Friday, 3 July 2020

ಆಗಸ್ಟ್ 15, 2020 ಶನಿವಾರ

ಆಗಸ್ಟ್ 15, 2020 ಶನಿವಾರ                                [ಬಿಳಿ]
ಪರಿಶುದ್ಧ ಮರಿಯಮ್ಮನವರ ಸ್ವರ್ಗಾರೋಹಣ, ಮಹೋತ್ಸವ
ಹಬ್ಬದ ಪೂಜೆ
ಮೊದಲ ವಾಚನ: ಯೆಪ್ರ. 11.19, 12.1-6, 10
ಕೀರ್ತನೆ 45:9-11, 15. ಶ್ಲೋಕ.9
ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾಶ್ರ್ವದಲ್ಲಿ
ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ
ಎರಡನೇ ವಾಚನ: 1 ಕೊರಿಂಥಿಯರಿಗೆ 15.20-27
ಶುಭಸಂದೇಶ: ಲೂಕ 1.39-56

ಯೆಪ್ರ. 11.19, 12.1-6, 10 19 : ಆಗ ಸ್ವರ್ಗದಲ್ಲಿನ ದೇವಾಲಯವು ತೆರೆಯಿತು. ದೇವರ ಒಡಂಬಡಿಕೆಯ ಮಂಜೂಷವು ಅಲ್ಲಿರುವುದು ಕಾಣಿಸಿತು; ಇದಲ್ಲದೆ ಮಿಂಚುಗಳು, ಗುಡುಗು, ಗರ್ಜನೆಗಳು ಉಂಟಾದವು. ಭೂಕಂಪವೂ ಆಯಿತು. ಜೋರಾದ ಆಲಿಕಲ್ಲಿನ ಮಳೆ ಸುರಿಯಿತು. 1 : ಆಕಾಶದಲ್ಲಿ ಚಿಹ್ನೆಯೊಂದು ಕಾಣಿಸಿಕೊಂಡಿತು. ಮಹಿಳೆಯೊಬ್ಬಳು ಸೂರ್ಯಭೂಷಿತಳಾಗಿದ್ದಳು. ಆಕೆಯ ಪಾದದಡಿ ಚಂದ್ರನಿದ್ದನು. ತಲೆಯ ಮೇಲೆ ಹನ್ನೆರಡು ನಕ್ಷತ್ರ ಖಚಿತವಾದ ಕಿರೀಟವಿತ್ತು. 2 : ಆಕೆ ತುಂಬು ಗರ್ಭಿಣಿ, ಪ್ರಸವವೇದನೆಯಿಂದ ನರಳುತ್ತಿದ್ದಳು. 3 : ಆಕಾಶದಲ್ಲಿ ಮತ್ತೊಂದು ಚಿಹ್ನೆ ಕಾಣಿಸಿಕೊಂಡಿತು. ಅಲ್ಲಿ ಕೆಂಪು ಘಟಸರ್ಪವೊಂದು ಇತ್ತು. ಅದಕ್ಕೆ ಏಳು ತಲೆಗಳಿದ್ದವು, ಹತ್ತು ಕೊಂಬುಗಳಿದ್ದವು; ಅದರ ಏಳು ತಲೆಗಳ ಮೇಲೆ ಏಳು ಮುಕುಟಗಳಿದ್ದವು. 4 : ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿ ಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತು. 5 : ಸರ್ವಜನಾಂಗಗಳನ್ನು ಕಬ್ಬಿಣದ ದಂಡದಿಂದ ಆಳಬಲ್ಲಂಥ ಒಂದು ಗಂಡುಮಗುವಿಗೆ ಆಕೆ ಜನ್ಮವಿತ್ತಳು. ಆದರೆ, ಆ ಮಗುವನ್ನು ಸಿಂಹಾಸನದಲ್ಲಿದ್ದ ದೇವರ ಬಳಿಗೆ ಕೊಂಡೊಯ್ಯಲಾಯಿತು. 6 : ಆ ಮಹಿಳೆ ಅರಣ್ಯಕ್ಕೆ ಓಡಿಹೋದಳು. ಅಲ್ಲಿ ಸಾವಿರದ ಇನ್ನೂರ ಅರವತ್ತು ದಿನಗಳ ಕಾಲ ಆಕೆಗೆ ಶುಶ್ರೂಷೆಯಾಗಬೇಕೆಂದು ದೇವರೇ ಆ ಸ್ಥಳವನ್ನು ಸಜ್ಜುಗೊಳಿಸಿದ್ದರು. 10 : ಸ್ವರ್ಗದಿಂದ ಬಂದ ಮಹಾಶಬ್ದವನ್ನು ನಾನು ಕೇಳಿಸಿಕೊಂಡೆ. ಅದು ಇಂತೆಂದಿತು: “ಇಗೋ, ನಮ್ಮ ದೇವನಿತ್ತ ಜೀವೋದ್ಧಾರ ಸಿದ್ಧಿಸಿದೆ. ಆತನ ಶಕ್ತಿ, ಸಾಮ್ರಾಜ್ಯಗಳು ಕಂಗೊಳಿಸುತ್ತಿವೆ. ಆತನ ಕ್ರಿಸ್ತಾಧಿಪತ್ಯ ಸ್ಥಾಪಿತವಾಗಿದೆ. ನಮ್ಮ ಸೋದರರನು ದೂರಿದವನನ್ನು ದಬ್ಬಲಾಗಿದೆ. ಹಗಲಿರುಳು ನಮ್ಮ ದೇವರೆದುರು ದೂರಿತ್ತಿದ್ದವನನ್ನು ತಳ್ಳಲಾಗಿದೆ.

