Friday, 3 July 2020

ಆಗಸ್ಟ್ 19, 2020 ಬುಧವಾರ

ಆಗಸ್ಟ್ 19, 2020 ಬುಧವಾರ                        [ಹಸಿರು]
ಸಂತ ಜಾನ್ ಯೂದೆ [ಯಾಜಕ] (ಐಚ್ಛಿಕ ಸ್ಮರಣೆ)
ಮೊದಲ ವಾಚನ: ಯೆಜೆಕಿಯೇಲ 34.1-11
ಕೀರ್ತನೆ 23:1-6 ಶ್ಲೋಕ.1
ಪ್ರಭು ಕುರಿಗಾಹಿಯಾಗಿರಲು ನನಗೆ, 
ಕುಂದು ಕೊರತೆಗಳೆಲ್ಲಿಯವು ಎನಗೆ?
ಶುಭಸಂದೇಶ: ಮತ್ತಾಯ 20.1-16

ಯೆಜೆಕಿಯೇಲ 34.1-11 1 : ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು. 2 : “ನರಪುತ್ರನೇ, ಇಸ್ರಯೇಲೆಂಬ ಮಂದೆಯ ಕುರುಬರಿಗೆ ವಿರುದ್ಧ ಈ ದೈವೋಕ್ತಿಯನ್ನು ಪ್ರವಚನ ರೂಪವಾಗಿ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಅಯ್ಯೋ ಸ್ವಂತ ಹೊಟ್ಟೆ ಹೊರೆದುಕೊಳ್ಳುವ ಇಸ್ರಯೇಲಿನ ಕುರುಬರಿಗೆ ಧಿಕ್ಕಾರ! ಕುರಿಗಳ ಹೊಟ್ಟೆ ಗಮನಿಸುವುದು ಕುರುಬರ ಧರ್ಮವಲ್ಲವೆ? 3 : ನೀವು ಅವುಗಳ ಹಾಲನ್ನು ಕುಡಿಯುತ್ತೀರಿ, ಉಣ್ಣೆಯ ಹೊದಿಕೆಯನ್ನು ಹೊದಿಯುತ್ತೀರಿ. ಕೊಬ್ಬಿದ ಕುರಿಗಳನ್ನು ಕಡಿಯುತ್ತೀರಿ; ಆದರೆ ಕುರಿಗಳನ್ನು ಮೇಯಿಸುವುದಿಲ್ಲ. 4 : ಹೌದು, ದುರ್ಬಲವಾದವುಗಳನ್ನು ನೀವು ಬಲಗೊಳಿಸಲಿಲ್ಲ, ರೋಗದವುಗಳನ್ನು ಸ್ವಸ್ಥ ಮಾಡಲಿಲ್ಲ, ಮುರಿದ ಅಂಗಗಳನ್ನು ಕಟ್ಟಲಿಲ್ಲ, ದಾರಿತಪ್ಪಿದವುಗಳನ್ನು ಮಂದೆಗೆ ಸೇರಿಸಲಿಲ್ಲ, ತಪ್ಪಿಸಿಕೊಂಡವುಗಳನ್ನು ಹುಡುಕಲಿಲ್ಲ; ಅವುಗಳನ್ನು ಹಿಂಸೆ, ಬಲಾತ್ಕಾರಗಳಿಂದ ಆಳುತ್ತಾ ಬಂದಿದ್ದೀರಿ. 