Friday, 3 July 2020

ಆಗಸ್ಟ್ 10, 2020 ಸೋಮವಾರ

ದೈನಂದಿನ ಪವಿತ್ರವಾಚನಗಳ ಸೂಚಿ
===============
ಆಗಸ್ಟ್ 10, 2020 ಸೋಮವಾರ                        [ಕೆಂಪು]
ಸಾಂತ ಲಾರೆನ್ಸ್, ಸೇವಾದರ್ಶಿ ಮತ್ತು ರಕ್ತಸಾಕ್ಷಿ 
ಮೊದಲ ವಾಚನ: 2 ಕೊರಿಂಥಿಯರಿಗೆ 9.6-10
ಕೀರ್ತನೆ 112:1-2, 5-9, ಶ್ಲೋಕ.5
ದಯೆ ತೋರಿ ಧನ ಸಹಾಯ ಮಾಡುವವನು ಭಾಗ್ಯವಂತನು
ಶುಭಸಂದೇಶ: ಯೊವಾನ್ನ 12.24-26
==================
ದೈವ ವಾಕ್ಯದ ವಿಧಿ
=============

ಮೊದಲನೇ ವಾಚನ
===============
2 ಕೊರಿಂಥಿಯರಿಗೆ 9. 6 -10

6 :  ಸಹೋದರರೇ ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯತ್ತಾನೆ. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.
7 : ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.
8 : ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ.
9 : “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
10 : ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.
===================
ವಾಚಕ: ಪ್ರಭುವಿನ ವಾಕ್ಯ

ಎಲ್ಲರು : ದೇವರಿಗೆ ಕೃತಜ್ಞತೆ ಸಲ್ಲಲಿ.
================
ಕೀರ್ತನೆ 
======
ಕೀರ್ತನೆ 112:1-2, 5-9, ಶ್ಲೋಕ.5

ದಯೆ ತೋರಿ ಧನ ಸಹಾಯ ಮಾಡುವವನು 
ಭಾಗ್ಯವಂತನು

1 : ಅಲ್ಲೆಲೂಯ / ಪ್ರಭುವಿನಲಿ ಭಯಭಕ್ತಿ 
ಉಳ್ಳವನು ಧನ್ಯನು / 
ಆತನಾಜ್ಞೆಗಳಲಿ ಹಿಗ್ಗುವವನು 
ಭಾಗ್ಯನು //

2 : ಬಲಿಷ್ಠವಾಗುವುದು ಜಗದೊಳು 
ಅವನ ಸಂತಾನ / 
ಸಜ್ಜನರ ಸಂತತಿ ಪಡೆವುದು
ಆಶೀರ್ವಚನ //

5 : ದಯೆತೋರಿ ಧನಸಹಾಯ 
ಮಾಡುವವನು ಭಾಗ್ಯವಂತ / 
ನ್ಯಾಯದಿಂದ ವ್ಯವಹರಿಸುವಂಥಾ 
ಮನುಜನು ಭಾಗ್ಯವಂತ //

6 : ಅಚಲನಾಗಿರುವನು ನೀತಿವಂತನು / 
ಮರೆಯಲಾರರು ಎಂದಿಗೂ ಆತನನು //

7 : ಅಶುಭವಾರ್ತೆಯ ಭಯಭೀತಿ 
ಯಾವುದೂ ಅವನಿಗಿಲ್ಲ / 
ಪ್ರಭುವಿನಲಿ ಭರವಸೆಯಿಟ್ಟ 
ಆ ಮನವು ಅಸ್ಥಿರವಲ್ಲ //

8 : ದೃಢವಿದೆ ಅವನ ಮನ, 
ಎದೆಗುಂದನವನು / 
ಕಾಣುವನು ದುರುಳರಿಗಾಗುವ 
ದಂಡನೆಯನು //

9 : ಉದಾರತೆಯಿಂದ ಕೊಡುವನು
 ಬಡವರಿಗೆ / 
ಫಲಿಸುವುದು ಅವನಾ ನೀತಿ 
ಸದಾಕಾಲಕೆ /
 ಮಹಿಮೆತರುವ ಕೋಡುಮೂಡುವುದು 
ಅವನಿಗೆ //
===================
ಅಲ್ಲೆಲೂಯ
=========
ಯೊವಾನ್ನ 8:12
ಅಲ್ಲೆಲೂಯ, ಅಲ್ಲೆಲೂಯ! 
ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು 
ಕತ್ತಲಲ್ಲಿ ನಡೆಯುವುದಿಲ್ಲ; ಜೀವದಾಯಕ ಜ್ಯೋತಿ ಅವರಲ್ಲಿರುತ್ತದೆ, 
ಅಲ್ಲೆಲೂಯ!  