ಕೀರ್ತನೆ 45:9-11, 15. ಶ್ಲೋಕ.9 ಪಟ್ಟದ ರಾಣಿಯು ನಿಂತಿಹಳು ನಿನ್ನ ಬಲಪಾಶ್ರ್ವದಲ್ಲಿ ಓಫಿರ್ ನಾಡಿನ ಚಿನ್ನಾಭರಣಗಳಿಂದ ಭೂಷಿತಳಾಗಿ 10 : ಎಲೌ ಕುವರಿಯೇ, ಕೇಳು, ಎನ್ನ ಮಾತಿಗೆ ಕಿವಿಗೊಡು / ನಿನ್ನ ಜನರನು, ತೌರು ಮನೆಯನು ಮರೆತುಬಿಡು // 11 : ಆಗ ಬಯಸುವನು ರಾಜ ನಿನ್ನ ಲಾವಣ್ಯವನು / ಆತನ ಪಾದಕ್ಕೆರಗು, ಆತನೇ ನಿನಗೊಡೆಯನು // 12 : ಟೈರ್ ನಾಡಿಗರು ನಿನಗೆ ಕಾಣಿಕೆಯಿತ್ತು ಸನ್ಮಾನಿಸುವರು / ಸಿರಿವಂತ ಪ್ರಜೆಗಳು ನಿನ್ನುಪಕಾರವನು ಕೋರಿಬರುವರು // 16 : ನಿನ್ನ ಪುತ್ರರು ಅಲಂಕರಿಸುವರು ಪೂರ್ವಜರ ಸ್ಥಾನವನು / ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ ಜಗದೊಳು //

1 ಕೊರಿಂಥಿಯರಿಗೆ 15.20-27 20 : ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ. 21 : ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು. 22 : ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ. 23 : ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ. 24 : ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು. 25 : ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ. 26 : ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ. 27 : “ದೇವರು ಎಲ್ಲವನ್ನು ಅಧೀನಪಡಿಸಿ ಆತನ ಪಾದಪೀಠವನ್ನಾಗಿಸಿದ್ದಾರೆ,” ಎಂದು ಲಿಖಿತವಾಗಿದೆ. “ಎಲ್ಲವನ್ನೂ ಅಧೀನಪಡಿಸಲಾಗಿದೆ,” ಎಂದು ಹೇಳುವಾಗ, ಹಾಗೆ ಅಧೀನಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.

