ಆಗಸ್ಟ್ 16, 2020 ಭಾನುವಾರ [ಹಸಿರು]
ಸಾಧಾರಣ ಕಾಲದ 20ನೇ ಭಾನುವಾರ
ಮೊದಲ ವಾಚನ: ಯೆಶಾಯ 56.1, 6-7
ಕೀರ್ತನೆ 67:2-3, 4, 6-7. ಶ್ಲೋಕ.3
ನಿನ್ನ ಕೀರ್ತಿಸಲಿ ದೇವಾ ಜನರು, ಸಂಕೀರ್ತಿಸಲಿ ಅವರೆಲ್ಲರು
ಎರಡನೇ ವಾಚನ: ರೋಮನರಿಗೆ 11.13-15, 29-32
ಶುಭಸಂದೇಶ: ಮತ್ತಾಯ 15.21-28
ಯೆಶಾಯ 56.1, 6-7
1 : ಸರ್ವೇಶ್ವರಸ್ವಾಮಿ ಹೇಳುವುದು ಏನೆಂದರೆ: ನ್ಯಾಐವನ್ನು ಅನುಸರಿಸಿರಿ. ನೀತಿಯನ್ನು ಆಚರಿಸಿರಿ. ಏಕೆಂದರೆ ನಾನೀಡುವ ಮುಕ್ತಿಯು ಬೇಗನೆ ಬರುವುದು; ನಾನು ತರುವ ಸತ್ಸಂಬಂಧವು ಕೂಡಲೆ ಬೆಳಗುವುದು.
6 : ಅನ್ಯದೇಶಿಯರಲ್ಲಿ ಯಾರು ಯಾರು ‘ಸರ್ವೇಶ್ವರ’ ಎಂದು ನನ್ನನ್ನು ಅವಲಂಬಿಸಿ, ಪೂಜಿಸಿ, ನನ್ನ ನಾಮವನ್ನು ಪ್ರೀತಿಸಿ, ನನಗೆ ದಾಸನಾಗಿ, ಸಬ್ಬತ್ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ, ಜೊತೆಗೆ ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸುತ್ತಾರೋ,
7 : ಅವರೆಲ್ಲರನ್ನು ನನ್ನ ಪವಿತ್ರ ಪರ್ವತಕ್ಕೆ ಬರಮಾಡುವೆನು; ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಆನಂದಗೊಳಿಸುವೆನು; ನನ್ನ ಬಲಿಪೀಠದ ಮೇಲೆ ಅವರು ನೀಡುವ ದಹನಬಲಿಗಳನ್ನೂ ಅರ್ಪಣೆಗಳನ್ನೂ ಸಂತೋಷದಿಂದ ಸ್ವೀಕರಿಸುವೆನು. ನನ್ನ ಆಲಯ ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.”
ಕೀರ್ತನೆ 67:2-3, 4, 6-7. ಶ್ಲೋಕ.3
ನಿನ್ನ ಕೀರ್ತಿಸಲಿ ದೇವಾ ಜನರು, ಸಂಕೀರ್ತಿಸಲಿ ಅವರೆಲ್ಲರು
2 : ಪ್ರಸಿದ್ಧವಾಗಲಿ ನಿನ್ನ ಸನ್ಮಾರ್ಗ ಜಗದೊಳೆಲ್ಲಾ / ಜೀವೋದ್ಧಾರಗೊಳಿಸುವ ನಿನ್ನ ಶಕ್ತಿ ಜನತಿಗೆಲ್ಲ //
3 : ನಿನ್ನ ಕೀರ್ತಿಸಲಿ ದೇವಾ, ಜನರು / ಸಂಕೀರ್ತಿಸಲಿ ಅವರೆಲ್ಲರೂ //
5 : ನಿನ್ನ ಕೀರ್ತಿಸಲಿ ದೇವಾ, ಜನರು / ಸಂಕೀರ್ತಿಸಲಿ ಅವರೆಲ್ಲರೂ //
6 : ಇತ್ತನೆಮ್ಮ ದೇವನು ಆಶೀರ್ವಾದವನು / ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು //
ಮತ್ತಾಯ 15.21-28
21 : ಯೇಸುಸ್ವಾಮಿ ಅಲ್ಲಿಂದ ಹೊರಟು ಟೈರ್ ಹಾಗೂ ಸಿದೋನ್ ಪ್ರಾಂತ್ಯಕ್ಕೆ ಹೋದರು.