5 : ಕುರಿಗಾಹಿಗಳು ಇರಲಿಲ್ಲವಾದುದರಿಂದ ಅವು ಚದುರಿಹೋದುವು; ದಿಕ್ಕಾಪಾಲಾಗಿ ಕಾಡಿನ ಸಕಲ ಮೃಗಗಳಿಗೆ ತುತ್ತಾದವು; 6 : ನನ್ನ ಕುರಿಗಳು ಮಲೆನಾಡಿನಲ್ಲೆಲ್ಲಾ ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೆ ಅಲೆದಾಡಿದವು; ಹೌದು, ನನ್ನ ಕುರಿಗಳು ಭೂ ಮಂಡಲದಲ್ಲೆಲ್ಲಾ ಚದರಿಹೋದವು; ಯಾರೂ ಅವುಗಳ ಹಿಂದೆ ಹೋಗಿ ಹುಡುಕಲಿಲ್ಲ. 7 : “ಕುರುಬರೇ, ಸರ್ವೇಶ್ವರನ ಮಾತನ್ನು ಕೇಳಿರಿ; ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – 8 : ಅಯ್ಯೋ, ನನ್ನ ಕುರಿಗಳು ಕೊಳ್ಳೆಯಾದವು, ಕಾಡಿನ ಸಕಲಮೃಗಗಳಿಗೆ ತುತ್ತಾದವು; ಕುರುಬರೇ ಇರಲಿಲ್ಲ. ನನ್ನ ಕುರುಬರು ನನ್ನ ಕುರಿಗಳನ್ನು ಹುಡುಕಲಿಲ್ಲ; ಅವರು ಸ್ವಂತ ಹೊಟ್ಟೆಪಾಡನ್ನು ನೋಡಿಕೊಂಡರೇ ಹೊರತು, ನನ್ನ ಕುರಿಗಳ ಹೊಟ್ಟೆಯನ್ನು ನೋಡಲೇ ಇಲ್ಲ. 9 : ಆದ ಕಾರಣ ಕುರುಬರೇ, ಸರ್ವೇಶ್ವರನ ವಾಕ್ಯವನ್ನು ಕೇಳಿರಿ; 10 : ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಅಕಟಾ! ನನ್ನ ಜೀವದಾಣೆ, ನಾನು ಆ ಕುರಿಗಾಹಿಗಳಿಗೆ ವಿರುದ್ಧನಾಗಿದ್ದೇನೆ; ಅವರು ನನ್ನ ಕುರಿಗಳ ಲೆಕ್ಕವನ್ನು ನನಗೆ ಒಪ್ಪಿಸಬೇಕು; ನನ್ನ ಕುರಿ ಮೇಯಿಸುವ ಕೆಲಸದಿಂದ ಅವರನ್ನು ತೆಗೆದುಬಿಡುವೆನು; ಆ ಕುರುಬರು ಇನ್ನು ಸ್ವಂತ ಹೊಟ್ಟೆಯನ್ನು ತುಂಬಿಸಿಕೊಳ್ಳರು; ನನ್ನ ಕುರಿಗಳು ಆಹಾರವಾಗಿ ಅವರ ಬಾಯಿಗೆ ಬೀಳದಂತೆ ಅವುಗಳನ್ನು ರಕ್ಷಿಸುವೆನು. 11 : “ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಆಹಾ, ನಾನೇ ನನ್ನ ಕುರಿಗಳನ್ನು ಹಿಂಬಾಲಿಸಿ ಹುಡುಕುವೆನು.