ಲೂಕ 1.39-56 39 : ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. 40 : ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. 41 : ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ 42 : ಹರ್ಷೋದ್ಗಾರದಿಂದ ಹೀಗೆಂದಳು: “ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! 43 : ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ! 44 : ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! 45 : ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು.” ಮರಿಯಳ ಸ್ತುತಿಗೀತೆ 46 : ಆಗ ಹೀಗೆಂದು ಮರಿಯಳು ಹೊಗಳಿದಳು: 47 : “ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ !! 48 : ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ ! ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ !! 49 : ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ !! 50 : ಆತನಲ್ಲಿ ಭಯಭಕ್ತಿಯುಳ್ಳವರಿಗೆ ! ಆತನ ಪ್ರೀತಿ ತಲತಲಾಂತರದವರೆಗೆ !! 51 : ಗರ್ವಹೃದಯಿಗಳನಾತ ಚದರಿಸಿರುವನು ! ಪ್ರದರ್ಶಿಸಿರುವನು ತನ್ನ ಬಾಹುಬಲವನು !! 52 : ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು ! ಏರಿಸಿರುವನು ಉನ್ನತಿಗೆ ದೀನದಲಿತರನು !! 53 : ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ ! ಹೊರದೂಡಿರುವನು ಸಿರಿವಂತರನು ಬರೀಗೈಯಲಿ !! 54 : ನೆರವಾದನು ತನ್ನ ದಾಸ ಇಸ್ರಯೇಲನಿಗೆ ! ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ !! 55 : ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ! ಅವನ ಸಂತತಿಗೆ, ಯುಗಯುಗಾಂತರದವರೆಗೆ !!
==============
ತಮಾನಗಳಿಂದ ಬೆಳೆದುಬಂದ ಸ್ವರ್ಗಸ್ವೀಕೃತಿ ತಾಯಿಯ ನಂಬಿಕೆಯನ್ನು ಧರ್ಮಸಭೆಯ ಸಿದ್ಧಾಂತವನ್ನಾಗಿ 1950 ರಲ್ಲಿ ಜಗದ್ಗುರು ‘ಅಮಲೋದ್ಭವಿ ಮಾತೆ, ನಿತ್ಯಕನ್ನಿಕೆ” ದೇವಮಾತೆ ಮರಿಯಮ್ಮನವರು ತಮ್ಮ ಇಹಲೋಕದ ಜೀವನವನ್ನು ಮುಗಿಸಿ, ತಮ್ಮ ದೇಹಾತ್ಮಗಳೊಂದಿಗೆ ಸ್ವರ್ಗ ಸ್ವೀಕೃತರಾದರು’ ಎಂದು ಘೋಷಿಸಿದರು. ಮಾತೆ ಮರಿಯಳ ಸೇವೆಗೆ, ವಿಧೇಯತೆಯ ಅರ್ಪಣೆಗೆ ದೇವರು ನೀಡಿದ ಶ್ರೇಷ್ಠ ಕೊಡುಗೆ ಇದು. ಇಂದು ಸ್ವಾತಂತ್ರ್ಯ ದಿನಾಚರಣೆ, ಸ್ವಾತಂತ್ರ್ಯ ಸದುಪಯೊಗಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ. ನಮಗೆ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ಸಿಕ್ಕಿದೆ? ರಾಷ್ಟ್ರಧ್ವಜವನ್ನು ತಿರುಗುಮುರುಗು ಮಾಡಿ ಹಾರಿಸುವುಷ್ಟು ಸ್ವತಂತ್ರರಾಗಿದ್ದೇವೆ. ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯನ್ನೆ ಕೊಲೆ ಮಾಡುವಷ್ಟು, ದೇಶದ ಆಸ್ತಿ ಲೂಟಿ ಮಾಡಿವÀಷ್ಟು, ದಾಖಲೆಗಳು ಸರಿ ಇದ್ದರೂ ಲಂಚ ಸ್ವೀಕರಿಸುವಷ್ಟು, ಸೇವೆಯ ಹೆಸರಲ್ಲಿ ಐಷಾರಾಮಿ ಜೀವನ ನಡೆಸುವಷ್ಟು, ಇಂತಹವನ್ನೆಲ್ಲಾ ವಿರೋಧಿಸಿದರೆ ಅವರ ಮೇಲೆಯೇ ಗೂಬೆಕೂರಿಸಿ ಅವರನ್ನೇ ತಪ್ಪಿತಸ್ಥರನ್ನಾಗಿ ಮಾಡುವ ಸ್ವಾತಂತ್ರ್ಯ. ಇಂತಹ ಸ್ವಾತಂತ್ರ್ಯ ನಿಜವಾಗಿ ಬೇಕಿತ್ತೆ?

No comments:

Post a Comment