22 : ಅಲ್ಲಿ ವಾಸವಾಗಿದ್ದ ಕಾನಾನ್ ನಾಡಿನ ಮಹಿಳೆ ಒಬ್ಬಳು ಅವರ ಬಳಿಗೆ ಬಂದಳು. "ಸ್ವಾವಿೂ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, ನನ್ನ ಮಗಳಿಗೆ ದೆವ್ವಹಿಡಿದು ಬಹಳ ಸಂಕಟ ಪಡುತ್ತಿದ್ದಾಳೆ," ಎಂದು ಕೂಗಿಕೊಂಡಳು.
23 : ಯೇಸು ಆಕೆಗೆ ಒಂದು ಮಾತನ್ನೂ ಹೇಳಲಿಲ್ಲ. ಶಿಷ್ಯರು ಹತ್ತಿರಕ್ಕೆ ಬಂದು, "ಇವಳನ್ನು ಕಳಿಸಿಬಿಡಿ, ಒಂದೇ ಸಮನೆ ಗೋಳಿಡುತ್ತಾ, ನಮ್ಮನ್ನು ಬೆಂಬತ್ತಿ ಬರುತ್ತಿದ್ದಾಳೆ," ಎಂದು ಕೇಳಿಕೊಂಡರು.
24 : ಆಗ ಯೇಸು, "ನನ್ನನ್ನು ಕಳಿಸಿರುವುದು ತಪ್ಪಿಹೋದ ಕುರಿಗಳಂತಿರುವ ಇಸ್ರಯೇಲ್ ಜನಾಂಗದವರ ಬಳಿಗೆ ಮಾತ್ರ," ಎಂದರು.
25 : ಆದರೂ ಆಕೆ ಯೇಸುವಿಗೆ ಅಡ್ಡಬಿದ್ದು, "ಸ್ವಾವಿೂ, ಸಹಾಯ ಮಾಡಿ," ಎಂದು ಯಾಚಿಸಿದಳು.
26 : ಅದಕ್ಕೆ ಯೇಸು, "ಮಕ್ಕಳ ಆಹಾರವನ್ನು ತೆಗೆದು ನಾಯಿಗಳಿಗೆ ಎಸೆಯುವುದು ಸರಿಯಲ್ಲ," ಎಂದರು.
27 : ಆಗ ಆಕೆ, "ಅದು ನಿಜ ಸ್ವಾವಿೂ, ನಾಯಿಗಳಾದರೂ ತಮ್ಮ ಯಜಮಾನನ ಮೇಜಿನಿಂದ ಕೆಳಕ್ಕೆ ಬೀಳುವ ಚೂರುಪಾರನ್ನು ತಿನ್ನುತ್ತವೆ, ಅಲ್ಲವೇ?" ಎಂದು ಮರುತ್ತರ ಕೊಟ್ಟಳು.
28 : ಆಗ ಯೇಸು, "ತಾಯಿ, ನಿನ್ನ ವಿಶ್ವಾಸ ಅಚಲವಾದುದು. ನಿನ್ನ ಕೋರಿಕೆ ನೆರವೇರಲಿ," ಎಂದರು. ಅದೇ ಕ್ಷಣದಲ್ಲಿ ಆಕೆಯ ಮಗಳು ಗುಣಹೊಂದಿದಳು.