----------------------------

ಕೀರ್ತನೆ 119: 27
ಅಲ್ಲೆಲ್ಲೂಯ, ಅಲ್ಲೆಲೂಯ!  
ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ/
ನಿನ್ನ ಅದ್ಭುತ ಕಾರ್ಯಗಳನು ನಾ ಧ್ಯಾನಿಸುವೆನಯ್ಯಾ//
ಅಲ್ಲೆಲೂಯ!  
----------------------------
ಶುಭಸಂದೇಶ
==========
ಯೊವಾನ್ನ 12.24-26

24 : ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ.
25 : ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯ ಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ.
26 : ನನ್ನ ಸೇವೆ ಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನಹೊಂದುತ್ತಾನೆ,” ಎಂದರು.
===================
ಯಾಜಕ : ಪ್ರಭುವಿನ ಶುಭಸಂದೇಶ.

ಎಲ್ಲರು : ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ.

ಯಾಜಕ : ಶುಭಸಂದೇಶದ ಈ ನುಡಿಗಳು ನಮ್ಮ ಪಾಪಗಳನ್ನು ಅಳಿಸಲಿ.
=================
ಚಿಂತನೆ
======
ಸಾವು ನೋವು ಯಾರಿಗಿಷ್ಟ! ಆದರೆ ನೋವಿನಿಂದಾಚೆಗಿನ ಸಮೃದ್ಧಿಯನ್ನು ಕಲ್ಪಿಸಿಕೊಳ್ಳಬಹುದಾದರೆ ಇಂದಿನ ಶುಭಸಂದೇಶದ ಒಳಹುಗಳು ನಮಗೆ ಅರ್ಥವಾಗಬಹುದೇನೋ. 
ನಮ್ಮ ಆಹಾರದ ಮೂಲ ರೂಪದಲ್ಲಿರುವ ಭೂಮಿಯ ಮೇಲೆ ಬಿದ್ದ ಯಾವುದೇ ಬೀಜಗಳು ನಿಸರ್ಗದ ಪ್ರಕ್ರಿಯೆಗೆ ಪ್ರತಿಕ್ರಯಿಸದಿದ್ದರೆ ಒಂಟಿಯಾಗೇ ಸಾಯುತ್ತವೆ. ಸಕಾರಾತ್ಮಕವಾಗಿ ಸ್ಪಂದಿಸಿದ ಕಾಳುಗಳು ಮಾತ್ರ ಟಿಸಿಲೊಡೆದು, ಗಿಡವಾಗಿ ನೂರು ಕಾಳುಗಳೊಡಲಲ್ಲಿ ಜೀವಿಸುತ್ತವೆ. ಮತ್ತದರ ಕಾಳುಗಳು ಮತ್ತಷ್ಟು ಕಾಳುಗಳಿಗೆ ಜೀವಕೊಡುವ ಸರಪಳಿ ಮುರಿಯುವವರೆಗೂ ಆ ಮೊದಲ ಕಾಳು ಜೀವಿಸುತ್ತಾ ಹೋಗುತ್ತದೆ ಬಹುಶಃ ಶತಮಾನಗಳವರೆಗೆ. ಒಂದನ್ನು ಕಳೆದುಕೊಳ್ಳುವುದರಲ್ಲಿ ಮತ್ತೊಂದರ ಉದ್ಭವವಿದೆ. ಇದು ಪ್ರಕೃತಿ ನಿಯಮ, ‘Pain is gain’ ಎನ್ನುವ ಹಾಗೆ. 
ಈ ಸತ್ಯವನ್ನು ಇಂದಿನ ಶುಭಸಂದೇಶ ಪ್ರಚುರಪಡಿಸುತ್ತದೆ. ಇಲ್ಲಿ ಸಾಯುವುದು ಎಂದರೆ ಕೇವಲ ದೈಹಿಕ ಸಾವಲ್ಲ, ಬದಲಾಗಿ ದಿನನಿತ್ಯ ನಮ್ಮ ಜೀವನದಲ್ಲಿ ನಮ್ಮಿಂದ ದೂರ ಸಾಗದ ಕೆಟ್ಟತನಕ್ಕೆ, ಬಿಡಿಸಿಕೊಳ್ಳಲಾಗದ ಮೊಂಡುತನಕ್ಕೆ ಸೋಮಾರಿತನಕ್ಕೆ ನಮ್ಮ ದೇಹದ ಆಸೆಗಳಿಗೆ ಸಾಯುವುದು, ದೂರ ಸರಿಯಲು ನಿರ್ಧರಿಸುವುದು. ಇದಕ್ಕೆ ನಮ್ಮನ್ನು ಉತ್ತೇಜಿಸುವ ದೃಷ್ಟಾಂತ -ಪ್ರಭುವಿನ ಮರಣ ಮತ್ತು ಪುನರುತ್ಥಾನ. ಅದುವೇ ನಮ್ಮ ಮರಣ ಮತ್ತು ನಿತ್ಯಜೀವಕ್ಕೆ ನಾಂದಿ.
ಪ್ರಭುಕ್ರಿಸ್ತರು ಈ ಗೋಧಿಕಾಳಿನ ಹೋಲಿಕೆಯ ಮೂಲಕ ಸಾವು ನಮ್ಮ ಅಂತ್ಯವಲ್ಲ, ಬದಲಾಗಿ ಆರಂಭ ಎಂದು  ತಿಳಿಸುತ್ತಾರೆ. 

