Thursday, 2 July 2020

ಜುಲೈ 12, 2020 ಭಾನುವಾರ

ಜುಲೈ 12, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 15ನೇ ಭಾನುವಾರ
ಮೊದಲ ವಾಚನ: ಯೆಶಾಯ 55.10-11
ಕೀರ್ತನೆ 65:9-10, 11-12, 13-14. ಶ್ಲೋಕ.ಲೂಕ 8.8
ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದು
ಫಲವನ್ನು ಕೊಟ್ಟವು
ಎರಡನೇ ವಾಚನ: ರೋಮನರಿಗೆ 8.18-23
ಶುಭಸಂದೇಶ: ಮತ್ತಾಯ 13.1-23
===============
ಯೆಶಾಯ 55.10-11
10 : ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ.
11 : ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.
ಕೀರ್ತನೆ 65:9-10, 11-12, 13-14. ಶ್ಲೋಕ.ಲೂಕ 8.8
ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದು
ಫಲವನ್ನು ಕೊಟ್ಟವು
10 : ನೇಗಿಲ ಗೆರೆಯನು ತೋಯಿಸಿ ಮಣ್ಣಿನ ಹೆಂಟೆಯನು ಕರಗಿಸುತಿ / ಪೊಡವಿಯ ಹೊಲವ ಮಾಚಿಸಿ, ಹುಲುಸಾಗಿ ಪೈರನು ಬೆಳೆಸುತಿ //
11 : ಋತು ಶಿಶಿರಕೆ ಸುಗ್ಗಿಯ ಸೊಬಗಿನ ಮುಕುಟವ ಮುಡಿಸಿದ್ದೀ / ನೀ ನಡೆವ ಹಾದಿಯಲ್ಲೆಲ್ಲಾ ತುಳುಕುತಿದೆ ಸಮೃದ್ಧಿ //
12 : ಮೇವುಗಾಡುಗಳು ಕಂಗೊಳಿಸುತಿವೆ ಪಚ್ಚೆಪಸಿರಿಂದ / ಗುಡ್ಡಗಾಡುಗಳು ಶೋಭಿಸುತಿವೆ ಹರ್ಷಾಡಂಬರದಿಂದ //
13 : ಹುಲ್ಲುಗಾವಲುಗಳು ತುಂಬಿತುಳುಕುತಿವೆ ಕುರಿಹಿಂಡುಗಳಿಂದ / ಕಣಿವೆ ಕಂದರಗಳಿದೊ ಕಂಗೊಳಿಸುತ್ತಿವೆ ತೆನೆಕಾಳುಗಳಿಂದ / ಇಳೆ ಮೊಳಗುತಿದೆ ಆನಂದಘೋಷ, ಸಂತಸ ಗೀತೆಗಳಿಂದ //
=============
ಕೀರ್ತನೆ 65:9-10, 11-12, 13-14. ಶ್ಲೋಕ.ಲೂಕ 8.8
ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದು  ಫಲವನ್ನು ಕೊಟ್ಟವು