=============
ಸಾಧಾರಣ ಕಾಲದ ಇಪ್ಪತ್ತನೆಯ ಭಾನುವಾರ
=========================
ಪೀಠಿಕೆ
=========
ದೇವರು ಪಕ್ಷಪಾತಿಯಲ್ಲ. ವಿಶಾಸ ಮತ್ತು ಪ್ರೀತಿಗೆ ಸ್ಪಂದಿಸುವ ಕರುಣಾಮಯಿ
ನೆನ್ನೆ ಇಡೀ ದೇಶವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದ ದಿನವನ್ನೂ ಆಚರಿಸಿದೆವು. ಇಂದಿನ ದೈವಾರಾಧನ ವಿಧಿಯ ವಾಚನಗಳು ದೇವರು ಇಡೀ ಮನುಕುಲದ ಬಗ್ಗೆ ತೋರಿಸುವ ಹಾಗೂ ಪಾಲಿಸುವ ಸ್ವಾತಂತ್ರ್ಯವನ್ನು ಕುರಿತು ಧ್ಯಾನಿಸಲು, ಹಾಗೂ ಧ್ಯಾನಿಸಿದ್ದನ್ನು ಪಾಲಿಸಲು ಕರೆನೀಡುತ್ತವೆ. ದೇವರು ಭೇದಭಾವ ಮಾಡುವವರಲ್ಲ. ತಮ್ಮ ಹೋಲಿಕೆಯಲ್ಲಿ ನಿರ್ಮಿಸಿರುವ ಪ್ರತಿಯೊಬ್ಬರನ್ನೂ ಕಾದು ಪರಿಪಾಲಿಸುತ್ತಾರೆ. ಅವರೆಲ್ಲರ ಪ್ರಾರ್ಥನೆಗಳನ್ನು ಆಲಿಸಿ, ಅವರ ಕೋರಿಕೆಗಳನ್ನು ಈಡೇರಿಸುತ್ತಾರೆ ಎಂಬ ಸತ್ಯವನ್ನು ಮನಗಂಡು ವಿಶ್ವಾಸ ಮತ್ತು ಪ್ರೀತಿಯಿಂದ ದೇವರನ್ನು ಈ ಬಲಿಪೂಜೆಯಲ್ಲಿ ಸಂಪರ್ಕಿಸಿ ದರ್ಶಿಸೋಣ. ಅವರನ್ನು ನಮ್ಮ ಹೃದಯಗಳಿಗೂ, ಜೀವನಕ್ಕೂ ಸ್ವಾಗತಿಸೋಣ.
ಮೊದಲನೆಯ ವಾಚನ - ಯೆಶಾಯ 56:1, 6-7
====================================
ಪ್ರವಾದಿ ಯೆಶಾಯನು ಬರೆದ ಗ್ರಂಥದಿಂದ ಆರಿಸಿಕೊಳ್ಳಲಾಗಿರುವ ಈ ವಾಚನದಲ್ಲಿ, ಗುಲಾಮಗಿರಿಯಲ್ಲಿದ್ದ ತನ್ನ ಸ್ವಂತ ಜನರನ್ನು ರಕ್ಷಿಸಲು ದೇವರು ‘ಮೆಸೀಯ’ ಅಥವಾ ರಕ್ಷಕನನ್ನು ಕಳುಹಿಸುವುದಾಗಿ ಭರವಸೆ ನೀಡಿದ ನಂತರ ಸ್ಥಾಪಿತವಾಗುವ ಹೊಸ ರಾಷ್ಟ್ರದಲ್ಲಿ ಅನ್ಯ ರಾಷ್ಟ್ರದವರೂ ಅನ್ಯ ಜನಾಂಗದವರೂ ಇರುತ್ತಾರೆ ಎಂದು ಹೇಳುತ್ತಾರೆ. ಅವರ ಪ್ರಾರ್ಥನೆ ಹಾಗೂ ಬಲಿಯರ್ಪಣೆಗೆ ದೇವರು ಹೇಗೆ ಪ್ರತಿಕ್ರಯಿಸುವರು ಎಂಬುದನ್ನೂ ಈ ವಾಚನ ನಮಗೆ ತಿಳಿಸುತ್ತದೆ.
ಎರಡನೆಯ ವಾಚನ - ರೋಮನರಿಗೆ 11:13-15, 29-32
===========================
ಸಂತ ಪೌಲರು ಅನ್ಯಧರ್ಮೀಯರ ಪ್ರೇಷಿತರೆಂದು ತಮ್ಮನ್ನೇ ತಾವು ಗುರುತಿಸಿಕೊಳ್ಳುತ್ತಾ, ತಮ್ಮ ಸ್ವಂತ ಜನರಿಗೆ ಕರುಣೆ ತೋರುವ ದೇವರು ಅದೇ ಕರುಣೆಯನ್ನು ಅನ್ಯಧರ್ಮೀಯರಿಗೂ ತೋರಿಸಿತ್ತಾರೆ ಎಂಬ ಸತ್ಯವನ್ನು ರೋಮಾಪುರದ ಜನತೆಗೆ ನೆನಪಿಸುವುದನ್ನು ಈ ವಾಚನದಲ್ಲಿ ಆಲಿಸಲಿದ್ದೇವೆ.