-----------------------
ಸಂತ ಲಾರೆನ್ಸ್ ಒಬ್ಬ ಉಪಯಾಜಕ ಮತ್ತು ರಕ್ತಸಾಕ್ಷಿ. ಲಾರೆನ್ಸ್ ರವರಿಗೆ ಬಡ ಬಗ್ಗರ ಮೇಲೆ ಅಪಾರ ಪ್ರೀತಿ ಮತ್ತು ಕಾಳಜಿ. ರೋಮ್ ಸೈನ್ಯದ ದಂಡನಾಯಕ ಕ್ರೈಸ್ತ ದೇವಾಲಯಗಳಲ್ಲಿ ಬಹಳಷ್ಟು ಚಿನ್ನ, ಬೆಳ್ಳಿ, ಅಪಾರವಾದ ಸಂಪತ್ತು ಇರುವುದೆಂದು ತಿಳಿದು ಸಂತ ಲಾರೆನ್ಸ್ರನ್ನು ಕರೆದು, ದೇವಾಲಯದಲ್ಲಿರುವ ಚಿನ್ನದ ಬಟ್ಟಲು, ಮೇಣದ ಬತ್ತಿಯ ಸ್ತಂಭಗಳು ಹಾಗೂ ಬೆಳ್ಳಿಯ ಪಾತ್ರೆಗಳನ್ನು ಒಪ್ಪಿಸುವಂತೆ ಆದೇಶಿಸುತ್ತಾನೆ. ಮೂರು ದಿನಗಳ ಕಾಲಾವಕಾಶ ಕೇಳಿದ ಸಂತ ಲಾರೆನ್ಸ್ ತನ್ನ ವಶದಲ್ಲಿದ್ದ ಎಲ್ಲಾ ಹಣವನ್ನು ಬಡಬಗ್ಗರಿಗೆ ಹಂಚುತ್ತಾರೆ. ಚಿನ್ನದ ಪೂಜಾ ಪಾತ್ರೆಯನ್ನು ಮಾರಿ ಬಡವರಿಗೆ ನೀಡುತ್ತಾರೆ. ಮೂರು ದಿನಗಳ ನಂತರ ಕುರುಡರು, ಕುಂಟರು, ಅಂಗವಿಕಲರು, ನಿರ್ಗತಿಕರು ಮತ್ತು ಬಡಬಗ್ಗರನ್ನು ಒಟ್ಟಿಗೆ ನಿಲ್ಲಿಸಿ ದಂಡನಾಯಕನ ಆಗಮನಕ್ಕೆ ಕಾಯುತ್ತಾನೆ. ದಂಡನಾಯಕನು ಬಂದಾಗ ಎದುರಿಗಿದ್ದವರನ್ನು ತೋರಿಸಿ “ಇಗೊ ನಮ್ಮ ದೇವಾಲಯದ ಆಸ್ತಿ” ಎನ್ನುತ್ತಾನೆ. ಕುಪಿತಗೊಂಡ ದಂಡನಾಯಕ ದೊಡ್ಡ ಬಾಣಲೆಯ ಉರಿಯುವ ಕೆಂಡಗಳ ಮೇಲೆ ಲಾರೆನ್ಸ್ರನ್ನು ಮಲಗಿಸಿ ಜೀವ ತೆಗೆಯುತ್ತಾನೆ.
===================

No comments:

Post a Comment