10 : ನೇಗಿಲ ಗೆರೆಯನು ತೋಯಿಸಿ ಮಣ್ಣಿನ ಹೆಂಟೆಯನು ಕರಗಿಸುತಿ / ಪೊಡವಿಯ ಹೊಲವ ಮಾಚಿಸಿ, ಹುಲುಸಾಗಿ ಪೈರನು ಬೆಳೆಸುತಿ //
11 : ಋತು ಶಿಶಿರಕೆ ಸುಗ್ಗಿಯ ಸೊಬಗಿನ ಮುಕುಟವ ಮುಡಿಸಿದ್ದೀ / ನೀ ನಡೆವ ಹಾದಿಯಲ್ಲೆಲ್ಲಾ ತುಳುಕುತಿದೆ ಸಮೃದ್ಧಿ //
12 : ಮೇವುಗಾಡುಗಳು ಕಂಗೊಳಿಸುತಿವೆ ಪಚ್ಚೆಪಸಿರಿಂದ / ಗುಡ್ಡಗಾಡುಗಳು ಶೋಭಿಸುತಿವೆ ಹರ್ಷಾಡಂಬರದಿಂದ //
13 : ಹುಲ್ಲುಗಾವಲುಗಳು ತುಂಬಿತುಳುಕುತಿವೆ ಕುರಿಹಿಂಡುಗಳಿಂದ / ಕಣಿವೆ ಕಂದರಗಳಿದೊ ಕಂಗೊಳಿಸುತ್ತಿವೆ ತೆನೆಕಾಳುಗಳಿಂದ / ಇಳೆ ಮೊಳಗುತಿದೆ ಆನಂದಘೋಷ, ಸಂತಸ ಗೀತೆಗಳಿಂದ //
==============
ಎರಡನೇ ವಾಚನ: ರೋಮನರಿಗೆ 8.18-23
18 : ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರದವುಗಳೆಂದು ನಾನು ಎಣಿಸುತ್ತೇನೆ.
19 : ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೋ ಎಂದು ಸೃಷ್ಟಿ ಸಮಸ್ತವು ಬಹು ಉತ್ಸುಕತೆಯಿಂದ ಎದುರು ನೋಡುತ್ತಿದೆ.
20 : ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಇದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ ಆಯಿತು. ಆದರೂ ಸೃಷ್ಟಿಗೆ ನಿರೀಕ್ಷೆಯೊಂದಿದೆ.
21 : ಅದೇನೆಂದರೆ, ಸೃಷ್ಟಿಯು ಸಹ ವಿನಾಶವಿಧಿಯಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಯುತ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ, ಎಂಬುದೇ.
22 : ಸೃಷ್ಟಿಸಮಸ್ತವು ಇಂದಿನವರೆಗೆ ನರಳುತ್ತಾ ಪ್ರಸವವೇದನೆಪಡುತ್ತಾ ಇದೆ ಎಂಬುದು ನಮಗೆ ತಿಳಿದಿದೆ.
23 : ಸೃಷ್ಟಿಮಾತ್ರವಲ್ಲ, ದೇವರ ವರದಾನಗಳಲ್ಲಿ ಪ್ರಥಮಫಲವಾಗಿ ಪವಿತ್ರಾತ್ಮ ಅವರನ್ನೇ ಪಡೆದಿರುವ ನಾವು ಸಹ ನಮ್ಮೊಳಗೇ ನರಳುತ್ತಿದ್ದೇವೆ. ದೇವರ ಮಕ್ಕಳಿಗೆ ದೊರೆಯುವ ಸೌಭಾಗ್ಯವನ್ನೂ ನಮ್ಮ ಸಂಪೂರ್ಣ ವಿಮೋಚನೆಯನ್ನೂ ನಿರೀಕ್ಷಿಸುತ್ತಿದ್ದೇವೆ.
==============
ಮತ್ತಾಯ 13.1-23
===============
1 : ಅದೇ ದಿನ ಯೇಸುಸ್ವಾಮಿ ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತರು.
2 : ಜನರು ತಂಡೋಪತಂಡವಾಗಿ ಕೂಡಿ ಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು.
3 : ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಯ ರೂಪದಲ್ಲಿ ಹೇಳಿದರು:
4 : "ಒಬ್ಬ ರೈತ ಬಿತ್ತುವುದಕ್ಕೆ ಹೋದ. ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದದ್ದೇ ಹಕ್ಕಿಗಳು ಬಂದು ಆ ಬೀಜವನ್ನು ತಿಂದುಬಿಟ್ಟವು.
5 : ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲು ನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು.
6 : ಆದರೆ ಬಿಸಿಲೇರಿದಾಗ ಬಾಡಿದವು. ಬೇರು ಬಲವಾಗಿಲ್ಲದ ಕಾರಣ ಒಣಗಿಹೋದವು.
7 : ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಆ ಪೊದೆಗಳು ಸಸ್ಯಗಳ ಸಮೇತ ಬೆಳೆದು, ಅವುಗಳನ್ನು ಅಡಗಿಸಿ ಬಿಟ್ಟವು.
8 : ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು, ತೆನೆಬಿಟ್ಟವು. ಕೆಲವು ನೂರರಷ್ಟು, ಮತ್ತೆ ಕೆಲವು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಸಲನ್ನು ಕೊಟ್ಟವು.
9 : ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ," ಎಂದು ಒತ್ತಿ ಹೇಳಿದರು.
10 : ತರುವಾಯ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ನೀವು ಜನರೊಡನೆ ಮಾತನಾಡುವಾಗ ಸಾಮತಿಗಳನ್ನು ಉಪಯೋಗಿಸುತ್ತೀರಿ, ಏಕೆ?" ಎಂದು ಕೇಳಿದರು.
11 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸ್ವರ್ಗಸಾಮ್ರಾಜ್ಯದ ರಹಸ್ಯಗಳನ್ನು ಅರಿತುಕೊಳ್ಳುವ ಸದವಕಾಶ ಲಭಿಸಿರುವುದು ನಿಮಗೆ, ಅವರಿಗಲ್ಲ.
12 : ಉಳ್ಳವನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ.
13 : ಅವರೊಡನೆ ಸಾಮತಿ ರೂಪದಲ್ಲಿ ಮಾತನಾಡುವುದಕ್ಕೆ ಕಾರಣ ಇದು: ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕಿವಿಯಾರೆ ಕೇಳಿದರೂ ಕಿವಿಗೊಡುವುದಿಲ್ಲ; ಗ್ರಹಿಸುವುದೂ ಇಲ್ಲ.
14 : ಪ್ರವಾದಿ ಯೆಶಾಯನ ಈ ಪ್ರವಚನ ಅವರಲ್ಲಿ ಈಡೇರುತ್ತದೆ: "ಕೇಳಿ ಕೇಳಿಯೂ ಗ್ರಹಿಸರು ನೋಡಿ ನೋಡಿಯೂ ಕಾಣರು.
15 : ಈ ಜನರ ಹೃದಯ ಕಲ್ಲಾಗಿದೆ ಕಿವಿ ಮಂದವಾಗಿದೆ ಕಣ್ಣು ಮಬ್ಬಾಗಿದೆ. ಇಲ್ಲದಿದ್ದರೆ ಇವರ ಕಣ್ಣು ಕಾಣುತ್ತಾ ಕಿವಿ ಕೇಳುತ್ತಾ ಹೃದಯ ಗ್ರಹಿಸುತ್ತಾ ನನ್ನತ್ತ ತಿರುಗುತ್ತಿದ್ದರು; ದೇವರಾದ ನಾನಿವರನು ಸ್ವಸ್ಥಪಡಿಸುತ್ತಿದ್ದೆನು."
16 : "ನೀವಾದರೋ ಭಾಗ್ಯವಂತರು. ನಿಮ್ಮ ಕಣ್ಣುಗಳು ಕಾಣುತ್ತವೆ, ಕಿವಿಗಳು ಕೇಳುತ್ತವೆ.