ಶುಭ ಸಂದೇಶ - ಮತ್ತಾಯ 15:21-28
==========================
ಯೇಸು ಮತ್ತು ಶಿಷ್ಯರು ಇಸ್ರಯೇಲನ್ನು ಬಿಟ್ಟು ಟೈರ್ ಮತ್ತು ಸಿದೋನ್ ಪ್ರಾಂತ್ಯಕ್ಕೆ ಹೋಗಲು ಅನೇಕ ಕಾರಣಗಳಿವೆ. ಅವರ ಬೋಧನೆಯನ್ನು ಕೇಳಿ ಅನೇಕರು ರೋಗಿಗಳನ್ನೂ, ದೆವ್ವಪೀಡಿತರನ್ನೂ ಯೇಸುವಿನ ಬಳಿ ಕರೆತರುತ್ತಿದ್ದರು. ಅದಲ್ಲದೆ, ಯೇಸುಸ್ವಾಮಿಯ ಬೋಧನೆ ಹಾಗೂ ಪ್ರವಚನಗಳಿಗೆ ಇಸ್ರಯೇಲಿನಲ್ಲಿ ವಿರೋಧ ಹೆಚ್ಚುತ್ತಿತ್ತು. ಆದ್ದರಿಂದ ಅವರು ಸುರಕ್ಷತೆಗಾಗಿ ಹಾಗೂ ವಿಶ್ರಾಂತಿಗಾಗಿ ಯೇಸು ತನ್ನ ಶಿಷ್ಯರೊಂದಿಗೆ ಹೊರಟು ಟೈರ್ ಮತ್ತು ಸಿದೋನ್ ಪ್ರಾಂತ್ಯಕ್ಕೆ ಬಂದರು. ಅವರು ಯಾರ ಕಣ್ಣಿಗೂ ಬೀಳದಿರಲು ಬಯಸಿದ್ದರೂ ಗಲಿಲೇಯ ಪ್ರಾಂತ್ಯದಲ್ಲಿ ಅವರ ಬೋಧನೆಯನ್ನು ಕೇಳಿದ ಜನರು ಅವರನ್ನು ಸುಲಭವಾಗಿ ಗುರುತು ಹಚ್ಚಿದರು.
ಹೀಗೆ ಯೇಸುವಿನ ಇರುವಿಕೆಯನ್ನು ತಿಳಿದ ಮಹಿಳೆಯೊಬ್ಬಳು ಯೇಸುವನ್ನು ಕಾಣಲು ಬರುತ್ತಾಳೆ. ಆಕೆ ಸೀರಿಯ-ಫಿನೀಶಯ ಮೂಲದವಳಾಗಿದ್ದು, ಇಂದಿನ ಲೆಬನಾನ್ ಎಂಬಲ್ಲಿ ಜನಿಸದವಳು. ಆಕೆ ಅನ್ಯಧರ್ಮೀಯಳಾಗಿದ್ದು, ಗ್ರೀಕ್ ಮತ್ತು ಅರೆಮಾಯಿಕ್ ಭಾಷೆಗಳನ್ನು ಮಾತನಾಡುತ್ತಾ, ಕೆಲವು ವರ್ಷಗಳಿಂದ ಆ ಸ್ಥಳದಲ್ಲಿ ವಾಸವಾಗಿದ್ದಿರಬೇಕು. ಆ ಮಹಿಳೆ ಯೇಸುವನ್ನು ಸಂಪರ್ಕಿಸಲು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗಿತ್ತು:
1.ಆಕೆ ಯೆಹೂದ್ಯಳಲ್ಲ, ಬದಲಾಗಿ ಅನ್ಯಧರ್ಮೀಯಳು: ಯೆಹೂದ್ಯರು ಮೆಸ್ಸೀಯ ಅಥವಾ ರಕ್ಷಕನು ತಮ್ಮ ಕುಲದಲ್ಲಿ ಹುಟ್ಟಿ ತಮ್ಮನ್ನು ಮಾತ್ರ ರಕ್ಷಿಸಲು ಬರುವನು. ಯೆಹೂದ್ಯೇತರರಗೊಡವೆ ಆತನಿಗಿರದು ಆತ ಕಾಪಾಡುವುದಿಲ್ಲ ಎಂದು ನಂಬಿದ್ದರು.
2.ಮಹಿಳೆಯಾಗಿದ್ದ ಆಕೆ ಪುರುಷನೊಂದಿಗೆ ಮಾತನಾಡುವಂತಿರಲಿಲ್ಲ: ಯೆಹೂದ್ಯ ಸಮಾಜದಲ್ಲಿ ಮಹಿಳೆಯರು ತಮ್ಮ ಸಂಬಂಧಿಕರನ್ನು ಹೊರತುಪಡಿಸಿ ಯಾವುದೇ ಅನ್ಯ ಹಾಗೂ ಅಪರಿಚಿತ ಪುರುಷನನ್ನು ಸಂಪರ್ಕಿಸುವಂತಿರಲಿಲ್ಲ.