ಕೀರ್ತನೆ 23:1-6 ಶ್ಲೋಕ.1 ಪ್ರಭು ಕುರಿಗಾಹಿಯಾಗಿರಲು ನನಗೆ, ಕುಂದು ಕೊರತೆಗಳೆಲ್ಲಿಯವು ಎನಗೆ? 1 : ಪ್ರಭು ಕುರಿಗಾಹಿಯಾಗಿರಲು ನನಗೆ / ಕುಂದುಕೊರತೆಗಳೆಲ್ಲಿಯವು ಎನಗೆ? // 2 : ಹಸಿರುಗಾವಲುಗಳಲೆನ್ನ ತಂಗಿಸುವನು / ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು // 3 : ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ | ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ || 4 : ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ | ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ | ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ || 5 : ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು | ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು || 6 : ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ / ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ //


ಮತ್ತಾಯ 20.1-16 1 : “ಸ್ವರ್ಗ ಸಾಮ್ರಾಜ್ಯವು ಹೀಗಿದೆ: ಒಬ್ಬ ಯಜಮಾನನಿಗೆ ಒಂದು ದ್ರಾಕ್ಷಿ ತೋಟವಿತ್ತು. ಅದರಲ್ಲಿ ಕೆಲಸ ಮಾಡುವುದಕ್ಕೆ ಕೂಲಿಗಾರರನ್ನು ಗೊತ್ತುಮಾಡಲು ಅವನು ಬೆಳಗಿನ ಜಾವದಲ್ಲೇ ಹೊರಟ. 2 : ಆಳಿಗೆ ಒಂದು ಬೆಳ್ಳಿ ನಾಣ್ಯದಂತೆ ದಿನಕೂಲಿಯನ್ನು ಮಾತಾಡಿ ತೋಟಕ್ಕೆ ಕಳುಹಿಸಿದ. 3 : ಸುಮಾರು ಬೆಳಿಗ್ಗೆ ಒಂಭತ್ತು ಗಂಟೆಗೆ ಅವನು ಪುನಃ ಸಂತೆಬೀದಿಯ ಕಡೆ ಹೋದ. ಕೆಲಸವಿಲ್ಲದೆ ಸುಮ್ಮನೆ ನಿಂತುಕೊಂಡಿದ್ದ ಕೆಲವು ಕೂಲಿಗಾರರನ್ನು ಅಲ್ಲಿ ಕಂಡ. 4 : ’ನೀವೂ ನನ್ನ ದ್ರಾಕ್ಷಿತೋಟಕ್ಕೆ ಹೋಗಿರಿ; ನ್ಯಾಯವಾದ ಕೂಲಿಯನ್ನು ನಿಮಗೆ ಕೊಡುತ್ತೇನೆ,’ ಎಂದ. ಅವರೂ ಹೋದರು. 5 : ಬಳಿಕ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಹೋಗಿ ಇನ್ನೂ ಕೆಲವರನ್ನು ಕೆಲಸಕ್ಕೆ ಕಳುಹಿಸಿದ. 6 : ಐದು ಗಂಟೆಗೆ ಹೋದಾಗಲೂ ಬೇರೆ ಕೆಲವರು ಅಲ್ಲಿ ನಿಂತಿರುವುದನ್ನು ಕಂಡು, ‘ದಿನವಿಡೀ ಕೆಲಸ ಮಾಡದೆ ಸುಮ್ಮನೆ ಇಲ್ಲಿ ನಿಂತಿದ್ದೀರಲ್ಲಾ, ಏಕೆ?’ ಎಂದು ಕೇಳಿದ. 7 : ಅದಕ್ಕೆ ಅವರು, ‘ನಮ್ಮನ್ನು ಯಾರೂ ಕೂಲಿಗೆ ಕರೆಯಲಿಲ್ಲ,’ ಎಂದರು. ‘ಹಾಗಾದರೆ ನೀವೂ ಕೂಡ ನನ್ನ ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡಿ,’ ಎಂದು ಹೇಳಿ ಅವರನ್ನೂ ಕಳುಹಿಸಿದ. 8 : “ಸಂಜೆಯಾಯಿತು. ತೋಟದ ಯಜಮಾನ ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿಕೊಡು,’ ಎಂದ. 9 : ಅದರಂತೆ ಐದು ಗಂಟೆಗೆ ಗೊತ್ತುಮಾಡಿದವರು ಬಂದಾಗ ಒಬ್ಬೊಬ್ಬನಿಗೆ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು. 