17 : ಎಷ್ಟೋ ಪ್ರವಾದಿಗಳು ಹಾಗೂ ಸತ್ಪುರುಷರು ನೀವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅಪೇಕ್ಷಿಸಿದರು. ಆದರೆ ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂಬುದು ನಿಮಗೆ ತಿಳಿದಿರಲಿ.
18 : "ಈಗ ಬಿತ್ತುವವನ ಸಾಮತಿಯ ಅರ್ಥವನ್ನು ಕೇಳಿ:
19 : ಒಬ್ಬನು ಶ್ರೀ ಸಾಮ್ರಾಜ್ಯದ ಸಂದೇಶವನ್ನು ಕೇಳಿ ಅದನ್ನು ಗ್ರಹಿಸದೆ ಹೋದರೆ, ಕೇಡಿಗನು ಬಂದು ಅವನ ಹೃದಯದಲ್ಲಿ ಬಿತ್ತಿದ್ದ ಬೀಜವನ್ನು ತೆಗೆದೆಸೆಯುತ್ತಾನೆ. ಇವನು ಕಾಲ್ದಾರಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ.
20 : ಬೇರೊಬ್ಬನು ಈ ಸಂದೇಶವನ್ನು ಕೇಳಿದಕೂಡಲೇ ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ.
21 : ಆದರೆ ಅದು ತನ್ನಲ್ಲಿ ಬೇರೂರದ ಕಾರಣ ಕೊಂಚಕಾಲ ಮಾತ್ರ ಇದ್ದು, ಸಂದೇಶದ ನಿಮಿತ್ತ ಕಷ್ಟ ಕೋಟಲೆಗಳು ಬಂದೊದಗಿದಾಗ ಕೂಡಲೇ ಎಡವಿ ಬೀಳುತ್ತಾನೆ. ಇವನು ಕಲ್ಲು ನೆಲದ ಮೇಲೆ ಬಿದ್ದ ಬೀಜವನ್ನು ಹೋಲುತ್ತಾನೆ.
22 : ಇನ್ನೊಬ್ಬನು ಸಂದೇಶವನ್ನೇನೋ ಕೇಳುತ್ತಾನೆ, ಆದರೆ ಪ್ರಾಪಂಚಿಕ ಚಿಂತನೆಗಳು, ಐಶ್ವರ್ಯದ ವ್ಯಾಮೋಹಗಳು ಆ ಸಂದೇಶವನ್ನು ಫಲಬಿಡದಂತೆ ಅದುಮಿಬಿಡುತ್ತವೆ; ಇವನು ಮುಳ್ಳುಪೊದೆಗಳಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ.
23 : ಇನ್ನೊಬ್ಬನು ವಾಕ್ಯವನ್ನು ಕೇಳುತ್ತಾನೆ, ಗ್ರಹಿಸಿಕೊಳ್ಳುತ್ತಾನೆ; ಫಲಪ್ರದನಾಗಿ ನೂರರಷ್ಟು, ಅರವತ್ತರಷ್ಟು, ಮೂವತ್ತರಷ್ಟು ಫಲ ಕೊಡುತ್ತಾನೆ. ಇವನು ಹದವಾದ ಭೂಮಿಯಲ್ಲಿ ಬಿದ್ದ ಬೀಜವನ್ನು ಹೋಲುತ್ತಾನೆ," ಎಂದರು.
==========
ಚಿಂತನೆ
===========
“ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ,..............ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು”. 
ಪೀಠಿಕೆ: 
ಸಾಧಾರಣ ಕಾಲದ 15ನೇಯ ಭಾನುವಾರದಂದು, ದೇವರ ವಾಕ್ಯದ ಬೀಜವನ್ನು ನಮ್ಮ ಹೃದಯದಲ್ಲಿ ಮತ್ತು ಜಗತ್ತಿನಲ್ಲಿ ಬಿತ್ತಲು ಬಂದ ಯೇಸು ಕ್ರಿಸ್ತರ ಸ್ಮರಣೆಯನ್ನು ನಾವು ಆಚರಿಸುತ್ತೇವೆ. ಈ ಆಚರಣೆಯ ಮೂಲಕ, ಕ್ರಿಸ್ತನ ಪ್ರತಿನಿಧಿಗಳು ನಮ್ಮ ಹೃದಯದಲ್ಲಿ ಬಿತ್ತನೆ ಮಾಡುವ ದೇವರ ವಾಕ್ಯದೊಂದಿಗಿನ ನಮ್ಮ ಸಂಬಂಧವನ್ನು ಮರು ಮೌಲ್ಯಮಾಪನ ಮಾಡಲು ಧರ್ಮಸಭೆ ನಮಗೆ ಆದೇಶಿಸುತ್ತದೆ. ನಮ್ಮ ಆತ್ಮಗಳ ಫಲವತ್ತತೆಯನ್ನು ನಾವು ಮರು ಮೌಲ್ಯಮಾಪನ ಮಾಡಬೇಕು ಮತ್ತು ದೇವರ ವಾಕ್ಯ ನಮ್ಮ ಜೀವನದಲ್ಲಿ ಎಷ್ಟು ಫಲವನ್ನು ನೀಡುತ್ತಿದೆ ಎಂದು ವಿರ್ಮಶಿಸಬೇಕು. 

