಯೇಸುಸ್ವಾಮಿಯ ಬಳಿಗೆ ಬಂದರು. ಸತ್ತಮೇಲೆ ಪುನರುತ್ಥಾನ ಇಲ್ಲವೆಂಬುದು ಇವರ ಅಭಿಮತ. ಇವರು ಯೇಸುವನ್ನು,
19 : “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೇ?
20 : ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ವಿವಾಹವಾಯಿತು.
21 : ಅವನು ಮಕ್ಕಳಿಲ್ಲದೆ ಮೃತನಾದುದರಿಂದ ಎರಡನೆಯವನು ಅವನ ಹೆಂಡತಿಯನ್ನು ಮದುವೆಮಾಡಿಕೊಂಡು, ಸಂತಾನವಿಲ್ಲದೆ ಸಾವನ್ನಪ್ಪಿದ. ಮೂರನೆಯವನಿಗೂ ಇದೇ ಗತಿಯಾಯಿತು.
22 : ಅನಂತರ, ಉಳಿದವರೂ ಒಬ್ಬರ ಬಳಿಕ ಇನ್ನೊಬ್ಬರು ಆಕೆಯನ್ನು ಮದುವೆ ಮಾಡಿಕೊಂಡು, ಸಂತಾನವಿಲ್ಲದೆ ಸತ್ತುಹೋದರು. ಕಡೆಗೆ ಸ್ತ್ರೀಯೂ ಮರಣ ಹೊಂದಿದಳು.
23 : ಆಗ ಹೇಳಿ, ಪುನರುತ್ಥಾನದ ದಿನದಲ್ಲಿ, ಆಕೆ ಯಾರ ಹೆಂಡತಿ ಎನಿಸಿಕೊಳ್ಳುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದರಲ್ಲವೇ?” ಎಂದು ಪ್ರಶ್ನಿಸಿದರು.
24 : ಅದಕ್ಕೆ ಯೇಸು, “ನಿಮ್ಮದು ಎಂಥಾ ತಪ್ಪು ಅಭಿಪ್ರಾಯ! ಪವಿತ್ರಗ್ರಂಥವನ್ನು ಆಗಲಿ, ದೇವರ ಶಕ್ತಿಯನ್ನಾಗಲೀ ನೀವು ಅರ್ಥಮಾಡಿಕೊಂಡಿಲ್ಲ.
25 : ಸತ್ತವರು ಪುನರುತ್ಥಾನವಾದ ಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ.
26 : ಇದಲ್ಲದೆ ಸತ್ತವರು ಪುನರುತ್ಥಾನವಾಗುವ ವಿಷಯದಲ್ಲಿ ಹೇಳುವುದಾದರೆ: ‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರುಎಂದು ದೇವರು ಮೋಶೆಗೆ ಹೇಳಿದ್ದನ್ನು ಮೋಶೆಯ ಗ್ರಂಥದಲ್ಲಿಉರಿಯುವ ಪೊದೆ ಪ್ರಸ್ತಾಪವಿರುವ ಭಾಗದಲ್ಲಿ, ನೀವು ಓದಿರಬೇಕಲ್ಲವೆ?