3.ಆಕೆ ವಿಗ್ರಹಾರಾಧಕ ಸಂಸ್ಕೃತಿಗೆ ಸೇರಿದವಳು: ಆ ಮಹಿಳೆ ನಿಜವಾದ ಏಕ ದೇವರನ್ನು ಆರಾಧಿಸುವ ಯೆಹೂದ್ಯ ಸಂಪ್ರದಾಯಕ್ಕೆ ಸೇರಿದವಳಲ್ಲ.
ಈ ಎಲ್ಲಾ ತಡೆಗೋಡೆಗಳನ್ನು ಆಕೆ ಯೇಸುವಿನ ಮೇಲಿಟ್ಟಿದ್ದ ವಿಶ್ವಾಸದಿಂದ ದಾಟಿ ಅವರನ್ನು ಸಂಪರ್ಕಿಸಿ ತನ್ನ ಮಗಳನ್ನು ಗುಣಪಡಿಸುವಂತೆ ಅಂಗಲಾಚುತ್ತಾಳೆ. ‘ಮಕ್ಕಳು’ ಎಂಬ ಪದವನ್ನು ದೇವರು ಮಾಡಿಕೊಂಡ ಒಡಂಬಡಿಕೆಗೆ ಒಳಪಟ್ಟ ಯೆಹೂದ್ಯ ಕುಲಕ್ಕೆ ಸೇರಿದವರಿಗೆ ಮಾತ್ರವೇ ಬಳಸಿ, ಅನ್ಯಧರ್ಮೀಯರನ್ನು ಯಜಮಾನನ ಮೇಜಿನ ಕೆಳಗೆ ಬೀಳುವ ಚೂರನ್ನು ತಿನ್ನುವ ‘ನಾಯಿ’ ಎಂಬಂತೆ ಯೆಹೂದ್ಯರು ಎಣಿಸುತ್ತಿದ್ದರು.. ಆದ್ದರಿಂದಲೇ ಆ ಮಹಿಳೆ ಯೇಸು ‘ನಾಯಿ’ ಎಂಬ ಪದವನ್ನು ಬಳಸಿದಾಗಲೂ ಅದನ್ನು ಅವಮಾನವೆಂದು ಭಾವಿಸಿ ಅಲ್ಲಿಂದ ಹಿಂತಿರುಗಿ ಹೋಗದೆ ಯೇಸುವನ್ನು ವಿಶ್ವಾಸದಿಂದ ಮತ್ತು ಪ್ರೀತಿಯಿಂದ ಪ್ರಾರ್ಥಿಸುತ್ತಾಳೆ. ಆಕೆಯ ವಿಶ್ವಾಸವನ್ನು ಮೆಚ್ಚಿದ ಯೇಸು, ಆಕೆಯ ಮನೆಯನ್ನೂ ಪ್ರವೇಶಿಸದೆ ಅವಳಿಗೆ ಆ ಸ್ಥಳದಲ್ಲೇ ಸದುತ್ತರವನ್ನು ನೀಡುತ್ತಾರೆ.
ಯೇಸು ಯಾವುದೇ ಜಾತಿ, ಧರ್ಮ, ಕುಲ, ಭಾಷೆ, ಸಂಸ್ಕøತಿಗಳನ್ನಾಧರಿಸಿ ಜನರ ಪ್ರಾರ್ಥನೆಗಳನ್ನು ಆಲಿಸುವುದಿಲ್ಲ. ಬದಲಾಗಿ ಅವರಲ್ಲಿ ಪ್ರಾರ್ಥಿಸುವವರ ಪ್ರೀತಿ ಮತ್ತು ವಿಶ್ವಾಸವನ್ನು ಈಕ್ಷಿಸುತ್ತಾರೆ. ಇದನ್ನೇ ಇಂದಿನ ಮೊದಲನೆಯ ವಾಚನದಲ್ಲೂ ಕೇಳುತ್ತೇವೆ: “ನನ್ನನ್ನು ಅವಲಂಬಿಸಿ ಬರುವ ಅನ್ಯದೇಶೀಯರನ್ನು ನನ್ನ ಪ್ರಾರ್ಥನಾಲಯದಲ್ಲಿ ಆನಂದಗೊಳಿಸುವೆನು; ನನ್ನ ಬಲಿಪೀಠದ ಮೇಲೆ ಅವರು ನೀಡುವ ದಹನಬಲಿಗಳನ್ನೂ ಅರ್ಪಣೆಗಳನ್ನೂ ಸಂತೋಷದಿಂದ ಸ್ವೀಕರಿಸುವೆನು. ನನ್ನ ಆಲಯ ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು”. ನಮ್ಮ ಅನೇಕ ಕಥೋಲಿಕ ದೇವಾಲಯಗಳಿಗೆ ಹಾಗೂ ಪುಣ್ಯಕ್ಷೇತ್ರಗಳಿಗೆ ಭೇಟಿನೀಡುವ, ಹಾಗೂ ಧ್ಯಾನಕೂಟಗಳಲ್ಲಿ ಭಾಗವಹಿಸುವ ಕ್ರೈಸ್ತೇತರರು ರೋಗಗಳಿಂದ ಗುಣಹೊಂದುವುದು, ಸಮಸ್ಯೆಗಳ ನಿವಾರಣೆಯಾಗಿ ಶಾಂತಿ ಸಮಾಧಾನ ಹೊಂದುವುದು, ಸೈತಾನನ ಬಂಧನದಿಂದ ಮುಕ್ತರಾಗುವುದನ್ನು ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು.