ಇಂದಿನ ಮೊದನೆಯ ವಾಚನದಲ್ಲಿ, ಪ್ರವಾದಿ ಯೆಶಾಯನು ದೇವರ ವಾಕ್ಯವನ್ನು ಮಳೆ ಮತ್ತು ಹಿಮಕ್ಕೆ ಹೋಲಿಸುತ್ತಾರೆ. “ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ,..............ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿದ ಹೊರತು, ನನ್ನ ಉದ್ದೇಶವನ್ನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು”. 

ಈ ಹೇಳಿಕೆ ಸತ್ಯವಾಗಿದೆ ಮತ್ತು ಅದನ್ನು ನಂಬಿಕೆಯಿಂದ ಸ್ವೀಕರಿಸಿ, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿ ಜೀವಿಸುವವರಿಗೆ ಭರವಸೆ ನೀಡುತ್ತದೆ. ನಮ್ಮ ಹೃದಯ ಮತ್ತು ಪ್ರಪಂಚಕ್ಕೆ ಕಳುಹಿಸಿದ ದೇವರ ವಾಕ್ಯ ಕಾರಕವಾದದ್ದು, ಅದು ಬರಡಾದದ್ದಲ್ಲ ಎಂಬುದಕ್ಕೆ ಸಂಕೇತವಾಗಿದೆ. ಅದನ್ನು ಸಕಾರಾತ್ಮಕವಾಗಿ ನೋಡುವವರಿಗೆ, “ಅವರ ವಾಕ್ಯ(ಬೀಜ) ಹೌದು ಮತ್ತು ಆಮೆನ್” (1ಕೊರಿಂ 1,20) ಆಗಿರುತ್ತದೆ. ಈ ವಾಕ್ಯ ಪೂರ್ಣ ಸಾಮರ್ಥ್ಯವನ್ನು ಹೊಂದಿದೆ ಮತ್ತು ಮೊಳಕೆಯೊಡೆಯಲು, ಬೆಳೆಯಲು ಮತ್ತು ಹೇರಳವಾದ ಹಣ್ಣುಗಳನ್ನು ನೀಡಲು ಅನುಕೂಲಕರ ವಾತಾವರಣವನ್ನು ಒದಗಿಸುವ ಯಾರಿಗಾದರೂ ಜೀವವನ್ನು ನೀಡುತ್ತದೆ. 

