ಜುಲೈ 11, 2020 ಶನಿವಾರ [ಹಸಿರು]
ಸಂತ ಬೆನೆಡಿಕ್ಟ್ [ಮಠಾಧಿಪತಿ] (ಸ್ಮರಣೆ)
ಮೊದಲ ವಾಚನ: ಯೆಶಾಯ 6:1-8
ಕೀರ್ತನೆ 93: 1-2, 5. ಶ್ಲೋಕ.1
ವಹಿಸಿಹನು ಪ್ರಭು ರಾಜ್ಯಾಧಿಕಾರವನು
ಶುಭಸಂದೇಶ: ಮತ್ತಾಯ 10.24-33
=============
ಯೆಶಾಯ 6:1-8
1 : ಅರಸ ಉಜ್ಜೀಯನು ಕಾಲವಾದ ವರ್ಷದಲ್ಲಿ ನನಗೆ ಸರ್ವೇಶ್ವರಸ್ವಾಮಿಯಿಂದ ದರ್ಶನವಾಯಿತು: ಉನ್ನತೋನ್ನತ ಸಿಂಹಾಸನದಲ್ಲಿ ಅವರು ಆಸೀನರಾಗಿದ್ದರು. ಅವರ ಮೇಲು ವಸ್ತ್ರ ನೆರಿಗೆ ನೆರಿಗೆಯಾಗಿ ದೇವಾಲಯವನ್ನೆಲ್ಲ ಆವರಿಸಿತ್ತು.
2 : ಅವರ ಸುತ್ತಲು ಸೆರಾಫಿಯರೆಂಬ ತೇಜಸ್ವಿಗಳು ಇದ್ದರು. ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ದವು. ಎರಡು ರೆಕ್ಕೆಗಳಿಂದ ಅವರ ಮುಖ ಮುಚ್ಚಿತ್ತು. ಇನ್ನೆರಡು ರೆಕ್ಕೆಗಳಿಂದ ಅವರ ಪಾದಗಳು ಮುಚ್ಚಿದ್ದವು. ಮತ್ತೆರಡು ರೆಕ್ಕೆಗಳನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದರು.
3 : ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ: “ಪವಿತ್ರ, ಪವಿತ್ರ, ಪವಿತ್ರ ಸೇನಾಧೀಶ್ವರ ಸರ್ವೇಶ್ವರ ಜಗವೆಲ್ಲ ಆತನ ಪ್ರಭಾವಭರಿತ” ಎಂದು ಕೂಗಿ ಹೇಳಿದನು.
4 : ಆ ಶಬ್ದಕ್ಕೆ ದೇವಾಲಯದ ಅಸ್ತಿವಾರವೇ ಕಂಪಿಸಿತು. ಧೂಮವು ಆಲಯವನ್ನೆಲ್ಲ ತುಂಬಿತು.
5 : ಆಗ ನಾನು “ಅಯ್ಯೋ, ನನ್ನ ಗತಿಯೇನು? ನನ್ನ ಕಥೆ ಮುಗಿಯಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ!” ಎಂದು ಕೂಗಿ ಕೊಂಡೆನು.
6 : ಆಗ ಸೆರಾಫಿಯರಲ್ಲಿ - ತೇಜಸ್ವಿಯೊಬ್ಬನು ಬಲಿಪೀಠದಿಂದ, ಉರಿಯುವ ಕೆಂಡವೊಂದನ್ನು ಇಕ್ಕಳದಿಂದ ಹಿಡಿದುಕೊಂಡು ನನ್ನತ್ತ ಹಾರಿ ಬಂದನು.
7 : ಆ ಉರಿಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿ: “ಇದು ನಿನ್ನ ತುಟಿಗಳನ್ನು ತಾಕಿದೆ. ಈಗ ದೋಷ ನೀಗಿತು. ನಿನ್ನ ಪಾಪ ಪರಿಹಾರ ಆಯಿತು”, ಎಂದನು.
8 : ಆಗ, “ಯಾರನ್ನು ಕಳುಹಿಸಲಿ? ನಮ್ಮ ಪರವಾಗಿ ಹೋಗುವವನು ಯಾರು?” ಎಂಬ ನುಡಿ ಕೇಳಿಸಿತು. ಅದಕ್ಕೆ ನಾನು, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿ” ಎಂದೆನು.