10 : ಮೊತ್ತಮೊದಲು ಗೊತ್ತುಮಾಡಿದವರು ತಮ್ಮ ಸರದಿ ಬಂದಾಗ, ತಮಗೆ ಹೆಚ್ಚು ಸಿಗುವುದೆಂದು ಭಾವಿಸಿದರು. ಆದರೆ ಅವರಿಗೂ ಒಂದೊಂದೇ ಬೆಳ್ಳಿನಾಣ್ಯ ದೊರಕಿತು. 11 : ಅದನ್ನು ತೆಗೆದುಕೊಂಡಾಗ ಅವರು ದಣಿಯ ವಿರುದ್ಧ ಗೊಣಗಲಾರಂಭಿಸಿದರು. 12 : ‘ಕಡೇ ಹೊತ್ತಿನಲ್ಲಿ ಬಂದ ಇವರು ಒಂದೇ ಒಂದು ಗಂಟೆ ಕೆಲಸಮಾಡಿದ್ದಾರೆ; ಬಿಸಿಲಲ್ಲಿ ಬೆಂದು, ದಿನವೆಲ್ಲಾ ದುಡಿದ ನಮ್ಮನ್ನು ಇವರಿಗೆ ಸರಿಸಮ ಮಾಡಿದ್ದೀರಲ್ಲಾ!’ ಎಂದರು. 13 : ಅದಕ್ಕೆ ಯಜಮಾನ ಅವರಲ್ಲಿ ಒಬ್ಬನಿಗೆ, ‘ಅಯ್ಯಾ, ನಿನಗೆ ನಾನು ಅನ್ಯಾಯ ಮಾಡಿಲ್ಲ. ದಿನಕ್ಕೊಂದು ಬೆಳ್ಳಿನಾಣ್ಯದಂತೆ ನೀನು ನನ್ನೊಡನೆ ಒಪ್ಪಂದ ಮಾಡಿಕೊಳ್ಳಲಿಲ್ಲವೆ? 14 : ನಿನ್ನ ಕೂಲಿ ಏನೋ ಅದನ್ನು ತೆಗೆದುಕೊಂಡು ಹೋಗು. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ. 15 : ನನ್ನದನ್ನು ನನ್ನಿಷ್ಟಾನುಸಾರ ಕೊಡುವ ಹಕ್ಕು ನನಗಿಲ್ಲವೆ? ನನ್ನ ಔದಾರ್ಯವನ್ನು ಕಂಡು ನಿನಗೇಕೆ ಹೊಟ್ಟೆಯುರಿ?’ ಎಂದ. 16 : ಹೀಗೆ, ಕಡೆಯವರು ಮೊದಲಿನವರಾಗುವರು; ಮೊದಲಿನವರು ಕಡೆಯವರಾಗುವರು,” ಎಂದು ಯೇಸು ಬೋಧಿಸಿದರು.
ಯೇಸು ತಮ್ಮ ಭೋಧನೆಯಲ್ಲಿ ಅನೇಕಬಾರಿ ಸ್ವರ್ಗ ಸಮ್ರಾಜ್ಯದ ಕುರಿತು ಮಾತನಾಡಿದ್ದಾರೆ. ಸ್ವರ್ಗ ಸಾಮ್ರಾಜ್ಯವನ್ನು ಧರ್ಮಸಭೆಗೂ ಮಾಲೀಕನನ್ನು ದೇವರಿಗೂ ಹಾಗೂ ಗುತ್ತಿಗೆದಾರರನ್ನು ಯೆಹೂಧ್ಯ ನಾಯಕರಿಗೂ ಹೋಲಿಸಿ ಅನೇಕ ಬಾರಿ ಹೇಳಿದ್ದಾರೆ. ಇಂದಿನ ಶುಭಸಂದೇಶದಲ್ಲಿ ಮಾಲೀಕನು ತನ್ನ ಉದಾರತೆಯನ್ನು ಪ್ರಕಟಪಡಿಸುವುದರ ಬಗ್ಗೆ ಹಾಗೂ ಕೆಲಸ ಮಾಡಲು ಮೊದಲು ಬಂದ ಕೂಲಿಯಾಳುಗಳು ಅವರ ಉದಾರತೆಯನ್ನು ಕಂಡು ಅಸೂಯೆ ಪಡುವುದರ ಕುರಿತು ತಿಳಿಸುತ್ತದೆ. ದೇವರು ಎಂದೆಂದಿಗೂ ಉದಾರ ಮನಸ್ಸಿನವರೇ ಆಗಿದ್ದಾರೆ. ನಮ್ಮ ಪಾಪಗಳಿಗೆ ಅನುಸಾರವಾಗಿ ನಮ್ಮನ್ನು ಶಿಕ್ಷಿಸದೆ ಉದಾರತೆಯಿಂದ ನಮ್ಮ ಪಾಪಗಳನ್ನು ಕ್ಷಮಿಸುತ್ತಾರೆ. ಅಲ್ಲದೆ ಮನ ಮರುಗಿದ ಕಳ್ಳನಿಗೆ ಕೊನೆಯ ಸಮಯದಲ್ಲಿ ಸ್ವರ್ಗದ ವರದಾನವನ್ನು ನೀಡಿದಂತೆ ಅವರ ಸಾಮ್ರಾಜ್ಯಕ್ಕೆ ಮರಳಲು ನಮಗೆ ಅನೇಕ ಅವಕಾಶಗಳನ್ನು ನೀಡುತ್ತಾರೆ. ದೇವರು ಇತರರಿಗೆ ತೋರುವ ಉದಾರತೆಯನ್ನು ಕಂಡು ಅಸೂಯೆ ಪಡದೆ ಅವರನ್ನು ಸೇರಿ ಸಂತೋಷಿಸಲು ಕಲಿಯೋಣ.

No comments:

Post a Comment