ನಾನು ಹುಟ್ಟಿನಿಂದಲೂ ಕ್ರೈಸ್ತನು. ಕ್ರೈಸ್ತ ಹೆಸರನ್ನು ಹೊಂದಿದವನು. ಯೇಸು ನನ್ನ ಪ್ರಾರ್ಥನೆಯನ್ನು ಮಾತ್ರವೇ ಆಲಿಸುತ್ತಾರೆ; ನನ್ನನ್ನು ಮಾತ್ರವೇ ಪ್ರೀತಿಸುತ್ತಾರೆ; ಯೇಸು ನನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಯೇ ತೀರುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸವನ್ನು ತೊರೆದು, ಪ್ರೀತಿ ಮತ್ತು ನೈಜ ವಿಶ್ವಾಸದೊಂದಿಗೆ ಯೇಸುವಿನಲ್ಲಿ ಪ್ರಾರ್ಥಿಸೋಣ.
ಕ್ರಿಸ್ತನನ್ನು ಅರಿವಿಲ್ಲದೆ ಆತನನ್ನು ವಿಶ್ವಾಸಿಸದೆ ಇರುವವರು ಯೇಸುವಿನಲ್ಲಿ ನಮಗಿರುವ ಪ್ರೀತಿ ಹಾಗೂ ವಿಶ್ವಾಸವನ್ನು ಕ್ರೈಸ್ತೇತರರಿಗೆ ನಾವು ತೋರುವ ಗೌರವದಿಂದ ಅರ್ಥಮಾಡಿಕೊಳ್ಳುತ್ತಾರೆ. ಅವರನ್ನು ವಿಗ್ರಹಾರಾಧಕರು, ಅನ್ಯಧರ್ಮೀಯರು ಎಂದು ಅವಹೇಳನ ಮಾಡದೆ, ದೇವರ ಮಕ್ಕಳೆಂದು ಅವರೊಂದಿಗೆ ಗೌರವ ಹಾಗೂ ಪ್ರೀತಿಯಿಂದ ವರ್ತಿಸೋಣ.
ವಿಶ್ವಾಸ ಎಲ್ಲಾ ರೀತಿಯ ಅಂಜಿಕೆ ಹಾಗೂ ಅವಮಾನಗಳನ್ನು ಎದುರಿಸಿ ದೇವರನ್ನು ಸಂಪರ್ಕಿಸುವ ಭರವಸೆಯನ್ನು ನೀಡುತ್ತದೆ.ಅಂತಹ ವಿಶ್ವಾಸ ಕಾನಾನಿನ ಮಹಿಳೆಯಲ್ಲಿತ್ತು. ಅದೇ ವಿಶ್ವಾಸವನ್ನು ನಾವೆಲ್ಲರೂ ಬೆಳೆಸಿಕೊಂಡು ಯೇಸುವಿಗೆ ಇನ್ನೂ ಆಪ್ತರಾಗಿ ಜೀವಿಸೋಣ.
=========================
ಚಿಂತನೆ – ಫಾ ಸಂತೋಷ್ ಕುಮಾರ್, ಬೆಂಗಳೂರು ಮಹಾಧರ್ಮಾಕ್ಷೇತ್ರ
=========================
No comments:
Post a Comment