ಎರಡನೆಯ ವಾಚನದಲ್ಲಿ, ಸಂತ ಪೌಲರು ಎರಡು ವರ್ಗೀಯ ಹೇಳಿಕೆಗಳನ್ನು ನೀಡುತ್ತಾರೆ. ಮೊದಲನೆಯದು ಪ್ರಪಂಚದ ನಿರೀಕ್ಷೆ ಅಥವಾ ಹಾತೊರೆಯುವಿಕೆಯಾಗಿದೆ, “ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೋ ಎಂದು ಸೃಷ್ಟಿ ಸಮಸ್ತವು ಬಹು ಉತ್ಸುಕತೆಯಿಂದ ಎದುರು ನೋಡುತ್ತಿದೆ”. ಎರಡನೆಯದು, “ಸೃಷ್ಟಿಸಮಸ್ತವು ಇಂದಿನವರೆಗೆ ನರಳುತ್ತಾ ಪ್ರಸವವೇದನೆಪಡುತ್ತಾ ಇದೆ ಎಂಬುದು ನಮಗೆ ತಿಳಿದಿದೆ. ಸೃಷ್ಟಿಮಾತ್ರವಲ್ಲ, ದೇವರ ವರದಾನಗಳಲ್ಲಿ ಪ್ರಥಮಫಲವಾಗಿ ಪವಿತ್ರಾತ್ಮ ಅವರನ್ನೇ ಪಡೆದಿರುವ ನಾವು ಸಹ ನಮ್ಮೊಳಗೆ ನರಳುತ್ತಿದ್ದೇವೆ”. ಇದರರ್ಥವಿದು: ದೇವರ ಮಕ್ಕಳಾಗಿರುವ ನಮ್ಮಲ್ಲಿ ದೇವರ ವಾಕ್ಯದ ಬೀಜವನ್ನು ಬಿತ್ತಲಾಗಿದೆ ಮತ್ತು ಪವಿತ್ತಾತ್ಮರ ಅಭಿಷೇಕವು ನಮ್ಮ ಮೇಲೆ ನೆಲೆಯೂರಿದೆ. ಅದರಿಂದ ನಮ್ಮಿಂದ ಹೆಚ್ಚಿನ ಫಲ ಪಡೆಯುವ ನಿರೀಕ್ಷೆ ಇದೆ. ಈ ನಿರೀಕ್ಷೆಯು ಧನಾತ್ಮಕ ಉತ್ಪನ್ನವಾಗಿರಬೇಕು. ಇದರಲ್ಲಿ ಯಾವುದಾದರೂ ಕಡಿಮೆ ಎಂದರೆ ನಮ್ಮ ವ್ಯಕ್ತಿತ್ವವೇ ನಿರಾಕರಣೆಯಾದಂತೆ. ಏಕೆಂದರೆ ದೇವರು ನಮ್ಮಲ್ಲಿ ಇಟ್ಟಿರುವುದು ಒಳ್ಳೆಯ ಫಲ ನೀಡುವ ಬೀಜ 

