Friday, 3 July 2020

ಆಗಸ್ಟ್ 11, 2020 ಮಂಗಳವಾರ

ಆಗಸ್ಟ್ 11, 2020 ಮಂಗಳವಾರ [ಬಿಳಿ]
ಸಂತ ಕ್ಲೇರ್ (ಸ್ಮರಣೆ)
ಮೊದಲ ವಾಚನ: ಯೆಜೆಕಿಯೇಲ 2.8 - 3.4
ಕೀರ್ತನೆ 119: 14, 24, 72, 103, 111, 131. ಶ್ಲೋಕ.103
ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ
ಶುಭಸಂದೇಶ: ಮತ್ತಾಯ 18.1-5, 10, 12-14

==============
ಯೆಜೆಕಿಯೇಲ 2.8 - 3.4 8 : “ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿತೆರೆದು ತಿಂದು ಬಿಡು,” ಎಂದರು. 1 : ಬಳಿಕ ಸರ್ವೇಶ್ವರ ನನಗೆ, “ನರಪುತ್ರನೇ, ನಿನಗೆ ಕೊಟ್ಟ ಈ ಸುರುಳಿಯನ್ನು ತಿನ್ನು; ಅನಂತರ ಇಸ್ರಯೇಲ್ ವಂಶದವರಿಗೆ ಸಾರು, ಹೋಗು,” ಎಂದು ಆಜ್ಞಾಪಿಸಿದರು. 2 : ನಾನು ಬಾಯಿ ತೆರೆದೆ; ಅವರೇ ಆ ಸುರುಳಿಯನ್ನು ನನಗೆ ತಿನ್ನಿಸಿದರು. 3 : ತಿನ್ನಿಸುತ್ತಾ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ,” ಎಂದರು. ನಾನು ಅದನ್ನು ತಿಂದು ಬಿಟ್ಟೆ; ಅದು ನನ್ನ ಬಾಯಿಗೆ ಜೇನಿನಂತೆ ಸಿಹಿಯಾಗಿತ್ತು. 4 : ಆಮೇಲೆ ಸರ್ವೇಶ್ವರ ನನಗೆ ಹೀಗೆಂದರು: “ನರಪುತ್ರನೇ, ನೀನು ಇಸ್ರಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು. 
=================
ಕೀರ್ತನೆ 119: 14, 24, 72, 103, 111, 131. ಶ್ಲೋಕ.103 ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ 
14 : ಸಿರಿಸಂಪತ್ತಿಗಿಂತ ಮಿಗಿಲಾಗಿ / ಆನಂದಿಪೆ ನಿನ್ನ ಮಾರ್ಗಿಯಾಗಿ // 
24 : ನಿನ್ನಾಜ್ಞೆಯು ಆನಂದದಾಯಕ / ಅವೇ ನನಗೆ ಮಂತ್ರಾಲೋಚಕ //
 72 : ಸಾವಿರಾರು ಚಿನ್ನಬೆಳ್ಳಿ ನಾಣ್ಯಗಳಿಗಿಂತ / ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ // 
103 : ನಿನ್ನ ನುಡಿ ಎನಿತೊ ರುಚಿ ನನ್ನ ನಾಲಿಗೆಗೆ / ಜೇನುತುಪ್ಪಕ್ಕಿಂತ ಸಿಹಿ ನನ್ನ ಬಾಯಿಗೆ 
111 : ಹೃದಯಾನಂದಕರ ನಿನ್ನ ಕಟ್ಟಳೆಗಳು / ನನಗಮರ ಸ್ವಾಸ್ತ್ಯವಾದುವುವು ಅವುಗಳು 
131 : ಬಾಯ್ದೆರೆದು ಹಾತೊರೆಯುತಿರುವೆ / ನಿನ್ನ ಆಜ್ಞೆಗಳನು ಅರಸುತಿರುವೆ 
===============
ಮತ್ತಾಯ 18.1-5, 10, 12-14 1 : ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?" ಎಂದು ಕೇಳಿದರು. 2 : ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: 3 : “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. 4 : ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. 5 : ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ." 10 : "ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ. 12 : “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? 13 : ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. 14 : ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ. 
=================
“ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ” ಸ್ವರ್ಗ ಸಾಮ್ರಾಜ್ಯದ ಮೇಲೆ ನಮಗಿರುವ ನಿಲುವು ಬದಲಾಗಬೇಕು. ನನ್ನ ಜೀವನದ ಮೌಲ್ಯಗಳು ದೇವರ ಸಾಮ್ರಾಜ್ಯದ ಮೌಲ್ಯಗಳಿಗೆ ಮಾರ್ಪಾಡಾದಾಗ ನಾವು ಅವರ ಪ್ರಜೆಗಳಾಗಲು ಸಾಧ್ಯ. ಮಕ್ಕಳ ಮುಗ್ಧತೆ, ನಮ್ರತೆ, ಸೌಮ್ಯತೆ, ಕೋಮಲತೆ, ದೀನ ಸ್ವಭಾವ, ನಂಬಿಕೆ ಮುಂತಾದವುಗಳು ಸ್ವರ್ಗ ಸಾಮ್ರಾಜ್ಯದ ಮೌಲ್ಯಗಳಾಗಿವೆ. ಅಧಿಕಾರ, ದರ್ಪ, ಜಂಭ, ಕಪಟತನ, ಹಗೆ, ಮೋಸ, ಅನ್ಯಾಯ ಮುಂತಾದವುಗಳು ಸ್ವರ್ಗ ಸಾಮ್ರಜ್ಯಕ್ಕೆ ವಿರುದ್ಧವಾದವುಗಳು. ದೇವರ ಸೇವೆ ಮಾಡುವವನು ಮಗುವಿನಂಥ ಮನಸ್ಸನ್ನು ಹೊಂದಿರಬೇಕು. ಯಾವುದೇ ಕಲ್ಮಶವಿಲ್ಲದೆ ದೇವರಿಗೆ ಸಂಪೂರ್ಣವಾಗಿರಬೇಕು. ಶ್ರೇಷ್ಠನಾಗಲು ಬಯಸುವವನು ತನ್ನನ್ನೆ ತಾನು ತಗ್ಗಿಸಿಕೊಂಡು ದೇವರ ಮತ್ತು ದೇವ ಜನರ ಸೇವೆಯ ಮೂಲಕ ಶ್ರೇಷ್ಠನಾಗಲಿ ಎಂದು ಯೇಸು ಬಯಸುತ್ತಾರೆ. 
==============

No comments:

Post a Comment