==============
ಕೀರ್ತನೆ 93: 1-2, 5. ಶ್ಲೋಕ.1 ವಹಿಸಿಹನು ಪ್ರಭು ರಾಜ್ಯಾಧಿಕಾರವನು 1 : ವಹಿಸಿಹನು ಪ್ರಭು, ರಾಜ್ಯಾಧಿಕಾರವನು / ಧರಿಸಿಹನು ಘನತೆಯ ವಸ್ತ್ರ ಲಾಂಛನವನು / ತೊಟ್ಟಿಹನು ಶೌರ್ಯವೆಂಬ ನಡುಕಟ್ಟನು / ಸ್ಥಿರಪಡಿಸಿಹನು ಕದಲದಂತೆ ಜಗವನು // 2 : ನಿನ್ನ ಸಿಂಹಾಸನ ಸ್ಥಿರ ಆದಿಯಿಂದ / ನೀನಿರುವೆ ಪ್ರಭು ಅನಾದಿಯಿಂದ // 5 : ನಿನ್ನ ಆಜ್ಞೆಗಳು ಪ್ರಭು, ಸುಸ್ಥಿರ / ನಿನ್ನ ಆಲಯಕೆ ಪವಿತ್ರತೆ ಅರ್ಹ / ಯುಗಯುಗಾಂತರಕೂ ಅದು ಅರ್ಹ //
==================
ಮತ್ತಾಯ 10.24-33 24 : ಗುರುವಿಗಿಂತ ಶಿಷ್ಯನು ಶ್ರೇಷ್ಟನಲ್ಲ; ದಾಸನು ದಣಿಗಿಂತ ದೊಡ್ಡವನಲ್ಲ. 25 : ಗುರುವಿನಂತೆ ಶಿಷ್ಯನೂ ದಣಿಯಂತೆ ದಾಸನೂ ಆದರೆ ಸಾಕು. ಮನೆಯ ಯಜಮಾನನನ್ನೇ ‘ಬೆಲ್ಜಬೂಲ್’ ಎಂದು ಕರೆದಿರುವಾಗ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡಲಾರರು?" 26 : "ಜನರಿಗೆ ಭಯಪಡಬೇಡಿ. ಮುಚ್ಚುಮರೆ ಆಗಿರುವುದೆಲ್ಲ ಬಟ್ಟಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು. 27 : ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರ ಪಡಿಸಿರಿ. ಕಿವಿಮಾತಾಗಿ ಕೇಳಿದ್ದನ್ನು ಮನೆ ಮಾಳಿಗೆಯ ಮೇಲೆ ನಿಂತು ಸಾರಿರಿ. 28 : ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ. 29 : ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ. 30 : ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. 31 : ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು. 32 : "ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ. 33 : ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ.
===============
ಚಿಂತನೆ
ಇಂದಿನ ಶುಭಸಂದೇಶದಲ್ಲಿ ದಣಿಗಿಂತ ದಾಸನು ದೊಡ್ಡವನಲ್ಲ ಎಂಬ ಹೇಳಿಕೆಯ ಮೂಲಕ ಜೀವಕೊಟ್ಟ ದೇವರಿಗಿಂತ ಮನುಷ್ಯನು ಹೆಚ್ಚೇನಲ್ಲ’ ಎಂದು ತಿಳಿಸುತ್ತಾರೆ. ಇದರಲ್ಲಿ ನಾವು ಅನೇಕ ಪಾಠ ಕಲಿಯಬಹುದು. ಹಾಗೆಯೇ ಯೇಸು ’ಆತ್ಮದೊಡೆಯನಾದ ದೇವರಿಗೆ ಭಯಪಡಿ, ಆದರೆ ಮನುಜರಿಗಲ್ಲ” ಎಂಬ ಹಿತವಚನವನ್ನು ನೀಡುತ್ತಾರೆ. ದೈವಚಿತ್ತ ನಿರ್ಭಯದಿಂದ ಕೂಡಿದ್ದು ಯಾವುದೇ ಮುಚ್ಚುಮರೆಯಿಲ್ಲದೆ ಸತ್ಯತೆಯನ್ನು ಮನೆಯ ಮಾಳಿಗೆಯಿಂದ ಸಾರುತ್ತದೆ ಎನ್ನುತ್ತಾರೆ. ಹೀಗೆ ’ಗುಟ್ಟಾಗಿರುವುದು ರಟ್ಟಾಗುವುದು ಕೇಳೋ ಮನುಜ’ ಎಂದು ಉಪದೇಶಿಸುತ್ತಾರೆ. ಇಂದಿನ ಭ್ರಷ್ಟಾಚಾರ ಮತ್ತು ಅಸತ್ಯತೆಯ ಕಾಲದಲ್ಲಿ ನಾವೆಷ್ಟು ಸತ್ಯತೆಯನ್ನು ಸಾರುತ್ತಿದ್ದೇವೆ ಎಂಬುದನ್ನು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಈ ಜೀವ ಕೊಟ್ಟ ದೇವರಿಗೆ ತಿಳಿಯಲಾದುದು ಯಾವುದೂ ಇಲ್ಲ. ನಮ್ಮ ಪ್ರತಿ ಯೋಚನೆಗಳು, ಕಾರ್ಯಗಳು, ಏಕೆ ನಮ್ಮ ತಲೆಗೂದಲು ಸಹ ದೇವರ ಕಣ್ಸನ್ನೆಯಿಂದ ತಪ್ಪಿಸಿಕೊಳ್ಳಲಾಗದು ಎಂಬುದರಲ್ಲಿ ದೇವರಿಗೆ ನಮ್ಮಲ್ಲಿರುವ ಪ್ರೀತಿ ಅಪಾರವೆಂದು ತೋರಿಸಿಕೊಡುತ್ತದೆ. ಈ ಅಪಾರ ದೈವ ಪ್ರೀತಿಯನ್ನು ಒಪ್ಪಿದರೆ ದೇವರು ನಮ್ಮನ್ನು ಸಹ ದೇವರ ಮಕ್ಕಳೆಂದು ಒಪ್ಪಿಕೊಳ್ಳಲು ಹಿಂಜರಿಯುವುದಿಲ್ಲ.
==============
@ ದನಿ ಮಾಧ್ಯಮ ಮನೆ
No comments:
Post a Comment