ಶುಭಸಂದೇಶದಲ್ಲಿ ಬಿತ್ತುವವನ ಸಾಮತಿಯನ್ನು ಕೇಳಿದಾಗ, ಈ ಕೆಳಗಿನ ಪ್ರಶ್ನೆಗಳು ನಮ್ಮ ಮನಸ್ಸಿನಲಿ ಹೊಳೆಯಬಹುದು. ಕೆಲವು ಬೀಜಗಳು ಬಿತ್ತನೆ ಮಾಡಲು ನಿಷ್ಪ್ರಯೋಜಕವೆ? ಅಥವಾ ಬಿತ್ತುವವನು ಅಸಡ್ಡೆ ತೋರುವ ಮೂಲಕ ತನ್ನ ಕೆಲಸವನ್ನು ಸರಿಯಾಗಿ ಮಾಡಲಿಲ್ಲವೇ? ಅಥವಾ ಕೆಲವು ಬೀಜಗಳು ಮರಳು, ಮುಳ್ಳಿನ ಮತ್ತು ಕಲ್ಲಿನ ಮೇಲೆ ಬಿದ್ದು ಯಾರ ತಪ್ಪು? 

ಎಲ್ಲಾ ಬೀಜಗಳು ಪ್ರಯೋಜಕ, ಇಲ್ಲದಿದ್ದರೆ ಬಿತ್ತುವವನು ಅವುಗಳನ್ನು ಬಳಸುತ್ತಿರಲಿಲ್ಲ. ಈ ಸಾಮತಿ ನೀಡುವ ಸಂದೇಶ, ದೇವರು ಬಿತ್ತುವವನು ಮತ್ತು ನಮ್ಮ ಹೃದಯಗಳು, ಬೀಜಗಳು ಬಿದ್ದ ವಿವಿಧ ರೀತಿಯ ಮಣ್ಣು. ಬೀಜಗಳನ್ನು, ಮಣ್ಣಿನ ಸ್ವರೂಪವನ್ನು ಪರಿಗಣಿಸದೆ ಎಲ್ಲೆಡೆ ಹರಡುವುದು ದೇವರ ವಿಶಾಲ ಹೃದಯವನ್ನು ಸೂಚಿಸುತ್ತದೆ. “ದೇವರು ಪಕ್ಷಪಾತಿಯಲ್ಲ” (ಪ್ರೇ.ಕಾ 10,34) ಎಂಬುವುದಕ್ಕೆ ಇದು ಒಂದು ಉತ್ತಮ ಉದಾಹರಣೆ. ಎಲ್ಲಾ ಜನರು ಶುಭಸಂದೇಶವನ್ನು ಕೇಳಿ ಪಶ್ಚಾತ್ತಾಪ ಪಡಬೇಕೆಂದು ಅವರು ಬಯಸುತ್ತಾರೆ. ಏನೇ ಆಗಲಿ ತೆರೆದ ಮತ್ತು ಫಲವತ್ತಾದ ಹೃದಯಗಳು ಮಾತ್ರ ಈ ವಾಕ್ಯವನ್ನು ಸ್ವೀಕರಿಸಿ ಹಾಗೂ ಅವಕಾಶ ಒದಗಿಸಿದಲ್ಲಿ ಅದು ಮೊಳಕೆಯೊಡೆದು, ಬೆಳೆದು ಫಲವನ್ನು ನೀಡುತ್ತದೆ. 

ಆದ್ದರಿಂದ, ನಮ್ಮ ಹೃದಯದಲ್ಲಿ ನಂಬಿಕೆ ಇದ್ದರೆ, ಶಕ್ತಿಯುತ ವಾಕ್ಯವು ನಮಗೆ ಜೀವವನ್ನು ನೀಡುತ್ತದೆ. ಈ ನಂಬಿಕೆ ನಮ್ಮ ಹೃದಯದಲ್ಲಿ ಇದ್ದರೆ, ದೇವರ ವಾಕ್ಯವು ದೇವರೇ ಕಳುಹಿಸಿದ ಉದ್ದೇಶವನ್ನು ಪೂರೈಸುತ್ತದೆ ಎಂಬುದಕ್ಕೆ ಪುರಾವೆಯಾಗಿಸುತ್ತದೆ. ವಿಷಾದವೆಂದರೆ, ಅನೇಕ ಜನರು ದೇವರವಾಕ್ಯದ ಮೌಲ್ಯವನ್ನೂ ನಮ್ಮ ಜೀವನದಲ್ಲಿ ಅದು ಏನೆಲ್ಲ ಮಾಡಬಹುದೆಂಬ ಶಕ್ತಿಯನ್ನೂ ಶಂಕಿಸುತ್ತಾರೆ. 

ಪ್ರಾರ್ಥಿಸೋಣ, ನಾವೆಲ್ಲರೂ ನಮ್ಮ ನಂಬಿಕೆಯಲ್ಲಿ ಬೆಳೆದು ಪ್ರಬುದ್ದರಾಗಿ ಜೀವನೀಡುವ ನುಡಿ ದೇವರ ವಾಕ್ಯದಲ್ಲಿ ಇರುವುದೆಂದು ಬಲವಾಗಿ ನಂಬೋಣ. ಆಮೆನ್! 

- ಪ್ರತಾಪ್ ಚಂದ್ರು ಯೇ.ಸ 
=============
@ ದನಿ ಮಾಧ್ಯಮ ಮನೆ 

No comments:

Post a Comment