27 : ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ, ನಿಮ್ಮ ಅಭಿಪ್ರಾಯ ತೀರಾ ತಪ್ಪಾಗಿದೆ,” ಎಂದರು
-----------------------
ಚಿಂತನೆ
ಇಂದಿನ ಶ್ಲೋಕ ಹೀಗಿದೆ; ನನ್ನ ಕಣ್ಣುಗಳನ್ನು ಪ್ರಭು ನಿನ್ನ ಕಡೆಗೆ ಎತ್ತಿರುವೆ. ಒಬ್ಬ ಹುಡುಗ ತುಂಬಾ ಸೊಗಸಾಗಿ ಹಾಡುತ್ತಿದ್ದ. ಅವನ ಸ್ವರದ ಮೇಲೆ ಅವನಿಗೆ ತುಂಬಾ ನಂಬಿಕೆಯಿತ್ತು. ಆ ನಂಬಿಕೆಯೇ ಅವನಲ್ಲಿ ನಾನೇ ಮಹಾ ಪ್ರತಿಭಾವಂತ ನನಗಿಂತ ಬೇರೆ ಯಾರೂ ಇಲ್ಲ ಎಂಬ ಭಾವನೆ ಮೂಡಿಸಿತ್ತು. ಒಮ್ಮೆ ದೊಡ್ಡ ಊರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡಲು ಬಂದ. ಅವಕಾಶ ತನ್ನ ಸ್ವಂತ ಪ್ರತಿಭೆಯಿಂದಲೇ ದೊರಕಿರುವುದು ಎಂದು ಭಾವಿಸಿ ತನ್ನ ತಂದೆ ತಾಯಿಯರನ್ನೂ ಕರೆದುಕೊಂಡು ಬಂದ. ಅಲ್ಲಿ ಹಲವಾರು ಮಂದಿ ಗಾಯಕರು, ಸಿನಿಮಾ ತಾರೆಯರು ಬಂದಿದ್ದರು. ಇವನ ಸರದಿ ಹಾಡೇಳಲು ಬಂದಾಗ ತಲೆ ಎತ್ತಿ ಎದೆ ಉಬ್ಬಿಸಿ ತಂದೆ ತಾಯಿಗೆ bye Dad, bye Mom I am going to the stage ಎಂದು ಹೊರಟ. ಅವನ ಅದೃಷ್ಟವೋ ದುರಾದೃಷ್ಟವೋ ಅವನು ವೇದಿಕೆಯ ಮೇಲೆ ಹೋಗುತ್ತಿದಂತೆ ಮೈಕ್ ಕೆಟ್ಟುಹೋಯಿತು. ಸುಮಾರು 20 ನಿಮಿಷಗಳ ಕಾಲ ಕಾದು ನಿಂತಿದ್ದ ಗಾಯಕನನ್ನು ಸಮಯದ ಅಭಾವದಿಂದ ನೀವು ಹಾಡಲು ಆಗುವುದಿಲ್ಲ, ನಿಮ್ಮ ಸಂಭಾವನೆಯನ್ನು ನಾವು ತಲುಪಿಸುತ್ತೇವೆ ಎಂದು ಹೇಳಿ ಕೆಳಗೆ ಕಳುಹಿಸುತ್ತಾರೆ. ಆ ಗಾಯಕ ತಲೆ ತಗ್ಗಿಸಿ ಬಂದು ತಂದೆ ತಾಯಿಯ ಹತ್ತಿರ ಅಳುತ್ತಾನೆ. ಆಗ ಆತನ ತಾಯಿ 'ನೀನು ಹೇಗೆ ವಾಪಸ್ಸು ಬಂದೆಯೋ ಹಾಗೆ ಹೋಗಿದ್ದರೆ ಬಹುಶಃ ನೀನು ಸಫಲವಾಗುತ್ತಿದ್ದೆ.' ದೇವರು ಯಾವಾಗಲೂ ವಿನಯವಂತರನ್ನು ಹಾಗೂ ತಗ್ಗಿ ಬಗ್ಗಿ ನಡೆಯುವವರನ್ನು ಆಶೀರ್ವದಿಸುತ್ತಾನೆ ಎಂದು ಸಂತೈಸುತ್ತಾರೆ. ಇಂದಿನ ಶುಭಸಂದೇಶದಲ್ಲಿ ಪುನರುತ್ಥಾನದ ಮಾತುಗಳನ್ನು ನಾವು ಕಾಣುತ್ತೇವೆ. ಪುನರುತ್ಥಾನ ಪ್ರಭು ಯೇಸುವಿನ ವರದಾನ ನಮ್ಮ ಕಣ್ಣುಗಳನ್ನು ನಿಜವಾಗಲೂ ಪ್ರಭುವಿನ ಕಡೆಗೆ ಇದ್ದರೆ, ಪ್ರಭುವಿನ ಹಾದಿಯಲ್ಲಿ ನಡೆದರೆ ಪುನರುತ್ಥಾನದ ವರದಾನ ಖಚಿತ. 
ಆತ್ಮಾವಲೋಕನ : 
1. ನಮ್ಮ ಕಣ್ಣು ನಿಜವಾಗಲೂ ಪ್ರಭುವಿನ ಕಡೆಗೆ ತಿರುಗಿದೆಯೇ? 
2. ನಾವು ನಮ್ಮ ಪ್ರತಿಭೆ ಹಾಗೂ ಕೌಶಲ್ಯತೆ ಮೇಲೆ ಸದಾ ಅವಲಂಬಿತರಾಗಿದ್ದೇವೆಯೇ? 
3. ನಾವು ಪುನರುತ್ಥಾನ ವರದಾನಕ್ಕೆ ಪಾತ್ರರಾಗಿದ್ದೇವೆಯೇ?

No comments:

Post a Comment